Site icon Vistara News

Lingayat CM : ಲಿಂಗಾಯತರು ಸಿಎಂ ಆಗಬೇಕೆಂಬ ಶಾಮನೂರು ಹೇಳಿಕೆಯಲ್ಲಿ ಅರ್ಥ ಇದೆ: ಬಿ.ವೈ. ವಿಜಯೇಂದ್ರ

BY vijayendra and Shamanur Shivashankarappa

ಬೆಂಗಳೂರು: ಶಾಮನೂರು ಶಿವಶಂಕರಪ್ಪ (Shamanur Shivashankarappa) ಅವರಂತಹ ಹಿರಿಯರು ಕಾಂಗ್ರೆಸ್‌ನಲ್ಲಿ ವ್ಯವಸ್ಥೆ ಹಾಳಾಗುತ್ತಿರುವ ಬಗ್ಗೆ ಮಾತನಾಡಿದ್ದಾರೆ. ಒಂದು ಜಾತಿಗೆ ಸೀಮಿತವಾಗಿ ಅಧಿಕಾರಿಗಳ ನೇಮಕ ಆಗುತ್ತಿದೆ. ಮತ್ತೊಂದು ಜಾತಿಗೆ ಅನ್ಯಾಯ ಆಗುತ್ತಿದೆ. ಇದರ ಬಗ್ಗೆ ಅವರು ಮಾತನಾಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ (Democratic system) ಈ ರೀತಿ ಒಂದು ಜಾತಿಗೆ ಸೀಮಿತವಾಗಿ ಅಧಿಕಾರಿಗಳನ್ನು ಆಯ್ಕೆ ಮಾಡುವುದು ಸಂವಿಧಾನ ವಿರೋಧಿಯಾಗಿದೆ. ಅಲ್ಲದೆ, ಲಿಂಗಾಯತ ಸಿಎಂ (Lingayat CM) ಬಗ್ಗೆ ಅವರು ಹೇಳಿದ್ದಾರೆಂದರೆ ಅದರಲ್ಲಿ ಅರ್ಥ ಇದೆ ಎಂದು ಶಾಸಕ, ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ (Mla and BJP vice president BY Vijayendra) ಹೇಳಿದರು.

ಅಕ್ಟೋಬರ್‌ 2ರಂದು ಗಾಂಧಿ ಜಯಂತಿ (Gandhi Jayanti) ಹಿನ್ನೆಲೆಯಲ್ಲಿ ಬಿಜೆಪಿ ವತಿಯಿಂದ ಗಾಂಧಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಭಾನುವಾರ ಆಯೋಜನೆ ಮಾಡಿದ್ದ ಸ್ವಚ್ಛ ಭಾರತ (Swachh Bharat) ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಬಿ.ವೈ. ವಿಜಯೇಂದ್ರ, ಸರ್ಕಾರದವರು ಎಲ್ಲ ಸಮುದಾಯದವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇವೆ ಅಂತಾರೆ. ಆದರೆ, ಅವರ ಪಕ್ಷದ ಹಿರಿಯರೇ ಅನ್ಯಾಯದ ವಿರುದ್ಧ ದನಿ ಎತ್ತಿದ್ದಾರೆ. ಅಂದ ಮೇಲೆ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಅಂತರ್ಥ. ಶಾಮನೂರು ಶಿವಶಂಕರಪ್ಪ ಅನ್ಯಾಯದ ವಿರುದ್ಧ ದನಿ ಎತ್ತುವವರು. ಅವರೇ ಲಿಂಗಾಯತರು ಸಿಎಂ ಆಗಬೇಕು ಅಂದರೆ ಅದರಲ್ಲಿ ಅರ್ಥ ಇದೆ ಎಂದು ಹೇಳಿದರು.

ಬಿಜೆಪಿಯಲ್ಲಿ ವಿಪಕ್ಷ ನಾಯಕ, ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೇಮಕ ವಿಳಂಬ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ, ರಾಜ್ಯಾಧ್ಯಕ್ಷ ಸ್ಥಾನಗಳ ನೇಮಕ ವಿಳಂಬವನ್ನು ವರಿಷ್ಠರು ಸಕಾರಣ ಇಲ್ಲದೆ ಮಾಡುತ್ತಿಲ್ಲ.‌ ಈಗ ಎರಡೂ ಸ್ಥಾನಗಳ ಆಯ್ಕೆಗೆ ಕಾಲ ಕೂಡಿ ಬಂದಿದೆ. ಆದಷ್ಟು ಬೇಗ ವರಿಷ್ಠರು ನೇಮಕ ಮಾಡುತ್ತಾರೆ ಎಂದು ಹೇಳಿದರು.

ಸರ್ಕಾರ ಇನ್ನು ಆರು ತಿಂಗಳಷ್ಟೇ ಇರುವುದು ಎಂಬ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿ.ವೈ. ವಿಜಯೇಂದ್ರ, ಇದಕ್ಕೆ ಕುಮಾರಸ್ವಾಮಿ ಅವರೇ ಹೇಳಬೇಕು. ಅವರು ಯಾವ ಸಂದರ್ಭದಲ್ಲಿ ಈ ಹೇಳಿಕೆ ಕೊಟ್ಟಿದ್ದಾರೋ ಗೊತ್ತಿಲ್ಲ ಎಂದು ಹೇಳಿದರು.

ಕಾವೇರಿ ವಿಚಾರದಲ್ಲಿ ಸರ್ಕಾರದಿಂದ ಅನ್ಯಾಯ

ರಾಜ್ಯದಲ್ಲಿ ಹಲವು ಜ್ವಲಂತ ಸಮಸ್ಯೆಗಳಿವೆ. ಸರ್ಕಾರ ಕಾವೇರಿ ವಿಚಾರದಲ್ಲಿ ಅನ್ಯಾಯ ಮಾಡುತ್ತಿದೆ. ಅಭಿವೃದ್ಧಿ ಮಾಡದೇ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಈ ಸರ್ಕಾರ ಶಾಸಕರಿಗೆ ಅನುದಾನ ಕೊಡುತ್ತಿಲ್ಲ. ಶಾಸಕರಿಗೆ ಒಂದು ರೂಪಾಯಿ ಅನುದಾನವನ್ನೂ ಕೊಡುತ್ತಿಲ್ಲ. ಸರ್ಕಾರ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಅಂತ ಇದರಿಂದಲೇ ಗೊತ್ತಾಗುತ್ತದೆ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.

ಕಸ ಗುಡಿಸಿದ ವಿಜಯೇಂದ್ರ

ಬಿಜೆಪಿ ಮುಖಂಡ ಸಪ್ತಗಿರಿಗೌಡ ನೇತೃತ್ವದಲ್ಲಿ ಸ್ವಚ್ಛ ಭಾರತ ಅಭಿಯಾನ ನಡೆದಿದೆ. ಕಸ ಗುಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಗಾಂಧಿನಗರ ವಿಧಾನಸಭಾ ಕ್ಷೇತ್ರದ ಅಂಚೆಪೇಟೆ ರಸ್ತೆಯಲ್ಲಿ ಬಿ.ವೈ. ವಿಜಯೇಂದ್ರ ಕಸ ಗುಡಿಸಿದರು. ಬಿಜೆಪಿ ಕಾರ್ಯಕರ್ತರು ಜತೆಗಿದ್ದರು.

Exit mobile version