ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಸಮೀಪಿಸುತ್ತಿದೆ. ಈ ನಡುವೆ ಕಾಂಗ್ರೆಸ್ ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳಲ್ಲಿ ಕನಿಷ್ಠ 20 ಕ್ಷೇತ್ರಗಳಲ್ಲಿ ಗೆಲ್ಲುವ ಗುರಿಯನ್ನು ಹಾಕಿಕೊಂಡಿದೆ. ಇದಕ್ಕಾಗಿ ಈಗಾಗಲೇ ಕಾರ್ಯಾಚರಣೆಯನ್ನೂ ಶುರು ಮಾಡಿದೆ. ಚುನಾವಣಾ ರಣತಂತ್ರವನ್ನು ಹೆಣೆಯುತ್ತಿದೆ. ಆದರೆ, ಈಗ ಎದ್ದಿರುವ “ಲಿಂಗಾಯತರಿಗೆ ಅನ್ಯಾಯ” ಹಾಗೂ “ಲಿಂಗಾಯತ ಸಿಎಂ” (Lingayat CM) ಎಂಬ ಕೂಗು ಕೈಪಡೆಯನ್ನು ಆತಂಕಕ್ಕೆ ದೂಡಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಕೈ ಹಿಡಿದಿದ್ದ ಲಿಂಗಾಯತ ಅಸ್ತ್ರವು ಈಗ 2024ರ ಲೋಕಸಭಾ ಚುನಾವಣೆಗೆ ಡ್ಯಾಮೇಜ್ ಮಾಡಲಿದೆಯೇ? ಎಂಬ ಭಯ ಕಾಡುತ್ತಿದೆ. ಸ್ವಪಕ್ಷೀಯ ಹಿರಿಯ ಶಾಸಕರಾದ ಶಾಮನೂರು ಶಿವಶಂಕರಪ್ಪ (Shamanur Shivashankarappa) ಅವರ ಆ ಒಂದು ಹೇಳಿಕೆ ಸರ್ಕಾರವನ್ನು ಇಕ್ಕಟ್ಟಿಗೆ ದೂಡಿದೆ. ಬಿಸಿ ತುಪ್ಪವಾಗಿಯೂ ಪರಿಣಮಿಸಿದೆ. ಇತ್ತ ನುಂಗಲೂ ಆಗದೆ, ಅತ್ತ ಉಗುಳಲೂ ಆಗದೆ. ಒದ್ದಾಟ ನಡೆಸಬೇಕಾದ ಸ್ಥಿತಿ ಬಂದೊದಗಿದೆ. ಆದರೆ, ಈಗ ಶಾಮನೂರು ವಿರುದ್ಧ ಸ್ವತಃ ಸಿಎಂ ಸಿದ್ದರಾಮಯ್ಯ (CM Siddaramaiah) ಅವರೇ ಸಾಫ್ಟ್ ಆಗಿದ್ದಾರೆ. ಎಲ್ಲವೂ ಮಾತುಕತೆ ಮೂಲಕ ಬಗೆಹರಿಯುತ್ತದೆ ಎಂಬ ಮಾತನ್ನಾಡಿದ್ದಾರೆ. ಆ ಮೂಲಕ “ಲಿಂಗಾಯತ” ಅಸ್ತ್ರವನ್ನು ನಾಜೂಕಾಗಿ ಬಳಕೆ ಮಾಡಲು ಮುಂದಾಗಿದ್ದಾರೆ.
2023ರ ವಿಧಾನಸಭಾ ಚುನಾವಣೆಯಲ್ಲಿ (2023 Assembly Election) ಬಿಜೆಪಿಗೆ ಲಿಂಗಾಯತ ಅಸ್ತ್ರ ಬಹಳವೇ ಪೆಟ್ಟು ಕೊಟ್ಟಿತ್ತು. ಸಿಎಂ ಆಗಿದ್ದ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಿದ್ದಲ್ಲದೆ, ಅವರನ್ನು ಗೌರವಯುತವಾಗಿ ನಡೆಸಿಕೊಂಡಿಲ್ಲ ಎಂದು ಕಾಂಗ್ರೆಸ್ ಗಟ್ಟಿ ಧ್ವನಿಯಲ್ಲಿ ಹೇಳಿತ್ತು. ಇದರ ಲಾಭವನ್ನು ಕಾಂಗ್ರೆಸ್ ಕಳೆದ ಚುನಾವಣೆಯಲ್ಲಿ ಅತ್ಯುತ್ತಮವಾಗಿಯೇ ಪಡೆದುಕೊಂಡಿತ್ತು.
ಇದನ್ನೂ ಓದಿ: JDS Politics : ಕಿತ್ತೂರು ಕರ್ನಾಟಕದ ಕಡೆ ಜೆಡಿಎಸ್ ನಡೆ; ಗ್ಯಾರಂಟಿಯೇ ಸುಳ್ಳು ಎಂದ ಜಿ.ಟಿ. ದೇವೇಗೌಡ
ಈಗ ಸಂಪೂರ್ಣ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಸರ್ಕಾರ ಬಂದ ಬಳಿಕ ಕಾಂಗ್ರೆಸ್ ಲಿಂಗಾಯತ ಸಮುದಾಯವನ್ನು ಕಡೆಗಣಿಸಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಅದಕ್ಕೆ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಬಹಿರಂಗ ಹೇಳಿಕೆ ಮತ್ತಷ್ಟು ಪುಷ್ಟಿಯನ್ನು ನೀಡಿತ್ತು. ಇದು ಲಿಂಗಾಯತ ಸಮುದಾಯದವರ ಕೆಂಗಣ್ಣಿಗೂ ಗುರಿಯಾಗಿದೆ.
ಮಾತುಕತೆಗೆ ಸಿಎಂ ಮುಂದು; ಇಲ್ಲಿದೆ ವಿಡಿಯೊ
ಶಾಮನೂರು ಶಿವಶಂಕರಪ್ಪ ಹೇಳಿದ್ದೇನು?
ದಾವಣಗೆರೆಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಶಾಮನೂರು ಶಿವಶಂಕರಪ್ಪ ಅವರು ಕಾಂಗ್ರೆಸ್ ಸರ್ಕಾರ, ಕಾಂಗ್ರೆಸ್ ನಾಯಕರು, ಅದರಲ್ಲೂ ಮುಖ್ಯವಾಗಿ ಸಿದ್ದರಾಮಯ್ಯ ಅವರ ಮೇಲೆ ಮೇಲೆ ಹಲವು ಆರೋಪಗಳನ್ನು ಮಾಡಿದ್ದರು.
- ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತರನ್ನು ಮೂಲೆಗುಂಪು ಮಾಡಲಾಗುತ್ತಿದ್ದು, ಸರಿಯಾದ ಸ್ಥಾನಮಾನ ನೀಡುತ್ತಿಲ್ಲ.
- ಲಿಂಗಾಯತ ಅಧಿಕಾರಿಗಳಿಗೆ ಪ್ರಮುಖ ಹುದ್ದೆಗಳೇ ಸಿಗುತ್ತಿಲ್ಲ. ಸಿದ್ದರಾಮಯ್ಯ ಸರ್ಕಾರ ತಾರತಮ್ಯ ಮಾಡುತ್ತಿದೆ. ಸರ್ಕಾರದ ಆಯಕಟ್ಟಿನ ಹುದ್ದೆಗಳನ್ನು ನಮ್ಮ ಸಮಾಜದವರಿಗೆ ಕೊಟ್ಟಿಲ್ಲ.
- ಈ ಹಿಂದೆ ಎಲ್ಲರೂ ಚೆನ್ನಾಗಿದ್ದರು. ನಿಜಲಿಂಗಪ್ಪ, ಜೆ.ಎಚ್.ಪಾಟೀಲರು ಇದ್ದಾಗ ಎಲ್ಲರೂ ಲಿಂಗಾಯತ ಸಮಾಜದ ವಿಚಾರದಲ್ಲಿ ಚೆನ್ನಾಗಿದ್ದರು.
- ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯವಾದ ಹುದ್ದೆಗಳನ್ನು ಬಹಳಷ್ಟು ಜನರಿಗೆ ಕೊಟ್ಟಿಲ್ಲ.
- ಲಿಂಗಾಯತ ಸಮುದಾಯಕ್ಕೆ ಡಿಸಿಎಂ ಕೊಡಬೇಕು ಎಂಬ ಪ್ರಸ್ತಾಪ ಮಾಡಲಾಗುತ್ತಿದೆ. ಈ ಪ್ರಸ್ತಾಪ ಯಾವಾಗಲೂ ನಮ್ಮ ಕಡೆಯಿಂದ ಇರುತ್ತದೆ. ಆದರೆ, ಡಿಸಿಎಂ ತೆಗೆದುಕೊಂಡು ಏನು ಮಾಡಬೇಕು. ಕೊಟ್ಟರೆ ಸಿಎಂ ಕೊಡಬೇಕು.
ರಾಜ್ಯ ಕಾಂಗ್ರೆಸ್‌ನಲ್ಲಿ ಈಗ ಲಿಂಗಾಯತರ ಅವಗಣನೆ (Neglecting Lingayats) ಮತ್ತು ಲಿಂಗಾಯತರು ಸಿಎಂ (Lingayat CM Demdand) ಆಗಬೇಕು. ಅಲ್ಲದೆ, ಈ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳ ಕಡೆಗಣನೆ ಆಗಿದೆ ಎಂಬುದಾಗಿ ಶಾಮನೂರು ಶಿವಶಂಕರಪ್ಪ ಅವರು ತಮ್ಮದೇ ಸರ್ಕಾರದ ವಿರುದ್ಧ ಹೀಗೆ ಗುಡುಗಿದ್ದರು.
ಕೌಂಟರ್ ಕೊಟ್ಟಿದ್ದ ಸಿದ್ದರಾಮಯ್ಯ ಟೀಮ್!
ಶಾಮನೂರು ಶಿವಶಂಕರಪ್ಪ ಅವರ ಈ ಹೇಳಿಕೆಗೆ ಕಾಂಗ್ರೆಸ್ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದಕ್ಕೆ ಸಿದ್ದರಾಮಯ್ಯ ಟೀಮ್ ಕೌಂಟರ್ ಕೊಟ್ಟಿತ್ತು. ಆದರೆ, ಮಾತಿಗೆ ಮಾತು ಬೆಳೆದರೆ ಸಮುದಾಯದ ಅಸಮಾಧಾನಕ್ಕೆ ಕಾರಣವಾಗುತ್ತದೆ. ಹೀಗಾಗಿ ಶಾಮನೂರು ಜತೆ ಗುದ್ದಾಡುವುದಕ್ಕಿಂತಲೂ ಮಾತುಕತೆಯೇ ಬೆಸ್ಟ್ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ಹೀಗೇ ಮಾತನಾಡುತ್ತಾ ಹೋದರೆ ವಿಷಯ ಮತ್ತಷ್ಟು ಜಟಿಲವಾಗುತ್ತದೆ. ಅದು ಮತ್ತೊಂದು ರೀತಿಯ ಸಂಘರ್ಷಕ್ಕೆ ಕಾರಣವಾಗುತ್ತದೆ. ಹೀಗಾಗಿ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಪ್ರತಿಕ್ರಿಯೆ ಕೊಡದೆ ಮಾತುಕತೆಗೆ ಸಿಎಂ ಮುಂದಾಗಿದ್ದಾರೆ.
ಇದನ್ನೂ ಓದಿ: Power Point with HPK : ಶಿವಮೊಗ್ಗದಲ್ಲಿ 10 ಮನೆಗಳಿಗೆ ಕಲ್ಲು ಬಿದ್ದಿದೆ; ಅದು ಕೋಮು ಗಲಭೆ ಅಲ್ಲ!
ಏಕೆ ಮಾತುಕತೆಯ ನಿರ್ಧಾರ?
ಒಂದು ವೇಳೆ ಈ ಮಾತನ್ನು ಹೀಗೇ ಮುಂದುವರಿಸಿದರೆ 2024ರ ಲೋಕಸಭಾ ಚುನಾವಣೆ ಮೇಲೆ ಪಕ್ಷಕ್ಕೆ ಡ್ಯಾಮೇಜ್ ಆಗುತ್ತದೆ. ಹೀಗಾಗಿ ಶಾಮನೂರು ಜತೆ ಗುದ್ದಾಟ ಬಿಟ್ಟು ಮಾತುಕತೆ ನಡೆಸಿ ಪರಿಸ್ಥಿತಿಯನ್ನು ತಿಳಿಗೊಳಿಸುವುದೇ ಸರಿ. ಲೋಕಸಭಾ ಚುನಾವಣೆಯ ಟಾರ್ಗೆಟ್ 20 ರೀಚ್ ಆಗಲು ಸಮುದಾಯ ನಾಯಕರ ಜತೆ ಗುದ್ದಾಟಕ್ಕೆ ಕೈ ಹಾಕಬಾರದು. ಹೀಗಾಗಿ ಮಾತನಾಡಿ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕೆಂಬ ನಿರ್ಧಾರಕ್ಕೆ ಬಂದಿದ್ದಾರೆ. ಜತೆಗೆ ತಮ್ಮ ಬೆಂಬಲಿಗರಿಗೂ ಇನ್ನು ಮಾತನಾಡದಂತೆ ಸೂಚಿಸಿದ್ದಾರೆನ್ನಲಾಗಿದೆ.