Site icon Vistara News

HD Kumaraswamy : 6ನೇ ಗ್ಯಾರಂಟಿಯಾಗಿ ಮದ್ಯಭಾಗ್ಯ; ಎಚ್.ಡಿ. ಕುಮಾರಸ್ವಾಮಿ ಕಿಡಿ

HD Kumaraswamy infront of vidhanasoudha

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಬಿಜೆಪಿ – ಜೆಡಿಎಸ್‌ ಮೈತ್ರಿ (BJP and JDS alliance) ಬೆನ್ನಲ್ಲೇ ರಾಜ್ಯ ಸರ್ಕಾರದ ವಿರುದ್ಧ ಮತ್ತಷ್ಟು ಪರಿಣಾಮಕಾರಿಯಾಗಿ ತಿರುಗಿಬಿದ್ದಿರುವ ಮಾಜಿ ಸಿಎಂ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ (HD Kumaraswamy), ಕಾಂಗ್ರೆಸ್‌ ಸರ್ಕಾರವು ರಾಜ್ಯವನ್ನು ಕುಡುಕರ ತೋಟವನ್ನಾಗಿ ಮಾಡಲು ಹೊರಟಿದೆ ಎಂದು ಕಿಡಿಕಾರಿದ್ದಾರೆ. ಇದು ಈ ಸರ್ಕಾರದ ಸಂಕಲ್ಪ ಎಂದು ಹೀಗಳೆದಿದ್ದಾರೆ. ಈ ಮೂಲಕ ರಾಜ್ಯ ರಾಜಕೀಯದಲ್ಲಿ (Karnataka Politics) ನಡೆಯುತ್ತಿರುವ ಕೆಲವು ಬದಲಾವಣೆಗಳ ಬಗ್ಗೆ ಕಟುವಾಗಿ ಟೀಕಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳ (Congress Guarantee Scheme) ಬಗ್ಗೆ ಕಿಡಿಕಾರಿರುವ ಎಚ್.ಡಿ. ಕುಮಾರಸ್ವಾಮಿ, ಈ ಮೂಲಕ ಗೃಹಜ್ಯೋತಿ (Gruha Jyoti Scheme), ಗೃಹಲಕ್ಷ್ಮಿ (Gruha Lakshmi Scheme), ಶಕ್ತಿ (Shakti Scheme), ಅನ್ನಭಾಗ್ಯ ಯೋಜನೆಗಳ (Anna Bhagya Scheme) ಬಗ್ಗೆ ಕುಹುಕವಾಡಿದ್ದಾರೆ. ಈಗ ರಾಜ್ಯಕ್ಕೆ ಮದ್ಯ ಭಾಗ್ಯವನ್ನು ನೀಡಲು ಹೊರಟಿದ್ದಾರೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: Weather report : ಮುಂದಿನ 5 ದಿನ ಬೆಂಗಳೂರು ಸೇರಿ ಕರಾವಳಿಯಲ್ಲಿ ಭರ್ಜರಿ ಮಳೆ ಪ್ರದರ್ಶನ

ಈ ಬಗ್ಗೆ ಸಾಮಾಜಿಕ ಜಾಲತಾಣವಾದ “ಎಕ್ಸ್‌”ನಲ್ಲಿ ಪೋಸ್ಟ್‌ ಮಾಡಲಾಗಿದ್ದು, ರಾಜ್ಯ ಸರ್ಕಾರದ ವಿರುದ್ಧ ಸರಣಿ ಪೋಸ್ಟ್ ಮಾಡಿದ್ದಾರೆ.

ಎಚ್.ಡಿ. ಕುಮಾರಸ್ವಾಮಿ ಪೋಸ್ಟ್‌ನಲ್ಲಿ ಏನಿದೆ?

“ಕರ್ನಾಟಕ ರಾಜ್ಯವು ವಿಜ್ಞಾನ, ತಂತ್ರಜ್ಞಾನ, ಆವಿಷ್ಕಾರ ಐಟಿ-ಬಿಟಿಗೆ ಪ್ರಸಿದ್ಧಿ. ಇನ್ನು ಮುಂದೆ ಇದು ಬದಲಾಗಬಹುದು! ಕಾರಣವಿಷ್ಟೇ; ಕಾಂಗ್ರೆಸ್ ಸರ್ಕಾರ ‘ಕರ್ನಾಟಕವನ್ನು ಕುಡುಕರ ತೋಟ’ವನ್ನಾಗಿ ಮಾಡಲಿದೆ!!
ಚುನಾವಣೆಗೆ ಮುನ್ನ ‘ಸರ್ವಜನಾಂಗದ ಶಾಂತಿಯ ತೋಟ’ ಎನ್ನುತ್ತಿದ್ದರು. ಗೆದ್ದ ನಂತರ ‘ಕರ್ನಾಟಕ ಕುಡುಕರ ತೋಟ’ ಎನ್ನುತ್ತಿದ್ದಾರೆ.‌ ಇದು ಕರ್ನಾಟಕ ಕಾಂಗ್ರೆಸ್‌ ಸರ್ಕಾರದ ಸಂಕಲ್ಪ.

ಯೋಜನೆಗಳ ಹೆಸರಲ್ಲಿ ಕೊಳ್ಳೆ ಹೊಡೆಯುವ ಹುನ್ನಾರ ಕಾಂಗ್ರೆಸ್ ಸರ್ಕಾರದ್ದು. ಒಂದೆಡೆ ಮನೆಮನೆಗೂ ಗೃಹಜ್ಯೋತಿ ಎಂದು ಹೇಳಿ, ಈಗ ಮನೆಮನೆಗೂ ‘ಮದ್ಯ ಭಾಗ್ಯ’ ನೀಡಲು ಹೊರಟಿದೆ. ಸರ್ಕಾರವು ಧನಪಿಶಾಚಿ ಅವತಾರವೆತ್ತಿ‌ ಅಬಕಾರಿ ಆದಾಯ ಹೆಚ್ಚಿಸಿಕೊಳ್ಳಲು ಈಗ ಮದ್ಯ ಸಮಾರಾಧನೆಗೆ ಶ್ರೀಕಾರ ಹಾಡಿದೆ. ಇದು 6ನೇ ಗ್ಯಾರಂಟಿ!

ಇದು ಸಮಾಜವಾದವೇ?

ಖೊಟ್ಟಿ ಗ್ಯಾರಂಟಿಗಳಿಂದ ಜನರನ್ನು ಯಾಮಾರಿಸಿದ್ದು ಸಾಲದೆಂಬಂತೆ ಪ್ರತಿ ಪಂಚಾಯಿತಿಯಲ್ಲೂ ಮದ್ಯದ ಅಂಗಡಿ ತೆರೆಯಲು ಸಿದ್ಧತೆ ನಡೆಸಿರುವುದು ನಾಚಿಕೆಗೇಡು. ಅಕ್ಕಿ, ಬೇಳೆ, ದವಸ ಧಾನ್ಯ, ಹಣ್ಣು ತರಕಾರಿ, ಹಾಲು-ಮೊಸರು ಸಿಗುವ ಸೂಪರ್ ಮಾರುಕಟ್ಟೆಗಳಲ್ಲೂ ಮುಕ್ತವಾಗಿ ಮದ್ಯ ಮಾರಾಟಕ್ಕೆ ಅವಕಾಶ ನೀಡುವುದು ಅಸಹ್ಯದ ಪರಮಾವಧಿ. ಇದಾ ಸಮಾಜವಾದವೇ?

3,000 ಜನಸಂಖ್ಯೆಯುಳ್ಳ ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಬಾರ್ ತೆಗೆದು ಮನೆ ಹಾಳು ಮಾಡಲಿದೆ‌ ಈ ಸರ್ಕಾರ.
ಸುಳ್ಳು ಗ್ಯಾರಂಟಿಗಳನ್ನು ನಂಬಿ ಮೋಸ ಹೋದ ಮಹಿಳೆಯರಿಗೆ ಕರ್ನಾಟಕದಲ್ಲಿ ಕೇಡುಗಾಲ ಶುರುವಾಗಿದೆ. ಅವರ ಸೌಭಾಗ್ಯಕ್ಕೆ ಎದುರಾಗಿದೆ ಸಂಚಕಾರ. ಇದು ಮನೆಹಾಳು ಸರ್ಕಾರ.‌

ನಾರಿಯರಿಗೆ ‘ಶಕ್ತಿ’ ತುಂಬುತ್ತೇವೆ ಎಂದ ಸರ್ಕಾರ, ಈಗ ಅವರ ಬಾಳಿಗೆ ಬೆಂಕಿ ಹಾಕುತ್ತಿದೆ.‌ ‘ಗೃಹಲಕ್ಷ್ಮಿ’ ಎಂದ ಸರ್ಕಾರ ಅವರ ಬಾಳಿಗೆ ಗ್ರಹಣವಾಗಿದೆ.

‘ಗೃಹಜ್ಯೋತಿ’ ಎಂದ ಸರ್ಕಾರ ಅವರ ಬಾಳಜ್ಯೋತಿಯನ್ನೇ ನಂದಿಸುತ್ತಿದೆ.‌

ಇದನ್ನೂ ಓದಿ: Education News : 9 – 11ನೇ ತರಗತಿ ವಿದ್ಯಾರ್ಥಿಗಳಿಗೆ ಇನ್ನು ಬೋರ್ಡ್ ಪರೀಕ್ಷೆ!

‘ಅನ್ನಭಾಗ್ಯ’ ಎಂದ ಸರ್ಕಾರ, ಈಗ ‘ಮದ್ಯ‌ ಭಾಗ್ಯ’ ಎನ್ನುತ್ತಿದೆ” ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪೋಸ್ಟ್‌ ಮಾಡುವ ಮೂಲಕ ಮದ್ಯ ಮಾರಾಟದ ಬಗ್ಗೆ ರಾಜ್ಯ ಸರ್ಕಾರ ತೆಗೆದುಕೊಂಡಿರುವ ಕ್ರಮವನ್ನು ಕಟುವಾಗಿ ಟೀಕಿಸಿದ್ದಾರೆ.

Exit mobile version