ಬೆಂಗಳೂರು: ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ (Load Shedding) ಮಾಡುತ್ತಿರುವ ಬಗ್ಗೆ ಆರೋಪಗಳು ಕೇಳಿ ಬಂದ ಬೆನ್ನಲ್ಲೇ ರಾಜ್ಯ ಸರ್ಕಾರ ಸಹ ಈ ಬಗ್ಗೆ ಒಪ್ಪಿಕೊಂಡಿದೆ. ಈ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ಹಾಗೂ ಕೃಷಿ ಸಚಿವ ಚಲುವರಾಯಸ್ವಾಮಿ (Agriculture Minister Chaluvarayaswamy) ಪವರ್ ಕಟ್ (Power cut) ಆಗುತ್ತಿರುವ ಬಗ್ಗೆ ಮಾತನಾಡಿದ್ದಾರೆ. ಸೋಲಾರ್ ವಿದ್ಯುತ್‌ನಂತಹ (Solar Power) ಪರ್ಯಾಯ ಮಾರ್ಗದತ್ತ ಸರ್ಕಾರ ದೃಷ್ಟಿ ಹರಿಸಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದರೆ, ಸಚಿವ ಚುಲುವರಾಯಸ್ವಾಮಿ ಅವರು, ಸಿಎಂ ಗಮನಕ್ಕೆ ತಂದಿದ್ದೇವೆ. ಅವರು ಬಗೆಹರಿಸುತ್ತಾರೆ ಎಂದು ಹೇಳಿದ್ದಾರೆ. ಈ ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಮುಗಿಬಿದ್ದಿದ್ದು, ಎರಡು ದಿನದ ಗಡುವನ್ನು ನೀಡಿದೆ. ಅಷ್ಟರಲ್ಲಿ ವಿದ್ಯುತ್ ಸಮಸ್ಯೆ ಬಗೆಹರಿಯದೇ ಇದ್ದರೆ, ರಾಜ್ಯಾದ್ಯಂತ ಪ್ರತಿಭಟನೆ (BJP protests across the state) ನಡೆಸುವ ಎಚ್ಚರಿಕೆಯನ್ನು ನೀಡಿದೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ಲೋಡ್ ಶೆಡ್ಡಿಂಗ್ ಬಗ್ಗೆ ನನಗೆಲ್ಲವೂ ಗೊತ್ತಿದೆ. ರಾಜ್ಯದಲ್ಲಿ ಭೀಕರ ಬರಗಾಲ ಇದೆ. ಬರಗಾಲ ಇದ್ದಾಗ ವಿದ್ಯುತ್ ಉತ್ಪಾದನೆ ಕಡಿಮೆ ಇರುತ್ತದೆ. ಒಂದೆರಡು ಗಂಟೆ ವಿದ್ಯುತ್ ಸಮಸ್ಯೆ ಆಗುತ್ತದೆ. 10 ಸಾವಿರ ಎಕರೆಯಲ್ಲಿ ಸೋಲಾರ್ ಪ್ಲಾಂಟ್ ನಿರ್ಮಾಣಕ್ಕೆ ಪ್ಲ್ಯಾನ್ ಮಾಡಿದ್ದೇವೆ. ಈಗಾಗಲೇ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಕೇಂದ್ರದ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಸೆಂಟ್ರಲ್ ಗ್ರಿಡ್‌ನಿಂದ ಕೊಟ್ಟರೆ ನಮಗೆಲ್ಲವೂ ಅನುಕೂಲ ಆಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: Contract Bill : ಸರ್ಕಾರಕ್ಕೆ ತಟ್ಟಲಿದೆಯೇ ಗುತ್ತಿಗೆದಾರರ ಬಿಸಿ? ಬಾಕಿ ಬಿಲ್‌ಗಾಗಿ ಅ. 13ಕ್ಕೆ ಸುದ್ದಿಗೋಷ್ಠಿ ಕರೆದ ಕೆಂಪಣ್ಣ
ಮಳೆ ಸಮರ್ಪಕವಾಗಿ ಆಗಿದ್ದರೆ ಈ ಸಮಸ್ಯೆ ಆಗುತ್ತಿರಲಿಲ್ಲ. ಬಿಜೆಪಿಯವರು ಟೀಕೆ ಮಾಡುತ್ತಿದ್ದಾರಲ್ಲವೇ? ಅವರ ಕಾಲದಲ್ಲಿ ಎಷ್ಟು ಸಮಸ್ಯೆ ಆಗಿತ್ತು ಎಂಬುದನ್ನೂ ತಿಳಿಸಲಿ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಸಿಎಂ ಬಗೆಹರಿಸುತ್ತಾರೆ: ಚಲುವರಾಯಸ್ವಾಮಿ
ಮಾಧ್ಯಮಗಳ ಜತೆ ಮಾತನಾಡಿದ ಕೃಷಿ ಸಚಿವ ಚೆಲುವರಾಯಸ್ವಾಮಿ, ವಿದ್ಯುತ್ ಲೋಡ್ ಶೆಡ್ಡಿಂಗ್ ಆಗುತ್ತಿರುವುದು ನಿಜ. ವಿದ್ಯುತ್ ಇಲಾಖೆಯ ಸಮಸ್ಯೆ ಸ್ವಲ್ಪ ಅಲ್ಲ ಹೆಚ್ಚಾಗಿಯೇ ಇದೆ. ವಿದ್ಯುತ್ ಲೋಡ್ ಶೆಡ್ಡಿಂಗ್ ಇದೆ. ಇದನ್ನು ಸರಿಪಡಿಸಲು ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೆ ಮನವಿ ಮಾಡಿದ್ದೇವೆ. ಸಿಎಂ ಅದನ್ನು ಬಗೆಹರಿಸುತ್ತಾರೆ ಎಂದು ಹೇಳಿದರು.
ಸರ್ಕಾರದ ವಿರುದ್ಧ ಪ್ರತಿಭಟನೆಗೆ ಮುಂದಾದ ಬಿಜೆಪಿ
ಲೋಡ್ ಶೆಡ್ಡಿಂಗ್ ಬಗ್ಗೆ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ (MLC N Ravikumar) ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಸರ್ಕಾರ ಲೋಡ್ ಶೆಡ್ಡಿಂಗ್ ಒಪ್ಪಿಕೊಂಡಿದೆ. ಕರ್ನಾಟಕ ರಾಜ್ಯದಲ್ಲಿ ಬರ ಆವರಿಸಿದೆ. 191 ತಾಲೂಕಿನಲ್ಲಿ ಬರ ಇದೆ ಎಂದು ಸರ್ಕಾರವೇ ಘೋಷಣೆ ಮಾಡಿದೆ. ಆದರೆ, ಅದಕ್ಕಿಂತ ಹೆಚ್ಚು ತಾಲೂಕಿನಲ್ಲಿ ಬರ ಇದೆ. ಎಲ್ಲಿ ಪಂಪ್‌ಸೆಟ್, ಬೋರ್ ಇದೆಯೋ ಅಲ್ಲೆಲ್ಲ ಹೊಲಗಳಿಗೆ ನೀರು ಹಾಯಿಸಲು ವಿದ್ಯುತ್ ಕೊಡಬೇಕು. ಆದರೆ, ಸರ್ಕಾರ ವಿದ್ಯುತ್ ಕೊಡುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಬೆಂಗಳೂರಿನಲ್ಲಿ ಆರೇಳು ಬಾರಿ ಲೋಡ್ ಶೆಡ್ಡಿಂಗ್ ಮಾಡುತ್ತಿದ್ದಾರೆ. ಫ್ಯಾಕ್ಟರಿಗಳು ನಡೆಯುತ್ತಿಲ್ಲ. ಸರ್ಕಾರ ಸಂಪೂರ್ಣ ರೈತ ವಿರೋಧಿಯಾಗಿದೆ. ಕೈಗಾರಿಕಾ ವಿರೋಧಿಯಾಗಿದೆ. ಗೃಹಲಕ್ಷ್ಮಿ ಬಂದ ಮೇಲೆ ಒಂದೇ ಬಾರಿ ಹಣ ಹಾಕಿದ್ದಾರೆ. ಅದನ್ನೂ ಸಂಪೂರ್ಣವಾಗಿ ಹಾಕಿಲ್ಲ. 50% ಮಹಿಳೆಯರಿಗೆ ಹಾಕಿಲ್ಲ. ಹತ್ತು ಕೆ.ಜಿ ಅಕ್ಕಿ ಕೊಡುವುದಾಗಿ ಹೇಳಿದರು. ಅದನ್ನೂ ಕೊಡಲಿಲ್ಲ. ಶಕ್ತಿ ಯೋಜನೆ ಕೂಡ ಸರಿಯಾಗಿ ನಡೆಯುತ್ತಿಲ್ಲ. ಗೃಹ ಜ್ಯೋತಿ ಯೋಜನೆ ಕೂಡ ಸರಿಯಾಗಿಲ್ಲ. ಡಬಲ್ ಬಿಲ್ ಬರುತ್ತಿದೆ ಎಂದು ರವಿಕುಮಾರ್ ಕಿಡಿಕಾರಿದರು.
ಇದನ್ನೂ ಓದಿ: Medical Bill : ಔಷಧ ಬಿಲ್ ಕೊಡಲೂ ಸರ್ಕಾರದ ಬಳಿ ದುಡ್ಡಿಲ್ಲ? ಮಿತಿ ಮೀರಿತೇ ಕಮಿಷನ್ ದಂಧೆ?
ಈ ಸರ್ಕಾರದ ವಿರುದ್ಧ ಜನಾಂದೋಲನ ಮಾಡುತ್ತೇವೆ. ಎರಡು ದಿನಗಳಲ್ಲಿ ಲೋಡ್ ಶೆಡ್ಡಿಂಗ್ ಸರಿಪಡಿಸದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ. ಎಲ್ಲ ಎಸ್ಕಾಂಗಳನ್ನು ಬಂದ್ ಮಾಡುವ ಕೆಲಸ ಮಾಡುತ್ತೇವೆ. ಬೆಂಗಳೂರಿನಲ್ಲಿ ಆರೇಳು ಬಾರಿ ಲೋಡ್ ಶೆಡ್ಡಿಂಗ್ ಆಗುವುದರಿಂದ ಸಾಫ್ಟ್‌ವೇರ್ ಇಂಡಸ್ಟ್ರಿ ಮೇಲೆ ಪರಿಣಾಮ ಬೀರಲಿದೆ. ಇವರು ಈಗ ವಿದ್ಯುತ್ ಕೊಡದಿದ್ದರೆ, ಕಂಪನಿಗಳು ಹೊರಗೆ ಹೋಗುತ್ತವೆ. ಆ ರೀತಿ ಹೋದರೆ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.