ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದ ಅಂತಿಮ ಮತದಾರರ ಪಟ್ಟಿ-2024 (Electoral List 2024) ಬಿಡುಗಡೆಯಾಗಿದೆ. ರಾಜ್ಯದಲ್ಲಿ ಒಟ್ಟು 5,37,85,815 ಸಾಮಾನ್ಯ ಮತದಾರರಿದ್ದಾರೆ. ಇದರಲ್ಲಿ 2,69,33,750 ಪುರುಷ ಮತದಾರರಿದ್ದರೆ, 2,68,47,145 ಮಹಿಳಾ ಮತದಾರರು ಮತ್ತು 4,920 ಇತರೆ ಮತದಾರರು ಇದ್ದಾರೆ. ಇದೇ ವೇಳೆ, ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 17 ಕ್ಷೇತ್ರದಲ್ಲಿ ಮಹಿಳಾ ಮತದಾರರು (Women voters) ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬ ಮಾಹಿತಿ ಈಗ ಹೊರಬಿದ್ದಿದೆ.
ಈ ಬಗ್ಗೆ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ (Chief Electoral Officer Manoj Kumar Meena) ಮಾಹಿತಿಯನ್ನು ನೀಡಿದ್ದಾರೆ. ಸೋಮವಾರ ಆಯೋಗ ಪ್ರಕಟಿಸಿರುವ ಕರ್ನಾಟಕ ರಾಜ್ಯದ ಅಂತಿಮ ಮತದಾರರ ಪಟ್ಟಿ ಕುರಿತು ರಾಜಕೀಯ ಪಕ್ಷಗಳು ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರ ಹಿನ್ನೆಲೆಯಲ್ಲಿ ಕೂಲಂಕುಷವಾಗಿ ಪರಿಶೀಲಿಸಿ ಸಲಹೆಗಳಿದ್ದಲ್ಲಿ ಆಯೋಗಕ್ಕೆ ಲಿಖಿತವಾಗಿ ಪತ್ರ ಬರೆಯುವ ಮೂಲಕ ಗಮನ ಸೆಳೆಯಬಹುದು ಎಂದು ಹೇಳಿದ್ದಾರೆ.
ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ವತಿಯಿಂದ ಪ್ರಕಟಿಸಲಾದ ರಾಜ್ಯದ ಅಂತಿಮ ಮತದಾರರ ಪಟ್ಟಿ – 2024 ರ ಕುರಿತು ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
17,937 ಶತಾಯುಷಿ ಮತದಾರರು
ರಾಜ್ಯದಲ್ಲಿ ಒಟ್ಟು 17,937 ಶತಾಯುಷಿ ಮತದಾರರಿದ್ದಾರೆ, 46,501 ಸೇವಾ ಮತದಾರರು, 3,164 ಸಾಗರೋತ್ತರ ಮತದಾರರು, 80+ ವಯಸ್ಸಿನ 12,71,862 ಮತದಾರರು ಸೇರಿದಂತೆ 5,62,890 ದಿವ್ಯಾಂಗ ಮತದಾರರು ಇದ್ದಾರೆ ಎಂದು ಮನೋಜ್ ಕುಮಾರ್ ಮೀನಾ ವಿವರಿಸಿದರು.
ಶೃಂಗೇರಿಯಲ್ಲಿ ಅತಿ ಕಡಿಮೆ ಮತದಾರರು
224 ವಿಧಾನಸಭಾ ಕ್ಷೇತ್ರಗಳ ಪೈಕಿ ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರವು ಅತಿ ಹೆಚ್ಚು ಅಂದರೆ 7,17,201 ಮತದಾರರನ್ನು ಹೊಂದಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ ಅಂದರೆ 1,67,556 ಮತದಾರರಿದ್ದಾರೆ ಎಂದು ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.
ಅಂತಿಮ ಮತದಾರರ ಪಟ್ಟಿ -2024ರ ಪ್ರಕಾರ ಒಟ್ಟು ಮತಗಟ್ಟೆಗಳ ಸಂಖ್ಯೆ 58,834 ಆಗಿದೆ. ಮತಗಟ್ಟೆಗಳ ತರ್ಕಬದ್ಧಗೊಳಿಸುವಿಕೆ ಸಮಯದಲ್ಲಿ 845 ಮತಗಟ್ಟೆಗಳನ್ನು ಸೇರ್ಪಡೆಗೊಳಿಸಿದ್ದು, 293 ಮತಗಟ್ಟೆಗಳನ್ನು ವಿಲೀನಗೊಳಿಸಲಾಗಿದೆ. ಅದರಂತೆ 552 ಮತಗಟ್ಟೆಗಳ ನಿವ್ವಳ ಹೆಚ್ಚಳವಾಗಿದೆ ಎಂದು ಮನೋಜ್ ಕುಮಾರ್ ಮೀನಾ ಹೇಳಿದ್ದಾರೆ.
ಪಟ್ಟಿಯಲ್ಲಿ ಹೆಸರಿಲ್ಲದಿದ್ದರೇ ಕೂಡಲೇ ನೋಂದಾಯಿಸಿ
ಮತದಾರರ ಪಟ್ಟಿಯಲ್ಲಿ ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದಿದ್ದರೆ, ಅವರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ತಕ್ಷಣವೇ ನೋಂದಾಯಿಸಲು ಪ್ರೋತ್ಸಾಹಿಸಲಾಗುತ್ತದೆ. ಮತದಾನದ ದಿನದಂದು ಮತದಾರರ ಪಟ್ಟಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗುವುದಿಲ್ಲ ಎಂಬುದು ಗಮನದಲ್ಲಿರಲಿ ಎಂದು ಮನೋಜ್ ಕುಮಾರ್ ಮೀನಾ ಹೇಳಿದ್ದಾರೆ.
ಮತದಾರರು ತುರ್ತಾಗಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ಪರಿಶೀಲಿಸಲು ಮತ್ತು ದೃಢೀಕರಿಸಲು ಮನವಿ ಮಾಡಲಾಗಿದೆ. ಅರ್ಹ ಮತದಾರರು ಅರ್ಜಿಗಳನ್ನು ಸಲ್ಲಿಸಲು ತಮ್ಮ ಮೊಬೈಲ್‌ನಲ್ಲಿ ವೋಟರ್ ಹೆಲ್ಪ್‌ಲೈನ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ತಾವೇ ಅರ್ಜಿ ಸಲ್ಲಿಸಬಹುದು ಅಥವಾ https://voterportal.eci.gov.in/ ಪೋರ್ಟಲ್ ಮೂಲಕವೂ ಅರ್ಜಿಗಳನ್ನು ಸಲ್ಲಿಸಬಹುದು ಎಂದು ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.
ಭಾವಚಿತ್ರ ಅಳವಡಿಕೆ ಹಾಗೂ ಮತದಾರರ ಗುರುತಿನ ಚೀಟಿಗಳ ಹಂಚಿಕೆಯನ್ನು ಶೇಕಡಾ ನೂರಕ್ಕೆ ನೂರರಷ್ಟು ಸಾಧಿಸಲಾಗಿದೆ. ಮತದಾರರ ಗುರುತಿನ ಚೀಟಿಗಳನ್ನು ಮತದಾರರಿಗೆ ತ್ವರಿತ ಅಂಚೆ ಸೇವೆಯ ಮೂಲಕ ಆಯಾ ವಿಳಾಸಗಳಿಗೆ ರವಾನಿಸಲಾಗುತ್ತಿದೆ ಎಂದು ಮನೋಜ್ ಕುಮಾರ್ ಮೀನಾ ಹೇಳಿದ್ದಾರೆ.
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ-2024
ಪ್ರಸ್ತುತ ಆಯೋಗ ಘೋಷಿಸಿರುವ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಯ ಕುರಿತು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ, ಈಗಾಗಲೇ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದ್ದು, ಚುನಾವಣೆ ಸಂದರ್ಭದಲ್ಲಿ ಪಾಲಿಸಬೇಕಾದ ನೀತಿ-ನಿಯಮಗಳ ಕುರಿತು ಆಯೋಗ ಪ್ರಕಟಿಸಿರುವ ಚುನಾವಣಾ ನೀತಿ ಸಂಹಿತೆಯನ್ನು ಖಡ್ಢಾಯವಾಗಿ ಪಾಲಿಸಬೇಕು, ಪ್ರಾಶಸ್ತ್ಯ ಮತದಾನ ಮಾಡುವ ಕುರಿತು ಅನುಮಾನಗಳನ್ನು ಬಗೆಹರಿಸುವಲ್ಲಿ ಅವಶ್ಯಕ ಜಾಗೃತಿ ಸಂದೇಶವುಳ್ಳ ಬಿತ್ತಿಚಿತ್ರ ಹಾಗೂ ಕಿರುಚಿತ್ರಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಇದನ್ನೂ ಓದಿ: ಸಿಎಂ ಕುರ್ಚಿಗಾಗಿ ಅಪ್ರಬುದ್ಧ ರಾಹುಲ್‌ಗೆ ಉಧೋ ಉಧೋ ಎನ್ನುವ ಸಿದ್ದರಾಮಯ್ಯ: ಪ್ರಲ್ಹಾದ್ ಜೋಶಿ
ಈ ಸಂದರ್ಭದಲ್ಲಿ ಸಭೆಯಲ್ಲಿ ಅಪರ ಮುಖ್ಯ ಚುನಾವಣಾಧಿಕಾರಿಗಳಾದ ವೆಂಕಟೇಶ್ ಕುಮಾರ್ ಹಾಗೂ ಕೂರ್ಮ ರಾವ್, ರಾಷ್ಟ್ರೀಯ ಪಕ್ಷಗಳಾದ ಆಮ್ ಆದ್ಮಿ ಪಕ್ಷ, ಬಹುಜನ ಸಮಾಜ ಪಕ್ಷ, ಭಾರತೀಯ ಜನತಾ ಪಕ್ಷ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾಕ್ರ್ಸಿಸ್ಟ್), ಇಂಡಿಯನ್ ನ್ಯಾಷನಲ್ ಕಾಂಗ್ರೇಸ್, ನ್ಯಾಷನಲ್ ಪೀಪಲ್ಸ್ ಪಾರ್ಟಿ ಹಾಗೂ ರಾಜ್ಯಮಟ್ಟದ ಪಕ್ಷ ಜನತಾದಳ (ಸೆಲ್ಯುಲರ್) ಪಕ್ಷದ ಪ್ರತಿನಿಧಿಗಳು ಉಪಸ್ಥಿತರಿದ್ದರು.