ಬೆಂಗಳೂರು: ಈ ಭಾರಿ ಲೋಕಸಭಾ ಚುನಾವಣೆಯನ್ನು (Lok Sabha Election 2024) ಸಿಎಂ ಸಿದ್ದರಾಮಯ್ಯ (CM Siddaramaiah) ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಹಗಲು – ರಾತ್ರಿ ನಿರಂತರ ಪ್ರಚಾರ ಹಾಗೂ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಒಟ್ಟು 14 ಗ್ಯಾರಂಟಿ ಸಮಾವೇಶಗಳು, 76 ಪ್ರಜಾಧ್ವನಿ ಸಮಾವೇಶಗಳನ್ನು ನಡೆಸಿದ್ದಾರೆ. ಇದಕ್ಕಾಗಿ ರಾಜ್ಯಾದ್ಯಂತ ಸುಮಾರು 26 ಸಾವಿರ ಕಿಲೋ ಮೀಟರ್‌ವರೆಗೆ ಸಂಚಾರವನ್ನು ಮಾಡಿದ್ದಾರೆ. ಸಿಎಂ ರೋಡ್ ಶೋ (CM Road Show) ಹಾಗೂ ಸಭೆಗಳಲ್ಲಿ ಸರಾಸರಿ 15 ಸಾವಿರ ಮಂದಿ ಭಾಗಿಯಾಗಿದ್ದರು. ಅಲ್ಲದೆ, ದಿನಕ್ಕೆ ಸರಾಸರಿ 14-18 ಗಂಟೆಗಳ ಕಾಲ ಪ್ರಚಾರಗಳಲ್ಲಿ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಸರಾಸರಿ ದಿನಕ್ಕೆ 14-18 ಗಂಟೆ ಪ್ರಯಾಣ ಮಾಡಿದ್ದಾರೆ. ಇದರಲ್ಲಿ ರಸ್ತೆ ಮಾರ್ಗ ಮತ್ತು ವಾಯು ಮಾರ್ಗಗಳು ಸೇರಿವೆ. ಚುನಾವಣೆ ಘೋಷಣೆ ಆಗುವುದಕ್ಕೂ ಮೊದಲು 14 ಗ್ಯಾರಂಟಿ ಸಮಾವೇಶಗಳನ್ನು ನಡೆಸಿದ್ದ ಸಿಎಂ, ಕೆಲವು ಕಡೆ ಆಯಾ ಭಾಗದ ಸಮುದಾಯ ಮುಖಂಡರ ಜತೆ ಸಂವಾದವನ್ನೂ ನಡೆಸಿದ್ದರು.
ಚುನಾವಣೆ ಘೋಷಣೆಯಾದ ಬಳಿಕ ಮೊದಲ ಮತ್ತು ಎರಡನೇ ಹಂತದ 28 ಲೋಕಸಭಾ ಕ್ಷೇತ್ರಗಳ 76 ಸ್ಥಳಗಳಲ್ಲಿ “ಪ್ರಜಾಧ್ವನಿ-2” ಜನ ಸಮಾವೇಶಗಳ ನಡೆಸಿದ ಅವರು, ಕೇಂದ್ರ ಸರ್ಕಾರದಿಂದ ಅನುದಾನ ತಾರತಮ್ಯ ಹಾಗೂ ಜಿಎಸ್‌ಟಿ ಅನುದಾನ ಹಂಚಿಕೆ ವಿರುದ್ಧವಾಗಿ ಭಾಷಣ ಮಾಡುತ್ತಾ ಬಂದರು. ಜತೆಗೆ ಬಿಜೆಪಿ ಮೇಲೆಯೂ ಅಟ್ಯಾಕ್ ಹಾಗೂ ಕೌಂಟರ್ ಅಟ್ಯಾಕ್‌ಗಳನ್ನು ಮಾಡುತ್ತಾ ಬಂದರು.
ಮತ ಪ್ರಭುವ ಸೆಳೆಯಲು ಸಿಎಂ ಕಸರತ್ತಿನ ಮಾತುಗಳು ಮತ್ತು ಪ್ರಭಾವ
1) ಇಲ್ಲಿ ನಾನೇ ಅಭ್ಯರ್ಥಿ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದರೆ ನಾನು ಗೆದ್ದಂತೆ!
2) ಅಂಬಾನಿ, ಅದಾನಿ ಬಗ್ಗೆ ನೇರವಾದ ಟೀಕೆ ಜತೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕಳೆದ ಹತ್ತು ವರ್ಷಗಳ ಆಡಳಿತದ ಬಗ್ಗೆ ಟೀಕೆ.
3) ಸೋಷಿಯಲ್ ಮೀಡಿಯಾ ಸಹಿತ ಸಮಾವೇಶಗಳಲ್ಲಿ “ಖಾಲಿ ಚೊಂಬು” ಪ್ರಸ್ತಾಪ.
4) ಅನ್ನ ಭಾಗ್ಯ ಸೇರಿದಂತೆ ಹಲವು ಭಾಗ್ಯಗಳ ಬಗ್ಗೆ ಅಂಕಿ – ಅಂಶಗಳ ಸಹಿತ ವಿವರಣೆ
5) ಪ್ರಧಾನಿ ನರೇಂದ್ರ ಮೋದಿಯವರ “ಅಚ್ಛೇ ದಿನ್ ಆಯೇಂಗೆ” ಎನ್ನುವ ಪದಗಳನ್ನು ಬಳಕೆ ಮಾಡಿ ಲೇವಡಿ ಮಾಡುತ್ತಿದ್ದ ಸಿಎಂ ಸಿದ್ದರಾಮಯ್ಯ
6) ಐದೂ ಗ್ಯಾರಂಟಿಗಳ ಬಗ್ಗೆ ಪ್ರಸ್ತಾಪ. ಜತೆಗೆ ದೇಶದಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ನೀಡಿರುವ ಗ್ಯಾರಂಟಿಗಳ ಬಗ್ಗೆ ಜನರಿಗೆ ಮನದಟ್ಟಾಗುವ ರೀತಿ ಭಾಷಣವನ್ನು ಸಿಎಂ ಸಿದ್ದರಾಮಯ್ಯ ಮಾಡಿದ್ದಾರೆ.
7) ಗ್ಯಾರಂಟಿ ಸಮಾವೇಶಗಳು ಮತ್ತು 76 ಪ್ರಜಾಧ್ವನಿ ಜನ ಸಮಾವೇಶಗಳು ಸೇರಿ 90 ಸಭೆಗಳಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಉದ್ದಗಲಕ್ಕೂ ಪ್ರಯಾಣಿಸಿದ್ದು ಅಂದಾಜು 26 ಸಾವಿರ ಕಿಲೋ ಮೀಟರ್ ಆಗಿದೆ. ಈ 90 ಸಭೆಗಳು/ರೋಡ್ ಶೋಗಳಲ್ಲಿ 7 ಸಾವಿರದಿಂದ 60 ಸಾವಿರದವರೆಗೂ ಜನ ಸೇರಿದ್ದರು.
8) ರೋಡ್ ಶೋ/ ಸಭೆಗಳಲ್ಲಿ ಭಾಗವಹಿಸಿದ ಜನರ ಪ್ರಮಾಣ ಸರಾಸರಿ 15 ಸಾವಿರ ಎಂದು ಲೆಕ್ಕ ಹಿಡಿದರೂ ಒಟ್ಟಾರೆ 14 ಲಕ್ಷದಷ್ಟು ಜನರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೇರಾ ನೇರಾ ತಮ್ಮ ಮಾತುಗಳಲ್ಲಿ ಬೆಸೆದಿದ್ದಾರೆ.