ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆ (Lok Sabha Election 2024) ಸಂಬಂಧ ಈಗಾಗಲೇ ರಾಜಕೀಯ ಪಕ್ಷಗಳು ಸಿದ್ಧತೆಯಲ್ಲಿ ತೊಡಗಿಕೊಂಡಿವೆ. ತಮ್ಮ ವಿರೋಧಿ ಪಕ್ಷಗಳನ್ನು ಮಣಿಸುವ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ. ಈ ನಡುವೆ ಸತತ ಎರಡು ಅವಧಿಗೆ ಅಧಿಕಾರದಲ್ಲಿರುವ ಬಿಜೆಪಿ ಎನ್‌ಡಿಎ ಮೈತ್ರಿಕೂಟವನ್ನು (NDA alliance) ಮಣಿಸಲು ಕಾಂಗ್ರೆಸ್‌ನಿಂದ ಇಂಡಿಯಾ ಮೈತ್ರಿಕೂಟ (India Alliance) ಸಿದ್ಧವಾಗಿದೆ. ಇನ್ನು ಕರ್ನಾಟಕದ ವಿಷಯಕ್ಕೆ ಬಂದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 25 + 1 ಸ್ಥಾನವನ್ನು ಗೆದ್ದುಕೊಂಡಿತ್ತು. ಈಗ ಕಾಂಗ್ರೆಸ್ ಸರ್ಕಾರದ (Congress Government) ಗ್ಯಾರಂಟಿ (Congress Guarantee Scheme) ಅಬ್ಬರದ ನಡುವೆ ಈ ಸೀಟನ್ನು ಉಳಿಸಿಕೊಳ್ಳುವ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ. ಅಲ್ಲದೆ, ಜೆಡಿಎಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳುವ ತವಕದಲ್ಲಿದೆ. ಹೀಗಾಗಿ ಬಿಜೆಪಿ -ಜೆಡಿಎಸ್ ಮೈತ್ರಿಗೆ (BJP-JDS alliance) ಮುಂದಾಗಲಾಗಿದೆ. ಈಗ ಸೀಟು ಹಂಚಿಕೆ ಸಹ ಬಹುತೇಕ ಪಕ್ಕಾ ಎನ್ನಲಾಗಿದ್ದು, 25 + 3ರ ಸೂತ್ರವು ಬಹುತೇಕ ಪಕ್ಕಾ ಆಗಿವೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ದೆಹಲಿಯಲ್ಲಿ ಬಿಜೆಪಿ ನಾಯಕರ ಜತೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು (Former Prime Minister HD Deve Gowda) ಮಾತುಕತೆ ನಡೆಸಿದ್ದಾರೆ. ಬಹುತೇಕ ಇದೇ ವಾರದಲ್ಲಿ ಮೈತ್ರಿ ಸೂತ್ರ ಅಂತಿಮವಾಗಲಿದೆ. ಬಿಜೆಪಿ ಮೂಲಗಳ ಪ್ರಕಾರ, 25 + 3 ಲೆಕ್ಕಾಚಾರದಲ್ಲಿ ಸೀಟು ಹಂಚಿಕೆಯಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Cauvery Water Dispute: ಕಾವೇರಿ ನೀರು ಬಿಟ್ಟು, ರೈತರ ಬದುಕಿನ ಜತೆ ಸರ್ಕಾರ ಚೆಲ್ಲಾಟ: ಎಚ್.ಡಿ.ಕುಮಾರಸ್ವಾಮಿ
ಹಾಸನ, ಮಂಡ್ಯ, ಕೋಲಾರ ಮೂರು ಕ್ಷೇತ್ರಗಳು ಜೆಡಿಎಸ್‌ಗೆ ಪಕ್ಕಾ ಎಂದು ಹೇಳಲಾಗಿದೆ. ಇನ್ನು 25 ಕ್ಷೇತ್ರಗಳು ಬಿಜೆಪಿ ಪಾಲಾಗಲಿದೆ. ಆದರೆ, ಜೆಡಿಎಸ್ ಮತ್ತೆರಡು ಕ್ಷೇತ್ರಗಳಿಗೆ ಪಟ್ಟು ಹಿಡಿದು ಕುಳಿತಿದೆ. ತುಮಕೂರು ಕ್ಷೇತ್ರದ ಮೇಲೆ ಮಾಜಿ ಪ್ರಧಾನಿ ದೇವೇಗೌಡರು ಒಲವು ವ್ಯಕ್ತಪಡಿಸಿದ್ದಾರೆ.
ಉತ್ತರ ಕರ್ನಾಟಕದಲ್ಲೂ ಒಂದು ಸೀಟಿಗೆ ಬೇಡಿಕೆ
ಇತ್ತ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (Former CM HD Kumaraswamy) ಮತ್ತು ಮಾಜಿ ಸಚಿವ ರಮೇಶ್ ಜಾರಕಿಹೊಳಿ (Former Minister Ramesh Jarkiholi) ಮಾತುಕತೆ ಸಂದರ್ಭದಲ್ಲಿ ಅಚ್ಚರಿಯ ಒಂದು ಕ್ಷೇತ್ರದ ಬಗ್ಗೆ ಚರ್ಚೆಯಾಗಿದೆ. ಉತ್ತರ ಕರ್ನಾಟಕದ ಒಂದು ಕ್ಷೇತ್ರದಲ್ಲಿ ಜೆಡಿಎಸ್ ಪ್ರಭಾವದ ಬಗ್ಗೆ ಚರ್ಚೆಯಾಗಿದೆ. ರಾಯಚೂರು ಕ್ಷೇತ್ರದಲ್ಲಿ ಜೆಡಿಎಸ್ ಸಂಘಟನೆ ಇರುವುದರಿಂದ ರಾಯಚೂರು ಕ್ಷೇತ್ರವನ್ನು ಸಹ ಕೇಳಲು ಎಚ್‌ಡಿಕೆ ಸಿದ್ಧರಾಗಿದ್ದಾರೆ.
5 ಕ್ಷೇತ್ರ ಪಡೆಯಲು ಜೆಡಿಎಸ್ ನಾಯಕರು ಮುಂದಾಗಿದ್ದಾರೆ. ಆದರೆ, ಜೆಡಿಎಸ್‌ಗೆ ಹೆಚ್ಚು ಸ್ಥಾನ ಕೊಡುವುದರಿಂದ ಕಾಂಗ್ರೆಸ್‌ಗೆ ಲಾಭವಾಗುತ್ತದೆ ಎಂಬುದು ಬಿಜೆಪಿ ನಾಯಕರ ವಾದ. ಜೆಡಿಎಸ್ ನಾಯಕರು ಏನೇ ಪಟ್ಟು ಹಿಡಿದರೂ ಕೇವಲ ಮೂರು ಸ್ಥಾನ ಮಾತ್ರ ಕೊಡುವಂತೆ ರಾಜ್ಯ ಬಿಜೆಪಿ ನಾಯಕರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: Congress Karnataka : ಕಾಂಗ್ರೆಸ್‌ನಲ್ಲಿ ನಿಲ್ಲದ ಒಳಜಗಳ; ಈಗ ಮಹಿಳಾ ಡಿಸಿಎಂಗೆ ಬೇಡಿಕೆ!
ಸೆ. 21ಕ್ಕೆ ನವದೆಹಲಿಗೆ ಎಚ್‌ಡಿಕೆ
ಇನ್ನು ಬಿಜೆಪಿ – ಜೆಡಿಎಸ್ ಮೈತ್ರಿ ವಿಚಾರವಾಗಿ ರಾಮನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಎಚ್.ಡಿ. ಕುಮಾರಸ್ವಾಮಿ, ಕೆಟ್ಟ ಸರ್ಕಾರವನ್ನು ತೆಗೆಯಬೇಕು. ಅದಕ್ಕೆ ಮೈತ್ರಿಯ ಅವಶ್ಯಕ ಇದೆ. ರಾಜ್ಯದ ಹಿತಕ್ಕಾಗಿ ನಾವು ಸ್ವಲ್ಪ ಶಕ್ತಿಯನ್ನು ಹೆಚ್ಚು ಮಾಡಿಕೊಳ್ಳಲು ಈ ನಿರ್ಧಾರ ಮಾಡಿದ್ದೇವೆ. ಸೆ.21ರ ಬೆಳಗ್ಗೆ ದೆಹಲಿಗೆ ಹೋಗುತ್ತಿದ್ದೇನೆ. ಅಲ್ಲಿ ಚರ್ಚೆ ನಡೆಯಲಿದೆ. ಸದ್ಯ ಯಾವುದೇ ಚರ್ಚೆ ಆಗಿಲ್ಲ ಎಂದು ಹೇಳಿದ್ದಾರೆ.