ನವದೆಹಲಿ: ಲೋಕಸಭಾ ಚುನಾವಣೆಗೆ (Lok Sabha Election 2024) ಸಂಬಂಧಿಸಿ ರಾಜ್ಯದ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ (BJP Candidates second List) ಮಾರ್ಚ್ 22ರಂದು ಘೋಷಣೆಯಾಗಲಿದೆ (BJP Second list on March 22) ಎಂದು ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯರಾಗಿರುವ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ (BS Yediyurappa) ಹೇಳಿದ್ದಾರೆ. ಬುಧವಾರ ದಿಲ್ಲಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ರಾಜ್ಯದ ಬಾಕಿ ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿರುವ ಜೆ.ಪಿ. ನಡ್ಡಾ ಅವರ ಜೊತೆಗೆ ಸುಧೀರ್ಘ ಚರ್ಚೆಯಾಗಿದೆ ಎಂದು ಹೇಳಿದರು.
ಬಿಜೆಪಿ ಕಳೆದ ಮಾರ್ಚ್ 13ರಂದು ರಾಜ್ಯದ 20 ಕ್ಷೇತ್ರಗಳ ಅಭ್ಯರ್ಥಿಗಳನ್ನು ಒಳಗೊಂಡ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಈ ಪಟ್ಟಿಯ ಬಗ್ಗೆ ಕೆಲವೊಂದು ಅಪಸ್ವರಗಳು ಎದ್ದಿದ್ದವು. ಹೀಗಾಗಿ ಹೈಕಮಾಂಡ್ ಭಾರಿ ಜಾಗರೂಕತೆಯಿಂದ ಎರಡನೇ ಪಟ್ಟಿ ಬಿಡುಗಡೆಗೆ ಮುಂದಾಗಿದೆ ಎನ್ನಲಾಗಿದೆ.
ಮಂಗಳವಾರ ರಾತ್ರಿ ದಿಲ್ಲಿಯಲ್ಲಿ ಹಿರಿಯ ನಾಯಕರ ಸಭೆ ನಡೆದಿತ್ತು. ʻʻಸಭೆಯಲ್ಲಿ ರಾಜ್ಯದ ಐದು ಕ್ಷೇತ್ರಗಳ ಬಗ್ಗೆ ಚರ್ಚೆಯಾಗಿದೆ. ಇನ್ನು ಅಮಿತ್ ಶಾ ಮತ್ತು ಜೆ.ಪಿ. ನಡ್ಡಾ ಅವರು ಪ್ರಧಾನಿ ಜೊತೆಗೆ ಚರ್ಚೆ ಮಾಡಿ ಮಾ. 22ರಂದು ಘೋಷಣೆ ಮಾಡಲಿದ್ದಾರೆ ಎಂದು ಹೇಳಿದರು.
ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದ್ದು, ಜೆಡಿಎಸ್‌ಗೆ ಎಷ್ಟು ಸ್ಥಾನಗಳನ್ನು ಬಿಟ್ಟುಕೊಡಬೇಕು ಎಂಬ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಆಗಿಲ್ಲ. ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿ ಅವರು ಹಾಸನ, ಮಂಡ್ಯ ಮತ್ತು ಕೋಲಾರ ಕ್ಷೇತ್ರಗಳನ್ನು ಬಿಜೆಪಿ ತಮಗೆ ಬಿಟ್ಟುಕೊಟ್ಟಿದೆ ಎಂದು ಹೇಳಿದ್ದಾರಾದರೂ, ಬಿಜೆಪಿಯೊಳಗಡೆ ಇನ್ನೂ ಕೋಲಾರವನ್ನು ತಾವೆ ಇಟ್ಟುಕೊಳ್ಳುವ ಚರ್ಚೆ ಜೋರಾಗಿದೆ. ಹೀಗಾಗಿ ಅಂತಿಮ ಪಟ್ಟಿ ಬಿಡುಗಡೆ ವಿಳಂಬವಾಗುತ್ತಿದೆ ಎನ್ನಲಾಗಿದೆ.
ಬಿಜೆಪಿ ಜೆಡಿಎಸ್ ಹೊಂದಾಣಿಕೆ ಹಿನ್ನಲೆ 28 ಕ್ಷೇತ್ರಗಳನ್ನು ಗೆಲ್ಲಲಿದ್ದೇವೆ ಎಂದು ವಿಶ್ವಾಸದಿಂದ ಹೇಳಿರುವ ಬಿ.ಎಸ್. ಯಡಿಯೂರಪ್ಪ ಅವರು, ದೇವೇಗೌಡರು ಅಮಿತ್ ಶಾ ಮತ್ತು ಮೋದಿ ಜೊತೆಗೆ ಸಂಪರ್ಕದಲ್ಲಿದ್ದಾರೆ ಎಂದರು. ಎರಡನೇ ಪಟ್ಟಿ ಬಿಡುಗಡೆ ಬಳಿಕ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಜತೆಯಾಗಿ ರಾಜ್ಯಾದ್ಯಂತ ಪ್ರವಾಸ ಮಾಡಲಿದ್ದಾರೆ ಎಂದು ವಿವರಿಸಿದರು.
ಮಂಗಳವಾರ ರಾತ್ರಿ ನಡೆದ ಸಭೆಯಲ್ಲಿ ಉತ್ತರ ಕನ್ನಡ, ಬೆಳಗಾವಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಮತ್ತು ರಾಯಚೂರು ಕ್ಷೇತ್ರಗಳ ಅವಲೋಕನ ನಡೆದಿದೆ ಎನ್ನಲಾಗಿದೆ.
ಈಶ್ವರಪ್ಪ ಬಗ್ಗೆ ಪ್ರತಿಕ್ರಿಯೆ ಕೊಡಲ್ಲ ಎಂದ ಬಿಎಸ್ ಯಡಿಯೂರಪ್ಪ
ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯ ಬಿಜೆಪಿಯಲ್ಲಿ ಟಿಕೆಟ್ ಹಂಚಿಕೆಯಿಂದ ಎದ್ದಿರುವ ಅಸಮಾಧಾನ ಮತ್ತು ಅಸಮಾಧಾನವನ್ನು ಶಮನ ಮಾಡುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು. ಆದರೆ, ತಮ್ಮ ಮಗನ ವಿರುದ್ಧವೇ ಬಂಡಾಯವಾಗಿ ಕಣಕ್ಕಿಳಿಯುವ ಸಿದ್ಧತೆಯಲ್ಲಿರುವ ಕೆ.ಎಸ್. ಈಶ್ವರಪ್ಪ (KS Eshwarappa) ಅವರ ಬಗ್ಗೆ ಪ್ರತಿಕ್ರಿಯೆ ಕೊಡುವುದಿಲ್ಲ ಎಂದು ಹೇಳಿದರು.
ಈಶ್ವರಪ್ಪ ಅವರ ಬೇಜವ್ದಾರಿ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ. ಯಡಿಯೂರಪ್ಪ ಯಾವುದನ್ನೂ ವೈಯಕ್ತಿಕವಾಗಿ ನಿರ್ಧಾರ ಮಾಡಲು ಆಗುವುದಿಲ್ಲ. ಎಲ್ಲವೂ ಚುನಾವಣಾ ಸಮಿತಿಯಲ್ಲಿ ನಿರ್ಧಾರ ಆಗುತ್ತದೆ. ಇದೆಲ್ಲವೂ ಎರಡು ಮೂರು ದಿನದಲ್ಲಿ ಅವರಿಗೆ (ಈಶ್ವರಪ್ಪ) ಅರ್ಥ ಆಗಲಿದೆ. ಆಮೇಲೆ ಅವರು ಬರುತ್ತಾರೆ ಎಂದು ಹೇಳಿದರು ಬಿ.ಎಸ್. ಯಡಿಯೂರಪ್ಪ. ಈಶ್ವರಪ್ಪ ಅವರನ್ನು ಸಮಧಾನಪಡಿಸುವ ಎಲ್ಲ ಪ್ರಯತ್ನ ಮಾಡಿದೆ. ಅವರು ಪಕ್ಷೇತರರಾಗಿ ಕಣಕ್ಕಿಳಿಯುತ್ತಿರುವ ಬಗ್ಗೆ ನಾನು ಮಾತನಾಡುವುದಿಲ್ಲ ಎಂದರು.
ತುಮಕೂರಿನಲ್ಲಿ ಟಿಕೆಟ್ ಸಿಗದೆ ಸಿಟ್ಟಿಗೆದ್ದಿರುವ ಮಾಜಿ ಸಚಿವ ಮಾಧು ಸ್ವಾಮಿ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಅವರು, ಎಲ್ಲ ಅತೃಪ್ತರ ಜೊತೆಗೆ ಮಾತನಾಡುತ್ತೇನೆ. ನಮಗೆ ಅವರ ಸಹಕಾರ ಬೇಕು ಎಂದರು.
ಕೊಪ್ಪಳದ ಹಾಲಿ ಸಂಸದ ಕರಡಿ ಸಂಗಣ್ಣ ಜೊತೆಗೆ ಮಾತನಾಡಿದ್ದೇನೆ. ಅವರು ನಿಷ್ಠಾವಂತ ಮುಖಂಡರು. ಅವರು ಬೇರೆ ಯಾವ ನಿರ್ಧಾರ ಮಾಡಬಾರದು. ಮುಂದೆ ಅವರಿಗೆ ಸೂಕ್ತ ಸ್ಥಾನ ಮಾನ ನೀಡಲಾಗುವುದು ಎಂದು ಭರವಸೆ ನೀಡಿದರು.
ಕೆಲವು ಬಿಜೆಪಿ ನಾಯಕರನ್ನು ಕಾಂಗ್ರೆಸ್ ಸಂಪರ್ಕಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನಲ್ಲಿ ಅಭ್ಯರ್ಥಿಗಳು ಇಲ್ಲ. ಅದಕ್ಕಾಗಿ ಅವರು ಬಿಜೆಪಿ ಬಂಡಾಯ ನಾಯಕರನ್ನು ಸಂಪರ್ಕ ಮಾಡುತ್ತಿದ್ದಾರೆ ಎಂದರು.
ಇದನ್ನೂ ಓದಿ : Lok Sabha Election 2024 : ಕಾಂಗ್ರೆಸ್‌ನ 16 ಟಿಕೆಟ್ ಫೈನಲ್; ಹೆಬ್ಬಾಳ್ಕರ್ ಪುತ್ರ, ಜಾರಕಿಹೊಳಿ ಪುತ್ರಿ ಕಣಕ್ಕೆ?
ಮೊದಲ ಪಟ್ಟಿಯಲ್ಲಿ ಟಿಕೆಟ್ ಪಡೆದ ಬಿಜೆಪಿಯ 20 ಅಭ್ಯರ್ಥಿಗಳು
ಚಿಕ್ಕೋಡಿ: ಅಣ್ಣಾ ಸಾಹೇಬ್ ಜೊಲ್ಲೆ
ಬಾಗಲಕೋಟೆ: ಪಿ.ಸಿ. ಗದ್ದಿಗೌಡರ್
ವಿಜಯಪುರ: ರಮೇಶ್ ಜಿಗಜಿಣಗಿ
ಕಲಬುರಗಿ: ಡಾ. ಉಮೇಶ್ ಜಾಧವ್
ಬೀದರ್: ಭಗವಂತ್ ಖೂಬಾ
ಕೊಪ್ಪಳ: ಡಾ. ಬಸವರಾಜ ಕ್ಯಾವತೂರು
ಬಳ್ಳಾರಿ: ಬಿ. ಶ್ರೀರಾಮುಲು
ಹಾವೇರಿ: ಬಸವರಾಜ ಬೊಮ್ಮಾಯಿ
ಧಾರವಾಡ: ಪ್ರಹ್ಲಾದ್ ಜೋಶಿ
ದಾವಣಗೆರೆ: ಗಾಯತ್ರಿ ಸಿದ್ದೇಶ್ವರ್
ಶಿವಮೊಗ್ಗ: ಬಿವೈ ರಾಘವೇಂದ್ರ
ಉಡುಪಿ ಚಿಕ್ಕಮಗಳೂರು: ಕೋಟ ಶ್ರೀನಿವಾಸ ಪೂಜಾರಿ
ದಕ್ಷಿಣ ಕನ್ನಡ: ಕ್ಯಾಪ್ಟನ್ ಬ್ರಿಜೇಶ್ ಚೌಟ
ತುಮಕೂರು: ವಿ ಸೋಮಣ್ಣ
ಮೈಸೂರು: ಯದುವೀರ್ ಕೃಷ್ಣ ದತ್ತ ಒಡೆಯರ್
ಚಾಮರಾಜನಗರ: ಎಸ್. ಬಾಲರಾಜ್
ಬೆಂಗಳೂರು ಗ್ರಾಮಾಂತರ: ಡಾ. ಸಿ.ಎನ್. ಮಂಜುನಾಥ್
ಬೆಂಗಳೂರು ಉತ್ತರ: ಶೋಭಾ ಕರಂದ್ಲಾಜೆ
ಬೆಂಗಳೂರು ಸೆಂಟ್ರಲ್: ಪಿ.ಸಿ. ಮೋಹನ್
ಬೆಂಗಳೂರು ದಕ್ಷಿಣ: ತೇಜಸ್ವಿ ಸೂರ್ಯ
ಅಭ್ಯರ್ಥಿ ಘೋಷಣೆಯಾಗದ ಕ್ಷೇತ್ರಗಳು:
ಉತ್ತರ ಕನ್ನಡ, ಬೆಳಗಾವಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ರಾಯಚೂರು