Site icon Vistara News

Lok Sabha Election 2024 : ಬಿಜೆಪಿ ಟಿಕೆಟ್‌ ಪಾಲಿಟಿಕ್ಸ್; 3 ಕ್ಷೇತ್ರ, 3 ನಾಯಕರು!‌ ಏನಿದೆ ಬೊಮ್ಮಾಯಿ ಲೆಕ್ಕಾಚಾರ?

Murugesh Nirani Basavaraj Bommai and Govinda Karajol infront of Parliament new building

ಬೆಂಗಳೂರು: 2024ರ ಲೋಕಸಭಾ ಚುನಾವಣೆಗೆ (Lok Sabha Election 2024) ಇನ್ನು 8 ತಿಂಗಳಷ್ಟೇ ಬಾಕಿ ಇದೆ. ಈ ನಿಟ್ಟಿನಲ್ಲಿ ವಿವಿಧ ಪಕ್ಷಗಳು ಈಗಾಗಲೇ ತಯಾರಿ ನಡೆಸುತ್ತಿದ್ದು, ಸೂಕ್ತ ಅಭ್ಯರ್ಥಿಗಳ ಬಗ್ಗೆ ತಲೆ ಕೆಡಿಸಿಕೊಂಡಿದೆ. ಇನ್ನು ರಾಜ್ಯದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ದಾಖಲಿಸಿತ್ತು. ಇರುವ 28 ಲೋಕಸಭಾ ಕ್ಷೇತ್ರಗಳಲ್ಲಿ 25ರಲ್ಲಿ ಗೆಲುವು ಸಾಧಿಸಿತ್ತು. ಆದರೆ, ಈ ಬಾರಿ ಎಲ್ಲ ಹಾಲಿಗಳಿಗೂ ಟಿಕೆಟ್‌ ನೀಡುವುದಿಲ್ಲ ಎಂಬ ಸಂದೇಶವನ್ನು ಬಿಜೆಪಿ ವರಿಷ್ಠರು (BJP leaders) ರವಾನೆ ಮಾಡಿರುವ ಹಿನ್ನೆಲೆಯಲ್ಲಿ ಈಗ ಕಮಲ ಪಕ್ಷದಲ್ಲಿ ಟಿಕೆಟ್‌ ಪಾಲಿಟಿಕ್ಸ್‌ (Ticket Politics) ಶುರುವಾಗಿದೆ. ಸೋತ ಬಳಿಕವೂ ಅಧಿಕಾರ ಪಡೆಯಲು ಘಟಾನುಘಟಿ ನಾಯಕರಿಂದ ಸರ್ಕಸ್‌‌ ನಡೆದಿದೆ. ಈ ನಿಟ್ಟಿನಲ್ಲಿ ಪ್ರಮುಖವಾಗಿ ಮೂರು ಕ್ಷೇತ್ರದ ಮೇಲೆ ಮೂರು ನಾಯಕರು ಕಣ್ಣಿಟ್ಟಿದ್ದು, ಇದಕ್ಕೆ ಪ್ರಮುಖವಾಗಿ ಮೂರು ಕಾರಣಗಳಿವೆ.

ಲೋಕಸಭೆಯತ್ತ ಬೊಮ್ಮಾಯಿ ಕಣ್ಣು

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಗೆದ್ದು ಮತ್ತೆ ಅಧಿಕಾರ ಹಿಡಿಯುವ ಲೆಕ್ಕಾಚಾರದಲ್ಲಿದ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಗೆ (Former CM Basavaraj Bommai) ಫಲಿತಾಂಶ ಆಘಾತ ತಂದಿತ್ತು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿಯೂ ಸಹ ಸೂಕ್ತ ಸ್ಥಾನಮಾನ ಸಿಗುವ ಲಕ್ಷಣ ಇನ್ನೂ ಕಾಣುತ್ತಿಲ್ಲ ಹಾಗಾಗಿ ಈಗ ಬೊಮ್ಮಾಯಿ ಟೀಮ್‌ (Bommai Team) ಆಯ್ಕೆಯನ್ನು ಇಟ್ಟುಕೊಂಡಿದೆ. ಮೊದಲನೆಯದಾಗಿ ವಿಪಕ್ಷ ನಾಯಕ ಸ್ಥಾನ (Leader of the Opposition) ಪಡೆಯುವ ಪ್ಲ್ಯಾನ್‌ ಹಾಕಿಕೊಳ್ಳಲಾಗಿದೆ. ಇಲ್ಲವೇ ಎರಡನೆಯದಾಗಿ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದು ಎಂಬ ಲೆಕ್ಕಾಚಾರವನ್ನು ಹಾಕಿಕೊಳ್ಳಲಾಗಿದೆ.

ಏಕೆ ಈ ನಿರ್ಧಾರ?

ಬಸವರಾಜ ಬೊಮ್ಮಾಯಿ ಅವರು ವಿಪಕ್ಷ ನಾಯಕ ಆಗುವುದು ಅಷ್ಟು ಸಲುಭವಿಲ್ಲ. ಬೊಮ್ಮಾಯಿಗೆ ವಿಪಕ್ಷ ನಾಯಕ ಸ್ಥಾನ ತಪ್ಪಿಸಲು ಕೆಲವು ನಾಯಕರು ಪ್ರಯತ್ನ ಮಾಡುತ್ತಿದ್ದಾರೆ. ಕಾರಣ, ಮೂಲ ಬಿಜೆಪಿಗರು ಬೊಮ್ಮಾಯಿ ಮೇಲೆ ಸ್ವಲ್ಪ ಅಸಮಾಧಾನಗೊಂಡಿದ್ದಾರೆ. ಹೀಗಾಗಿ ವಿಪಕ್ಷ ನಾಯಕನ ಸ್ಥಾನಕ್ಕೆ ಈಗಾಗಲೇ ಪ್ರಯತ್ನ ಪಟ್ಟಿದ್ದರೂ ವರಿಷ್ಠರು ಮೀನಮೇಷ ಎಣಿಸುತ್ತಿರುವುದರಿಂದ ಆ ಸ್ಥಾನ ಸಿಗುವುದು ಅನುಮಾನ ಎಂಬುದು ಬೊಮ್ಮಾಯಿಗೂ ಖಾತ್ರಿಯಾದಂತೆ ಇದೆ. ಈ ಕಾರಣಕ್ಕಾಗಿಯೇ ಅವರು ಎರಡನೇ ಆಯ್ಕೆಯತ್ತ ಕಣ್ಣಿಟ್ಟಿದ್ದಾರೆ.

ಲೋಕಸಭೆಗೆ ನಿಂತು ಗೆದ್ದರೆ ಕೇಂದ್ರ ಮಂತ್ರಿ ಆಗಬಹುದು!

ವಿಪಕ್ಷ ನಾಯಕ ಸ್ಥಾನ ಕೊಡದಿದ್ದರೆ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವ ನಿರ್ಧಾರಕ್ಕೆ ಬಂದಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಹಾವೇರಿ ಕ್ಷೇತ್ರದಿಂದ ಅಭ್ಯರ್ಥಿ ಆಗುವ ಬಗ್ಗೆ ಗಂಭೀರ ಚಿಂತನೆಯಲ್ಲಿದ್ದಾರೆ. ಆಗ ರಾಜ್ಯ ರಾಜಕಾರಣ ಬಿಟ್ಟು ರಾಷ್ಟ್ರ ರಾಜಕಾರಣಕ್ಕೆ ಹೊರಳಿದಂತೆ ಆಗುತ್ತದೆ. ಅಲ್ಲದೆ, ಗೆದ್ದರೆ ಮಾಜಿ ಸಿಎಂಗಳ ಖೋಟಾದ ಅಡಿಯಲ್ಲಿ ಕೇಂದ್ರ ಸಚಿವ ಸ್ಥಾನ ಸಿಗಬಹುದು ಎಂಬ ತಂತ್ರ ಹೆಣೆದಿದ್ದಾರೆ ಎಂದು ತಿಳಿದುಬಂದಿದೆ.

ವಿಪಕ್ಷ ನಾಯಕ ಸ್ಥಾನ ತಪ್ಪಿದರೆ ಕೊನೆಯ ಬೆಂಚ್‌ ಬೇಡ ಎಂದು ಆಪ್ತರು ಸಲಹೆ ನೀಡಿದ್ದಾರೆ. ಕೊನೆಯ ಬೆಂಚ್‌ಗಿಂತಲೂ ಲೋಕಸಭಾ ಚುನಾವಣೆ ಸ್ಪರ್ಧೆಯೇ ಲೇಸು ಎಂದು ಸಲಹೆಗಳಿಗೆ ಬೊಮ್ಮಾಯಿ ಸಹ ಗೋಣು ಆಡಿಸಿದ್ದಾರೆ ಎನ್ನಲಾಗಿದೆ.

ನಿರಾಣಿಗೆ ಹೈಕಮಾಂಡ್‌ ಆಫರ್

ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಮುರುಗೇಶ್ ನಿರಾಣಿಗೆ (Former minister Murugesh Nirani) ಸೋತರೂ, ಅವರಿಗೆ ಈ ಬಾರಿ ಬಾಗಲಕೋಟೆಯಿಂದ ಲೋಕಸಭಾ ಕಣಕ್ಕೆ ಇಳಿಯುವಂತೆ ಬಿಜೆಪಿ ಹೈಕಮಾಂಡ್ ಆಫರ್‌ ನೀಡಿದೆ ಎನ್ನಲಾಗಿದೆ. ಮೂರು ಬಾರಿ ಗೆದ್ದಿರುವ ಸಂಸದ ಪಿ.ಸಿ. ಗದ್ದಿಗೌಡರ್‌‌ ಅವರನ್ನು ಬದಲಾವಣೆ ಮಾಡುವ ಬಗ್ಗೆ ಬಿಜೆಪಿ ಹೈಕಮಾಂಡ್‌ (BJP high command) ಉತ್ಸಾಹ ತೋರಿದೆ. ಹೀಗಾಗಿ ಮುರುಗೇಶ್‌ ನಿರಾಣಿಯವರನ್ನು ಅಭ್ಯರ್ಥಿ ಆಗುವಂತೆ ಸಲಹೆ ನೀಡಲಾಗಿದೆ. ಆದರೆ, ಇದರ ಬಗ್ಗೆ ನಿರಾಣಿ ಇನ್ನೂ ಗೊಂದಲದಲ್ಲಿದ್ದು, ನಿರ್ಧಾರ ಮಾಡಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: Teachers Pay Hike : ರಾಜ್ಯ ಶಾಲಾ ಶಿಕ್ಷಕರ ವೇತನ ಡಬಲ್‌; 7ನೇ ವೇತನ ಆಯೋಗಕ್ಕೆ 29 ಅಂಶದ ಶಿಫಾರಸು!

ವಿಜಯಪುರಕ್ಕೆ ಬೇಡಿಕೆ ಇಟ್ಟ ಕಾರಜೋಳ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡರೂ ಈ ಲೋಕಸಭಾ ಚುನಾವಣೆಯಲ್ಲಿ ವಿಜಯಪುರ ಕ್ಷೇತ್ರದಿಂದ ತಮಗೇ ಟಿಕೆಟ್‌ ಬೇಕೆಂದು ಎಂದು ಮಾಜಿ ಸಚಿವ ಗೋವಿಂದ ಕಾರಜೋಳ (Former minister Govind Karjol) ಬೇಡಿಕೆ ಇಟ್ಟಿದ್ದಾರೆ.‌ ಸಂಸದ ರಮೇಶ್ ಜಿಗಜಿಣಗಿ (MP Ramesh Jigajinagi) ಅವರಿಗೆ ವಯಸ್ಸಿನ ಕಾರಣದಿಂಧ ಈ ಬಾರಿ ಟಿಕೆಟ್‌ ನೀಡುವುದಿಲ್ಲ ಎಂದು ಹೈಕಮಾಂಡ್‌ ಹೇಳುತ್ತಿದೆ. ಹೀಗಾಗಿ ತಾವು ಸ್ಪರ್ಧೆ ಮಾಡಬೇಕು ಎಂಬ ಲೆಕ್ಕಾಚಾರದಲ್ಲಿ ಕಾರಜೋಳ ತೊಡಗಿದ್ದಾರೆ.

Exit mobile version