ಬೆಂಗಳೂರು: ರಾಜ್ಯ ಕಾಂಗ್ರೆಸ್ (Congress Karnataka) ಮುಂದಿನ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) 28ರಲ್ಲಿ 20 ಸ್ಥಾನ ಗೆಲ್ಲುವುದಕ್ಕೆ ರಣತಂತ್ರ (Strategy for Win) ರೂಪಿಸಿದೆ. ಮಾರ್ಚ್ 22ರಂದು ಗುರುವಾರ ಸಂಜೆ 17 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿರುವ ಕಾಂಗ್ರೆಸ್ ನಾಲ್ಕು ಸ್ಥಾನಗಳನ್ನು ಹೊರತುಪಡಿಸಿ 24 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದಂತಾಗಿದೆ. ಎರಡೂ ಪಟ್ಟಿಗಳನ್ನು ಯಾವುದೇ ಗೊಂದಲ ಮತ್ತು ಹೆಚ್ಚಿನ ಬಂಡಾಯಗಳಿಲ್ಲದೆ ನಿಭಾಯಿಸಿರುವ ಕಾಂಗ್ರೆಸ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಮನ್ವಯ ಮತ್ತು ಗೆಲುವಿನ ಪಾಠಗಳನ್ನು ಹೇಳುವ ಮೂಲಕ ವ್ಯವಸ್ಥಿತ ಚುನಾವಣೆಗೆ ಸಜ್ಜಾಗುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಅವರ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಸಂಜೆ ಲೋಕಸಭಾ ಚುನಾವಣೆ ಸಂಬಂಧದ ಸಿದ್ಧತೆಗಳನ್ನು ತೀವ್ರಗೊಳಿಸುವ ಸಂಬಂಧ ಸಚಿವರು, ಹಿರಿಯ ಶಾಸಕರು ಮತ್ತು ಸಂಭಾವ್ಯ ಅಭ್ಯರ್ಥಿಗಳ ಸಭೆ ನಡೆಸಿದರು. ಮತ್ತು ಕೆಲವು ಕಿವಿ ಮಾತುಗಳನ್ನು ಹೇಳಿದರು. ಪ್ರತ್ಯೇಕವಾಗಿ ಒಂದೊಂದೇ ಕ್ಷೇತ್ರದ ಅಭ್ಯರ್ಥಿ ಹಾಗೂ ಉಸ್ತುವಾರಿ ಸಚಿವರ ಜೊತೆಗೆ ಮಾತುಕತೆ ನಡೆಸಿದ್ದು ವಿಶೇಷವಾಗಿತ್ತು.
ವಿಧಾನಸಭೆ ಚುನಾವಣೆಯಲ್ಲಿ ನಾವು 136 ಸ್ಥಾನ ಗೆಲ್ಲುತ್ತೀವಿ ಎಂದು ಯಾರೂ ಹೇಳಿರಲಿಲ್ಲ. ಆದರೆ ನನಗೆ ವೈಯುಕ್ತಿಕವಾಗಿ ಜನರ ಭಾವನೆ ಗೊತ್ತಿತ್ತು. ಹೀಗಾಗಿ 135 ಗೆದ್ದೇ ಗೆಲ್ತೀವಿ ಎಂದು ನಾವು ಧೈರ್ಯವಾಗಿ ಚುನಾವಣೆಗೆ ಮೊದಲೇ ಹೇಳಿದ್ದೆವು. ಲೋಕಸಭೆಯಲ್ಲೂ ನಮಗೆ 20 ಸ್ಥಾನದವರೆಗೂ ಖಚಿತವಾಗಿ ಗೆಲ್ಲುವ ಅವಕಾಶಗಳಿವೆ ಎಂದು ಖಚಿತವಾಗಿ ನುಡಿದರು.
ರಾಜ್ಯದಲ್ಲಿ ಮಾತ್ರವಲ್ಲ, ದೇಶದ ನಾನಾ ಕಡೆಗಳಲ್ಲಿ ಬಿಜೆಪಿ ವಿರುದ್ಧವಾದ ಅಲೆ ತೀವ್ರವಾಗಿದೆ. ದೇಶದ ಭವಿಷ್ಯಕ್ಕೆ ಈ ಸರ್ಕಾರ ಬದಲಾಗಲೇಬೇಕಿದೆ ಎನ್ನುವ ಅಭಿಪ್ರಾಯ ವಿದ್ಯಾವಂತ ಸಮುದಾಯದಲ್ಲಿದೆ. ಹೀಗಾಗಿ ನಾವು 20 ಸ್ಥಾನ ಗೆಲ್ಲಬಹುದು. ಅಂಡರ್ ಕರೆಂಟ್ ಏನಿದೆ ಎನ್ನುವುದು ನಮಗೆ ಗೊತ್ತಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ನಮ್ಮ ಗ್ಯಾರಂಟಿಗಳ ಬಗ್ಗೆ ನಾಡಿನ ಜನತೆಗೆ, ನಮ್ಮ ಹೆಣ್ಣು ಮಕ್ಕಳಿಗೆ, ತಾಯಂದಿರಿಗೆ ಧನ್ಯತೆ ಇದೆ. ಇವರ್ಯಾರೂ ನಮ್ಮ ಕೈ ಬಿಡಲ್ಲ. ಪ್ರತೀ ದಿನ ಪ್ರತೀ ತಿಂಗಳು ನಾಡಿನ ಮನೆ ಮನೆಗೆ ಸರ್ಕಾರದ ಗ್ಯಾರಂಟಿಗಳ ಫಲ ಹೆಣ್ಣು ಮಕ್ಕಳ ಮಡಿಲು ಸೇರುತ್ತಿದೆ. ಈ ಧನ್ಯತೆ ನಮ್ಮ ನಾಡಿನ ತಾಯಂದಿರು ಮತ್ತು ಹೆಣ್ಣು ಮಕ್ಕಳ ಹೃದಯದಲ್ಲಿದೆ. ಇವರಿಗೆ ಕೈ ಮುಗಿದು ಮತ ಕೇಳಿ ಎಂದು ಸಂಭಾವ್ಯ ಅಭ್ಯರ್ಥಿಗಳಿಗೆ ಸಲಹೆ ನೀಡಿದರು.
ರಾಜ್ಯದ ತೆರಿಗೆ ದುಡ್ಡು ಪಡೆದ ರಾಜ್ಯಕ್ಕೆ ಯಾವ ಪ್ರಮಾಣದಲ್ಲಿ ವಂಚಿಸಿದೆ ಎನ್ನುವ ನೋವು ನಮ್ಮ ನಾಡಿನ ಜನರಿಗೆ ಇದೆ. ರೈತರಿಗೆ ಇದೆ. ಕೇಂದ್ರದ ಭೀಕರ ಅನ್ಯಾಯದ ನಡುವೆಯೂ ರಾಜ್ಯ ಆರ್ಥಿಕವಾಗಿ ಪ್ರಗತಿ ಮಾಡಿರುವುದು, ಸಾಧನೆ ಆಗಿರುವುದರ ಬಗ್ಗೆ ನೇರ ಮತ್ತು ಪರೋಕ್ಷ ತೆರಿಗೆದಾರರೆಲ್ಲರನ್ನೂ ಮಾತಾಡಿಸಿ ಮನವರಿಕೆ ಮಾಡಿ ಎಂದು ಸೂಚಿಸಿದರು.
ಇದನ್ನೂ ಓದಿ : Congress Candidates List : ಕಾಂಗ್ರೆಸ್‌ನ 17 ಟಿಕೆಟ್ ಘೋಷಣೆ; ರಾಜ್ಯದ ಐವರು ಸಚಿವರ ಮಕ್ಕಳು ಲೋಕ ಕಣಕ್ಕೆ
ಸಭೆಯಲ್ಲಿ ಭಾಗವಹಿಸಿದ್ದ ಅಭ್ಯರ್ಥಿಗಳು ಮತ್ತು ಉಸ್ತುವಾರಿ ಸಚಿವರು
ಸಭೆಯಲ್ಲಿ, ಸಂಭಾವ್ಯ ಅಭ್ಯರ್ಥಿಗಳಾದ ಬಾಗಲಕೋಟೆ ಸಂಯುಕ್ತ ಪಾಟೀಲ್, ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಮನ್ಸೂರ್ ಅಲಿ ಖಾನ್, ವಿನೋದ್ ಹಸೂಟಿ ಧಾರವಾಡ, ಚಿತ್ರದುರ್ಗದ ಚಂದ್ರಪ್ಪ, ಉಡುಪಿ ಜಯಪ್ರಕಾಶ್ ಹೆಗ್ಡೆ, ತುಮಕೂರು ಮುದ್ದಹನುಮೇಗೌಡ, ದಕ್ಷಿಣ ಕನ್ನಡ ಪದ್ಮರಾಜ್, ಬಳ್ಳಾರಿಯ ಹಿರಿಯ ಶಾಸಕರಾದ ಈ.ತುಕಾರಾಂ, ರಾಯಚೂರು ಕುಮಾರನಾಯ್ಕ್, ಬೆಂಗಳೂರು ದಕ್ಷಿಣದ ಸೌಮ್ಯ ರೆಡ್ಡಿ, ಉತ್ತರ ಕನ್ನಡ ಅಂಜಲಿ ನಿಂಬಾಳ್ಕರ್, ಮಂಡ್ಯ ವೆಂಕಟರಮಣೇಗೌಡ, ಮೈಸೂರು ಲಕ್ಷ್ಮಣ್ ,ಬೆಂಗಳೂರು ಉತ್ತರದ ರಾಜೀವ್ ಗೌಡ, ಬೀದರ್ ಸಾಗರ್ ಖಂಡ್ರೆ, ಮೃಣಾಳ್ ಹೆಬ್ಬಾಳ್ಕರ್ ಸೇರಿ ಹಲವರು ಉಪಸ್ಥಿತರಿದ್ದರು.
ಸಚಿವರಾದ ಹೆಚ್.ಸಿ.ಮಹದೇವಪ್ಪ, ಸಂತೋಷ್ ಎಸ್ ಲಾಡ್, ತಿಮ್ಮಾಪುರ, ಜಮೀರ್ ಅಹಮದ್ ಖಾನ್, ಎಂ.ಸಿ.ಸುಧಾಕರ್, ಶರಣಪ್ರಕಾಶ್ ಪಾಟೀಲ್, ಹೆಚ್.ಕೆ.ಪಾಟೀಲ್, ಕೆ.ಎನ್.ರಾಜಣ್ಣ, ಕೆ.ವೆಂಕಟೇಶ್, ರಾಮಲಿಂಗಾರೆಡ್ಡಿ, ಬೈರತಿ ಸುರೇಶ್, ಪ್ರಿಯಾಂಕ್ ಖರ್ಗೆ, ಮಧು ಬಂಗಾರಪ್ಪ, ಲಕ್ಷ್ಮೀ ಹೆಬ್ಬಾಳ್ಕರ್, ಈಶ್ವರ್ ಖಂಡ್ರೆ, ಶಿವಾನಂದ ಪಾಟೀಲ್, ಡಿ.ಸುಧಾಕರ್, ರಹೀಂ ಖಾನ್, ಮಂಕಾಳ ವೈದ್ಯ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ನಸೀರ್ ಅಹಮದ್, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ರಾಯರೆಡ್ಡಿ, ಪಕ್ಷದ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಶಾಸಕರಾದ ಶಿವಲಿಂಗೇಗೌಡರು, ಚನ್ನರಾಜು ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.
Lok Sabha Election 2024 : ಸಿಎಂ, ಡಿಸಿಎಂ ಅವರು ಹೇಳಿರುವ ಕಿವಿ ಮಾತುಗಳು
- ಲೋಕಸಭೆಯಲ್ಲಿ 20 ಸ್ಥಾನಗಳನ್ನು ಗೆಲ್ತೀವಿ. ಜನರ ನಡುವೆ ಗಟ್ಟಿಯಾಗಿ ನಿಂತು ಸಮರ್ಥವಾಗಿ ಚುನಾವಣೆ ಎದುರಿಸಿ ಗೆದ್ದು ಬನ್ನಿ
- ವಿಧಾನಸಭೆಯಲ್ಲಿ 136 ಸ್ಥಾನ ಗೆಲ್ಲುತ್ತೀವಿ ಎಂದು ಯಾರೂ ಹೇಳಿರಲಿಲ್ಲ. ಲೋಕಸಭೆಯಲ್ಲೂ ನಮಗೆ 20 ಸ್ಥಾನದವರೆಗೂ ಖಚಿತವಾಗಿ ಗೆಲ್ಲುವ ಅವಕಾಶಗಳಿವೆ.
- ನಮ್ಮ ಗ್ಯಾರಂಟಿಗಳ ಬಗ್ಗೆ ನಾಡಿನ ಜನತೆಗೆ, ನಮ್ಮ ಹೆಣ್ಣು ಮಕ್ಕಳಿಗೆ, ತಾಯಂದರಿಗೆ ಧನ್ಯತೆ ಇದೆ. ಅವರಲ್ಲಿ ಕೈ ಮುಗಿದು ಮತ ಕೇಳಿ.
- ಕಾರ್ಯಕರ್ತರನ್ನು, ಸ್ಥಳೀಯ ಮುಖಂಡರನ್ನು ಮಾತಾಡಿಸಿ, ಪ್ರತಿಯೊಬ್ಬರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಿ. ಪ್ರತಿಷ್ಠೆ ಬೇಡ
- ಎಲ್ಲಾ ರೀತಿಯ ಅಧಿಕಾರ ದುರುಪಯೋಗ ಮಾಡಿ ನಮಗೆ ತೊಂದರೆ ಕೊಡುತ್ತಾರೆ. ನಾವು ಎದೆಗಾರಿಕೆಯಿಂದ ಎದುರಿಸಿ ಜನರಿಂದ ಶಕ್ತಿ ಪಡೆದುಕೊಳ್ಳಬೇಕು
- ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ವೈಜ್ಞಾನಿಕವಾಗಿ ಪ್ರಚಾರ ಮಾಡಿ ಅರ್ಥಪೂರ್ಣ ವಾಗಿ ಚುನಾವಣೆ ನಡೆಸೋಣ
- ಕ್ಷೇತ್ರದಲ್ಲಿ ಅಸಮಾಧಾನಿತ ಮುಖಂಡರು ಇದ್ದರೆ ಹೋಗಿ ಮನವೊಲಿಕೆ ಮಾಡಿ. ಯಾವುದೇ ಪ್ರತಿಷ್ಠೆ ಇಟ್ಟುಕೊಳ್ಳಬೇಡಿ.
- ಕ್ರಿಯಾಶೀಲ ಕಾರ್ಯಕರ್ತರನ್ನ ಭೇಟಿ ಮಾಡಿ. ಆ ಮೂಲಕ ಪ್ರತಿಯೊಬ್ಬರನ್ನ ತಲುಪುವ ಕೆಲಸ ಮಾಡಿ
- ಪ್ರಚಾರದ ಸಂದರ್ಭದಲ್ಲಿ ಆ ಭಾಗದ ಪ್ರಮುಖ ನಾಯಕರ ನಿವಾಸಕ್ಕೆ ಭೇಟಿ ನೀಡಿ. ಚುನಾವಣಾ ಸಂದರ್ಭದಲ್ಲಿ ಒಗ್ಗಟ್ಟು ಬಹಳ ಮುಖ್ಯ. ಎಲ್ಲರನ್ನೂ ಜತೆಗೆ ತೆಗೆದುಕೊಂಡು ಹೋಗಿ.
- ರೋಡ್ ಶೋ ಮಾಡುವಾಗ ಸಮನ್ವಯ ಬಹಳ ಮುಖ್ಯ ಆಯೋಜನೆ ಮಾಡುವಾಗ ಎಚ್ಚರಿಕೆ ಪ್ಲ್ಯಾನ್ ಮಾಡಿ
ನನ್ನ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿಸಿಎಂ @DKShivakumar ಅವರ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಲೋಕಸಭಾ ಚುನಾವಣೆ ಸಂಬಂಧದ ಸಿದ್ದತೆಗಳನ್ನು ಮತ್ತಷ್ಟು ವ್ಯಾಪಕಗೊಳಿಸುವ ಸಂಬಂಧ ರಾಜ್ಯ ಸರ್ಕಾರದ ಸಚಿವರು, ಹಿರಿಯ ಶಾಸಕರು ಮತ್ತು ಸಂಭಾವ್ಯ ಅಭ್ಯರ್ಥಿಗಳ ಸಭೆ ನಡೆಯಿತು.
— Siddaramaiah (@siddaramaiah) March 21, 2024
ಸಂಭಾವ್ಯ ಅಭ್ಯರ್ಥಿಗಳಾದ ಬಾಗಲಕೋಟೆ ಸಂಯುಕ್ತ ಪಾಟೀಲ್,… pic.twitter.com/QrCkJgQJ6p
ಕಾಂಗ್ರೆಸ್ ಟಿಕೆಟ್ ಗಳನ್ನು ಗುರುವಾರ ಸಂಜೆ ಬಿಡುಗಡೆ ಮಾಡಿದ್ದರೂ ಕೆಲವು ದಿನಗಳ ಹಿಂದೆಯೇ ಅದು ಅಂತಿಮವಾಗಿತ್ತು. ಆಗಲೇ ಹಲವು ಅಭ್ಯರ್ಥಿಗಳು ಪ್ರಚಾರ ಆರಂಭಿಸಿದ್ದಾರೆ. ಕಾಂಗ್ರೆಸ್ ಇನ್ನು ಕೇವಲ ನಾಲ್ಕು ಟಿಕೆಟ್ ಅಂತಿಮಗೊಳಿಸುವುದು ಬಾಕಿ ಇದೆ. ಅದು ಕೂಡಾ ಕೆಲವೇ ದಿನದಲ್ಲಿ ಅಂತಿಮಗೊಳ್ಳುವ ನಿರೀಕ್ಷೆ ಇದೆ ಎಂದು ಪಕ್ಷ ಹೇಳಿದೆ.