ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಸಮೀಪ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು (Political Parties) ತಮ್ಮ ಕಾರ್ಯಚಟುವಟಿಕೆಯನ್ನು ಚುರುಕುಗೊಳಿಸುತ್ತಿವೆ. ಈಗ ಹೆಚ್ಚಾಗಿ ಟಿಕೆಟ್ ಪಾಲಿಟಿಕ್ಸ್ (Ticket Politics) ನಡೆಯುತ್ತಿದೆ. ಯಾವ ಕ್ಷೇತ್ರಕ್ಕೆ ಯಾರನ್ನು ಅಭ್ಯರ್ಥಿಯನ್ನಾಗಿ ಮಾಡಿದರೆ ಗೆಲುವು ಸುಲಭ? ಹಾಲಿ ಎಂಪಿಗಳನ್ನು ಕಣಕ್ಕಿಳಿಸಬೇಕೋ? ಅಥವಾ ಕೆಲವು ಕಡೆ ಬದಲಾವಣೆ ಮಾಡಬೇಕೋ? ಜನರ ನಾಡಿಮಿಡಿತ ಯಾವ ರೀತಿಯಲ್ಲಿದೆ? ಯಾವ ತಂತ್ರಗಾರಿಕೆಯನ್ನು ಈ ಚುನಾವಣೆಯಲ್ಲಿ ಹೆಣೆಯಬೇಕು? ಯಾವ ವಿಷಯ ಹೆಚ್ಚು ಪ್ರಸ್ತುತವಾಗಲಿದೆ ಎಂಬ ಬಗ್ಗೆ ಚರ್ಚೆಗಳು ಶುರುವಾಗಿವೆ. ಈ ನಡುವೆ ರಾಜ್ಯ ಕಾಂಗ್ರೆಸ್ (Congress Karnataka) ಮತ್ತು ಬಿಜೆಪಿಯಲ್ಲಿ (BJP Karnataka) ಟಿಕೆಟ್ ಪಡೆಯಲು ಲಾಬಿ ಪಾಲಿಟಿಕ್ಸ್ ಜೋರಾಗಿದೆ.
ಸದ್ಯ ಕರ್ನಾಟಕದಲ್ಲಿ ವಿಧಾನಮಂಡಲ ಅಧಿವೇಶನ ನಡೆಯುತ್ತಿರುವುದರಿಂದ ರಾಜ್ಯದ ಎಲ್ಲ ನಾಯಕರು ಸಿಗುವುದೇ ಇಲ್ಲಿ. ಹೀಗಾಗಿ ಇಲ್ಲೀಗ ತಮಗೆ ಟಿಕೆಟ್ ಬೇಕು ಎಂದು ಬೆಂಬಲಿಗರ ಜತೆಗೆ ನಾಯಕರ ದಂಡು ಆಗಮಿಸುತ್ತಿವೆ. ವಿಧಾನ ಸಭೆಯ ಲಾಂಜ್ ಈಗ ಲಾಬಿ ಪಾಲಿಟಿಕ್ಸ್‌ಗೆ ಸಾಕ್ಷಿಯಾಗಿದೆ.
ಹಿರಿಯ ನಾಯಕರ ಬಳಿ ಬರುವ ಟಿಕೆಟ್ ಆಕಾಂಕ್ಷಿಗಳು ನನಗೇ ಟಿಕೆಟ್ ಕೊಡಿಸಿ ಎಂದು ದುಂಬಾಲು ಬೀಳುತ್ತಿದ್ದಾರೆ. ಈಚೆಗಷ್ಟೇ ಬಿಜೆಪಿಯಿಂದ ಕಾಂಗ್ರೆಸ್‌ಗೆ ಹಾರಿರುವ ಮುದ್ದಹನುಮೇಗೌಡ ಅವರು ಈಗ ತಮಗೆ ತುಮಕೂರು ಟಿಕೆಟ್ ಬೇಕು ಎಂದು ಲಾಬಿಯನ್ನು ಪ್ರಾರಂಭ ಮಾಡಿದ್ದಾರೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್, ಸಹಕಾರ ಸಚಿವ ಕೆ.ಎನ್. ರಾಜಣ್ಣ, ಗುಬ್ಬಿ ವಾಸು ಸೇರಿ ನಾಲ್ಕು ಜನ ವಿಧಾನಸಭೆ ಲಾಂಜ್‌ನಲ್ಲಿ ಟಿಕೆಟ್ ಬಗ್ಗೆ ಚರ್ ನಡೆಸಿದ್ದಾರೆ.
ಲಾಬಿ ಏಕೆ?
ಕಾಂಗ್ರೆಸ್ ಈ ಬಾರಿ 28 ಲೋಕಸಭಾ ಕ್ಷೇತ್ರಗಳ ಪೈಕಿ ಕನಿಷ್ಠ 20 ಕ್ಷೇತ್ರಗಳಲ್ಲಿ ಶತಾಯಗತಾಯ ಗೆಲುವು ಸಾಧಿಸಬೇಕು ಎಂಬ ನಿಟ್ಟಿನಲ್ಲಿ ಗುರಿಯನ್ನು ಹಾಕಿಕೊಂಡಿದೆ. ಈ ಹಿನ್ನೆಲೆಯಲ್ಲಿ ತನ್ನ ತಂತ್ರಗಾರಿಕೆಯನ್ನು ಪ್ರಾರಂಭ ಮಾಡಿದೆ. ಆದರೆ, 10ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸೂಕ್ತ ಅಭ್ಯರ್ಥಿಗಳು ಸಿಗುತ್ತಿಲ್ಲ. ಈ ಕಾರಣದಿಂದಾಗಿ ಹಾಲಿ ಸಚಿವರನ್ನು ಕಣಕ್ಕೆ ಇಳಿಸಬೇಕು ಎಂಬ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಚಿಂತನೆ ನಡೆಸಿದ್ದಾರೆ. ಈ ವಿಷಯವನ್ನು ಕಾಂಗ್ರೆಸ್ ಹೈಕಮಾಂಡ್ ಗಮನಕ್ಕೆ ತಂದು ಸ್ಪರ್ಧೆ ಮಾಡಿಸುವ ಬಗ್ಗೆ ಅವರಿಂದಲೇ ಹೇಳಿಸುತ್ತಿದ್ದಾರೆ. ಇದರ ಭಾಗವಾಗಿ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಇಲ್ಲವೇ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರನ್ನು ಕಣಕ್ಕೆ ಇಳಿಸುವಂತೆ ಹೇಳಲಾಗಿತ್ತು. ಈ ಇಬ್ಬರು ಸಚಿವರೂ ಸ್ಪರ್ಧೆಗೆ ಹಿಂದೇಟು ಹಾಕಿದ್ದು, ತಾವು ಸೂಚಿಸಿದ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಗೆಲ್ಲಿಸಿಕೊಂಡು ಬರುತ್ತೇವೆ ಎಂದು ವಾಗ್ದಾನ ಮಾಡಿದ್ದಾರೆ.
ಈ ಎಲ್ಲ ಕಾರಣದಿಂದ ಮುದ್ದಹನುಮೇಗೌಡ ಅವರಿಗೆ ಟಿಕೆಟ್ ಕೊಡಿಸಲು ಈ ಬಣ ಲಾಬಿ ಮಾಡುತ್ತಿದೆ. ಆದರೆ, ಮುದ್ದಹನುಮೇಗೌಡರ ವಿರುದ್ಧ ಡಿ.ಕೆ. ಶಿವಕುಮಾರ್ ಇದ್ದಾರೆ. ಕುಣಿಗಲ್ ರಂಗನಾಥ್, ಶಿರಾ ಜಯಚಂದ್ರ ಅವರಿಂದ ವಿರೋಧಗಳು ಕೇಳಿಬಂದಿವೆ. ಹೀಗಾಗಿ ಈಗ ವಿಧಾನಸೌಧ ಲಾಂಜ್‌ನಲ್ಲಿ ಮುದ್ದಹನುಮೇಗೌಡರಿಗಾಗಿ ಟಿಕೆಟ್ ಲಾಬಿಯನ್ನು ಮಾಡಲಾಗುತ್ತಿದೆ.
ಬಿಜೆಪಿಯಿಂದಲೂ ಶುರುವಾಯ್ತು ಟಿಕೆಟ್ ಲಾಬಿ
ಇತ್ತ ಬಿಜೆಪಿಯಲ್ಲಿಯೂ ಟಿಕೆಟ್‌ಗಾಗಿ ಲಾಬಿ ಜೋರಾಗುತ್ತಲೇ ಇದೆ. ಈಗಾಗಲೇ ಕೆಲವು ಹಾಲಿ ಎಂಪಿಗಳಿಗೆ ಟಿಕೆಟ್ ಇಲ್ಲ ಎಂದು ನೇರವಾಗಿ ಹೇಳಲಾಗಿದೆ ಎನ್ನಲಾಗಿದೆ. ಇನ್ನು ಕೆಲವು ಕಡೆ ಬದಲಾವಣೆ ಮಾಡಲಾಗುತ್ತದೆ ಎಂಬ ಗುಸು ಗುಸು ಇದೆ. ಈ ನಡುವೆ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಹಾಲಿ ಸಂಸದ ಜಿ.ಎಂ. ಸಿದ್ದೇಶ್ವರ ಅವರಿಗೆ ಟಿಕೆಟ್ ಕೊಡುವ ಬಗ್ಗೆ ಪಕ್ಷದ ಕೆಲವು ಮುಖಂಡರಿಂದ ವಿರೋಧ ಇದೆ. ಹೀಗಾಗಿ ಜಿ.ಎಂ. ಸಿದ್ದೇಶ್ವರ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಇದನ್ನೂ ಓದಿ: BY Vijayendra : ದೇಶ ಭಕ್ತರ ಸೆರೆ, ವಿದ್ರೋಹಿಗಳ ಪೊರೆ; ರಾಮನಗರ ಘಟನೆಗೆ ವಿಜಯೇಂದ್ರ ಆಕ್ರೋಶ
ಈಗಾಗಲೇ ಜಿ.ಎಂ. ಸಿದ್ದೇಶ್ವರ ಅವರಿಗೆ ಟಿಕೆಟ್ ನೀಡದಂತೆ ರೇಣುಕಾಚಾರ್ಯ ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ವಿಜಯೇಂದ್ರ ಅವರ ಜತೆಗೂ ಮಾತನಾಡಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಿದ್ದೇಶ್ವರ್ ಸಹ ಲಾಬಿಗೆ ಮುಂದಾಗಿದ್ದಾರೆ.