Site icon Vistara News

Lok Sabha Election 2024 : ಚುನಾವಣೆ ಘೋಷಣೆ ಆದರೂ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಇನ್ನೂ ಇದೆ ಅವಕಾಶ

Lok Sabha Election 2024 Registration

ಬೆಂಗಳೂರು: ನನಗೆ ಜಸ್ಟ್‌ 18 ವರ್ಷ ಆಗಿದೆ. ನಾನು ಇನ್ನೂ ಮತದಾರರ ಪಟ್ಟಿಯಲ್ಲಿ (Voter list) ಹೆಸರು ನೋಂದಣಿ ಮಾಡಿಕೊಂಡಿಲ್ಲ. ಹಾಗಿದ್ದರೆ ನನಗೆ ಈ ಬಾರಿಯ ಚುನಾವಣೆ (Lok Sabha Election 2024) ಮಿಸ್‌ ಆಗುತ್ತಾ? ಅಥವಾ ನಾನು ಇನ್ನೂ ಮತದಾರರ ಪಟ್ಟಿಗೆ ಹೆಸರು ಸೇರಿಸಿಕೊಳ್ಳಲು ಅವಕಾಶವಿದೆಯಾ? ಎಂಬ ಪ್ರಶ್ನೆ ನಿಮ್ಮದಾಗಿದ್ದರೆ ಅದಕ್ಕೆ ಸ್ಪಷ್ಟವಾದ ಉತ್ತರ ಇಲ್ಲಿದೆ.

ಚುನಾವಣೆ ಘೋಷಣೆಯಾದ ದಿನವಾದ ಮಾರ್ಚ್‌ 16ಕ್ಕೆ ಅನ್ವಯವಾಗುವಂತೆ 18 ವರ್ಷ ತುಂಬಿದ್ದರೆ ಅಂಥವರು ಈಗಲೂ ನೋಂದಣಿ (Registration in Voter list) ಮಾಡಿಕೊಳ್ಳಲು ಅವಕಾಶವಿದೆ. ಈ ಅವಕಾಶ ಆಯಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಲು ಅಧಿಸೂಚನೆ ಹೊರಡಿಸುವ 10 ದಿನಗಳ ಮೊದಲಿನವರೆಗೂ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳಬಹುದು. ಮತದಾರರು ಫಾರಂ 8ನ್ನು ಸಲ್ಲಿಸಿ ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಬಹುದು ಎಂದು ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ಮನೋಜ್‌ ಕುಮಾರ್‌ ಮೀನಾ (Manoj Kumar meena) ತಿಳಿಸಿದ್ದಾರೆ.

ರಾಜ್ಯದಲ್ಲಿ ಮತದಾರರ ನೋಂದಣಿಗೆ ಯಾವಾಗ ಕೊನೆಯ ದಿನಾಂಕ?

ರಾಜ್ಯದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ರಾಜ್ಯದಲ್ಲಿ ಏಪ್ರಿಲ್‌ 26 ಮತ್ತು ಮೇ 7ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಎರಡು ಹಂತಗಳಿಗೆ ನಾಮಪತ್ರ ಸಲ್ಲಿಕೆಗೆ ಎರಡು ಪ್ರತ್ಯೇಕ ದಿನಗಳಿವೆ. ಆ ದಿನಕ್ಕಿಂತ 10 ದಿನ ಮೊದಲಿನ ವರೆಗೆ ನೋಂದಣಿ ಮಾಡಿಕೊಳ್ಳಬಹುದು.

ಏಪ್ರಿಲ್‌ 26ರಂದು ಮೊದಲ ಹಂತದ ಚುನಾವಣೆ ಎಲ್ಲೆಲ್ಲಿ?

ಮೊದಲ ಹಂತದಲ್ಲಿ ದಕ್ಷಿಣ ಕರ್ನಾಟಕದ 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. 1.ಉಡುಪಿ-ಚಿಕ್ಕಮಗಳೂರು, 2. ಹಾಸನ, 3.ದಕ್ಷಿಣ ಕನ್ನಡ, 4.ಚಿತ್ರದುರ್ಗ, 5..ತುಮಕೂರು, 6.ಮಂಡ್ಯ, 7.ಮೈಸೂರು-ಕೊಡಗು, 8.ಚಾಮರಾಜನಗರ, 9. ಬೆಂಗಳೂರು ಗ್ರಾಮಾಂತರ, 10 ಬೆಂಗಳೂರು ಉತ್ತರ, 11. ಬೆಂಗಳೂರು ಕೇಂದ್ರ, 12. ಬೆಂಗಳೂರು ದಕ್ಷಿಣ, 13.ಚಿಕ್ಕಬಳ್ಳಾಪುರ, 14.ಕೋಲಾರ ಈ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆಗೆ ಗಜೆಟ್‌ ನೋಟಿಫಿಕೇಶನ್‌ ಮಾರ್ಚ್‌ 28ರಂದು ಜಾರಿಯಾಗಲಿದೆ. ಅಂದರೆ ಅದಕ್ಕೆ 10 ದಿನದ ಮೊದಲು ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಬಹುದು.

ಮೇ 7ರಂದು ಎರಡನೇ ಹಂತದ ಚುನಾವಣೆ ಎಲ್ಲೆಲ್ಲಿ?

1.ಚಿಕ್ಕೋಡಿ (ಸಾಮಾನ್ಯ), 2.ಬೆಳಗಾವಿ (ಸಾಮಾನ್ಯ), 3.ಬಾಗಲಕೋಟೆ (ಸಾಮಾನ್ಯ), 4.ಬಿಜಾಪುರ (ಪರಿಶಿಷ್ಟ ಜಾತಿ ಮೀಸಲು), 5.ಕಲಬುರಗಿ (ಪರಿಶಿಷ್ಟ ಜಾತಿ ಮೀಸಲು), 6.ರಾಯಚೂರು(ಪರಿಶಿಷ್ಟ ಪಂಗಡ ಮೀಸಲು), 7.ಬೀದರ್ (ಸಾಮಾನ್ಯ), 8,ಕೊಪ್ಪಳ (ಸಾಮಾನ್ಯ), 9.ಬಳ್ಳಾರಿ (ಪರಿಶಿಷ್ಟ ಪಂಗಡ ಮೀಸಲು), 10. ಹಾವೇರಿ (ಸಾಮಾನ್ಯ), 11. ಧಾರವಾಡ (ಸಾಮಾನ್ಯ), 12.ಉತ್ತರ ಕನ್ನಡ (ಸಾಮಾನ್ಯ), 13.ದಾವಣಗೆರೆ (ಸಾಮಾನ್ಯ), 14.ಶಿವಮೊಗ್ಗ (ಸಾಮಾನ್ಯ) ಕ್ಷೇತ್ರಗಳಲ್ಲಿ ಮೇ 7ರಂದು ಮತದಾನ ನಡೆಯಲಿದೆ. ಇಲ್ಲಿ ಏಪ್ರಿಲ್‌ 12ರಂದು ಗಜೆಟ್‌ ನೋಟಿಫಿಕೇಶನ್‌ ಆಗಲಿದೆ. ಅದಕ್ಕಿಂತ 10 ದಿನದ ಮೊದಲು ಮತದಾರರ ನೋಂದಣಿಗೆ ಅವಕಾಶವಿದೆ.

ಇದನ್ನೂ ಓದಿ : Lok Sabha Election 2024 : ರಾಜ್ಯದಲ್ಲಿ ನೀತಿ ಸಂಹಿತೆ ಜಾರಿ; ರಾಜಕಾರಣಿಗಳು‌ ಟ್ಯಾಂಕರ್‌ ನೀರು ಪೂರೈಸುವಂತಿಲ್ಲ!

ರಾಜ್ಯದಲ್ಲಿರುವ ಮತದಾರರು ಎಷ್ಟು? ಇಲ್ಲಿದೆ ಎಲ್ಲಾ ಲೆಕ್ಕಾಚಾರ

ರಾಜ್ಯದಲ್ಲಿರುವ ಒಟ್ಟು ಮತದಾರರ ಸಂಖ್ಯೆ 5,42,54, 500
ಪುರುಷ ಮತದಾರರು- 2,71,21,407
ಮಹಿಳಾ ಮತದಾರರು- 2,70,81,748
ತೃತೀಯ ಲಿಂಗ ಮತದಾರರು- 4,933
85 ವರ್ಷ ಮೇಲ್ಪಟ್ಟ ಮತದಾರರು- 5,70,168
ಯುವ ಮತದಾರರು- 11, 24, 622
ದಿವ್ಯಾಂಗ ಮತದಾರರು- 6, 12, 154
ಬುಡಕಟ್ಟು ಮತದಾರರು- _38,794

ಗರಿಷ್ಠ ಮತದಾರರು, ಕನಿಷ್ಠ ಮತದಾರರು

ಗರಿಷ್ಠ: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ 31,74,098 ಮತದಾರರು
ಕನಿಷ್ಠ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ 15,72,958 ಮತದಾರರು.

ಮತಗಟ್ಟೆಗಳ ಸಂಖ್ಯೆ

ರಾಜ್ಯಾದ್ಯಂತ 58, 834, ನಗರ ಪ್ರದೇಶದಲ್ಲಿ 21,595, ಗ್ರಾಮೀಣ ಪ್ರದೇಶಗಳಲ್ಲಿ 37,249 ಮತಗಟ್ಟೆಗಳಿವೆ.

1808 ಥೀಮ್ ಬೇಸ್ಡ್ ಮತಗಟ್ಟೆ

ಈ ವರ್ಷವೂ ಯೂಥ್ಸ್ ಮತ್ತು ಮಹಿಳಾ ಮತಗಟ್ಟೆ ಇರಲಿದೆ. 1808 ಥೀಮ್ ಬೇಸ್ಡ್ ಮತಗಟ್ಟೆ ಇರಲಿದೆ. ಜನವರಿಯಿಂದ 13982 ದೂರು ನಮಗೆ ಬಂದಿದ್ದು, ಪರಿಹರಿಸುವ ಕೆಲಸ ಮಾಡಿದ್ದೇವೆ. ಮಾಡಲ್ ಪೂಲಿಂಗ್ ಸ್ಟೇಷನ್ ಮಾಡುತ್ತೇವೆ. 1120 ಸಖಿ ಬೂತ್​​ಗಳು ಮತ್ತು ಟ್ರೈಬ್ಸ್​ಗಾಗಿ ಪ್ರತ್ಯೇಕ ಬೂತ್ ರಚನೆ ಮಾಡುತ್ತೇವೆ ಎಂದಿದ್ದಾರೆ.

ಪತ್ರಕರ್ತರಿಗೆ ಅಂಚೆ ಮತದಾನ ಅವಕಾಶ, ಒಪೀನಿಯನ್‌ ಪೋಲ್‌ಗೂ ನಿರ್ಬಂಧವಿಲ್ಲ

ಚುನಾವಣಾ ಆಯೋಗ ಮಾಧ್ಯಮ ಮತ್ತು ಪತ್ರಕರ್ತರಿಗೆ ಕೆಲವೊಂದು ವಿನಾಯಿತಿಗಳನ್ನು ನೀಡಿದೆ. ಒಪೀನಿಯನ್ ಪೋಲ್ ಗೆ ಯಾವುದೇ ನಿರ್ಬಂಧ ಇಲ್ಲ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.

ಈ ನಡುವೆ ಪತ್ರಕರ್ತರಿಗೆ ಅಂಚೆ ಮತದಾನ ಮಾಡಲು ಅವಕಾಶ ನೀಡಲಾಗಿದೆ. ಕರ್ತವ್ಯ ನಿರ್ವಹಿಸುತ್ತಿರುವ ಪತ್ರಕರ್ತರು ಸಂಸ್ಥೆಯಿಂದ ದೃಢೀಕೃತ ಅರ್ಜಿ ಸಲ್ಲಿಸಬೇಕು. ಚುನಾವಣಾ ಕರ್ತವ್ಯದಲ್ಲಿರುವ ಪತ್ರಕರ್ತರಿಗೆ ಅಂಚೆ ಮತದಾನಕ್ಕೆ ಅವಕಾಶ ನೀಡಲಾಗಿದೆ.

Exit mobile version