Site icon Vistara News

Lok Sabha Election 2024: ಹಿಂದೂಗಳಿಗೆ ಬುದ್ಧಿ ಇದ್ದಿದ್ದರೆ ಬಿಜೆಪಿ ಇಷ್ಟು ಹಿನ್ನಡೆ ಕಾಣುತ್ತಿರಲಿಲ್ಲ! ವಿಡಿಯೊ ವೈರಲ್‌

Lok Sabha Election 2024

ನರೇಂದ್ರ ಮೋದಿ (Narendra Modi) ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಪಾರ್ಟಿ (NDA) ದೇಶಾದ್ಯಂತ 293 ಲೋಕಸಭಾ ಸ್ಥಾನಗಳನ್ನು (Lok Sabha Election 2024) ಗೆಲ್ಲುವ ಮೂಲಕ ಮೂರನೇ ಅವಧಿಗೆ ಮತ್ತೆ ಅಧಿಕಾರಕ್ಕೆ ಬರಲು ಸಜ್ಜಾಗಿದೆ. ಆದರೂ ಭಾರತೀಯ ಜನತಾ ಪಕ್ಷವು (BJP) ಬಹುಮತದ ಕೊರತೆಯನ್ನು ಅನುಭವಿಸಿದೆ. 240 ಸ್ಥಾನಗಳು ತನ್ನದಾದರೂ ಸರ್ಕಾರ ರಚಿಸಲು ಬೇಕಾದ 272 ಸ್ಥಾನಗಳನ್ನು ಪಡೆಯಲು ಟಿಡಿಪಿ (TDP) ಮತ್ತು ಜೆಡಿ ಯು (JDU) ನಂತಹ ಮೈತ್ರಿ ಪಾಲುದಾರರೊಂದಿಗೆ ಅದು ಹೆಚ್ಚು ಅವಲಂಬಿತವಾಗಿದೆ.

ಅದ್ಧೂರಿಯಾಗಿ ರಾಮ ಮಂದಿರ ನಿರ್ಮಿಸಿದರೂ ಅಯೋಧ್ಯೆಯಲ್ಲೇ ಬಿಜೆಪಿ ಸೋತಿದೆ. ಸ್ವತಃ ಮೋದಿಯೇ ವಾರಾಣಸಿಯಲ್ಲಿ ಕಡಿಮೆ ಅಂತರದಿಂದ ಗೆದ್ದಿದ್ದಾರೆ. ಈ ಕುರಿತು ಆನ್‌ಲೈನ್‌ನಲ್ಲಿ ವಿಡಿಯೋವೊಂದು ಹರಿದಾಡುತ್ತಿದೆ. ವ್ಯಕ್ತಿಯೊಬ್ಬರು ಚುನಾವಣಾ ಫಲಿತಾಂಶದ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದು, ಈ ಬಗ್ಗೆ ಅವರು ಹೇಳಿರುವುದು ಹೀಗೆ: ಈ ಚುನಾವಣೆಯ ದುರಂತ ನೋಡಿ. ಬಿಜೆಪಿ ಕೇವಲ 240 ಸ್ಥಾನಗಳನ್ನು ಪಡೆದುಕೊಂಡಿದೆ. ಇದು ಎಲ್ಲಾ ಹಿಂದೂಗಳಿಗೆ ಅವಮಾನಕರ ಸುದ್ದಿಯಾಗಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಪ್ರಾತಿನಿಧ್ಯ ನೀಡಿದ್ದ ಆರ್ಟಿಕಲ್ 370ನೇ ವಿಧಿಯನ್ನು ರದ್ದುಗೊಳಿಸಿದರೂ, ಅಯೋಧ್ಯೆಯಲ್ಲಿ ರಾಮಮಂದಿರವನ್ನು ಕಟ್ಟಲಾಗಿದ್ದರೂ ಬಿಜೆಪಿಗೆ ನಾವು 400+ ಗಡಿ ದಾಟಲು ಸಹಕರಿಸಲಿಲ್ಲ. ಈ ಚುನಾವಣಾ ಫಲಿತಾಂಶ ಹಿಂದೂಗಳಿಗೆ ಕಪಾಳಮೋಕ್ಷ ಮಾಡಿದಂತಿದೆ ಎಂದು ಹೇಳಿದ್ದಾರೆ.

ಇಂಡಿಯಾ ಬ್ಲಾಕ್‌ನ ಕಾಂಗ್ರೆಸ್, ಆಪ್, ಸಮಾಜವಾದಿ ಪಕ್ಷ (ಎಸ್‌ಪಿ), ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಒಳಗೊಂಡ ಒಕ್ಕೂಟವು ಒಟ್ಟಾಗಿ 232 ಸ್ಥಾನಗಳನ್ನು ಗೆದ್ದಿವೆ. ಕಾಂಗ್ರೆಸ್ 99 ಸ್ಥಾನಗಳನ್ನು ಪಡೆದುಕೊಂಡಿತು. ಸಮಾಜವಾದಿ ಪಕ್ಷ ಗಮನಾರ್ಹ ಪ್ರದರ್ಶನವನ್ನು ನೀಡಿದೆ. 2019ರಲ್ಲಿ 5 ಸ್ಥಾನಗಳಿಂದ ಉತ್ತರ ಪ್ರದೇಶದಲ್ಲಿ 37 ಸ್ಥಾನಗಳಿಗೆ ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 29 ಸ್ಥಾನಗಳನ್ನು ಗೆದ್ದಿದ್ದರೆ, ಡಿಎಂಕೆ 22 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಎನ್ ಸಿಪಿ 7 ಸ್ಥಾನಗಳನ್ನು ಗೆದ್ದುಕೊಂಡಿತು, ಶಿವಸೇನೆ ಉದ್ಧವ್ ಠಾಕ್ರೆ ಬಣ 9 ಸ್ಥಾನಗಳನ್ನು ಪಡೆದುಕೊಂಡಿತು, ಬಿಹಾರದ 4 ಕ್ಷೇತ್ರಗಳಲ್ಲಿ ಆರ್ ಜೆಡಿ ಮುನ್ನಡೆ ಸಾಧಿಸಿತು ಮತ್ತು ಆಪ್ ಮತ್ತು ಜೆಎಂಎಂ ಎರಡೂ ತಲಾ 3 ಸ್ಥಾನಗಳನ್ನು ಗೆದ್ದವು.

ಬಿಜೆಪಿಯ ಒಟ್ಟಾರೆ ವಿಜಯದ ಹೊರತಾಗಿಯೂ ಪಕ್ಷದ ಕಾರ್ಯಕ್ಷಮತೆಯು 2019ರ ಅದರ 303 ಸ್ಥಾನಗಳಿಂದ ಗಮನಾರ್ಹ ಕುಸಿತವನ್ನು ಕಂಡಿದೆ. ಕಳೆದ ಬಾರಿಗಿಂತ 63 ಸ್ಥಾನಗಳನ್ನು ಕಳೆದುಕೊಂಡಿದೆ. ಬಿಜೆಪಿ ಸ್ವಂತವಾಗಿ 370 ಸ್ಥಾನಗಳನ್ನು ಗೆಲ್ಲುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿತ್ತು. ಎನ್‌ಡಿಎಗೆ 400ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸುವ ವಿಶ್ವಾಸವಿತ್ತು.


ಎಕ್ಸಿಟ್ ಪೋಲ್ ಮುನ್ನೋಟಗಳಿಗೆ ವ್ಯತಿರಿಕ್ತವಾಗಿ, ದಕ್ಷಿಣದಲ್ಲಿ ಗಮನಾರ್ಹ ಲಾಭ ಗಳಿಸುವ ಭರವಸೆಯ ಹೊರತಾಗಿಯೂ ತಮಿಳುನಾಡಿನಲ್ಲಿ ಬಿಜೆಪಿ ಒಂದೇ ಒಂದು ಸ್ಥಾನವನ್ನು ಪಡೆಯಲು ಸಾಧ್ಯವಾಗಲಿಲ್ಲ.
ಚುನಾವಣಾ ಫಲಿತಾಂಶಗಳು ಭಾರತದಲ್ಲಿ ಬದಲಾಗುತ್ತಿರುವ ರಾಜಕೀಯ ಸನ್ನಿವೇಶವನ್ನು ಎತ್ತಿ ತೋರಿಸಿವೆ.

Exit mobile version