Site icon Vistara News

Lok Sabha Election 2024 : ಚಿಕ್ಕಬಳ್ಳಾಪುರ ಟಿಕೆಟ್‌ ಫೈಟ್‌; ಡಾ. ಸುಧಾಕರ್‌ ವಿರುದ್ಧ ವಿಶ್ವನಾಥ್‌ ಕೆಂಡಾಮಂಡಲ

Lok Sabha Election 2024 SR Vishwanath Dr K Sudhakar

ಯಲಹಂಕ (ಬೆಂಗಳೂರು): ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಬಿಜೆಪಿಗೆ ಚಿಕ್ಕಬಳ್ಳಾಪುರ ಕ್ಷೇತ್ರ (Chikkaballapura Constituency) ಭಾರಿ ತಲೆನೋವಾಗುವ ಸಾಧ್ಯತೆಗಳಿವೆ. ಬಿಜೆಪಿ ಈಗಾಗಲೇ 20 ಸ್ಥಾನಗಳ ಟಿಕೆಟ್‌ ಘೋಷಣೆ ಮಾಡಿದೆ. ಬಾಕಿ ಉಳಿದಿರುವ ಐದರಲ್ಲಿ ಒಂದಾಗಿರುವ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮಾಜಿ ಸಚಿವ ಡಾ. ಕೆ.ಸುಧಾಕರ್‌ (Dr K Sudhakar) ಮತ್ತು ಯಲಹಂಕದ ಬಿಜೆಪಿ ಶಾಸಕ ಎಸ್‌.ಆರ್‌. ವಿಶ್ವನಾಥ್‌ (SR Vishwanath) ನಡುವಿನ ಟಿಕೆಟ್‌ ಸಮರ ಮುಗಿಲು ಮುಟ್ಟಿದೆ. ಗುರುವಾರ ಯಲಹಂಕದ ಶಾಸಕರ ಕಚೇರಿಯಲ್ಲಿ ಮಾಧ್ಯಮ ಗೋಷ್ಠಿ ಆಯೋಜಿಸಿದ್ದ ಎಸ್‌.ಆರ್‌. ವಿಶ್ವನಾಥ್‌ ಮತ್ತು ಇತರ ನಾಯಕರು ಡಾ. ಕೆ. ಸುಧಾಕರ್‌ ವಿರುದ್ಧ ಹರಿಹಾಯ್ದರು.

Lok Sabha Election 2024 Chikkaballapura Dr K Sudhakar

ಯಲಹಂಕ ಸಮೀಪದ ಸಿಂಗನಾಯಕನಹಳ್ಳಿಯ ಗೃಹ ಕಛೇರಿಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಬಿಜೆಪಿ ಟಿಕೆಟ್ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಆರ್ ವಿಶ್ವನಾಥ್, ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು, ಬಾಗೇಪಲ್ಲಿ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿಯಾಗಿರುವ ಬಿಜೆಪಿ ಕಾರ್ಯದರ್ಶಿ ಮುನಿರಾಜು, ಬಿಜೆಪಿ ನಾಯಕ ಡಾ. ಶಶಿಧರ್‌ ಅವರು ಭಾಗವಹಿಸಿದ್ದರು.

ಡಾ. ಸುಧಾಕರ್‌ ಅಭಿಮಾನಿಗಳಿಂದ ಟಿಕೆಟ್‌ ಕನ್ಫರ್ಮ್‌ ಪೋಸ್ಟರ್‌!

ʻʻಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಇನ್ನೂ ಅಧಿಕೃತವಾಗಿ ಘೋಷಣೆ ಆಗಿಲ್ಲ. ಆದರೆ ಡಾ. ಕೆ ಸುಧಾಕರ್ ರವರ ಅಭಿಮಾನಿಗಳು ಟಿಕೆಟ್ ಕನ್ಫರ್ಮ್ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹರಿ ಬಿಟ್ಟದ್ದಾರೆ.. ಮುಂದಿನ ಕೇಂದ್ರ ಆರೋಗ್ಯ ಮಂತ್ರಿ ಎಂದೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹರಿಬಿಟ್ಟಿದ್ದಾರೆ.ʼʼ ಎಂದು ಆಕ್ರೋಶ ವ್ಯಕ್ತಪಡಿಸಿದರು ಎಸ್‌.ಆರ್‌. ವಿಶ್ವನಾಥ್‌.

ಡಾ. ಕೆ. ಸುಧಾಕರ್ ಅವರು ಚುನಾವಣೆಯಲ್ಲಿ ಸೋತ ನಂತರ ಜನರ ಸಂಪರ್ಕ ಕಡಿಮೆ ಮಾಡಿದ್ದರು ಎಂಬ ಆರೋಪವಿದೆ. ಗೆಲ್ಲುವಂತಾ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಕೇಂದ್ರ ವರಿಷ್ಠರಿಗೆ ಈಗಾಗಲೇ ಮನವಿ ಮಾಡಿದ್ದೇವೆ. ಇಲ್ಲಿ ಅಲೋಕ್‌ ವಿಶ್ವನಾಥ್‌ ಮತ್ತು ನಾನು (ಎಸ್ ಆರ್ ವಿಶ್ವನಾಥ್) ಆಕಾಂಕ್ಷಿಗಳಿದ್ದೇವೆ. ಅಲೋಕ್ ಗೆ ಹಲವು ಭಾಷೆಗಳ ಮೇಲೆ ಹಿಡಿತವಿದೆ. ದೆಹಲಿ ರಾಜಕಾರಣಕ್ಕೆ ಸೂಕ್ತವಾದ ವ್ಯಕ್ತಿ ಅಲೋಕ್. ಒಂದು ವೇಳೆ ಅಲೋಕ್‌ಗೆ ಟಿಕೆಟ್‌ ತಪ್ಪಿದಲ್ಲಿ ನನಗೆ ಅವಕಾಶ ಕೊಡಿ. ನಾನೇ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಎಸ್‌.ಆರ್‌. ವಿಶ್ವನಾಥ್‌ ಹೇಳಿದರು.

ಇಲ್ಲಿ ಯಾರ ಧಮ್ಕಿಯೂ ನಡೆಯೋದಿಲ್ಲ ಎಂದ ವಿಶ್ವನಾಥ್‌

ಕೆಲವರು ಪತ್ರಿಕಾಗೋಷ್ಠಿಗೆ ಹೋಗಬಾರದು ಎಂದು ಈಗಾಗಲೇ ಕೆಲವರಿಗೆ ಬೆದರಿಕೆ ಹಾಕಿರುವ ಮಾಹಿತಿಯಿದೆ. ಆದರೆ, ಯಾರ ಧಮ್ಕಿಯೂ ನಡೆಯೋದಿಲ್ಲ ಎಂದು ಹೇಳಿದ ವಿಶ್ವನಾಥ್‌, ಜನರು ಅಧಿಕಾರ ಕೊಟ್ಟಾಗ ಅವರು ಹೇಗೆ ನಡೆದುಕೊಂಡಿದ್ದಾರೆ ಎಂದು ತಿಳಿದಿದೆ ಎಂದರು.

ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಮತದಾರರಿದ್ದಾರೆ. ಪ್ರತಿ ಚುನಾವಣೆಯಲ್ಲಿ ಬಿಜೆಪಿಗೆ ಯಲಹಂಕ ವಿಧಾನ ಸಭಾ ಚುನಾವಣೆಯಲ್ಲಿ ಲೀಡ್ ಕೊಟ್ಟಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ಅಲೋಕ್ ವಿಶ್ವನಾಥ್ ಟಿಕೆಟ್ ಕೊಟ್ರೆ ಒಂದೂವರೆ ಲಕ್ಷ ಲೀಡ್ ಕೊಡಿಸುತ್ತೇವೆ ಎಂದು ಹೇಳಿದ ಅವರು, ಒಂದು ವೇಳೆ ಟಿಕೆಟ್‌ ಸಿಗದೆ ಇದ್ದರೆ ಮುಂದೇನು ಎಂಬ ಬಗ್ಗೆ ಟಿಕೆಟ್ ಘೋಷಣೆ ಆದ ಮೇಲೆ ಭಾನುವಾರ ಒಂದು ಸಭೆ ಮಾಡಿ ತೀರ್ಮಾನ ತೆಗದುಕೊಳ್ಳುತ್ತೇವೆ ಎಂದು ಹೇಳಿದರು.

ಅಲೋಕ್‌ಗೆ ಟಿಕೆಟ್‌ ಕೊಡಿ ಎಂದ ‌ಯುವ ಮೋರ್ಚಾ ಅಧ್ಯಕ್ಷ ಧೀರಜ್ ಮುನಿರಾಜ್

ʻʻಎಸ್‌.ಆರ್‌. ವಿಶ್ವನಾಥ್‌ ಅವರು ಕಳೆದ 40 ವರ್ಷಗಳಿಂದ ಪಕ್ಷಕ್ಕಾಗಿ ದುಡಿದ್ದಾರೆ. 2008ರಿಂದ ಬಿಜೆಪಿ ಕಾರ್ಯಕರ್ತರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ‌ ಅಲೋಕ್ ಅವರಿಗೆ ಟಿಕೆಟ್ ನೀಡಿ ಎಂದು ಕೇಳಿದ್ದಾರೆ. ಮುಂದಿನ ಭವಿಷ್ಯದ ದೃಷ್ಟಿಯಿಂದ ಅಲೋಕ್ ಗೆ ಅವಕಾಶ ನೀಡಿದರೆ ಒಳ್ಳೆಯದು. ಅವರಿಗೆ ನೀಡಿದರೆ ಬಿಜೆಪಿ ಪಕ್ಷ ಸಂಘಟನೆಗೆ ಅನುಕೂಲವಾಗುತ್ತದೆ‌. ಎಂಥಾ ಕಠಿಣ ಸಮಯದಲ್ಲಿ ಪಕ್ಷ ಸಂಘಟನೆ ಮಾಡಿದ್ದಾರೆ. ಪಕ್ಷಕ್ಕಾಗಿ ದುಡಿದವರಿಗೆ ಪಕ್ಷ ಅವಕಾಶ ಮಾಡಿಕೊಡಬೇಕುʼʼ ಎಂದು ದೊಡ್ಡಬಳ್ಳಾಪುರ ಶಾಸಕ, ಯುವ ಮೋರ್ಚಾ ರಾಜ್ಯಾಧ್ಯಕ್ಷ ಧೀರಜ್‌ ಮುನಿರಾಜು ಹೇಳಿದ್ದಾರೆ.

ಇದನ್ನೂ ಓದಿ : Lok Sabha Election 2024 : ಮಗನಿಗೆ ಕೊಡಲ್ಲ ಅಂದ್ರೆ ನಂಗೇ ಕೊಡಿ; ಚಿಕ್ಕಬಳ್ಳಾಪುರ ಟಿಕೆಟ್‌ಗೆ ವಿಶ್ವನಾಥ್‌ ಶತಪ್ರಯತ್ನ

ಸುಧಾಕರ್‌ಗೆ ಟಿಕೆಟ್‌ ಬೇಡವೇ ಬೇಡ ಎಂದ ಮುನಿರಾಜು

ಈ ನಡುವೆ, ಬಾಗೇಪಲ್ಲಿ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ಮುನಿರಾಜು ಅವರು ವಿಶ್ವನಾಥ್ ಪರ ಬ್ಯಾಟಿಂಗ್ ಮಾಡಿದರು ಮತ್ತು ಮಾಜಿ ಸಚಿವ ಸುಧಾಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ʻʻನಮ್ಮ ಸೋಲಿಗೆ ಸುಧಾಕರ್ ಕಾರಣ. ಅಂತವರಿಗೆ ಟಿಕೆಟ್ ಬೇಡ. ಪಕ್ಷವನ್ನು ಗಟ್ಟಿಯಾಗಿ ನಿಂತು ಕಟ್ಟುತ್ತಿರೋ ವಿಶ್ವನಾಥ್ ಪುತ್ರ ಅಲೋಕ್‌ಗೆ ಟಿಕೆಟ್ ನೀಡಬೇಕು, ಸುಧಾಕರ್ ಅಭಿಮಾನಿಗಳು ಟಿಕೆಟ್ ಆಗಿದೆ ಅಂತ ಪ್ರಚಾರ ಮಾಡುತ್ತಿದ್ದಾರೆ. ನಾವು ಇದನ್ನು ಒಪ್ಪೋದಿಲ್ಲʼʼ ಎಂದು ಬಿಜೆಪಿ ಮುಖಂಡ ಮುನಿರಾಜು ಹೇಳಿದರು.

ಅಲೋಕ್ ವಿಶ್ಚನಾಥ್ ಗೆ ಟಿಕೆಟ್ ನೀಡುವಂತೆ ಇಷ್ಟು ದಿನ ಹೋರಾಟವಿತ್ತು, ಅದರೆ ಇದೀಗ ಶಾಸಕ ಎಸ್.ಆರ್ ವಿಶ್ವನಾಥ್ ಗಾದರು ಟಿಕೆಟ್ ನೀಡಲಿ ಎಂದು ಕೇಳುತ್ತಿದ್ದೇವೆ ಎಂದರು.

Exit mobile version