ಬಾಗಲಕೋಟೆ : ಬಾಗಲಕೋಟೆ ಲೋಕಸಭಾ ಕ್ಷೇತ್ರದ (Bagalakote Constituency) ಕಾಂಗ್ರೆಸ್ ಟಿಕೆಟ್ (Bagalakote Congress Ticket) ರಾಜ್ಯದ ಕೃಷಿ ಮಾರುಕಟ್ಟೆ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರ ಪುತ್ರಿ ಸಂಯುಕ್ತಾ ಪಾಟೀಲ್ (Samyukta Patil) ಅವರಿಗೆ ಸಿಗಲಿದೆ ಎಂಬ ಸುದ್ದಿ ಹರಡಿದೆ. ಅದರ ಬೆನ್ನಿಗೇ ಜಿಲ್ಲೆಯಲ್ಲಿ ಗೋ ಬ್ಯಾಕ್ ಸಂಯುಕ್ತಾ ಪಾಟೀಲ್ (Go Back Samyukta Patil) ಅಭಿಯಾನವೂ ಶುರುವಾಗಿದೆ. ಈ ಕ್ಷೇತ್ರದ (Lok Sabha Election 2024) ಮತ್ತೊಬ್ಬ ಟಿಕೆಟ್ ಆಕಾಂಕ್ಷಿ ವೀಣಾ ಕಾಶಪ್ಪನವರ್ (Veena Kashappanavar) ಅವರ ಬೆಂಬಲಿಗರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಅತ್ತ ವೀಣಾ ಕಾಶಪ್ಪನವರ್ ಅವರು ದಿಲ್ಲಿಗೆ ಹೋಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮನೆ ಮುಂದೆಯೇ ಟಿಕೆಟ್‌ಗಾಗಿ ಕಣ್ಣೀರು ಹಾಕಿದ್ದಾರೆ.
ವೀಣಾ ಕಾಶಪ್ಪನವರ್ ಅವರು ಬಾಗಲಕೋಟೆ ಜಿಲ್ಲೆ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಅವರ ಪತ್ನಿ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಾಗಲಕೋಟೆ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತಿದ್ದರು. ಆದರೆ, ಕಳೆದ ಐದು ವರ್ಷಗಳಿಂದ ಕ್ಷೇತ್ರದಲ್ಲಿ ಓಡಾಡುತ್ತಲೇ ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಈ ನಡುವೆ, ವಿಜಯಪುರ ಜಿಲ್ಲೆಯವರಾಗಿರುವ ಸಂಯುಕ್ತಾ ಪಾಟೀಲ್ ಅವರಿಗೆ ಟಿಕೆಟ್ ನೀಡಲಾಗುತ್ತದೆ ಎಂಬ ಸುದ್ದಿ ವೀಣಾ ಬೆಂಬಲಿಗರನ್ನು ಕೆರಳಿಸಿದೆ.
ವೀಣಾ ಕಾಶಪ್ಪನವರ್ ಅವರ ಬೆಂಬಲಿಗರು ಕೆಲವು ದಿನಗಳ ಹಿಂದೆ ಬೆಂಗಳೂರಿಗೆ ಧಾವಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆ ಮುಂದೆ ತಮ್ಮ ಶಕ್ತಿ ಪ್ರದರ್ಶನ ನಡೆಸಿದ್ದರು. ಇದೀಗ ಇದೇ ಶಕ್ತಿ ಪ್ರದರ್ಶನ ಬಾಗಲಕೋಟೆಯಲ್ಲಿ ನಡೆದಿದೆ.
ಇದನ್ನೂ ಓದಿ: Lok Sabha Election 2024 : ಕಾಂಗ್ರೆಸ್‌ನ 16 ಟಿಕೆಟ್ ಫೈನಲ್; ಹೆಬ್ಬಾಳ್ಕರ್ ಪುತ್ರ, ಜಾರಕಿಹೊಳಿ ಪುತ್ರಿ ಕಣಕ್ಕೆ?
ಸಂಯುಕ್ತಾ ಪಾಟೀಲ್ ಗೋಬ್ಯಾಕ್ ಅಭಿಯಾನ
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆಯೂ ಆಗಿರುವ ವೀಣಾ ಕಾಶಪ್ಪನವರ್ ಅವರಿಗೆ ಈ ಬಾರಿ ಟಿಕೆಟ್ ಇಲ್ಲ ಎಂಬ ಸುದ್ದಿಯಿಂದ ಆಕ್ರೋಶಿತರಾಗಿರುವ ಬೆಂಬಲಿಗರು ಬುಧವಾರ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಿದ್ದರು.
ಹೊರ ಜಿಲ್ಲೆಯವರಾಗಿರುವ ಸಂಯುಕ್ತಾ ಪಾಟೀಲ್ ನಮಗೆ ಬೇಡ, ನಮ್ಮ ಊರಿನವರೇ ಬೇಕು ಎಂಬ ಆಗ್ರಹದೊಂದಿಗೆ ವೀಣಾ ಬೆಂಬಲಿಗರು ಗೋ ಬ್ಯಾಕ್ ಸಂಯುಕ್ತ ಪಾಟೀಲ್ ಅಭಿಯಾನವನ್ನೂ ನಡೆಸಿದ್ದಾರೆ.
ಬಾಗಲಕೋಟೆ ನವನಗರದ ಕಾಂಗ್ರೆಸ್ ಜಿಲ್ಲಾ ಕಚೇರಿ ಬಳಿ ದೊಡ್ಡ ಸಂಖ್ಯೆಯಲ್ಲಿ ಸೇರಿರುವ ವೀಣಾ ಕಾಶಪ್ಪನವರ್ ಅಭಿಮಾನಿಗಳು ಪ್ರತಿಭಟನೆ ಮೂಲಕ ಜಿಲ್ಲಾ ಕಾಂಗ್ರೆಸ್ ಕಚೇರಿ ಮುತ್ತಿಗೆ ಹಾಕಲು ಯತ್ನಿಸಿದರು. ಆದರೆ, ಕಾಂಗ್ರೆಸ್ ಜಿಲ್ಲಾ ಕಚೇರಿ ಸುತ್ತಮುತ್ತ ಪೊಲೀಸ್ ಬಿಗಿ ಬಂದೋ ಬಸ್ತ್ ಏರ್ಪಡಿಸಿದ್ದು ಬ್ಯಾರಿಕೇಡ್ ಹಾಕಿ ಕಾರ್ಯಕರ್ತರನ್ನು ತಡೆಯಲಾಗಿದೆ. ಮುತ್ತಿಗೆಗೆ ಅವಕಾಶ ನೀಡದ ಪೊಲೀಸರು ಹಾಗೂ ವೀಣಾ ಕಾಶಪ್ಪನವರ್ ಬೆಂಬಲಿಗರ ನಡುವೆ ವಾಗ್ವಾದ ನಡೆದಿದೆ.
ರಸ್ತೆಯಲ್ಲೇ ಟಯರ್ ದಹಿಸಿ, ಬಾಯಿ ಬಡಿದುಕೊಂಡು ಆಕ್ರೋಶ ಹೊರ ಹಾಕಿದ ವೀಣಾ ಬೆಂಬಲಿಗರು ಬೀದಿಯಲ್ಲೇ ಘೋಷಣೆ ಕೂಗಿದರು.
ಖರ್ಗೆ ಮನೆಯ ಮುಂದೆ ವೀಣಾ ಕಾಶಪ್ಪನವರ್ ಕಣ್ಣೀರು
ಈ ನಡುವೆ ಟಿಕೆಟ್ ಪಡೆಯುವ ಪ್ರಯತ್ನದ ಭಾಗವಾಗಿ ದಿಲ್ಲಿಗೆ ಹೋಗಿರುವ ವೀಣಾ ಕಾಶಪ್ಪನವರ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ದೆಹಲಿಯ ನಿವಾಸದ ಮುಂದೆ ಕಣ್ಣೀರು ಹಾಕಿದರು.
ಬಾಗಲಕೋಟ ಕ್ಷೇತ್ರದ ಆಕಾಂಕ್ಷಿಯಾಗಿ ಖರ್ಗೆ ಭೇಟಿಗೆ ಬಂದಿರುವ ವೀಣಾ ಕಾಶಪ್ಪನವರ್ ಅವರು, ʻʻಸೋಲುವಾಗ ಈ ವೀಣಾ ಬೇಕು. ಗೆಲ್ಲುವಾಗ ಈ ವೀಣಾ ಕಾಶಪ್ಪನವರ್ ಪಕ್ಷಕ್ಕೆ ಬೇಡ್ವಾ?ʼʼ ಎಂದು ಪ್ರಶ್ನೆ ಮಾಡಿದರು.
ʻʻಯಾವ ಆಧಾರದ ಮೇಲೆ ಟಿಕೆಟ್ ನಿರ್ಣಯಗಳು ಆಗ್ತಾವೆ ಗೊತ್ತಿಲ್ಲ. ಸಂಜೆಯ ತನಕ ಕಾಯುತ್ತೇನೆ. ಬಳಿಕ ನಾನು ಮಾತಾಡುವೆʼʼ ಎಂದಿದ್ದಾರೆ.