ಬೆಂಗಳೂರು: ರಾಜ್ಯದಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಬಿಜೆಪಿ ಮತ್ತು ಜೆಡಿಎಸ್ ನಡುವಿನ ಸೀಟು ಹಂಚಿಕೆಯ (BJP-JDS Seat Sharing) ಅಂತಿಮ ಚಿತ್ರಣ ಹೊರಬಿದ್ದಿದೆ. ಜೆಡಿಎಸ್ ರಾಜ್ಯದ ಹಾಸನ, ಮಂಡ್ಯ ಮತ್ತು ಕೋಲಾರ ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧೆ ಮಾಡಲಿದೆ ಎಂದು ಸೋಮವಾರ ನಡೆದ ಜೆಡಿಎಸ್ ಕೋರ್ ಕಮಿಟಿ ಸಭೆಯ ಬಳಿಕ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ (HD Kumaraswamy) ಅವರು ಘೋಷಣೆ ಮಾಡಿದ್ದಾರೆ. ಕೋಲಾರ ಕ್ಷೇತ್ರವನ್ನು ಕೂಡಾ (JDS to contest in Kolara) ಬಿಜೆಪಿಯೇ ಇಟ್ಟುಕೊಳ್ಳಲು ಪ್ರಯತ್ನಿಸುತ್ತಿರುವ ನಡುವೆ ಎಚ್.ಡಿ ಕುಮಾರಸ್ವಾಮಿ ಘೋಷಣೆ ಗಮನ ಸೆಳೆದಿದೆ.
ಸಭೆಯ ಬಳಿಕ ಮಾತನಾಡಿದ ಅವರು, ರಾಜ್ಯದ ಉಸ್ತುವಾರಿಗಳು, ಮಾಜಿ ಶಾಸಕರ ಸಭೆ ಮಾಡಿದ್ದೇವೆ. ಆ ಸಭೆಯಲ್ಲಿ ಹಲವಾರು ಪ್ರಮುಖರ ಅಭಿಪ್ರಾಯಗಳನ್ನು ಕೇಳಿಸಿಕೊಂಡಿದ್ದೇವೆ ಎಂದು ಹೇಳಿದರಿ.
ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಜಿ.ಟಿ. ದೇವೇಗೌಡ ಅವರು, ಜೆಡಿಎಸ್ ಪಕ್ಷಕ್ಕೆ ಮೂರು ಕ್ಷೇತ್ರ ಅಥವಾ ನಾಲ್ಕು ಕ್ಷೇತ್ರ ಮಾತ್ರ ಕೇಳಿದ್ದೀವಿ. 8- 10 ಕ್ಷೇತ್ರಗಳನ್ನ ಕೇಳಿಲ್ಲ. ನಾವು ಗೆಲ್ಲುವ ಕ್ಷೇತ್ರಗಳನ್ನ ಕೇಳ್ತಾ ಇದ್ದೀವಿ. ನಮ್ಮ ಪಕ್ಷದ ಶಕ್ತಿ ಇದೆ ಅಲ್ಲಿ ಕೇಳ್ತಾ ಇದ್ದೇವೆ. ಹೀಗಾಗಿ ಮೂರು ಕ್ಷೇತ್ರಗಳನ್ನು ಕೊಡಲೇಬೇಕು ಎಂಬ ವಾದವನ್ನು ಮಂಡಿಸಿದರು. ಇದಕ್ಕೆ ಕೋರ್ ಕಮಿಟಿ ಒಪ್ಪಿತು.
ʻʻನಾಳೆಯಿಂದ ನಾನು ಚಿಕಿತ್ಸೆಗಾಗಿ 5 ದಿನ ಚೆನ್ನೈಗೆ ಹೋಗುತ್ತಿದ್ದೇನೆ. ಮಾರ್ಚ್ 21ರಂದು ಚಿಕಿತ್ಸೆಗಾಗಿ ಸಮಯ ನಿಗದಿ ಮಾಡಿಕೊಂಡಿದ್ದಾರೆ. ಅದಕ್ಕೋಸ್ಕರ ಕೋರ್ ಕಮಿಟಿ ಸಭೆ ನಡೆಸಲಾಗಿದೆ. ಜಿಲ್ಲಾ ಉಸ್ತುವಾರಿಗಳು ಮತ್ತು ಜಿಲ್ಲಾಘಟಕದ ಅಧ್ಯಕ್ಷರು ಮಾಜಿ ಶಾಸಕರ ಸಭೆ ಕರೆದು ಚರ್ಚೆ ಮಾಡಿದ್ದೇನೆʼʼ ಎಂದು ಎಚ್.ಡಿ ಕುಮಾರಸ್ವಾಮಿ ಹೇಳಿದರು.
ʻʻನಮ್ಮ ಉದ್ದೇಶ ಕಾಂಗ್ರೆಸ್‌ನ್ನು 28 ಕ್ಷೇತ್ರಗಳಲ್ಲಿ ಸೋಲಿಸುವುದು, ಉತ್ತರ ಕರ್ನಾಟಕ ಭಾಗದ ವಿಜಯಪುರ, ಕಲಬುರಗಿಯಲ್ಲಿ ನಮ್ಮ ಶಕ್ತಿ ಬಿಜೆಪಿಗಿಂತ ಹೆಚ್ಚಾಗಿದೆ. ಇಂತಹ ಕ್ಷೇತ್ರಗಳಲ್ಲಿ ನಮ್ಮನ್ನ ಹೇಗೆ ಬಳಕೆ ಮಾಡಿಕೊಳ್ಳಬೇಕು ಎಂಬುದಕ್ಕೆ ಬಿಜೆಪಿ ಹೈಕಮಾಂಡ್ ಜೊತೆ ಚರ್ಚೆಯಾಗಬೇಕು. ನಮ್ಮನ್ನು ಕಡೆಗಣಿಸಿದರೆ ಅದರಿಂದಾಗುವ ಪರಿಣಾಮಗಳನ್ನು ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಬಿಜೆಪಿ ಹೈಕಮಾಂಡ್‌ಗೆ ಈ ಎಲ್ಲಾ ವಿಚಾರಗಳನ್ನು ಮುಟ್ಟಿಸಬೇಕೆಂದು ಎಲ್ಲರು ಚರ್ಚೆ ಮಾಡಿದ್ದಾರೆʼʼ ಎಂದು ಎಚ್.ಡಿ ಕುಮಾರಸ್ವಾಮಿ ವಿವರಿಸಿದ್ದಾರೆ.
“18 ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಮತಗಳು 3% ಮತಗಳು ಸ್ವಿಂಗ್ ಆದ್ರೆ ಬಿಜೆಪಿಗೆ ಅನುಕೂಲವಾಗುತ್ತದೆ. ಇದನ್ನ ಹೈಕಮಾಂಡ್ ಗಮನಕ್ಕೆ ತನ್ನಿ ಅಂತಾ ಹೇಳಿದ್ದಾರೆʼʼ ಎಂದು ವಿವರಿಸಿದರು.
ಇದನ್ನೂ ಓದಿ : HD Kumaraswamy: ಕಾಂಗ್ರೆಸ್ ಮತದಿಂದ ಸುಮಲತಾರನ್ನು ಗೆಲ್ಲಿಸಿದ ಕಲಿಯುಗದ ಶಕುನಿ ಸಿದ್ದರಾಮಯ್ಯ: ಎಚ್‌ಡಿಕೆ ಆಕ್ರೋಶ
ಎರಡು ಸೀಟಿಗಾಗಿ ಮೈತ್ರಿ ಮಾಡಿಕೊಳ್ಳಬೇಕಾಗಿತ್ತಾ?
ಕೋಲಾರ ಕ್ಷೇತ್ರ ಬಿಟ್ಟುಕೊಡುವ ಬಗ್ಗೆ ಬಿಜೆಪಿ ಮೀನಾಮೇಷ ಎಣಿಸುತ್ತಿದೆ. ಕೇವಲ ಎರಡು ಸೀಟಿಗಾಗಿ ನಾವು ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳಬೇಕಿತ್ತಾ? ಇಂಥ ಅನಿಶ್ಚಿತತೆಯಿಂದ ಪಕ್ಷಕ್ಕೆ ನಷ್ಟವಾಗುತ್ತದೆ. ಹೀಗಾಗಿ ಇವತ್ತೇ ಕೋಲಾರ ಅಭ್ಯರ್ಥಿಯನ್ನು ಘೋಷಣೆ ಮಾಡಿ ಎಂದು ಸಭೆಯಲ್ಲಿ ಒತ್ತಡ ಹೇರಲಾಯಿತು.
ʻʻಕೋಲಾರ ಜೆಡಿಎಸ್ ಪಾಲಿನ ಕ್ಷೇತ್ರ ಎಂದು ಮೊದಲಿನಿಂದ ಹೇಳುತ್ತಿದ್ದೀರಿ. ಕೋಲಾರ, ಹಾಸನ, ಮಂಡ್ಯ ಸೇರಿದಂತೆ 5 ಕ್ಷೇತ್ರಗಳು ಜೆಡಿಎಸ್ ಗೆ ಬರುತ್ತವೆ ಎಂದು ನೀವು ಹೇಳಿದ್ದಿರಿ. ಆದರೆ, ಈಗ ನೋಡಿದರೆ ಬಿಜೆಪಿ 2 ಸೀಟಿಗೆ ಬಂದು ನಿಂತಿದೆʼʼ ಎಂದು ಕುಮಾರಸ್ವಾಮಿ ಅವರನ್ನು ಕೇಳಿದ್ದಾರೆ ಉಸ್ತುವಾರಿಗಳು. ಮುಖಂಡರು, ಉಸ್ತುವಾರಿಗಳಿಗೆ ದೇವೇಗೌಡರು, ಕುಮಾರಸ್ವಾಮಿ ಸಮಾಧಾನ ಹೇಳಿದರು. ಕೊನೆಗೆ ಕೋಲಾರದಿಂದಲೂ ಜೆಡಿಎಸ್ ಸ್ಪರ್ಧೆ ಮಾಡಲಿದೆ ಎಂದು ಘೋಷಿಸಿದರು.