Site icon Vistara News

Lok Sabha Election 2024 : ಡಿ.ವಿ. ಸದಾನಂದ ಗೌಡ ಬಿಜೆಪಿಗೆ ಗುಡ್‌ಬೈ?: ಕಾಂಗ್ರೆಸ್‌ನಿಂದ ಸ್ಪರ್ಧೆ ಸಾಧ್ಯತೆ

Lok sabha Election 2024 DV Sadananda Gowda

ಬೆಂಗಳೂರು : ಬೆಂಗಳೂರು ಉತ್ತರ ಕ್ಷೇತ್ರದಿಂದ (Bangalore North Constituency) ಟಿಕೆಟ್‌ ವಂಚಿತರಾಗಿರುವ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ (DV Sadananda Gowda) ಅವರನ್ನು ಸೆಳೆಯಲು (Lok sabha Election 2024) ಕಾಂಗ್ರೆಸ್‌ ಪ್ಲ್ಯಾನ್‌ ಮಾಡಿದೆ ಎಂದು ಹೇಳಲಾಗಿದೆ. ಈ ಪ್ರಯತ್ನಕ್ಕೆ ಪೂರಕವಾದ ಪ್ರತಿಕ್ರಿಯೆಯೊಂದು ಡಿ.ವಿ.ಎಸ್‌ ಅವರ ಕಡೆಯಿಂದಲೂ ಬರುತ್ತಿದೆ. ತಮ್ಮ ಮುಂದಿನ ರಾಜಕೀಯ ನಡೆಯ ಬಗ್ಗೆ ಮಂಗಳವಾರ ಬೆಳಗ್ಗೆ 10.30ಕ್ಕೆ ಮಾಧ್ಯಮ ಗೋಷ್ಠಿ ಮೂಲಕ ತಿಳಿಸುವುದಾಗಿ ಹೇಳಿ ಸಸ್ಪೆನ್ಸ್‌ ಸೃಷ್ಟಿ ಮಾಡಿದ್ದಾರೆ.

ಮಾರ್ಚ್‌ 18 ಡಿ.ವಿ. ಸದಾನಂದ ಗೌಡ ಅವರ 71ನೇ ಹುಟ್ಟುಹಬ್ಬ. ಈ ನಿಟ್ಟಿನಲ್ಲಿ ಅವರ ಅಭಿಮಾನಿಗಳು ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜಿಸಿದ್ದಾರೆ. ಇದರಲ್ಲಿ ಭಾಗವಹಿಸಿದ ಬಳಿಕ ಅವರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರುವ ಸಾಧ್ಯತೆಗಳಿವೆ (DVS May Join Congress) ಎಂಬ ಮಾತು ಕೇಳಿ ಬರುತ್ತಿದೆ.

ಮಂಗಳವಾರ ಬೆಳಗ್ಗೆ ಸದಾನಂದ ಗೌಡರ ಮಾಧ್ಯಮ ಗೋಷ್ಠಿ

ಸೋಮವಾರ ವಿಸ್ತಾರ ನ್ಯೂಸ್‌ ಜತೆಗೆ ಮಾತನಾಡಿದ ಡಿ.ವಿ. ಸದಾನಂದ ಗೌಡ ಅವರು, ಕಾಂಗ್ರೆಸ್ ನವರು ನನ್ನನ್ನು ಸಂಪರ್ಕ ಮಾಡಿದ್ದೂ ಹೌದು. ನನ್ನ ಮನಸ್ಸಿಗೆ ನೋವು ಆಗಿದ್ದೂ ಹೌದು. ಪಕ್ಷದ ವರಿಷ್ಠರು ಕರೆ ಮಾಡಿ ಮಾತಾಡಿದ್ದೂ ಹೌದು. ಆದರೆ ಇವತ್ತು ಸಂಜೆಯುವರೆಗೂ ಇದು ಯಾವುದೂ ಚರ್ಚೆಯ ವಸ್ತು ಅಲ್ಲ. ನನ್ನ ಅಭಿಮಾನಿ ಬಳಗ ಶುಭಾಶಯ ಹೇಳಲು ಒಂದು ಕಾರ್ಯಕ್ರಮ ಮಾಡಿದ್ದಾರೆ. ಈ ಕಾರ್ಯಕ್ರಮ ಮುಗಿದ ಮೇಲೆ ನಾನು ಆಲೋಚನೆ ಮಾಡ್ತೇನೆ‌. ನಾಳೆ (ಮಾರ್ಚ್‌ 19) ಬೆಳಗ್ಗೆ 10:30 ಮಾದ್ಯಮದ ಮುಂದೆ ಬರುತ್ತೇನೆ. ಆಗ ಎಲ್ಲವೂ ಗೊತ್ತಾಗಲಿದೆ” ಎಂದು ಸದಾನಂದ ಗೌಡರು ಹೇಳಿದರು.

ಸದಾನಂದ ಗೌಡರು ಕಾಂಗ್ರೆಸ್‌ ಸೇರೋದು ಪಕ್ಕಾ? ಎಲ್ಲಿಂದ ಸ್ಪರ್ಧೆ?

ಕಾಂಗ್ರೆಸ್‌ ನಾಯಕರು ಅದರಲ್ಲೂ ಮುಖ್ಯವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಸದಾನಂದ ಗೌಡರಿಗೆ ಗಾಳ ಹಾಕಿದ್ದಾರೆ ಎಂಬ ಮಾತು ನಿಜ ಎನ್ನುತ್ತವೆ ಮೂಲಗಳು. ಗಾಳ ಮಾತ್ರವಲ್ಲ, ಡಿವಿಎಸ್‌ ಕಾಂಗ್ರೆಸ್‌ ಸೇರುವುದು ಗ್ಯಾರಂಟಿ ಎಂದು ಹೇಳಲಾಗುತ್ತಿದೆ.

ಡಿ.ವಿ. ಸದಾನಂದ ಗೌಡ ಅವರಿಗೆ ಬೆಂಗಳೂರು ಉತ್ತರ, ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ ಮತ್ತು ಮೈಸೂರು-ಕೊಡಗು ಕ್ಷೇತ್ರಗಳ ಆಫರ್‌ ನೀಡಲಾಗಿದೆ ಎನ್ನಲಾಗಿದೆ. ಇದರಲ್ಲಿ ಬೆಂಗಳೂರು ಉತ್ತರ ಅಥವಾ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರವನ್ನು ಆಯ್ಕೆ ಮಾಡಬಹುದು ಎನ್ನಲಾಗಿದೆ.

ಕಾಂಗ್ರೆಸ್ ಮೂಲಗಳ ಪ್ರಕಾರ ಮೈಸೂರು – ಕೊಡಗು ಕ್ಷೇತ್ರದಿಂದ ಸದಾನಂದಗೌಡರು ಕಣಕ್ಕೆ ಇಳಿಯಬಹುದು. ಮಂಗಳವಾರ ನಡೆಸಲಿರುವ ಪತ್ರಿಕಾಗೋಷ್ಠಿಯಲ್ಲಿ ಡಿ.ವಿ. ಸದಾನಂದ ಗೌಡ ಅವರು ವಿಚಾರವನ್ನೇ ಪ್ರಕಟಿಸುವ ಸಾಧ್ಯತೆಗಳಿವೆ.

ಕಾಂಗ್ರೆಸ್‌ ಕೆಲವು ಕ್ಷೇತ್ರಗಳಲ್ಲಿ‌ ಅಭ್ಯರ್ಥಿಗಳ ಕೊರತೆಯನ್ನು ಎದುರಿಸುತ್ತಿದೆ. ಅದನ್ನು ನೀಗಿಸಲು ಆಪರೇಷನ್ ಹಸ್ತಕ್ಕೆ ಮುಂದಾಗಿದೆ ಎನ್ನಲಾಗಿದೆ. ಅದರಲ್ಲೂ ಒಕ್ಕಲಿಗ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಮಾಜಿ ಸಿಎಂ ಸದಾನಂದಗೌಡ ಹಾಗೂ ಎಸ್. ಟಿ ಸೋಮಶೇಖರ್ ಗೆ ಆಪರೇಷನ್ ಮಾಡಲು ಪ್ಲ್ಯಾನ್‌ ಹಾಕಲಾಗಿಎ.

ಮೂಲಗಳ ಪ್ರಕಾರ ಬೆಂಗಳೂರು ಉತ್ತರಕ್ಕೆ ಎಸ್. ಟಿ ಸೋಮಶೇಖರ್ ಅಭ್ಯರ್ಥಿ ಆಗುವ ಸಾಧ್ಯತೆ ಇದ್ದರೆ, ಮೈಸೂರು ಕೊಡಗು ಕ್ಷೇತ್ರಕ್ಕೆ ಸದಾನಂದಗೌಡರು ಅಭ್ಯರ್ಥಿ ಆಗುವ ಸಾಧ್ಯತೆ ಇದೆ. ಎಸ್‌. ಸೋಮಶೇಖರ್‌ ಅವರ ಜತೆಗೆ ಈಗಾಗಲೇ ಮಾತುಕತೆಗಳು ಮುಗಿದಿವೆ ಎನ್ನಲಾಗಿದೆ.

ಕಾಂಗ್ರೆಸ್‌ನವರಿಗೆ ಅಭ್ಯರ್ಥಿಗಳೇ ಇಲ್ಲ ಎಂದ ಶೋಭಾ ಕರಂದ್ಲಾಜೆ

ಕಾಂಗ್ರೆಸ್‌ ಪಕ್ಷವು ಬಿಜೆಪಿ ಟಿಕೆಟ್‌ ವಂಚಿದ ಸಂಸದ, ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಅವರನ್ನು ಸಂಪರ್ಕ ಮಾಡಿದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು, ʻʻಕಾಂಗ್ರೆಸ್ ಅವರಿಗೆ ಅಭ್ಯರ್ಥಿಗಳು ಇಲ್ಲ. ತುಂಬಾ ಹತಾಶೆಗೆ ಒಳಗಾಗಿದ್ದಾರೆ. ಕಾಂಗ್ರೆಸ್ ಅವರು ಯಾರನ್ನು ಸಂಪರ್ಕ ಮಾಡ್ತಿದ್ದಾರೆ ಗೊತ್ತಿಲ್ಲ. ಸದಾನಂದ ಗೌಡರು ಸಿಎಂ ಆದವರು. ಅವರು ಪಕ್ಷದಲ್ಲಿ ಅನೇಕ ಜವಾಬ್ದಾರಿ ವಹಿಸಿದವರು. ಮೋದಿ ಅವರನ್ನು ಪ್ರಧಾನಿ ಮಾಡಬೇಕು ಅನ್ನೋದು ಎಲ್ಲರ ಗುರಿ. ಹಾಗಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡ್ತಾರೆ ಎಂಬ ವಿಶ್ವಾಸವಿದೆʼʼ ಎಂದು ಹೇಳಿದರು.

ಇದನ್ನೂ ಓದಿ : Lok Sabha Election 2024: ಯದುವೀರ ಒಡೆಯರ್ – ಪ್ರತಾಪ್ ಸಿಂಹ ಇಂದು ಮುಖಾಮುಖಿ!

ಎಸ್ಟಿ ಸೋಮಶೇಖರ್‌ ಅವರ ವಿರುದ್ಧ ಕ್ರಮ ಆಗದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕ್ರಮವನ್ನ ನಾವು ಮಾತ್ರವಲ್ಲ, ಸ್ಪೀಕರ್ ಅವರು ತೆಗೆದುಕೊಳ್ಳಬೇಕು. ಸೋಮಶೇಖರ್ ರಾಜ್ಯಸಭೆಗೆ ಕಾಂಗ್ರೆಸ್‌ಗೆ ಮತ ಹಾಕಿದ ಮೇಲೆ ಅವರೇ ಹೊರಗೆ ಹೋಗಬೇಕಿತ್ತು. ಈಗ ಚುನಾವಣೆ ಮಾಡ್ತೀವಿ, ಮುಂದೆ ಏನು ಮಾಡಬೇಕು ಮಾಡ್ತೀವಿ ಎಂದು ಹೇಳಿದರು.

Exit mobile version