Site icon Vistara News

Lok Sabha Election 2024: ಮೈಸೂರಿನಲ್ಲಿ ಮತ್ತೆ ಸ್ಪರ್ಧಿಸಲು ಕುಮಾರಸ್ವಾಮಿ ಬೆಂಬಲ ಕೋರಿದ ಸಂಸದ ಪ್ರತಾಪ್‌ ಸಿಂಹ

MP Pratap Simha meets HD Kumaraswamy

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಗೆ (Lok Sabha Election 2024) ರಾಜಕೀಯ ಕಣ ಅಣಿಯಾಗಿದೆ. ಸಾಕಷ್ಟು ಬೆಳವಣಿಗೆಗಳು ಈಗಾಗಲೇ ನಡೆಯುತ್ತಿವೆ. ಬಿಜೆಪಿಯಲ್ಲಿ (BJP Karnataka) ಸರಣಿ ಸಭೆಗಳು ನಡೆಯುತ್ತಲಿದ್ದು, ತುರುಸಿನ ಕಾರ್ಯಚಟುವಟಿಕೆಯನ್ನು ಹಮ್ಮಿಕೊಳ್ಳಲಾಗಿದೆ. ಇದರ ಜತೆಗೆ ಈ ಬಾರಿ ದೇಶಾದ್ಯಂತ ಹಲವು ಹಾಲಿ ಸಂಸದರನ್ನು ಕೈಬಿಟ್ಟು ಹೊಸ ಮುಖಗಳನ್ನು ಇಳಿಸಬೇಕು ಎಂಬ ನಿರ್ಧಾರಕ್ಕೆ ಬಿಜೆಪಿ ಹೈಕಮಾಂಡ್‌ (BJP high command) ಬಂದಿದೆ ಎನ್ನಲಾಗಿದೆ. ಇದರ ಭಾಗವಾಗಿ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ (Kodagu-Mysore Lok Sabha constituency) ಹೆಸರೂ ಕೇಳಿಬರುತ್ತಿದೆ. ಈ ಎಲ್ಲ ಬೆಳವಣಿಗೆ ಬೆನ್ನಲ್ಲೇ ಈಗ ಹಾಲಿ ಸಂಸದ ಪ್ರತಾಪ್‌ ಸಿಂಹ (MP Pratap Simha) ಅವರು ಮಾಜಿ ಸಿಎಂ, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಮೈಸೂರು ಕ್ಷೇತ್ರದ ಹೆಸರು ಬಂದಾಗ ತಮ್ಮ ಹೆಸರನ್ನೇ ಪ್ರಸ್ತಾಪ ಮಾಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಎಚ್.ಡಿ. ಕುಮಾರಸ್ವಾಮಿ ಅವರ ಬಿಡದಿ ತೋಟದ ಮನೆಗೆ ಭೇಟಿ ನೀಡಿದ ಪ್ರತಾಪ್ ಸಿಂಹ ಅವರು, ಮೈಸೂರು ಲೋಕಸಭಾ ಚುನಾವಣೆ ಕುರಿತು ಸಮಾಲೋಚನೆ ನಡೆಸಿದ್ದಾರೆ. 2024ರ ಲೋಕಸಮರಕ್ಕೆ ಕಮಲ-ದಳ ನಾಯಕರು ಸಜ್ಜಾಗಿದ್ದಾರೆ. ಯಾವ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿ ನಿಂತರೂ ಪರಸ್ಪರ ಸಹಕಾರ, ಬೆಂಬಲ ನೀಡುವ ತೀರ್ಮಾನಕ್ಕೆ ಬರಲಾಗಿದೆ. ಅಲ್ಲದೆ, ಈಗ ಬಿಜೆಪಿಯಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಮೈಸೂರಿನಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರ ಹೆಸರು ಕೇಳಿಬರುತ್ತಿದೆ. ಈ ಬೆಳವಣಿಗೆಯಿಂದ ಟಿಕೆಟ್‌ ಕೈ ತಪ್ಪುವ ಆತಂಕದಲ್ಲಿ ಬಿಜೆಪಿಯ ಕೆಲವು ನಾಯಕರು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡುತ್ತಿದ್ದಾರೆ.

MP Pratap Simha meets HD Kumaraswamy

ಇದರ ಭಾಗವಾಗಿ ಈಗ ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್‌ ಸಿಂಹ ಅವರು ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ನೀಡಿ ಮನವಿ ಮಾಡಿದ್ದಾರೆ. ತಾವು ಎರಡು ಬಾರಿ ಈ ಕ್ಷೇತ್ರದಲ್ಲಿ ಸಂಸದನಾಗಿ ಆಯ್ಕೆಯಾಗಿದ್ದೇನೆ. ಅಲ್ಲದೆ, ಸಾಕಷ್ಟು ಕೆಲಸಗಳನ್ನೂ ಮಾಡಿದ್ದೇನೆ. ಹಾಗಾಗಿ ತಮ್ಮ ಪರವಾಗಿ ನಿಮ್ಮ ನಿಲುವು ಇರಲಿ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಆತಂಕ ಹೆಚ್ಚಲು ಕಾರಣ ಏನು?

ಬಿಜೆಪಿ ಈಗಾಗಲೇ ಲೋಕಸಭಾ ಚುನಾವಣೆ ತಯಾರಿ ಸಂಬಂಧ ಹಲವು ಸಭೆಗಳನ್ನು ಮಾಡುತ್ತಾ ಬಂದಿದೆ. ಈ ನಡುವೆ ಕ್ಲಸ್ಟರ್‌ ಮಟ್ಟದ ಸಭೆಯನ್ನು ಮಾಡಿದೆ. ಈ ಸಭೆಯಲ್ಲಿ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಪ್ರತಾಪ್‌ ಸಿಂಹ ಅವರಿಗೆ ಟಿಕೆಟ್‌ ಕೊಡುವ ಬಗ್ಗೆ ಪರ – ವಿರೋಧ ಚರ್ಚೆಯಾಗಿದೆ. ಇದು ಪ್ರತಾಪ್‌ ಸಿಂಹ ಅವರ ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ: Lok Sabha Election 2024: ಕಾಂಗ್ರೆಸ್‌ ಹೈಕಮಾಂಡ್‌ ಟಾಸ್ಕ್‌; ಲೋಕಸಭೆಯಲ್ಲಿ ಸ್ಪರ್ಧಿಸಿ, ಇಲ್ಲವೇ ಗೆಲ್ಲಿಸಿ; ಸೋತರೆ ತಲೆದಂಡ!

ನನ್ನ ಹೆಸರನ್ನೇ ಶಿಫಾರಸು ಮಾಡಿ ಎಂದು ಮನವಿ

ಬಿಜೆಪಿ ಸಭೆಯ ಬೆನ್ನಲ್ಲೇ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾದ ಪ್ರತಾಪ್‌ ಸಿಂಹ, ಮೈತ್ರಿ ಅಭ್ಯರ್ಥಿಯಾಗಿ ನನ್ನನ್ನೇ ಬೆಂಬಲಿಸಿ, ಹೈಕಮಾಂಡ್‌ ಮಟ್ಟದಲ್ಲೂ ನನ್ನ ಹೆಸರನ್ನೇ ಶಿಫಾರಸು ಮಾಡಿ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ. ಒಕ್ಕಲಿಗ ನಾಯಕ ಹಾಗೂ ಹಿಂದುತ್ವದಲ್ಲಿ ಗುರುತಿಸಿಕೊಂಡಿರುವ ಪ್ರತಾಪ್‌ ಸಿಂಹ ಅವರು ತಮ್ಮ ಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇ ನಿರ್ಮಾಣದಲ್ಲಿ ಅವರು ಮುಖ್ಯ ಪಾತ್ರವನ್ನು ವಹಿಸಿದ್ದರು. ಈಗ ತಮಗೆ ಟಿಕೆಟ್‌ ಕೈತಪ್ಪುವ ಭೀತಿ ಎದುರಾಗಿದ್ದರಿಂದ ಕುಮಾರಸ್ವಾಮಿ ಅವರ ಮೊರೆ ಹೋಗಿದ್ದಾರೆ ಎನ್ನಲಾಗಿದೆ. ಇನ್ನು ಎಚ್‌ಡಿಕೆ ಈ ಸಂಕ್ರಾಂತಿ ಬಳಿಕ ಬಿಜೆಪಿ ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡಲಿದ್ದಾರೆ. ಆಗ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಗ್ಗೆ ಚರ್ಚೆಗೆ ಬಂದರೆ ತಮ್ಮ ಹೆಸರನ್ನೇ ಪ್ರಸ್ತಾಪ ಮಾಡುವಂತೆ ಕೋರಿದ್ದಾರೆ ಎನ್ನಲಾಗಿದೆ.

Exit mobile version