Site icon Vistara News

Lok Sabha Election 2024: 3ನೇ ಬಾರಿ ಮೋದಿ ಪ್ರಧಾನಿ ನಿಶ್ಚಿತ; ಬಿ.ವೈ. ವಿಜಯೇಂದ್ರ

BY Vijayendra in yojana Sabhe

ಬೆಂಗಳೂರು: 2024ರ ಲೋಕಸಭಾ ಚುನಾವಣೆ (Lok Sabha Election 2024) ಸಂಬಂಧ ಬಿಜೆಪಿ (BJP Karnataka) ಭಾರಿ ತಯಾರಿ ಮಾಡಿಕೊಳ್ಳುತ್ತಿದೆ. ಈಗಾಗಲೇ ಹಲವು ತಂತ್ರಗಾರಿಕೆಯಲ್ಲಿ ತೊಡಗಿರುವ ಕಮಲ ಪಡೆ ಈಗ ಯೋಜನಾ ಸಭೆಯನ್ನು ಕೈಗೊಂಡಿದೆ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಮಾಜಿ ಸಿಎಂಗಳಾದ ಬಿ.ಎಸ್. ಯಡಿಯೂರಪ್ಪ (BS Yediyurappa), ‌ಡಿ.ವಿ. ಸದಾನಂದಗೌಡ (DV Sadananda Gowda), ಬಸವರಾಜ ಬೊಮ್ಮಾಯಿ (Basavaraj Bommai), ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi), ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra), ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ (R Ashok), ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ (Kota Shrinivas Poojari) ಈ ಸಭೆಯಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಮಾತನಾಡಿದ ಬಿ.ವೈ. ವಿಜಯೇಂದ್ರ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದಲ್ಲಿ ಬರಲಿದೆ. ಇದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ. ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿ ಆಗುವುದನ್ನು ಯಾವ ದುಷ್ಟ ಶಕ್ತಿಯಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಸಭೆಯಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕೆಲವೇ ತಿಂಗಳಲ್ಲಿ ಲೋಕಸಭಾ ಚುನಾವಣೆಯನ್ನು ಎದುರಿಸುತ್ತಿದ್ದೇವೆ. ಇಡೀ ವಾತಾವರಣ ಬಿಜೆಪಿ ಪರವಾಗಿದೆ. ಪಂಚ ರಾಜ್ಯಗಳ ಚುನಾವಣೆಗಳ ಫಲಿತಾಂಶ ನೋಡಿದರೆ ನಮ್ಮ ಪಕ್ಷಕ್ಕೆ ಅನುಕೂಲಕರವಾಗಿದೆ. ದೇಶದಲ್ಲಿ ಕಾಂಗ್ರೆಸ್ ಮತ್ತೆ ಮೇಲೇಳುತ್ತದೆ ಎಂಬ ಚರ್ಚೆ ಇತ್ತು. ಆದರೆ, ಈ ಫಲಿತಾಂಶವು ಕಾಂಗ್ರೆಸ್‌ ಹಾಗೂ ಅದರ ಮಿತ್ರಪಕ್ಷಗಳಿಗೆ ಮರ್ಮಾಘಾತವನ್ನುಂಟು ಮಾಡಿದೆ. ಯಾರೂ ಕೂಡ ಊಹಿಸದ ರೀತಿಯಲ್ಲಿ ಬಿಜೆಪಿಗೆ ಗೆಲುವು ಸಿಕ್ಕಿದೆ. ಈ ಮೂಲಕ ರಾಜ್ಯ ಹಾಗೂ ದೇಶದ ಜನತೆಗೆ ಸ್ಪಷ್ಟ ಸಂದೇಶ ಸಿಕ್ಕಿದೆ. ದೇಶದ ಜನತೆ ಕಾಂಗ್ರೆಸ್ ಗಿಮಿಕ್ ಗ್ಯಾರಂಟಿಯನ್ನು ನಂಬಲ್ಲ ಎಂಬ ಸಂದೇಶವನ್ನು ಈ ಮೂಲಕ ರವಾನೆ ಮಾಡಿದ್ದಾರೆ. ದೇಶ ಅಭಿವೃದ್ಧಿ ಮಾಡುವ ಪ್ರಧಾನಿ ನರೇಂದ್ರ ಮೋದಿ ಗ್ಯಾರಂಟಿಯೇ ಪಕ್ಕಾ ಎಂಬುದು ಈ ಮೂಲಕ ಸಾಬೀತಾಗಿದೆ ಎಂದು ಹೇಳಿದರು.

BY Vijayendra in yojana Sabhe

ಆಡಳಿತದಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರ ವಿಫಲ

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ವಿಫಲ ನೀತಿಯಿಂದ ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಕುಸಿದಿದೆ. ಮತ್ತೊಂದು ಕಡೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸಂಪನ್ಮೂಲ ಕ್ರೋಢೀಕರಣದಲ್ಲಿ ವಿಫಲವಾಗಿದೆ. ವಿತ್ತ ಸಚಿವರಾಗಿ 14 ಬಾರಿ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರ ಆಡಳಿತದಲ್ಲಿ ಎಲ್ಲವೂ ಸಂಪೂರ್ಣ ವಿಫಲವಾಗಿದೆ ಎಂದು ಬಿ.ವೈ. ವಿಜಯೇಂದ್ರ ಹೇಳಿದರು. ‌

ಜನರಿಂದ ಸರ್ಕಾರಕ್ಕೆ ಹಿಡಿಶಾಪ

ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದೆ. ಆದರೆ, ರಾಜ್ಯ ಸರ್ಕಾರ ಯಾವುದೇ ರೀತಿಯ ಪರಿಹಾರ ನೀಡಿಲ್ಲ. ಜನರ, ರೈತರ ನೆರವಿಗೆ ಧಾವಿಸುವುದು ಬಿಟ್ಟು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಯುತ್ತಿದೆ. ಉತ್ತರ ಕರ್ನಾಟಕದಲ್ಲಿ ಬಡವರು ಮನೆ ಕಳೆದುಕೊಂಡಾಗ ಅಂದು ಸಿಎಂ ಆಗಿದ್ದ ಬಿ.ಎಸ್. ಯಡಿಯೂರಪ್ಪ‌ ಅವರು ಒಂದು ಕ್ಷಣವೂ ಯೋಚಿಸದೆ ಪರಿಹಾರವನ್ನು ನೀಡಿದ್ದರು. ಬಸವರಾಜ ಬೊಮ್ಮಾಯಿ ಅವರು ಸಿಎಂ ಇದ್ದಾಗ ಎನ್‌ಡಿಆರ್‌ಎಫ್‌ ಮಾರ್ಗಸೂಚಿಗಿಂತ ಹೆಚ್ಚು ಪರಿಹಾರ ನೀಡಿದ್ದರು. ಆದರೆ, ಇಂದು ಜನರು ಈ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ ಎಂದು ಬಿ.ವೈ. ವಿಜಯೇಂದ್ರ ತಿಳಿಸಿದರು.

BY Vijayendra in yojana Sabhe

ಶ್ರೀರಾಮನನ್ನು ಒಪ್ಪದ ಕಾಂಗ್ರೆಸ್

ಜನವರಿ 22ರಂದು ಕೋಟ್ಯಂತರ ಜನ ಹಿಂದುಗಳು ಅಯೋಧ್ಯೆಯ ರಾಮಜನ್ಮಭೂಮಿಗೆ ಬರಲಿದ್ದಾರೆ. ಅಂದು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಆಗುತ್ತಿದೆ. ಈ ಸಂದರ್ಭದಲ್ಲಿ ದೇಶದಲ್ಲಿ ಹಬ್ಬದ ವಾತಾವರಣ ಇದೆ. ಮನೆ ಮನೆಗೆ ಪವಿತ್ರ ಮಂತ್ರಾಕ್ಷತೆ ಕೊಡುವ ಕೆಲಸವನ್ನು ಮಾಡಲಾಗುತ್ತಿದೆ. ಮನೆಗಳಲ್ಲಿ ದೀಪ ಹಚ್ಚುವಂತೆ ಮನವಿ ಮಾಡಿದಾಗ ಜನರು ಖುಷಿಯಿಂದ ಒಪ್ಪಿದ್ದಾರೆ. ಆದರೆ, ಈ ಕಾಂಗ್ರೆಸ್‌ನವರು ಭಗವಾನ್ ಶ್ರೀರಾಮನ ಒಪ್ಪಲು ತಯಾರಿಲ್ಲ. ಕಾಂಗ್ರೆಸ್‌ನವರು ವಿಧಿ ಇಲ್ಲದೆ ಕರ್ನಾಟಕದಲ್ಲಿ ಸುತ್ತೋಲೆ ಹೊರಡಿಸಿ ಪೂಜೆ ಮಾಡಲು ಹೇಳಿದ್ದಾರೆ. ಇದು ಶ್ರೀ ರಾಮನಿಗೆ ಸಂದ ಜಯ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.

ಇದನ್ನೂ ಓದಿ: KSRTC Ticket :‌ KSRTC ಪ್ರಯಾಣಕ್ಕೆ ಹಣವೇ ಬೇಡ, ಶೀಘ್ರವೇ ಬರಲಿದೆ ಕ್ಯಾಶ್‌ ಲೆಸ್‌ ಟಿಕೆಟಿಂಗ್‌!

ಯೋಜನಾ ಸಭೆ ಇನ್ನಷ್ಟು ನಡೆಯಲಿದೆ

ಲೋಕಸಭೆಯಲ್ಲಿ ಬಿಜೆಪಿ ಪ್ರಚಂಡ ಬಹುಮತದಿಂದ ಗೆಲ್ಲಲಿದೆ. ಕಾಂಗ್ರೆಸ್‌ಗೆ ಹಿಡಿಶಾಪ ಹಾಕಲಿದೆ. ಬಿಜೆಪಿಯಿಂದ ಲೋಕಸಭಾ ಚುನಾವಣೆ ದೃಷ್ಟಿಯಿಂದ ತಯಾರಿ ನಡೆಯುತ್ತಿದೆ. ಲೋಕಸಭಾ ಚುನಾವಣಾ ದೃಷ್ಟಿಯಿಂದ ತಯಾರಾಗಲಾಗುತ್ತಿದೆ. ಬಿಜೆಪಿಯ ನಮ್ಮ ಎಲ್ಲ ಪಕ್ಷದ ಮುಖಂಡರ ನೇತೃತ್ವದಲ್ಲಿ ಯೋಜನಾ ಸಭೆ ಇನ್ನಷ್ಟು ನಡೆಯಲಿದೆ. ಎಲ್ಲರ ಮಾರ್ಗದರ್ಶನದಲ್ಲಿ ಎಲ್ಲ 28 ಲೋಕಸಭಾ ಕ್ಷೇತ್ರವನ್ನೂ ಗೆಲ್ಲೋಣ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.

Exit mobile version