ಬೆಂಗಳೂರು: ಸದ್ಯ ಕರ್ನಾಟಕ ರಾಜಕೀಯದಲ್ಲಿ (Karnataka Politics) “ಮೈತ್ರಿ” ಬಿರುಗಾಳಿ ಎದ್ದಿದೆ. ಮುಂದಿನ ಲೋಕಸಭಾ ಚುನಾವಣೆಯ (Lok Sabha Election 2024) ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ (BJP-JDS alliance) ಮಾಡಿಕೊಳ್ಳುತ್ತಿದೆ. 4 ಲೋಕಸಭಾ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡಲಾಗುವುದು ಎಂಬ ಬಗ್ಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (Former CM BS Yediyurappa) ನೀಡಿದ ಹೇಳಿಕೆ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಈಗ ಇದರ ಬಗ್ಗೆ ಮೂರು ಪಕ್ಷಗಳ ನಾಯಕರು ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇನ್ನು ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್ ಪಾಲಾದರೆ, ಈಗಾಗಲೇ ಬಿಜೆಪಿಯನ್ನು ಬೆಂಬಲಿಸಿರುವ ಸುಮಲತಾ ಅಂಬರೀಷ್ (Sumalatha Ambareesh) ಅವರ ಕಥೆ ಏನು? ಅವರು ಅತಂತ್ರವಾಗಲಿದ್ದಾರಾ? ಎಂಬ ಚರ್ಚೆ ಹುಟ್ಟಿಕೊಂಡಿತ್ತು. ಈಗ ಈ ಬಗ್ಗೆ ಮಾಜಿ ಸಿಎಂ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ (Former CM HD Kumaraswamy) ಪ್ರತಿಕ್ರಿಯೆ ನೀಡಿದ್ದು, “ಈಗಲೇ ಊಹೆ ಮಾಡಿಕೊಂಡರೆ ಹೇಗೆ?” ಎಂದು ಪ್ರಶ್ನೆ ಮಾಡಿದ್ದಾರೆ.
ಜೆಡಿಎಸ್ – ಬಿಜೆಪಿ ಮೈತ್ರಿ ಒಪ್ಪಂದದಂತೆ ಬೆಂಗಳೂರು ಗ್ರಾಮಾಂತರ, ಕೋಲಾರ, ಹಾಸನ ಹಾಗೂ ಮಂಡ್ಯ ಕ್ಷೇತ್ರವನ್ನು ದಳಕ್ಕೆ ಬಿಟ್ಟುಕೊಡಲು ಕೇಂದ್ರ ಸಚಿವ ಅಮಿತ್ ಶಾ ಒಪ್ಪಿಕೊಂಡಿದ್ದಾರೆ ಎಂದು ಯಡಿಯೂರಪ್ಪ ಹೇಳಿದ್ದರು. ಹಾಗಾಗಿ ಮಂಡ್ಯ ಜೆಡಿಎಸ್ ಪಾಲಾದರೆ, ಹಾಲಿ ಸಂಸದೆಯಾಗಿರುವ ಸುಮಲತಾ ಅಂಬರೀಶ್ ಅವರು ಅತಂತ್ರರಾಗುತ್ತಾರೆ ಎಂಬ ಬಗ್ಗೆ ಚರ್ಚೆ ನಡೆಸಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಸೀಟು ಹಂಚಿಕೆ ಬಗ್ಗೆ ಚರ್ಚೆಯೇ ಆಗಿಲ್ಲ. ಇದೆಲ್ಲವೂ ಪ್ರಾಥಮಿಕ ಹಂತದ ಚರ್ಚೆಯಾಗಿದೆ. ಅವರು ಅತಂತ್ರವಾದರು, ಇವರು ಅತಂತ್ರವಾದರು ಎಂದು ಊಹೆ ಮಾಡಿಕೊಂಡರೇ ಹೇಗೆ? ಎಂದು ಪ್ರಶ್ನೆ ಮಾಡಿದ್ದಾರೆ.
ಮೈತ್ರಿ ಬಗ್ಗೆ ಚರ್ಚೆ ಪ್ರಾಥಮಿಕ ಹಂತದಲ್ಲಿದೆ. ಅದು ಬಿಟ್ಟರೆ ಸೀಟು ಹಂಚಿಕೆ ಬಗ್ಗೆ ಇನ್ನೂ ಚರ್ಚೆ ನಡೆದಿಲ್ಲ. ಮೊದಲು ನಾನು ರಾಜ್ಯದ ಜನರ ಸಮಸ್ಯೆ ಬಗ್ಗೆ ಚರ್ಚೆ ಮಾಡಬೇಕು. ರೈತರು ಸಂಕಷ್ಟದಲ್ಲಿದ್ದಾರೆ. ಅಘೋಷಿತ ಲೋಡ್ ಶೆಡ್ಡಿಂಗ್ ನಡೆಯುತ್ತಿದೆ. ರೈತರ ಬಗ್ಗೆ ನನಗೆ ಚಿಂತೆ – ಚಿಂತನೆ ಇದೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಇದನ್ನೂ ಓದಿ: Road Accident : ಇಬ್ಬರ ಜೀವ ತೆಗೆದ ನಾಯಿ! ಕಾರು ಪಲ್ಟಿಯಾಗಿ ಶಿಕ್ಷಕ ಸಾವು, ಲಾರಿ ಹರಿದು ಮಹಿಳೆ ಮೃತ್ಯು
ಶರಣುಗೌಡರ ನಮ್ಮ ಹುಡುಗ; ಸರಿಪಡಿಸೋಣ
ಬಿಜೆಪಿ- ಜೆಡಿಎಸ್ ಮೈತ್ರಿಗೆ ಸಹಮತವಿಲ್ಲ ಎಂದು ಶಾಸಕ ಶರಣುಗೌಡ ಕಂದಕನೂರು ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಅವರ ಭಾವನೆಯನ್ನು ಸರಿಪಡಿಸೋಣ. ಹಿಂದಿನ ಕೆಲವು ಘಟನೆಗಳಿಂದ ಅವರು ಇಂತಹ ಹೇಳಿಕೆಯನ್ನು ನೀಡಿದ್ದಾರೆ. ಅದೆಲ್ಲವನ್ನೂ ಸರಿಪಡಿಸೋಣ. ಶರಣುಗೌಡ ನಮ್ಮನೆ ಹುಡುಗ. ಅವರ ಹೇಳಿಕೆ ಸ್ಫೋಟ ಆಗುವಂಥದ್ದೇನಿಲ್ಲ. ನಮಗೆ ಹಿಂದೆ ಅನ್ಯಾಯ ಆಗಿದೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ಹೇಳಿದ್ದಾರೆ. ಯಾರು ಯಾರ ಜತೆ ಕುಳಿತು ಮಾತಾಡಿದ್ದಾರೆ? ಅದು ದೊಡ್ಡ ವಿಷಯವಲ್ಲ, ಎಲ್ಲರೂ ನಮ್ಮ ಮಕ್ಕಳಾಗಿದ್ದು, ನಾವದನ್ನು ಸರಿಪಡಿಸುತ್ತೇವೆ ಎಂದು ಹೇಳಿದರು.