ಬೆಂಗಳೂರು: ಲೋಕಸಭಾ ಚುನಾವಣೆಗೆ (Lok Sabha Election 2024) ಸಂಬಂಧಿಸಿ ಬಿಜೆಪಿ ಈಗಾಗಲೇ 20 ಅಭ್ಯರ್ಥಿಗಳನ್ನು ಫೈನಲ್ ಮಾಡಿದೆ. ಇನ್ನು ಉಳಿದಿರುವುದು ಜೆಡಿಎಸ್‌ಗೆ ನೀಡಬೇಕಾಗಿರುವ ಮೂರು ಕ್ಷೇತ್ರಗಳು ಮತ್ತು ಬಿಜೆಪಿ ಉಳಿಸಿಕೊಳ್ಳಬೇಕಾಗಿರುವ ಮೂರು ಕ್ಷೇತ್ರಗಳು. ಅದರಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ (Chikkaballapur Constituency) ಟಿಕೆಟ್ ಈಗ ಭಾರಿ ಚರ್ಚೆಗೆ ಕಾರಣವಾಗಿದೆ. ತಮ್ಮ ಮಗ ಅಲೋಕ್ ವಿಶ್ವನಾಥ್‌ಗೆ (Alok Vishwanath) ಟಿಕೆಟ್ ಕೊಡಿಸಲು ಶತಪ್ರಯತ್ನ ನಡೆಸುತ್ತಿರುವ ಯಲಹಂಕ ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ (SR Vishwanath) ಅವರು, ಒಂದು ವೇಳೆ ಮಗನಿಗೆ ಕೊಡಲು ಸಾಧ್ಯವಿಲ್ಲ ಎಂದಾದರೆ ನನಗೇ ಕೊಡಿ ಎಂದು ಹಠ ಹಿಡಿದಿದ್ದಾರೆ.
ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ಮೊದಲ ಪಟ್ಟಿಯಲ್ಲಿ ಫೈನಲ್ ಆಗದೆ ಇರಲು ಎರಡು ಪ್ರಮುಖ ಕಾರಣಗಳಿದ್ದವು. ಒಂದು ಮಾಜಿ ಸಚಿವ ಡಾ. ಕೆ. ಸುಧಾಕರ್ (Dr K Sudhakar) ಮತ್ತು ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಪುತ್ರ ಅಲೋಕ್ ವಿಶ್ವನಾಥ್ ಮಧ್ಯೆ ಎದ್ದಿರುವ ಟಿಕೆಟ್ ಪೈಪೋಟಿ.
ಎರಡನೆಯದು, ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್‌ಗಾಗಿ ಹೋರಾಟ ನಡೆಸುತ್ತಿರುವ ಹಾಲಿ ಸಂಸದೆ ಸುಮಲತಾ ಅವರನ್ನು ಸಮಾಧಾನ ಮಾಡಲು ಚಿಕ್ಕಬಳ್ಳಾಪುರ ಕ್ಷೇತ್ರವನ್ನು ನೀಡುವ ಬಗ್ಗೆ ಚಿಂತನೆಯೂ ನಡೆದಿತ್ತು. ಆದರೆ, ಸುಮಲತಾ ಅವರು ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಒಪ್ಪುತ್ತಿಲ್ಲ ಎನ್ನಲಾಗಿದೆ. ಹೈಕಮಾಂಡ್ ಕೂಡಾ ನೀಡಲು ಮನಸು ಮಾಡುತ್ತಿಲ್ಲ.
ಹೀಗಾಗಿ ಮತ್ತೆ ಡಾ. ಕೆ. ಸುಧಾಕರ್ ಮತ್ತು ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಪುತ್ರ ಅಲೋಕ್ ವಿಶ್ವನಾಥ್ ಮಧ್ಯೆಯೇ ಪೈಪೋಟಿ ಶುರುವಾಗಿದೆ. ಮಂಗಳವಾರ ರಾತ್ರಿ ನಡೆದ ಉನ್ನತ ಮಟ್ಟದ ಮಾತುಕತೆಯಲ್ಲಿ ಚಿಕ್ಕಬಳ್ಳಾಪುರದ ಟಿಕೆಟ್ ಡಾ. ಕೆ. ಸುಧಾಕರ್ ಪಾಲಾಗಿದೆ ಎಂಬ ಸುದ್ದಿ ಹರಡಿದೆ. ಆದರೆ, ಇನ್ನೊಂದು ವರದಿ ತರಿಸಿಕೊಂಡು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಹೈಕಮಾಂಡ್ ನಿರ್ಧರಿಸಿದೆ ಎನ್ನಲಾಗಿದೆ.
ಈ ಹಂತದಲ್ಲಿ ವರಸೆ ಬದಲಿಸಿರುವ ಎಸ್.ಆರ್. ವಿಶ್ವನಾಥ್ ತಾನೇ ಅಭ್ಯರ್ಥಿಯಾಗಲು ಸಿದ್ಧ ಎಂದು ಘೋಷಿಸಿದ್ದಾರೆ.
ಇದನ್ನೂ ಓದಿ : Lok Sabha Election 2024 : ಬಿಜೆಪಿಯ 2ನೇ ಪಟ್ಟಿ 22ರಂದು ಘೋಷಣೆ; ಈಶ್ವರಪ್ಪ ಬಗ್ಗೆ ಮಾತಿಲ್ಲ ಎಂದ BSY
ವಿಮಾನ ನಿಲ್ದಾಣದಲ್ಲಿ ಎಸ್.ಆರ್. ವಿಶ್ವನಾಥ್ ಹೇಳಿದ್ದೇನು?
ಟಿಕೆಟ್ ವಿಚಾರದಲ್ಲಿ ದಿಲ್ಲಿಗೆ ಹೋಗಿದ್ದ ಯಲಹಂಕ ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ಅವರು ಮರಳಿ ಬರುವ ದಾರಿಯಲ್ಲಿ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ವಿಸ್ತಾರ ನ್ಯೂಸ್ ಜತೆಗೆ ಮಾತನಾಡಿದರು.
ʻʻಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ನಾನು ಸಹ ಅಭ್ಯರ್ಥಿ. ನನ್ನ ಮಗ ಅಲೋಕ್ ವಿಶ್ವನಾಥ್‌ಗೆ ಕೊಡಲ್ಲ ಅಂದ್ರೆ ನನಗೆ ಟಿಕೆಟ್ ಕೊಡಲಿ.ʼʼ ಎಂದು ಹೇಳುವ ಮೂಲಕ ಶಾಸಕ ಎಸ್.ಆರ್ ವಿಶ್ವನಾಥ್ ಅವರು ಹೊಸ ಬಾಂಬ್ ಸಿಡಿಸಿದ್ದಾರೆ.
ಮಾಜಿ ಸಚಿವರಾಗಿರುವ ಕೆ. ಸುಧಾಕರ್ ವಿರುದ್ಧ ಈಗಾಗಲೇ ಜಿಲ್ಲೆಯಲ್ಲಿ ಅಪಸ್ವರ ಇದೆ. ಅವರಿಗೆ ಟಿಕೆಟ್ ಕೊಡಬಾರದು ಅಂತ ಸಾಕಷ್ಟು ಜನ ಹೇಳ್ತಿದ್ದಾರೆ. ಸುಧಾಕರ್ ಅವರು ನನ್ನ ಬಳಿಯೂ ಮಾತನಾಡಿ ನನಗೆ ಯಾರು ಗೌರವ ಕೊಡ್ತಿಲ್ಲ, ಯಾರೂ ಕರೆ ಮಾಡ್ತಿಲ್ಲ. ನಾಲ್ಕು ವರ್ಷ ಸಂಸದನಾಗಿರ್ತೀನಿ ಅಂತ ಹೇಳಿದ್ದಾರೆ ಎಂದು ತಿಳಿಸಿದರು.
ನನ್ನ ಮಗ ಅಲೋಕ್ ವಿಶ್ವನಾಥ್ ಆರು ತಿಂಗಳಿನಿಂದಲೇ ತಯಾರಿ ಶುರು ಮಾಡಿದ್ದಾರೆ. ನನ್ನ ಮಗ ಇನ್ನೂ 25 ವರ್ಷ ರಾಜಕೀಯ ಮಾಡಬೇಕಿದೆ. ಹೀಗಾಗಿ ಅಲೋಕ್ ಗೆ ಟಿಕೆಟ್ ಸಿಗಬೇಕು ಅಂತ ಸರ್ವೇಯಲ್ಲೂ ಮುಖಂಡರು ಹೇಳಿದ್ದಾರೆ ಎಂದು ಹೇಳಿದ ವಿಶ್ವನಾಥ್, ಅಲೋಕ್‌ಗೆ ಟಿಕೆಟ್ ಕೊಡಲ್ಲ ಅಂದ್ರೆ ನನಗೆ ಕೊಡಲಿ. ನಾನು ಸ್ವರ್ಧೆ ಮಾಡ್ತೀನಿ. ನಮ್ಮ ಕ್ಷೇತ್ರವನ್ನು ಬೇರೊಬ್ಬರಿಗೆ ಬಿಟ್ಟು ಕೊಡಲು ನಾವು ತಯಾರಿಲ್ಲ. ನಮ್ಮ ಯಲಹಂಕ ಒಂದು ಕ್ಷೇತ್ರದಲ್ಲೆ ಎರಡು ಕ್ಷೇತ್ರಗಳಷ್ಟು ಮತಗಳಿವೆ. ಹೈಕಮಾಂಡ್ ಸೂಕ್ತ ನಿರ್ಧಾರ ತೆಗೆದುಕೊಳ್ತಾರೆ ಅನ್ನೂ ವಿಶ್ವಾಸವಿದೆ ಎಂದು ಹೇಳಿದರು.