ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಲೋಕಸಭಾ ಕ್ಷೇತ್ರದ (Lok Sabha Election 2024) ಕಾಂಗ್ರೆಸ್ ಅಭ್ಯರ್ಥಿಯಾಗಿ (Chikkodi Congress Candidate) ಆಯ್ಕೆಯಾಗಿರುವ ಪ್ರಿಯಾಂಕಾ ಜಾರಕಿಹೊಳಿ (Priyanka Jarkiholi) ಯಾರು ಎನ್ನುವುದಕ್ಕೆ ಇಂಟ್ರೊಡಕ್ಷನ್ ಬೇಕಾಗಿಲ್ಲ. ಯಾಕೆಂದರೆ ಅವರ ತಂದೆ ಸತೀಶ್ ಜಾರಕಿಹೊಳಿ (Sathish Jarkiholi) ಬೆಳಗಾವಿ ರಾಜಕಾರಣದ (Belagavi politics) ಶಕ್ತಿಶಾಲಿ ಹೆಸರು. ಹಾಗಂತ, ಪ್ರಿಯಾಂಕಾ ಜಾರಕಿಹೊಳಿ ಕೇವಲ ಅಪ್ಪನ ನೆರಳಲ್ಲೇ ಬೆಳೆದು ಬಂದವರಲ್ಲ. ರಾಜಕಾರಣಿಯ ಮನೆಯಲ್ಲಿ ಹುಟ್ಟಿದ ಮಾತ್ರಕ್ಕೆ ಎಲ್ಲರೂ ಚತುರ ರಾಜಕಾರಣಿಗಳಾಗುವುದಿಲ್ಲ. ತಮ್ಮದೇ ಆದ ಪ್ರತಿಭೆ, ಶಕ್ತಿಯನ್ನು ಹೊಂದಿರಬೇಕಾಗುತ್ತದೆ. ಹಾಗೆ ತಮ್ಮದೇ ಆದ ಶೈಲಿಯ ಮೂಲಕ ರಾಜಕಾರಣದ ಪಟ್ಟುಗಳನ್ನು ಕಲಿತುಕೊಂಡು ಅಖಾಡಕ್ಕೆ ಇಳಿದಿದ್ದಾರೆ ಪ್ರಿಯಾಂಕಾ ಜಾರಕಿಹೊಳಿ.
ಪ್ರಿಯಾಂಕಾ ಜಾರಕಿಹೊಳಿಗೆ ಆ ಹೆಸರು ಇಟ್ಟಿದ್ದು ಯಾಕೆ?
ಪ್ರಿಯಾಂಕಾ ಜಾರಕಿಹೊಳಿ ಅವರು ರಾಜ್ಯ ಸರ್ಕಾರದಲ್ಲಿ ಸಚಿವರಾಗಿರುವ ಸತೀಶ್ ಜಾರಕಿಹೊಳಿ ಮತ್ತು ಶಕುಂತಲಾ ದಂಪತಿಯ ಪುತ್ರಿ. ಪ್ರಿಯಾಂಕಾ ಅವರಿಗೆ ರಾಹುಲ್ ಜಾರಕಿಹೊಳಿ ಎಂಬ ತಮ್ಮ ಇದ್ದಾರೆ.
ಸತೀಶ್ ಜಾರಕಿಹೊಳಿ ಅವರು ತಮ್ಮ ಮಕ್ಕಳಿಗೆ ಪ್ರಿಯಾಂಕಾ ಮತ್ತು ರಾಹುಲ್ ಎಂಬ ಹೆಸರನ್ನು ಇಟ್ಟಿರುವುದರ ಹಿಂದೆ ರಾಜೀವ್ ಮತ್ತು ಸೋನಿಯಾ ಗಾಂಧಿ ಅವರ ಪ್ರಭಾವವಿದೆ ಎನ್ನಲಾಗಿದೆ. ಸೋನಿಯಾ ಗಾಂಧಿ ಅವರ ಮಕ್ಕಳಾದ ಪ್ರಿಯಾಂಕಾ ಮತ್ತು ರಾಹುಲ್ ಅವರ ಹೆಸರನ್ನೇ ಇವರಿಗೂ ಇಟ್ಟಿದ್ದಾರೆ.
ಪ್ರಿಯಾಂಕಾ ಜಾರಕಿಹೊಳಿಗೆ ವಯಸ್ಸೆಷ್ಟು? ಓದಿದ್ದೇನು?
ಚಿಕ್ಕೋಡಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಈಗ 27 ವರ್ಷ. ಅವರು ಹುಟ್ಟಿದ್ದು 1997ರ ಏಪ್ರಿಲ್ 16ರಂದು. ಪ್ರಿಯಾಂಕಾ ಓದಿದ್ದು ಎಂಬಿಎ.
ಪ್ರಿಯಾಂಕಾ ಜಾರಕಿಹೊಳಿ 14 ಕಂಪನಿಗಳ ನಿರ್ದೇಶಕಿ
ಪ್ರಿಯಾಂಕಾ ಜಾರಕಿಹೊಳಿ ಬೆಳಗಾವಿ ರಾಜಕಾರಣದ ದೊಡ್ಮನೆ ಹುಡುಗಿಯಾದರೂ ಆಕೆ ಮನೆಯ ಮುದ್ದಿನ ಮಗಳಾಗಿ ಮನೆಯೊಳಗೇ ಬೆಳೆದಿಲ್ಲ. ಎಂಬಿಎ ವಿದ್ಯಾಭ್ಯಾಸದ ಮೂಲಕ ಅವರು ವ್ಯವಹಾರ ಚತುರತೆಯನ್ನೂ ಬೆಳೆಸಿಕೊಂಡಿದ್ದಾರೆ. ಸತೀಶ ಶುಗರ್ ಲಿಮಿಟೆಡ್, ಬೆಳಗಮ್ ಶುಗರ್ ಪ್ರೈವೇಟ್ ಲಿಮಿಟೆಡ್, ಗಾಡಿಗಾಂವ್ ರೆಸಾರ್ಟ್ ಪ್ರೈವೇಟ್ ಲಿಮಿಟೆಡ್, ವೆಸ್ಟರ್ನ್ ಗ್ರಾಟ್ಸ್ ಇನ್ಫ್ರಾ ಲಿಮಿಟೆಡ್, ನೇಚರ್ ನೆಸ್ಟ್ ಹಾರ್ಟಿಕಲ್ಚರ್, ಆಂಡ್ ಫಾರ್ಮ್ಸ್ ಪ್ರೈವೇಟ್ ಲಿಮಿಟೆಡ್ ಸೇರಿ 14 ಸಂಘ ಸಂಸ್ಥೆಗಳ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದಾರೆ.
Lok Sabha Election 2024 : ಪ್ರಿಯಾಂಕಾ ಜಾರಕಿಹೊಳಿಗೆ ರಾಜಕೀಯ ಗೊತ್ತಾ?
ಪ್ರಿಯಾಂಕಾ ಜಾರಕಿಹೊಳಿ ಅಪ್ಪನ ರಾಜಕೀಯ ನೋಡುತ್ತಾ ಬೆಳೆದವರು. ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವ ಪಡೆದಿದ್ದಾರೆ. ಯಾವುದೇ ಹುದ್ದೆಗಳಲ್ಲಿ ಇಲ್ಲ. ಆದರೆ, 2018ರಿಂದಲೇ ತಂದೆ ಸತೀಶ್ ಅವರ ಜತೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದರು.
2018ರ ಚುನಾವಣೆಯ ಸಮಯದಲ್ಲೇ ಅಪ್ಪನ ಪರವಾಗಿ ಪ್ರಚಾರ ಮಾಡಿದ್ದರು. 2021ರಲ್ಲಿ ನಡೆದ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿ ಅವರು ಸ್ಪರ್ಧಿಸಿದಾಗ ಅವರ ಸಾಮಾಜಿಕ ಜಾಲತಾಣ ಪ್ರಚಾರದ ಹೊಣೆಯನ್ನು ಸಂಪೂರ್ಣವಾಗಿ ಹೊತ್ತುಕೊಂಡಿದ್ದವರು ಪ್ರಿಯಾಂಕಾ. ಅದರ ಜತೆಗೆ ತಮ್ಮ ರಾಹುಲ್ ಅವರನ್ನು ಕರೆದುಕೊಡು ಊರೂರು ಸುತ್ತಿದ್ದರು.
ಇದನ್ನೂ ಓದಿ : Congress Candidates List : ಕಾಂಗ್ರೆಸ್‌ನ 17 ಟಿಕೆಟ್ ಘೋಷಣೆ; ರಾಜ್ಯದ ಐವರು ಸಚಿವರ ಮಕ್ಕಳು ಲೋಕ ಕಣಕ್ಕೆ
ಸಿಂಪ್ಲಿಸಿಟಿ ಪ್ರಿಯಾಂಕಾ ವಿಶೇಷತೆ, ಬಡವರ ಪರ ಕಾಳಜಿ
ಪ್ರಿಯಾಂಕಾ ಬಡವರ ಬಗ್ಗೆ ಕಾಳಜಿ ಹೊಂದಿರುವ ಹುಡುಗಿ. ಜನ ಕಲ್ಯಾಣಕ್ಕಾಗಿ ಎನ್‌ಜಿಒಗಳನ್ನು ನಡೆಸುತ್ತಿದ್ದಾರೆ. ಅದರ ಜತೆಗೆ ಪರಿಸರಕ್ಕಾಗಿಯೂ ಎನ್‌ಜಿಒಗಳಿವೆ. ಒಬ್ಬ ಹಿರಿಯ ನಾಯಕರ ಮಗಳಾಗಿದ್ದರೂ ಅವರ ಜನರ ನಡುವೆ ಸಿಂಪಲ್ ಆಗಿ ವ್ಯವಹರಿವುದು ವಿಶೇಷ. ಹೆಚ್ಚು ಒಡವೆ ಧರಿಸದೆ ಸಾಮಾನ್ಯ ದಿರಿಸಿನಲ್ಲೇ ಸಾಮಾಜಿಕವಾಗಿ ಕಾಣಿಸಿಕೊಳ್ಳುವ ಪೀಚುಪೀಚು ಹುಡುಗಿ.
ಅಪ್ಪ ಸತೀಶ್ ಜಾರಕಿಹೊಳಿ ಬಗ್ಗೆ ಅಪಾರ ಗೌರವ
ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಅಪ್ಪ ಸತೀಶ್ ಜಾರಕಿಹೊಳಿ ಅವರ ಬಗ್ಗೆ ಅಪಾರ ಗೌರವ. ಅಪ್ಪಂದಿರ ದಿನಾಚರಣೆ ನಿಮಿತ್ತ ಅವರು ಅನಿಸಿಕೆಯೊಂದನ್ನು ಹಂಚಿಕೊಂಡಿದ್ದರು.
ಅಪ್ಪ ಎಂದರೆ ರಕ್ಷಣೆ, ಅಮ್ಮ ಎಂದರೆ ವ್ಯಾತ್ಸಲ್ಯ ಎಂದೇ ವ್ಯಾಖ್ಯಾನಿಸಲಾಗುವ ಈ ಸಂಬಂಧದ ಬಗ್ಗೆ ಹೇಳುವುದು ಕಷ್ಟವಾದರೂ ಪ್ರತಿ ಮಗು ಅಪ್ಪನೊಂದಿಗೆ ಹೊಂದಿರುವ ಬಾಂಧವ್ಯವನ್ನು ಅನುಭವಕ್ಕೆ ಮಾತ್ರ ನಿಲುಕುವಂತದ್ದು.
ಅಮ್ಮ ಎಂಬ ಪದಕ್ಕಿರುವಷ್ಟೇ ಅನಂತ ವಿಸ್ತಾರ ಅಪ್ಪನೆಂಬ ಪದಕ್ಕೂ ಇದೆ. ಅಪ್ಪನೆಂದರೆ ವಿಶ್ವಾಸ, ಭರವಸೆ. ಜೀವ ಕೊಟ್ಟು, ಜೀವನ ರೂಪಿಸಿದ ಅಪ್ಪ – ಅಮ್ಮಂದಿರ ದಿನ ಒಂದು ದಿನಕ್ಕೆ ಸೀಮಿತವಲ್ಲ. ಈ ಜಗತ್ತು ನಡೆಯುತ್ತಿರುವುದೇ ಅವರಿಂದ.
ಎಲ್ಲ ಅಪ್ಪಂದಿರು ತಮ್ಮ ಮಕ್ಕಳು ಡಾಕ್ಟರ್, ಇಂಜೀನಿಯರ್ ಆಗಬೇಕೆಂಬ ಹಂಬಲ ಇಟ್ಟುಕೊಂಡಿರುವಾಗ ನಮ್ಮ ತಂದೆ ಸಮಾಜ ಸೇವಕರು ಮತ್ತು ರಾಜಕಾರಣಿಯೂ ಹೌದು, ಆದರೆ ಅವರಂತೆ ನಾನು ಕೂಡ ಸಮಾಜ ಸೇವಕನಾಗಬೇಕೆಂಬ ಅವರ ಆಸೆ. ಅವರ ಆಸೆಯಂತೆ ನಾನು ಅದೇ ಸನ್ಮಾರ್ಗದಲ್ಲಿ ನಡೆಯುತ್ತಿದ್ದು ನನಗೂ ಖುಷಿ ನೀಡಿದೆ.
ಒಟ್ಟಾರೇ ಬದುಕು ರೂಪಿಸಿದ, ಜೀವನದ ಪಾಠ ಕಲಿಸಿ ಕಿರು ಬೆರಳ ಹಿಡಿದು ಮುನ್ನಡೆಸಿದ ಅಕ್ಕರೆಯ ಅಪ್ಪನಿಗೊಂದು ನನ್ನ ಕೃತಜ್ಞತೆ ಹಾಗೂ ವಿಶ್ವ ಅಪ್ಪಂದಿರ ದಿನಾಚರಣೆ ಶುಭಾಶಯಗಳು….
ಇಂತಿ ನಿಮ್ಮ ಪ್ರಿಯಾಂಕಾ ಜಾರಕಿಹೊಳಿ, ರಾಹುಲ್ ಜಾರಕಿಹೊಳಿ.