ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಮತ್ತೊಮ್ಮೆ ಅಧಿಕಾರದ ಗದ್ದುಗೆ ಹಿಡಿಯಲು ಮುಂದಾಗಿರುವ ಬಿಜೆಪಿ ಇದಕ್ಕಾಗಿ ಸಾಕಷ್ಟು ಸಿದ್ಧತೆಗಳನ್ನು ನಡೆಸುತ್ತಿದೆ. ಅದರಲ್ಲೂ ದಕ್ಷಿಣ ಭಾರತದ ರಾಜ್ಯಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದು, ಈ ಭಾಗದಲ್ಲಿ ಹೆಚ್ಚಿನ ಸೀಟ್‌ಗಳನ್ನು ಪಡೆದುಕೊಳ್ಳಲು ಕಾರ್ಯತಂತ್ರಗಳನ್ನು ಹೆಣೆಯುತ್ತಿದೆ. ಈ ಸಂಬಂಧ ರಾಜ್ಯಕ್ಕೆ ಭೇಟಿ ನೀಡಿರುವ ಕೇಂದ್ರ ಗೃಹ ಸಚಿವ, ಬಿಜೆಪಿ ನಂಬರ್ 2 ನಾಯಕ, ರಾಜಕೀಯ ಚಾಣಕ್ಯ ಖ್ಯಾತಿಯ ಅಮಿತ್ ಶಾ (Amit Shah) ಅವರು ಮೈಸೂರಿನಲ್ಲಿ ಬಿಜೆಪಿ (BJP Karnataka) ಕೋರ್ ಕಮಿಟಿ ಮೀಟಿಂಗ್ (BJP Core Committee Meeting) ನಡೆಸಿದ್ದಾರೆ. ಅಲ್ಲದೆ, ಅಭ್ಯರ್ಥಿಗಳ ಆಯ್ಕೆ ಮತ್ತು ಮೈತ್ರಿ ವಿಚಾರವಾಗಿ ಚರ್ಚೆ ನಡೆಸಲು ಫೆಬ್ರವರಿ 20, 21ರಂದುಸಭೆಗಳನ್ನು ನಡೆಸಲು ತೀರ್ಮಾನವನ್ನು ಕೈಗೊಂಡಿದ್ದಾರೆ.
ರಾಜ್ಯದ 28 ಲೋಕಸಭಾ ಕ್ಷೇತ್ರಗಳನ್ನು ಮೈತ್ರಿಕೂಟದೊಂದಿಗೆ ಗೆಲುವು ಸಾಧಿಸುವ ಬಗ್ಗೆ ಅಮಿತ್ ಶಾ ಜತೆಗೆ ಭಾನುವಾರ ನಡೆದ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆಗೆ ಬಂದಿದೆ. ಅಲ್ಲದೆ, ಚುನಾವಣೆ ಸಮೀಪ ಬಂದಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಮತ್ತು ಮೈತ್ರಿ ವಿಚಾರದ ಬಗ್ಗೆ ಒಂದು ನಿರ್ಧಾರಕ್ಕೆ ಬರಬೇಕಿದೆ. ಇನ್ನು ಮೈತ್ರಿ ನಿರ್ಧಾರದ ಬಗ್ಗೆ ಸ್ವಪಕ್ಷೀಯರಿಂದ ಅಸಮಾಧಾನದ ಮಾತುಗಳು ಕೇಳಿ ಬರುತ್ತಿರುವ ಬಗ್ಗೆ ಅಮಿತ್ ಶಾ ಸಿಟ್ಟಾಗಿದ್ದಾರೆ ಎನ್ನಲಾಗಿದೆ.
ಬಿಜೆಪಿಯನ್ನು ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಫೆಬ್ರವರಿ 20, 21ರಂದು ಎರಡು ದಿನಗಳ ಕಾಲ ಸಭೆ ನಡೆಸಲು ಅಮಿತ್ ಶಾ ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಅಂದು ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ಅಗರವಾಲ್ ಅವರ ನೇತೃತ್ವದಲ್ಲಿ ಸಭೆಗಳು ನಡೆಯಲಿವೆ. ಅಂದಿನ ಸಭೆಗಳಲ್ಲಿ ಎಲ್ಲ ಲೋಕಸಭಾ ಕ್ಷೇತ್ರದ ಬಗ್ಗೆ ಚರ್ಚೆಯಾಗಲಿದೆ. ಕೋರ್ ಕಮಿಟಿ ಸೇರಿದಂತೆ ಕ್ಲಸ್ಟರ್ ಪ್ರಮುಖರ ಜತೆ ಸಭೆ ನಡೆಸಲು ನಿರ್ಧಾರ ಮಾಡಲಾಗಿದೆ. ಬೆಂಗಳೂರಿನ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಭೆ ನಡೆಸಲು ಮುಹೂರ್ತವನ್ನು ನಿಗದಿ ಮಾಡಲಾಗಿದೆ.
28 ಕ್ಷೇತ್ರವನ್ನೂ ಗೆಲ್ಲುವ ವಿಶ್ವಾಸ
ಸಭೆ ಬಳಿಕ ಮಾತನಾಡಿದ ಮಾಜಿ ಸಚಿವ ಸಿ.ಟಿ. ರವಿ, ಕೋರ್ ಕಮಿಟಿ ಸಭೆ ಮುಗಿದಿದೆ. ಕ್ಲಸ್ಟರ್ ಕಮಿಟಿ ಸಭೆ ನಡೆಯುತ್ತಿದೆ. 28 ಲೋಕಸಭಾ ಕ್ಷೇತ್ರದಲ್ಲಿಯೂ ಎನ್‌ಡಿಎ ಮೈತ್ರಿ ಕೂಟದಿಂದ ಗೆಲ್ಲುವ ಬಗ್ಗೆ ಚರ್ಚೆಯಾಗಿದೆ. ರಾಧಾ ಮೋಹನ್ ಅಗರವಾಲ್ ಅವರ ನೇತೃತ್ವದಲ್ಲಿ ಸಭೆ ನಡೆಯಲಿದೆ. ರೋಡ್ ಮ್ಯಾಪ್ ಸಿದ್ಧಪಡಿಸುವಂತೆ ಸೂಚನೆ ನೀಡಿದ್ದಾರೆ. ಅದರ ಆಧಾರದ ಮೇಲೆ ಸಭೆ ಕೂಡ ನಡೆಯಲಿದೆ. ಲೋಕಸಭಾ ಚುನಾವಣೆ ಘೋಷಣೆ ಆದ ಬಳಿಕವೇ ಅಭ್ಯರ್ಥಿ ಘೋಷಣೆ ಆಗೋದು ಎಂದು ಸಿ.ಟಿ. ರವಿ ತಿಳಿಸಿದರು.
ಕರ್ನಾಟಕದಲ್ಲಿ ಈಗ 26+1 ಸ್ಥಾನ ಬಿಜೆಪಿ ಪಡೆದುಕೊಂಡಿದೆ. ಅಂದರೆ, ಮೈತ್ರಿಕೂಟ ಪಕ್ಷವಾದ ಜೆಡಿಎಸ್ ಸೇರಿ ಈ ಸಂಖ್ಯೆಯನ್ನು ನಾವು ಹೊಂದಿದ್ದೇವೆ. ಒಂದು ಸ್ಥಾನವನ್ನು ಮಾತ್ರ ಕಾಂಗ್ರೆಸ್ ಪಡೆದುಕೊಂಡಿದೆ. ಹೀಗಾಗಿ ಈ ಬಾರಿ ನಾವು 28ಕ್ಕೆ 28 ಕ್ಷೇತ್ರವನ್ನು ಸಹ ಗೆಲ್ಲುವ ವಿಶ್ವಾಸ ಇದೆ ಎಂದು ತಿಳಿಸಿದರು.
ಕರ್ನಾಟಕಕ್ಕೆ ಕೇಂದ್ರದಿಂದ ಕಳೆದ ಹತ್ತು ವರ್ಷದಲ್ಲಿ ನಾಲ್ಕು ಲಕ್ಷದ 91 ಸಾವಿರ ಕೋಟಿ ರೂಪಾಯಿ ಬಂದಿದೆ. ಅವರಿಗೆ ಹೋಲಿಕೆ ಮಾಡಿದರೆ ಮೂರೂವರೆ ಲಕ್ಷ ಕೋಟಿ ರೂಪಾಯಿ ಹೆಚ್ಚಾಗಿ ಬಂದಿದೆ. ಟೂಲ್ ಕಿಟ್ ಆಗಿ ಸಂಚು ಮಾಡಿದ್ದಾರೆ. ಕಾಂಗ್ರೆಸ್ ದೆಹಲಿಯಲ್ಲಿ ಪ್ರತಿಭಟನೆ ಮಾಡಿರುವುದು ಒಂದು ಸಂಚು. ಪ್ರಾದೇಶಿಕತೆಯನ್ನು ಎತ್ತಿ ಕಟ್ಟುವ ಕೆಲಸವನ್ನು ಮಾಡಿದ್ದಾರೆ ಎಂದು ಸಿ.ಟಿ. ಆಕ್ರೋಶವನ್ನು ಹೊರಹಾಕಿದರು.
ಇದನ್ನೂ ಓದಿ: Amit Shah: ಚಾಮುಂಡೇಶ್ವರಿ ಆಶೀರ್ವಾದ ಪಡೆದ ಅಮಿತ್ ಶಾ; ಲೋಕಸಭೆಗೆ ರಣಕಹಳೆ ಊದಿದ ಚಾಣಕ್ಯ!
ಕ್ಷೇತ್ರ ಹಂಚಿಕೆ ಚರ್ಚೆ ಆಗಿಲ್ಲ
ಸೀಟು ಹಂಚಿಕೆ ಬಗ್ಗೆ ಈ ಹಂತದಲ್ಲಿ ಚರ್ಚೆಯಾಗಿಲ್ಲ. ಬಿಜೆಪಿಯ ಆಂತರಿಕ ಸಭೆ ಮಾತ್ರ ನಡೆದಿದೆ. ಪಾಸಿಟಿವ್ ಮತ್ತು ನೆಗೆಟೀವ್ ಮಾತ್ರ ಚರ್ಚೆಯಾಗಿದೆ. ನಮ್ಮ ಸಾಮರ್ಥ್ಯ ಹಾಗೂ ವಿಪಕ್ಷದ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಜೆಡಿಎಸ್ ಈಗ ಎನ್‌ಡಿಎ ಭಾಗವಾಗಿದೆ. ಜೆಡಿಎಸ್‌ನವರನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತೇವೆ. ಮೈತ್ರಿ ಅಭ್ಯರ್ಥಿಯನ್ನು ಕೂಡ ನಾಯಕರು ನಿರ್ಧಾರ ಮಾಡ್ತಾರೆ ಎಂದು ಸಿ.ಟಿ. ರವಿ ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಆರ್‌ಎಸ್‌ಎಸ್ ಮುಖಂಡ ರಾಜೇಶ್, ಮಾಜಿ ಸಚಿವ ಸಿ.ಟಿ.ರವಿ, ಪ್ರತಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೋರ್ ಕಮಿಟಿ ಸಭೆಯಲ್ಲಿ ಭಾಗಿಯಾಗಿದ್ದರು.