ಬೆಂಗಳೂರು: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ (Bangalore North Lok Sabha constituency) ವ್ಯಾಪ್ತಿಯನ್ನು ಗಮನಿಸಿದಾಗ ಕಳೆದ ಚುನಾವಣೆಯಲ್ಲಿ ನಾವು ಸಾಕಷ್ಟು ಮತಗಳನ್ನು ಕಳೆದುಕೊಂಡಿದ್ದೇವೆ. ಕಳೆದುಕೊಂಡಿರುವುದನ್ನು ಈ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ನಾವು ಪಡೆದುಕೊಳ್ಳಬೇಕು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮತ ಹೆಚ್ಚಿಸಿ, ಈ ಕ್ಷೇತ್ರ ಉಳಿಸಿಕೊಳ್ಳುವ ಕೆಲಸ ಮಾಡಬೇಕು. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿಯಿಂದ (BJP Karnataka) ಯಾವುದೇ ಒಂದು ಕಲ್ಲು ನಿಂತರೂ ಗೆಲ್ಲುವ ಕ್ಷೇತ್ರ ಆಗಿದೆ ಎಂದು ಮಾಜಿ ಸಿಎಂ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಡಿ.ವಿ. ಸದಾನಂದಗೌಡ (DV Sadananda Gowda) ಹೇಳಿದರು.
ಮಲ್ಲೇಶ್ವರಂನ ಹವ್ಯಕ ಭವನದಲ್ಲಿ ನಡೆಯುತ್ತಿರುವ ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಡಿ.ವಿ. ಸದಾನಂದಗೌಡ, ನಮ್ಮ ವ್ಯತ್ಯಾಸಗಳು ಏನಿದ್ದರೂ ಅದನ್ನು ಹಿರಿಯರ ಜತೆ ಮಾತನಾಡಿ ಬಗೆಹರಿಸಿಕೊಳ್ಳಬೇಕು. ಸಣ್ಣಪುಟ್ಟ ವಿಷಯಗಳ ಬಗ್ಗೆ ಮಾತನಾಡೋದನ್ನು ಬಿಟ್ಟು ಬಿಡೋಣ. ಲೆಕ್ಕ ಕೊಡುವ ಜವಾಬ್ದಾರಿ ಬೇಡ, ಕೆಲಸ ಮಾಡುವ ಜವಾಬ್ದಾರಿ ಬೇಕು. ಪಕ್ಷದ ಆದೇಶದಂತೆ ಎಲ್ಲರೂ ಕೆಲಸ ಮಾಡಬೇಕು. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿಯಿಂದ ಯಾವುದೇ ಒಂದು ಕಲ್ಲು ನಿಂತರೂ ಗೆಲ್ಲುವ ಕ್ಷೇತ್ರ ಆಗಿದೆ. ಇಡೀ ದೇಶದಲ್ಲಿ ನಂಬರ್ ಒನ್ ಆಗಿ ಜಯಗಳಿಸಲಿದೆ. ನಾವು ಮತ್ತೆ ಒಂದಾಗಿ, ಒಟ್ಟಾಗಿ ಕೆಲಸ ಮಾಡೋಣ. ಹಾಲಿ, ಮಾಜಿ ಆದರೇನೂ, ಮಾಜಿ ಆದರೂ ಹಾಲಿ ಎಂದು ತಿಳಿದುಕೊಂಡು ಪಕ್ಷದ ಗೆಲುವಿಗೆ ಕೆಲಸ ಮಾಡೋಣ ಎಂದು ಹೇಳಿದರು.
ನುಡಿದಂತೆ ನಡೆದಿರೋದು ಮೋದಿ
ಈ ಹಿಂದೆ ರಾಜ್ಯದಲ್ಲಿ ಬಿಜೆಪಿಯಿಂದ ಒಬ್ಬರೇ ಶಾಸಕರಿದ್ದರು. ಅವರು ಬಿ.ಎಸ್. ಯಡಿಯೂರಪ್ಪ ಅವರಾಗಿದ್ದರು. ಅವರ ನಿರಂತರ ಹೋರಾಟದಿಂದ ಪಕ್ಷ ಸಂಘಟಿತವಾಗಿದೆ. ಕರ್ನಾಟಕದಲ್ಲಿ ಯಾವಾಗ ಏನು ಬೇಕಾದರೂ ಅಲ್ಲಾಡಿಸುವ ಪಕ್ಷ ನಮ್ಮ ದಾಗಿದೆ. ಸಿಎಂ ಸಿದ್ದರಾಮಯ್ಯ ಅವರು “ನುಡಿದಂತೆ ನಡೆದಿದ್ದೇವೆ” ಎಂದು ಹೇಳುತ್ತಾರೆ. ಆದರೆ, ನುಡಿದಂತೆ ನಡೆದಿರೋದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವಾಗಿದೆ ಎಂದು ಡಿ.ವಿ. ಸದಾನಂದಗೌಡ ಹೇಳಿದರು.
ಬೆಂಗಳೂರು ಉತ್ತರದಲ್ಲಿ ಹಿನ್ನಡೆ ಆಗಿಲ್ಲ
ಚುನಾವಣೆಯಲ್ಲಿ ನಮಗೆ ಹಿನ್ನಡೆ ಆಗಿದೆ ನಿಜ. ಸಂಘಟನೆಯಿಂದ ಚುನಾವಣೆಯನ್ನು ಗೆಲ್ಲುವುದು ಸಾಧ್ಯವೇ ವಿನಃ ಹಣದಿಂದ ಅಲ್ಲ ಎಂಬುದನ್ನು ನಾವು ತಿಳಿದುಕೊಂಡಿದ್ದೇವೆ. ಇನ್ನು ನಮ್ಮ ರಾಜ್ಯ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ಹಾಗೂ ವಿರೋಧ ಪಕ್ಷದ ನಾಯಕರಾಗಿ ಆರ್. ಅಶೋಕ್ ಅವರು ನೇಮಕವಾದ ಬಳಿಕ ಪಕ್ಷ ಮತ್ತಷ್ಟು ಚುರುಕುಗೊಂಡಿದೆ. ಈಗ ಜನರ ಆಶೀರ್ವಾದ ನಮ್ಮ ಮೇಲಿದೆ. ಅವರ ಆಶೀರ್ವಾದ ನೋಡಿದರೆ ಮುಂದೆ ನಾವು ಅಧಿಕಾರಕ್ಕೆ ಬರೋದು ಖಚಿತ. ರಾಜ್ಯದಲ್ಲಿ ಈಗ ಕಾಂಗ್ರೆಸ್ ಆಡಳಿತವಿರುವ ಅತ್ಯಂತ ಭ್ರಷ್ಟ ಸರ್ಕಾರ ಇದೆ. ಕಾಂಗ್ರೆಸ್ ನಾಯಕರು ಸಹ ದೇಶಕ್ಕೆ ನರೇಂದ್ರ ಮೋದಿ ಬೇಕು ಅಂತ ಹೇಳಿರುವುದನ್ನು ನಾವು ನೋಡಿದ್ದೇವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಹಿನ್ನಡೆ ಆಗಿದ್ದರೂ ಬೆಂಗಳೂರು ಉತ್ತರದಲ್ಲಿ ಹಿನ್ನಡೆ ಆಗಿಲ್ಲ. ನಮ್ಮ ಸ್ವಯಂ ಅಪರಾಧದಿಂದ ಎರಡು ಕ್ಷೇತ್ರಗಳಲ್ಲಿ ಸೋತಿದ್ದೇವೆ ಅಷ್ಟೇ ಎಂದು ಡಿ.ವಿ. ಸದಾನಂದಗೌಡ ಹೇಳಿದರು.
ಮೋದಿ ಚುನಾವಣೆಗಾಗಿ ಗ್ಯಾರಂಟಿ ಯೋಜನೆ ಕೊಡಲ್ಲ: ಹರೀಶ್
ಬೆಂಗಳೂರು ನಗರ ಅಧ್ಯಕ್ಷ ಹರೀಶ್ ಮಾತನಾಡಿ, ಕಾಂಗ್ರೆಸ್‌ನವರು ಚುನಾವಣೆಗಾಗಿ ರಸ್ತೆ ಮಾಡ್ತೀನಿ ಅಂತ ಘೋಷಣೆ ಮಾಡ್ತಾರೆ. ಮುಂದಿನ ಚುನಾವಣೆ ಬರೋವಾಗ ಇಲ್ಲೇ ರೋಡ್ ಮಾಡ್ತೀನಿ ಅಂತಾರೆ. ಮತ್ತೊಂದು ಚುನಾವಣೆ ಬಂದಾಗ ಮಾರ್ಕಿಂಗ್ ಮಾಡ್ತಾರೆ. ಮಗದೊಂದು ಚುನಾವಣೆಗೆ ರಸ್ತೆ ಹಾಕ್ತೀನಿ ಅಂತಾರೆ. ಆದರೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ಮಾಡಿದ ಯೋಜನೆಯನ್ನು ಅವರೇ ಉದ್ಘಾಟನೆ ಮಾಡ್ತಾರೆ. ಇದು ಮೋದಿ ಅವರ ಕೆಲಸ. ಮೋದಿ ಚುನಾವಣೆಗಾಗಿ ಗ್ಯಾರಂಟಿ ಯೋಜನೆ ಕೊಡುವುದಿಲ್ಲ. ಅವರು ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದಾರೆ. ಭಾರತವು ವಿಶ್ವಗುರುವಾಗಿ ಬೆಳೆಯುವಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: HD Kumaraswamy: ಎಚ್‌ಡಿಕೆ ಕೇಸರಿ ಶಾಲು ಧರಿಸಿದ್ದು ತಪ್ಪು ಎಂದ ದೇವೇಗೌಡ; ಗೌಡರ ಸ್ಥಿತಿ ನೋಡಿದರೆ ಭಯವಾಗುತ್ತೆ ಎಂದ ಡಿಕೆಶಿ
ಸಭೆಯಲ್ಲಿ ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ರಾಜೇಶ್, ಶಾಸಕರಾದ ಗೋಪಾಲಯ್ಯ, ಮುನಿರಾಜು, ವಿಶ್ಚನಾಥ್, ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಸೇರಿದಂತೆ ಹಲವು ಪದಾಧಿಕಾರಿಗಳು ಭಾಗಿಯಾಗಿದ್ದರು.