ನವ ದೆಹಲಿ: ಮಹದಾಯಿ ನದಿ ನೀರಿನ ಯೋಜನೆಗೆ (Mahadayi Project) ಸಂಬಂಧಿಸಿದಂತೆ ಗೋವಾ ರಾಜ್ಯ ಸರ್ಕಾರವು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.
ಕರ್ನಾಟಕ ರಾಜ್ಯ ಸರ್ಕಾರವು ಸಲ್ಲಿಸಿದ್ದ ಯೋಜನೆಯ ವಿಸ್ತೃತ ವರದಿಗೆ ಕೇಂದ್ರ ಜಲ ಆಯೋಗ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಗೋವಾ ರಾಜ್ಯ ಸರ್ಕಾರ ಸುಪ್ರೀಂ ಕೊರ್ಟ್‌ನ ಮೆಟ್ಟಿಲೇರಿತ್ತು.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಸಂಜೀವ್ ಖನ್ನಾ ನೇತೃತ್ವದ ದ್ವಿಸದಸ್ಯ ಪೀಠ ಈ ಆದೇಶ ಹೊರಡಿಸಿದೆ. ಇದರಿಂದಾಗಿ ಈ ಯೋಜನೆಗೆ ಅಡ್ಡಗಾಲು ಹಾಕುವ ಗೋವಾದ ಕೊನೆಯ ಪ್ರಯತ್ನವೂ ವಿಫಲವಾದಂತಾಗಿದೆ. ಕಳೆದ ತಿಂಗಳು ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ದೆಹಲಿಗೆ ಉನ್ನತ ಮಟ್ಟದ ನಿಯೋಗ ಕರೆದುಕೊಂಡು ಬಂದು ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾಗಿ ಈ ಯೋಜನೆಯನ್ನು ಸ್ಥಗಿತಗೊಳಿಸಲು ಕರ್ನಾಟಕಕ್ಕೆ ಸೂಚಿಸುವಂತೆ ಕೋರಿದ್ದರು.
ಕಿತ್ತೂರು ಕರ್ನಾಟಕದ ನಾಲ್ಕು ಜಿಲ್ಲೆಗಳ 13 ತಾಲೂಕುಗಳಿಗೆ ನೀರು ಪೂರೈಸುವ ಮಹತ್ವಾಕಾಂಕ್ಷಿ ಈ ಯೋಜನೆಗೆ ಮೊದಲಿನಿಂದಲೂ ಗೋವಾ ಸರ್ಕಾರ ತಡೆಯೊಡ್ಡುವ ಪ್ರಯತ್ನ ಮಾಡುತ್ತಲೇ ಬಂದಿದೆ. ಈ ಯೋಜನೆ ಜಾರಿಗೆ ಬಂದಲ್ಲಿ 1972ರ ವನ್ಯಜೀವಿ ಸಂರಕ್ಷಣೆ ಕಾಯ್ದೆಯನ್ನು ಉಲ್ಲಂಘಿಸಿದಂತಾಗಲಿದೆ ಎಂದು ಗೋವಾ ಸರ್ಕಾರ ವಾದ ಮಂಡಿಸಿತ್ತು.
ಕರ್ನಾಟಕ ನದಿ ನೀರು ತಿರುಗಿಸುವುದರಿಂದ ಮಹದಾಯಿ ಅಭಯಾರಣ್ಯಕ್ಕೆ ತೊಂದರೆ ಆಗುತ್ತದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಕರ್ನಾಟಕಕ್ಕೆ ಈಗಾಗಲೇ ಗೋವಾ ಸರ್ಕಾರ ನೋಟಿಸ್ ನೀಡಿದೆ. ಈ ತಡೆಯನ್ನು ನಿವಾರಿಸಿಕೊಂಡು ಮುಂದುವರಿಯಲು ಕರ್ನಾಟಕಕ್ಕೆ ಸಾಧ್ಯವಿಲ್ಲ. ಅರಣ್ಯ ಮತ್ತು ವನ್ಯಜೀವಿ ಅನುಮತಿ ಸಿಗದ ಕಾರಣ ಈ ಯೋಜನೆ ರದ್ದಾಗುತ್ತದೆ ಎಂದೇ ಗೋವಾ ಹೇಳಿಕೊಂಡು ಬಂದಿತ್ತು. ಸುಪ್ರೀಂ ಕೋರ್ಟ್‌ನ ಈ ತೀರ್ಪಿನಿಂದಾಗಿ ಗೋವಾಕ್ಕೆ ಮುಖಭಂಗವಾದಂತಾಗಿದೆ.
ಕಳೆದ ಜುಲೈನಲ್ಲಿ ರಾಜ್ಯ ಸರಕಾರ ಸಲ್ಲಿಸಿದ್ದ 1,300 ಕೋಟಿ ರೂಪಾಯಿ ಮೊತ್ತದ ಪರಿಷ್ಕೃತ ವಿಸ್ತೃತ ಯೋಜನಾ ವರದಿಗೆ(ಡಿಪಿಆರ್) ಅಂತಾರಾಜ್ಯ ನದಿ ನೀರು ವಿವಾದ ಪ್ರಾಧಿಕಾರದ ಅನುಮೋದನೆ ಈಗಾಗಲೇ ದೊರಕಿದೆ. ಕೇಂದ್ರ ಜಲಶಕ್ತಿ ಸಚಿವಾಲಯವೂ ಅನುಮತಿ ನೀಡಿದೆ. ಈಗ ಕೇಂದ್ರ ಜಲ ಆಯೋಗವೂ ಅನುಮತಿ ನೀಡಿದೆ. ಇದರ ಸಮ್ಮತಿ ಪತ್ರ ರಾಜ್ಯ ಸರ್ಕಾರದ ಕೈಸೇರುತ್ತಿದ್ದಂತೆ ಯೋಜನೆಯ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ. ಈಗಾಗಲೇ ರಾಜ್ಯ ಸರಕಾರ ಇದಕ್ಕಾಗಿ ಸಿದ್ಧತೆ ಮಾಡಿಕೊಂಡಿದೆ. ಈ ಉದ್ದೇಶಕ್ಕೆ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ 1,000 ಕೋಟಿ ರೂ. ಹಣ ಮೀಸಲಿಡಲಾಗಿದೆ. ಈ ನಡುವೆ ಗೋವಾದ ಖ್ಯಾತೆ ರಾಜ್ಯಕ್ಕೆ ಆತಂಕವನ್ನುಂಟು ಮಾಡಿತ್ತು. ಅದನ್ನೀಗ ಸುಪ್ರೀಂ ಕೋರ್ಟ್ ನಿವಾರಿಸಿದೆ.
ಇದನ್ನೂ ಓದಿ : Kalasa Banduri | ಕಳಸಾ ಬಂಡೂರಿ ಯೋಜನೆಯ ಡಿಪಿಆರ್‌ಗೆ ಕೇಂದ್ರ ಜಲ ಆಯೋಗದ ಅನುಮತಿ: ಸಚಿವ ಪ್ರಲ್ಹಾದ್ ಜೋಷಿ ಮಾಹಿತಿ