ಬೆಂಗಳೂರು: ಮಾಜಿ ಸಚಿವ, ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ (Yeshwanthpur MLA ST Somashekar) ಅವರು ಬಿಜೆಪಿ ವಿರುದ್ಧ ಮುನಿಸಿಕೊಂಡು ಪುನಃ ಕಾಂಗ್ರೆಸ್‌ನತ್ತ ಮುಖ ಮಾಡಿದ್ದರು. ಅಲ್ಲದೆ, ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಸ್ಥಳೀಯ ಮುಖಂಡರ ವಿರುದ್ಧ ಗಂಭೀರ ಆರೋಪವನ್ನೂ ಮಾಡಿದ್ದರು. ಪಕ್ಷ ವಿರೋಧಿ ಚಟುವಟಿಕೆ (Anti party activities) ನಡೆಸಿದರೂ ಯಾವುದೇ ಕ್ರಮ ಕೈಗೊಳ್ಳದ ಕುರಿತು ವರಿಷ್ಠರ ಮೇಲೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಈ ಸಂಬಂಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಕರೆದಿದ್ದ ಬೆಂಗಳೂರು ಜನಪ್ರತಿನಿಧಿಗಳ ಸಭೆಗೂ ಗೈರಾಗುವ ಮೂಲಕ ತಮ್ಮ ಸಿಟ್ಟನ್ನು ವ್ಯಕ್ತಪಡಿಸಿದ್ದರು. ಈಗ ಅವರ ಸಿಟ್ಟನ್ನು ತಣಿಸುವ ಕೆಲಸಕ್ಕೆ ಬಿಜೆಪಿ ಮುಂದಾಗಿದೆ. ಇದರ ಭಾಗವಾಗಿ ಬೆಂಗಳೂರು ಉತ್ತರ ಕ್ಷೇತ್ರದ ಯಶವಂತಪುರ ಮಂಡಲದ ನಿಕಟಪೂರ್ವ ಅಧ್ಯಕ್ಷ ಸಿ.ಎಂ. ಮಾರೇಗೌಡ ಹಾಗೂ ಬೆಂಗಳೂರು ಉತ್ತರ ಕ್ಷೇತ್ರದ ಯಶವಂತಪುರ ನಗರ ಮಂಡಲ ಉಪಾಧ್ಯಕ್ಷ ಧನಂಜಯ ಅವರನ್ನು ಬಿಜೆಪಿಯಿಂದ ಆರು ವರ್ಷ ಅವಧಿವರೆಗೆ ಉಚ್ಚಾಟನೆ ಮಾಡಿ ಆದೇಶಿಸಲಾಗಿದೆ. ಈ ಮೂಲಕ ಬಿಜೆಪಿ ಆಂತರಿಕ (BJP Politics) ಸಂಘರ್ಷಕ್ಕೆ ಬ್ರೇಕ್ ಹಾಕುವ ಪ್ರಯತ್ನಕ್ಕೆ ಕೈಹಾಕಲಾಗಿದೆ.
ರಾಜ್ಯ ಶಿಸ್ತು ಸಮಿತಿಯ ಆದೇಶದಂತೆ 2023 ಮೇ ತಿಂಗಳಿನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ (Assembly elections) ಯಶವಂತಪುರ ವಿಧಾನಸಭಾ ಕ್ಷೇತ್ರದ ನಮ್ಮ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ, ಪಕ್ಷವಿರೋಧಿ ಚಟುವಟಿಕೆ ಮಾಡಿರುವುದಾಗಿ ತಿಳಿದು ಬಂದಿರುತ್ತದೆ. ಇದರಿಂದ ಪಕ್ಷದ ಶಿಸ್ತನ್ನು ಉಲ್ಲಂಘಿಸಿದ್ದೀರಿ ಎಂದು ಪರಿಗಣಿಸಿ, ತಮ್ಮನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನದಿಂದ (BJP Primary Membership) ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ ಎಂದು ಬೆಂಗಳೂರು ಉತ್ತರ ಬಿಜೆಪಿ ಜಿಲ್ಲಾಧ್ಯಕ್ಷ ಬಿ. ನಾರಾಯಣ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: Commission Politics : ರಾಜ್ಯಪಾಲರಿಗೆ ದಯಾಮರಣ ಪತ್ರ; ಕಾಮಗಾರಿಯನ್ನೇ ಮಾಡದ ಗುತ್ತಿಗೆದಾರರಿಗೆ ಕಾನೂನು ಸಂಕಷ್ಟ!
ಹೆಸರು ಹೇಳದೇ ಗುಡುಗಿದ್ದ ಎಸ್.ಟಿ. ಸೋಮಶೇಖರ್!
ಕಳೆದ ವಿಧಾನಸಭಾ ಚುನಾವಣೆ ವೇಳೆ ಕೆಲವು ಸ್ಥಳೀಯ ನಾಯಕರು ಜೆಡಿಎಸ್ ಅಭ್ಯರ್ಥಿಯೊಂದಿಗೆ ಕೈಜೋಡಿಸಿ ಅವರಿಂದ ದುಡ್ಡು ಪಡೆದು ಹಂಚಿಕೆ ಮಾಡಿದ್ದಾರೆ. ಇದರ ವಿಡಿಯೊ ಹಾಗೂ ಆಡಿಯೊ ಕ್ಲಿಪ್ ಅನ್ನು ಸಾಕ್ಷಿ ಸಮೇತ ಬಿಜೆಪಿ ವರಿಷ್ಠರಿಗೆ ನೀಡಿದರೂ ಯಾವುದೇ ಕ್ರಮ ವಹಿಸಿಲ್ಲ. ಈ ನಡುವೆ ಹೀಗೆ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರು ತಮ್ಮ ಹುಟ್ಟುಹಬ್ಬದಂದು ನನ್ನ ಫೋಟೊವನ್ನು ಬಳಸಿಕೊಂಡು ಮೆರೆಯುತ್ತಿದ್ದಾರೆ. ಅಂಥವರ ಮೇಲೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಎಷ್ಟು ಸರಿ? ಇಂತಹ ದುಸ್ಥಿತಿಯಲ್ಲಿ ನಾನು ಪಕ್ಷ ಸಂಘಟನೆಯನ್ನು ಹೇಗೆ ಮಾಡಲಿ? ಎಂದು ಎಸ್.ಟಿ. ಸೋಮಶೇಖರ್ ಪ್ರಶ್ನೆ ಮಾಡಿದ್ದರು.
ಇದರ ಜತೆಗೆ ಎಸ್.ಟಿ. ಸೋಮಶೇಖರ್ ಈಚೆಗೆ ಕಾರ್ಯಕ್ರಮಗಳಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ಅವರನ್ನು ಹಾಡಿ ಹೊಗಳಿದ್ದರು. ಡಿ.ಕೆ. ಶಿವಕುಮಾರ್ ತಮ್ಮ ರಾಜಕೀಯ ಗುರು ಎಂದು ಬಹಿರಂಗವಾಗಿಯೇ ಹೇಳಿದ್ದರು. ಅದೇ ಸಂದರ್ಭದಲ್ಲಿ ಡಿಕೆಶಿ ಸಹ ಆಪರೇಷನ್ ಹಸ್ತದ (Operation Hasta) ಸುಳಿವು ಕೊಟ್ಟಿದ್ದರು. ಇವರ ಜತೆಗೆ ಮತ್ತೆ ಅನೇಕ ಬಿಜೆಪಿ ಶಾಸಕರ ಹೆಸರು ಕೇಳಿ ಬಂದಿತ್ತು. ಪರಿಸ್ಥಿತಿ ಕೈಮೀರುವ ಮೊದಲು ಇದನ್ನು ಸರಿಪಡಿಸಬೇಕು ಎಂಬ ನಿಟ್ಟಿನಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (Former CM BS Yediyurappa) ಅವರು ತಮ್ಮ ನಿವಾಸದಲ್ಲಿ ಬಿಜೆಪಿಯ ಬೆಂಗಳೂರು ಜನಪ್ರತಿನಿಧಿಗಳ ಸಭೆಯನ್ನು ಶುಕ್ರವಾರ (ಆಗಸ್ಟ್ 18) ಕರೆದಿದ್ದರು. ಆದರೆ, ಈ ಸಭೆಗೆ ಎಸ್‌ಟಿಎಸ್ ಗೈರಾಗಿದ್ದರು.
ಹುಟ್ಟುಹಬ್ಬ ಆಚರಣೆ ಮಾಡಿದ್ದು ಯಾರು?
ಸುದ್ದಿಗೋಷ್ಠಿಯಲ್ಲಿ ತಮ್ಮ ವಿರುದ್ಧ ಕೆಲಸ ಮಾಡಿದ ವ್ಯಕ್ತಿಯ ಹೆಸರನ್ನು ಎಸ್.ಟಿ. ಸೋಮಶೇಖರ್ ಹೇಳಿರಲಿಲ್ಲ. ಸ್ಥಳೀಯ ಮುಖಂಡರು ಎಂದಷ್ಟೇ ಹೇಳುತ್ತಿದ್ದರು. ಆದರೆ, ಈತ ಯಾರು ಎಂಬ ಬಗ್ಗೆ ಎಲ್ಲರಿಗೂ ಪ್ರಶ್ನೆ ಕಾಡಿತ್ತು. ಶಾಸಕರ ಬೆಂಬಲಿಗರೂ ಹೆಸರು ಹೇಳುತ್ತಿಲ್ಲ. ಕಾಂಗ್ರೆಸ್ ಶಾಸಕ ಎನ್. ಶ್ರೀನಿವಾಸ್ ಸಹ ಹೆಸರನ್ನು ಹೇಳುತ್ತಿರಲಿಲ್ಲ. ಆದರೆ, ಸಿ.ಎಂ. ಮಾರೇಗೌಡ ವಿವಾದದ ಕೇಂದ್ರಬಿಂದು ಆಗಿದ್ದರು. ಒಕ್ಕಲಿಗರ ಸಂಘದ ನಿರ್ದೇಶಕ, ಖಜಾಂಚಿ ಆಗಿರುವ ಅವರ ವಿರುದ್ಧ ಸೋಮಶೇಖರ್ ಆಕ್ರೋಶಗೊಂಡಿದ್ದರು.
2016ರಿಂದ ಒಂದು ಅವಧಿಗೆ ಯಶವಂತಪುರ ಬಿಜೆಪಿ ಅಧ್ಯಕ್ಷರಾಗಿದ್ದ ಮಾರೇಗೌಡ ಅವರ ಹುಟ್ಟುಹಬ್ಬವು ಜುಲೈ ಕೊನೆ ವಾರ ನಡೆದಿತ್ತು, ಇದಕ್ಕೆ ಅಳವಡಿಸಲಾಗಿದ್ದ ಬಿಜೆಪಿ ಬ್ಯಾನರ್‌ನಲ್ಲಿ ಎಸ್.ಟಿ. ಸೋಮಶೇಖರ್ ಅವರ ಫೋಟೊವನ್ನು ಬಳಸಲಾಗಿತ್ತು. ಚುನಾವಣೆ ಮೊದಲಿಂದಲೇ ಇದ್ದ ವೈಮನಸ್ಯ ಇಲ್ಲಿ ಮತ್ತಷ್ಟು ಜಾಸ್ತಿಯಾಯಿತು. ನಮ್ಮ ವಿರುದ್ಧ ಇರುವವರು, ನನ್ನನ್ನು ಸೋಲಿಸಲು ಕೆಲಸ ಮಾಡಿದ್ದಲ್ಲದೆ, ಜೆಡಿಎಸ್‌ಗೆ ಬೆಂಬಲ ನೀಡಿದವರು ಈಗ ನಮ್ಮ ಫೋಟೊ ಯಾಕೆ ಹಾಕುತ್ತಾರೆ ಎಂಬ ಆಕ್ರೋಶ ಎಸ್.ಟಿ. ಸೋಮಶೇಖರ್ ಅವರದ್ದಾಗಿತ್ತು. ಮಾರೇಗೌಡ ಆ್ಯಂಡ್ ಟೀಂ ವಿರುದ್ಧ ಕ್ರಮ ಆಗಬೇಕು ಎಂಬುದಷ್ಟೇ ಎಸ್.ಟಿ. ಸೋಮಶೇಖರ್ ಬೇಡಿಕೆ ಆಗಿತ್ತು ಎನ್ನಲಾಗುತ್ತಿದೆ.
ಇದನ್ನೂ ಓದಿ: Operation Hasta : ಆಯನೂರು ಸೇರ್ಪಡೆ ಪಕ್ಕಾ? ʼಆಪರೇಷನ್ ಹಸ್ತʼ ಹೌದು ಅಂದ್ರು ಡಿಕೆಶಿ, ಸತೀಶ್!
ಪಕ್ಷದ ತೀರ್ಮಾನದಂತೆ ಕ್ರಮ: ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷ ನಾರಾಯಣ್
ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆಂದು ಎಸ್.ಟಿ. ಸೋಮಶೇಖರ್ ಅವರು ಮಾರೇಗೌಡ ಹಾಗೂ ಧನಂಜಯ ವಿರುದ್ಧ ಆರೋಪ ಮಾಡಿದ್ದರು. ಆರೋಪವನ್ನು ಶಿಸ್ತು ಸಮಿತಿಗೆ ಕಳುಹಿಸಿಕೊಟ್ಟಿದ್ದೆವು. ಚರ್ಚೆಗಳ ನಂತರ ರಾಜ್ಯದ ಶಿಸ್ತು ಸಮಿತಿ ಸೂಚನೆ ಮೇರೆಗೆ ಪಕ್ಷದಿಂದ ಅವರನ್ನು ಉಚ್ಚಾಟನೆ ಮಾಡಲಾಗಿದೆ. ಶಾಸಕರ ಅಸಮಾಧಾನ ಶಮನ ಎಂದೆಲ್ಲ ಬರಲ್ಲ. ಈ ತರ ಎಲೆಕ್ಷನ್ ನಡೆದಾಗ ಆರೋಪಗಳು ಬರುತ್ತವೆ. ಗೊತ್ತಿದ್ದೋ, ಗೊತ್ತಿಲ್ಲದೆಯೋ ಪಕ್ಷ ವಿರೋಧಿ ಚಟುವಟಿಕೆಯನ್ನು ನಡೆಸುತ್ತಾರೆ. ಹೀಗೆ ಮಾಡಿದಾಗ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುವುದು ಪಕ್ಷದ ಪದ್ಧತಿ. ಅದರಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷ ನಾರಾಯಣ್ ಪ್ರತಿಕ್ರಿಯೆ ನೀಡಿದ್ದಾರೆ.
ಈಗ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರ ವಿರುದ್ಧ ಬಿಜೆಪಿ ಕ್ರಮ ಕೈಗೊಂಡಿದ್ದು, ಎಸ್.ಟಿ. ಸೋಮಶೇಖರ್ ಅವರ ಮುಂದಿನ ನಡೆ ಏನು ಎಂಬ ಬಗ್ಗೆ ಕುತೂಹಲ ಮೂಡಿದೆ.