Site icon Vistara News

LOK SABHA ELECTION 2024: ಮೀರತ್‌ನಲ್ಲಿ ‘ಟಿವಿ ರಾಮʼನಿಗೆ ಹೆದರಿ ಅಭ್ಯರ್ಥಿಯನ್ನೇ ಬದಲಿಸಿದ ಎಸ್‌ಪಿ!

ಉತ್ತರ ಪ್ರದೇಶ: ಮೀರತ್ (Meerut) ಲೋಕಸಭಾ (loksabha) ಕ್ಷೇತ್ರದಲ್ಲಿ ಬಿಜೆಪಿಯಿಂದ (bjp) ಕಣಕ್ಕೆ ಇಳಿದಿರುವ ನಟ ಅರುಣ್ ಗೋವಿಲ್ (Arun Govil) ವಿರುದ್ಧ ಸಮಾಜವಾದಿ ಪಕ್ಷ (Samajwadi Party) ಅಭ್ಯರ್ಥಿಯನ್ನು ಬದಲಿಸಿ ಅತುಲ್ ಪ್ರಧಾನ್ (Atul Pradhan) ಅವರನ್ನು ಸ್ಪರ್ಧೆಗೆ (LOK SABHA ELECTION 2024) ಇಳಿಸಿದೆ.

ಏಪ್ರಿಲ್ 26ರಂದು ಮೀರತ್ ನಲ್ಲಿ ಎರಡನೇ ಹಂತದ ಮತದಾನ ನಡೆಯಲಿದೆ. ರಾಮಾಯಣ (ramayaan) ಧಾರಾವಾಹಿ ಖ್ಯಾತಿಯ ಶ್ರೀರಾಮ (sriram) ಪಾತ್ರಧಾರಿ ಅರುಣ್ ಗೋವಿಲ್ ಅವರನ್ನು ಭಾರತೀಯ ಜನತಾ ಪಕ್ಷ ಕಣಕ್ಕೆ ಇಳಿಸಿದ ಬಳಿಕ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷವು ತನ್ನ ಅಭ್ಯರ್ಥಿಯನ್ನು ಬದಲಾಯಿಸಿತು. ಈ ಮೊದಲು ಭಾನು ಪ್ರತಾಪ್ ಸಿಂಗ್ (Bhanu Pratap Singh) ಅವರನ್ನು ಕಣಕ್ಕಿಳಿಸಿತ್ತು.


ಮೀರತ್ ಅಭ್ಯರ್ಥಿ ಬದಲಾವಣೆ ಏಕೆ ?

ರಮಾನಂದ್ ಸಾಗರ್ ಅವರ ‘ರಾಮಾಯಣ’ದಲ್ಲಿ ಭಗವಾನ್ ರಾಮನ ಪಾತ್ರಕ್ಕಾಗಿ ಪ್ರಸಿದ್ಧರಾದ ಅರುಣ್ ಗೋವಿಲ್ ಗೆಲ್ಲುವ ಹೆಚ್ಚಿನ ಅವಕಾಶಗಳು ಹೊಂದಿದ್ದಾರೆ. ಇತ್ತೀಚೆಗೆ ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ಅವರು ಮತ್ತಷ್ಟು ಜನಪ್ರಿಯತೆ ಗಳಿಸಿದ್ದರು. ಅಲ್ಲದೇ ಇತ್ತೀಚೆಗೆ ಗೋವಿಲ್ ಅವರು ಮೀರತ್‌ನ ಚೌಧರಿ ಚರಣ್ ಸಿಂಗ್ ಸಭಾಂಗಣದಲ್ಲಿ ಚುನಾವಣಾ ರಾಲಿಯಲ್ಲಿ ಮಾತನಾಡುವಾಗ ಜೈ ಶ್ರೀರಾಮ್ ಘೋಷಣೆಗಳು ಮೊಳಗಿದ್ದವು. ಹೀಗಾಗಿ ಸಮಾಜವಾದಿ ಪಕ್ಷ ತನ್ನ ಅಭ್ಯರ್ಥಿಯನ್ನು ಬದಲಾಯಿಸಿದೆ ಎನ್ನಲಾಗಿದೆ.

ಮೀರತ್ ಅರುಣ್ ಗೋವಿಲ್ ಅವರ ಜನ್ಮಸ್ಥಳವಾಗಿದೆ. ಹೀಗಾಗಿ ಅವರು ತಮ್ಮ ಮೊದಲ ರಾಜಕೀಯ ಭಾಷಣದಲ್ಲಿ ಜನ್ಮಸ್ಥಳಕ್ಕೆ ಹಿಂದಿರುಗಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದ್ದರು. ಅದನ್ನು ಅವರು ರಾಮ 14 ವರ್ಷಗಳ ವನವಾಸದ ಅನಂತರ ಅಯೋಧ್ಯೆಗೆ ಮರಳಿರುವುದಕ್ಕೆ ಹೋಲಿಸಿ ರಾಮಾಯಣವನ್ನು ನೆನಪಿಸಿದ್ದರು. ರಾಮಮಂದಿರ ಉದ್ಘಾಟನೆಯ ಬಗ್ಗೆಯೂ ಮಾತನಾಡಿ ಎಲ್ಲರ ಗಮನ ಸೆಳೆದಿದ್ದರು.

ಇದನ್ನು ಓದಿ: Maneka gandhi: ಮಗ ವರುಣ್‌ ಗಾಂಧಿಗೆ ಟಿಕೆಟ್‌ ನಿರಾಕರಿಸಿದ ಬಿಜೆಪಿ; ಮೇನಕಾ ಗಾಂಧಿ ಮುಂದಿನ ನಡೆ ಏನು?

ಭಾನು ಪ್ರತಾಪ್ ಯಾರು?

ಗೋವಿಲ್‌ಗೆ ವಿರುದ್ಧವಾಗಿ ಕಣಕ್ಕೆ ಇಳಿದಿರುವ ಎಸ್‌ಪಿಯ ಅಭ್ಯರ್ಥಿ ಭಾನು ಪ್ರತಾಪ್ ಸಿಂಗ್ ಅವರು ಡೈಲ್ಟ್ ಮುಖವಾಗಿದ್ದರು. ಬುಲಂದ್‌ಶಹರ್‌ನವರಾದ ಭಾನು ಪ್ರತಾಪ್ ರಾಷ್ಟ್ರವ್ಯಾಪಿ ಇವಿಎಂ ತೆಗೆಯುವ ಅಭಿಯಾನ ನಡೆಸಿ ಜನಪ್ರಿಯತೆ ಗಳಿಸಿದ್ದರು.

ಬಿಜೆಪಿ ಗೋವಿಲ್ ಅವರನ್ನು ಮೀರತ್ ನ ಲೋಕಸಭಾ ಅಭ್ಯರ್ಥಿಯಾಗಿ ಘೋಷಿಸಿದ ಬಳಿಕ ಅಖಿಲೇಶ್ ತಮ್ಮ ಅಭ್ಯರ್ಥಿಯನ್ನ ಬದಲಾಯಿಸಿ ಅತುಲ್ ಪ್ರಧಾನ್ ಅವರನ್ನು ಕಣಕ್ಕೆ ಇಳಿಸಿದ್ದಾರೆ.

ಅತುಲ್ ಪ್ರಧಾನ್ ಯಾರು ?

ಮುಸ್ಲಿಂ ಪ್ರಾಬಲ್ಯ ಕ್ಷೇತ್ರವಾಗಿರುವ ಮೀರತ್ ನಲ್ಲಿ ಸಮಾಜವಾದಿ ಪಕ್ಷ ದಲಿತ ಅಭ್ಯರ್ಥಿಯನ್ನು ಕೈ ಬಿಟ್ಟಿತು. ಫೈರ್‌ಬ್ರಾಂಡ್ ಎಂದೇ ಕರೆಯಲ್ಪಡುವ ಬಿಜೆಪಿ ಶಾಸಕ ಸಂಗೀತ್ ಸೋಮ್ ಅವರನ್ನು ಎರಡು ಬಾರಿ ಅತುಲ್ ಪ್ರಧಾನ್ ಸೋಲಿಸಿ ಉತ್ತರ ಪ್ರದೇಶದ ಚುನಾವಣೆಯಲ್ಲಿ ಗೆದ್ದಿದ್ದರು.

ಮೀರತ್‌ನ ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ನಾಯಕರಾಗಿದ್ದ ಅತುಲ್ ಪ್ರಧಾನ್, ಯುಪಿ ಚುನಾವಣೆಯ ಮೊದಲು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಾಕಿ ತಾವು ಏನಾದರೂ ತಪ್ಪು ಮಾಡಿದ್ದೇನೆ ಎಂದು ಮತದಾರರು ಭಾವಿಸಿದರೆ ಕ್ಷಮೆಯಾಚಿಸುವುದಾಗಿ ಹೇಳಿ ಮತದಾರರ ಸಾಲವನ್ನು ಮರುಪಾವತಿಸಲು ಅವಕಾಶ ನೀಡುವಂತೆ ಕೇಳಿ ಜನಪ್ರಿಯತೆ ಗಳಿಸಿದ್ದರು.

ಪ್ರಧಾನ್ ಅವರ ತಂದೆ ಜ್ಞಾನೇಂದ್ರ ಪ್ರಧಾನ್ ಮತ್ತು ತಾಯಿ ಬ್ರಹ್ಮಾವತಿ ದೇವಿ ಅವರು ಅತುಲ್ ಮೂರು ವರ್ಷದವರಿದ್ದಾಗಲೇ ನಿಧನರಾಗಿದ್ದಾರೆ. ಗುರ್ಜರ್ ಸಮುದಾಯದಿಂದ ಬಂದಿರುವ ಅತುಲ್ ಪ್ರಧಾನ್ ಪಶ್ಚಿಮ ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ಅವರ ಬಲಗೈ ಎಂದು ಪರಿಗಣಿಸಲಾಗುತ್ತದೆ. 2022 ರಲ್ಲಿ ಅತುಲ್ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದರಿಂದ ಪ್ರಕರಣ ದಾಖಲಾಗಿತ್ತು. ಅವರ ವಿರುದ್ಧ ಪೊಲೀಸರಿಗೆ ಬೆದರಿಕೆ ಒಡ್ಡಿರುವ ಆರೋಪವೂ ಇದೆ.

ಪ್ರಧಾನ್ ಅವರು ಅರುಣ್ ಗೋವಿಲ್ ಅವರಿಗೆ ಕಠಿಣ ಸ್ಪರ್ಧೆ ನೀಡುವ ಸಾಧ್ಯತೆ ಇರುವುದರಿಂದ ಸಮಾಜವಾದಿ ಪಕ್ಷ ಅವರನ್ನು ಕಣಕ್ಕೆ ಇಳಿಸಿದೆ ಎನ್ನಲಾಗಿದೆ.

Exit mobile version