ವಿಧಾನಸಭೆ: ಕಾಲೇಜು ವಾರ್ಷಿಕೋತ್ಸವ ಪ್ರಯುಕ್ತ ವಿದ್ಯಾರ್ಥಿಗಳು ನಡೆಸಿದ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುವ ಜೈನ್ ವಿಶ್ವವಿದ್ಯಾಲಯದ (Jain College) ಪರವಾನಗಿಯನ್ನು ರದ್ದುಪಡಿಸಬೇಕು ಎಂದು ಶಾಸಕರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ವಿಧಾನಸಭೆಯ ಶೂನ್ಯ ವೇಳೆಯಲ್ಲಿ ಕೆ. ಅನ್ನದಾನಿ ಹಾಗೂ ಹರ್ಷವರ್ಧನ್ ಈ ವಿಚಾರವನ್ನು ಪ್ರಸ್ತಾಪಿಸಿದರು. ಜೈನ್ ಯುನಿವರ್ಸಿಟಿಯ ಕಿರು ನಾಟಕದಲ್ಲಿ ಡಾ. ಅಂಬೇಡ್ಕರ್ ಗೆ ಅವಹೇಳನ ಮಾಡಲಾಗಿದೆ, ಇದರ ವಿರುದ್ಧ ಕ್ರಮ ಜರುಗಿಸಬೇಕು ಎಂದರು.
ಇದಕ್ಕೆ ಉತ್ತರ ನೀಡಿದ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ, ಇಂತಹದನ್ನು ನಾವು ಕ್ಷಮಿಸಲ್ಲ, ನಿಮ್ಮ ಸಲಹೆಯನ್ನು ಸಚಿವರ ಗಮನಕ್ಕೆ ತರಲಾಗುತ್ತದೆ. ಮುಂದೆ ಈ ರೀತಿ ಆಗದ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಇದನ್ನೂ ಓದಿ: Jain College: ಅಂಬೇಡ್ಕರ್‌ಗೆ ಅಪಮಾನ ಪ್ರಕರಣ ವಿರೋಧಿಸಿ ಬೆಂಗಳೂರು ವಿವಿ, ಕನಕಪುರದಲ್ಲಿ ಪ್ರತಿಭಟನೆ
ಸರ್ಕಾರದ ಉತ್ತರಕ್ಕೆ ತೃಪ್ತಿಯಾಗದ ಸದಸ್ಯರು ಧರಣಿಗೆ ಮುಂದಾದರು. ಈ ಘಟನೆ ಖಂಡನೀಯ. ರಾಷ್ಟ್ರ ನಾಯಕರ ಬಗ್ಗೆ ಅಪಮಾನ ಗೊತ್ತಿದ್ದೂ ಮಾಡ್ತಿದ್ದಾರೆ ಎಂದರೆ ಅರ್ಥ ಏನು? ದುರುದ್ದೇಶದಿಂದ ಮಾಡಿದ್ದಾರೆ ಎಂದರು.
ಡೀಮ್ಡ್ ವಿವಿ ಎಂದು ಮಾಡಿದ್ದೀರಿ, ಅದರ ಪರವಾನಗಿ ರದ್ದು ಮಾಡಬೇಕು. ಶಿಕ್ಷಣ ಸಂಸ್ಥೆ ನಡೆಸಲು ಅವರಿಗೆ ಯೋಗ್ಯತೆ ಇಲ್ಲ. ಕೋಳಿ ಗೂಡು ಇದ್ದಂಗೆ ಇದೆ, ಅವರಿಗೆ ಅನುಮತಿ ಕೊಟ್ಟಿದ್ದು ಯಾರು? ಅಂಬೇಡ್ಕರ್ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ. ಮಹಾನ್ ವ್ಯಕ್ತಿ ಗೆ ಅವಮಾನ ಮಾಡ್ತಾರೆ ಎಂದರೆ ವಿವಿಯನ್ನು ಮುಚ್ಚಬೇಕು ಎಂದು ಅನ್ನದಾನಿ ಆಗ್ರಹ ಮಾಡಿದರು.