Site icon Vistara News

ಕೆಂಪೇಗೌಡರ ಸಮಾಧಿ ಪೂಜೆ ಮಾಡಿ ಹೋದ ಕುಮಾರಸ್ವಾಮಿ ನಾಪತ್ತೆಯಾಗಿದ್ದರು: ಕೆಲಸ ಮಾಡಿದವರು ನಾವು ಎಂದ ಅಶ್ವತ್ಥನಾರಾಯಣ

amit-shah Ashwathnarayan attacks jds in mandya programma

ಮಾಗಡಿ: ಬಿಜೆಪಿ ಸರ್ಕಾರವು ಮಾಡಿರುವ ಕೆಲಸವನ್ನು ಎಚ್‌.ಡಿ. ಕುಮಾರಸ್ವಾಮಿ 20 ವರ್ಷವಾದರೂ ಮಾಡುತ್ತಿರಲಿಲ್ಲ ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ ವಾಗ್ದಾಳಿ ನಡೆಸಿದ್ದಾರೆ.

ಮಾಗಡಿಯ ಸಂಕೀಘಟ್ಟ ಗ್ರಾಮದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅಶ್ವತ್ಥನಾರಾಯಣ, ಹಿಂದಿನ ಚುನಾವಣೆಗಳಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಅಧಿಕಾರ ಕೊಡಲಾಗಿತ್ತು. ಅವರು ಕೆಲಸವನ್ನೂ ಮಾಡುತ್ತಿರಲಿಲ್ಲ, ಜನರ ಕೈಗೂ ಸಿಕ್ಕುತ್ತಿರಲಿಲ್ಲ. ಈ ಬಾರಿ ಯಾರನ್ನು ಕುಂದಿಸಬೇಕು, ಯಾರನ್ನು ಕೂರಿಸಬೇಕು ಎನ್ನುವುದು ಮತದಾರರಿಗೆ ಗೊತ್ತಿದೆ ಎಂದರು.

ಕುಮಾರಸ್ವಾಮಿ ಕೆಂಪೇಗೌಡರ ಜಪ ಮಾಡುತ್ತಿದ್ದರು ಅಷ್ಟೆ. ಅವರ ಸಮಾಧಿ ಇರುವ ಕೆಂಪಾಪುರದಲ್ಲಿ ಪೂಜೆ ಮಾಡಿ ಹೋದವರು, ಆಮೇಲೆ ನಾಪತ್ತೆಯಾದರು. ಸಮಾಧಿ ಅಭಿವೃದ್ಧಿಗೆ ಒಂದು ಗುಂಟೆ ಜಮೀನನ್ನೂ ಸ್ವಾಧೀನ ಪಡಿಸಿಕೊಳ್ಳುವುದು ಅವರಿಗೆ ಸಾಧ್ಯವಾಗಲಿಲ್ಲ. ಆದರೆ ಬಿಜೆಪಿ ಸರ್ಕಾರ ಕೆಂಪೇಗೌಡರ ನೆನಪನ್ನು ಚಿರಸ್ಥಾಯಿಯಾಗಿ ಮಾಡಿದೆ.

ಶ್ರೀರಂಗ ನೀರಾವರಿ ಯೋಜನೆಗೆ ನಮ್ಮ ಸರ್ಕಾರ 175 ಕೋಟಿ ರೂಪಾಯಿ ಕೊಟ್ಟಿದೆ. ಕುಮಾರಸ್ವಾಮಿ ಕೈಯಲ್ಲಿ 20 ವರ್ಷವಾದರೂ ಈ ಕೆಲಸ ಆಗುತ್ತಿರಲಿಲ್ಲ. ಮಂಚನಬೆಲೆ ಯೋಜನೆಯ ಕತೆಯೂ ಅಷ್ಟೆ. 65 ಕೋಟಿ ರೂ. ವೆಚ್ಚದಲ್ಲಿ ಜಿಟಿಟಿಸಿ, ಸಂಸ್ಕೃತ ವಿವಿ ಕ್ಯಾಂಪಸ್, ಕುದೂರಿನಲ್ಲಿ ಕೈಗಾರಿಕಾ ಪ್ರದೇಶ ರಚನೆ, ಮಾಗಡಿ- ಸೋಮವಾರಪೇಟೆ ಚತುಷ್ಪಥ ರಸ್ತೆ ಇವೆಲ್ಲವೂ ಬಿಜೆಪಿ ಸರ್ಕಾರವು ಜಿಲ್ಲೆಗೆ ಕೊಟ್ಟಿರುವ ಯೋಜನೆಗಳಾಗಿವೆ. ಕುಮಾರಸ್ವಾಮಿ ಇದನ್ನು ಮೊದಲು ನೆನಪಿಸಿಕೊಳ್ಳಬೇಕು ಎಂದು ಅವರು ಕುಟುಕಿದರು.

ನಂದಿನಿ ಹಾಗೂ ಅಮೂಲ್ ವಿಲೀನ ಇಲ್ಲ

ಕರ್ನಾಟಕ ಹಾಲು ಮಹಾಮಂಡಲಿಗಳ ಒಕ್ಕೂಟವಾದ ‘ನಂದಿನಿ’ ಮತ್ತು ಗುಜರಾತಿನ ಅಮೂಲ್ ಬ್ರ್ಯಾಂಡ್ ಎರಡನ್ನೂ ವಿಲೀನ ಮಾಡುವ ಯಾವ ಚಿಂತನೆಯೂ ಇಲ್ಲ ಎಂದಯ ಕುಮಾರಸ್ವಾಮಿಯವರ ಮಾತಿಗೆ ಅಶ್ವತ್ಥನಾರಾಯಣ ಪ್ರತಿಕ್ರಿಯಿಸಿದರು. ತಮ್ಮ ಸಹೋದರ ರೇವಣ್ಣನವರೇ ಕೆಎಂಎಫ್ ಅಧ್ಯಕ್ಷರಾಗಿದ್ದರು. ಸಹಕಾರ ಕ್ಷೇತ್ರದ ನಿಯಮಗಳಡಿ ವಿಲೀನಕ್ಕೆ ಅವಕಾಶವೇ ಇಲ್ಲ ಎನ್ನುವುದನ್ನು ಕುಮಾರಸ್ವಾಮಿ ಮೊದಲು ತಿಳಿದುಕೊಳ್ಳಬೇಕು.

ಈ ಹಿಂದೆ ರೇವಣ್ಣ ಕೆಎಂಎಫ್‌ನಲ್ಲಿ ಇದ್ದಾಗಲೂ ಅಮೂಲ್‌ನವರಿಗೆ ನಂದಿನಿ ವತಿಯಿಂದ ಐಸ್ ಕ್ರೀಂ ತಯಾರಿಸಿ ಕೊಡಲಾಗುತ್ತಿತ್ತು. ಸಹಕಾರ ಕ್ಷೇತ್ರದಲ್ಲಿ ಬೇಡಿಕೆ ಮತ್ತು ಉತ್ಪಾದನೆ ಆಧರಿಸಿ ಪರಸ್ಪರ ಕೊಡುಕೊಳ್ಳುವಿಕೆ ನಡೆಯುತ್ತದೆ. ನಂದಿನಿ ಬ್ರ್ಯಾಂಡ್ ಕರ್ನಾಟಕದ ಹೆಮ್ಮೆ. ಈ ವಿಚಾರದಲ್ಲಿ ಜನರ ದಾರಿ ತಪ್ಪಿಸುವ ಕೆಲಸ ಮಾಡುವುದು ಬೇಡ ಎಂದು ಅವರು ಹೇಳಿದರು.

ಇದನ್ನೂ ಓದಿ | Amit Shah | ನಂದಿನಿ ಅಸ್ತಿತ್ವಕ್ಕೆ ಧಕ್ಕೆ ಆತಂಕ?: ಮತ್ತೆ ಗೊಂದಲಕ್ಕೆ ಕಾರಣವಾಯಿತು ಅಮಿತ್‌ ಶಾ ಮಾತು

Exit mobile version