ಬೆಂಗಳೂರು: ರಾಜ್ಯದ ಕೈಗಾರಿಕಾ ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳ 13 ಸಾವಿರ ವಿದ್ಯಾರ್ಥಿಗಳಿಗೆ 22 ಕೋಟಿ ವೆಚ್ಚದಲ್ಲಿ ಟೂಲ್ ಖರೀದಿಸುವ ಟೆಂಡರ್‌ನಲ್ಲಿ ಬೃಹತ್ ಅವ್ಯವಹಾರ ನಡೆದಿದೆ. ಇದರಲ್ಲಿ ಕೌಶಲಾಭಿವೃದ್ಧಿ ಮತ್ತು ಔದ್ಯಮಿಕ ಸಚಿವ ಸಿ.ಎನ್. ಅಶ್ವಥ್ ನಾರಾಯಣ್ ಅವರ ಕೈವಾಡವಿದೆ ಎಂದು ಆಮ್ ಆದ್ಮಿ ಪಾರ್ಟಿ ಆರೋಪಿಸಿದೆ. ಸಚಿವರು ಈ ಆರೋಪವನ್ನು ನಿರಾಕರಿಸಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ.
ಹಗರಣದ ಸಂಪೂರ್ಣ ದಾಖಲೆಗಳ ಸಮೇತ ಆಮ್ ಆದ್ಮಿ ಪಾರ್ಟಿ ದೂರು ದಾಖಲಿಸಿದೆ. ತಾಂತ್ರಿಕ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಅಗತ್ಯ ಸಲಕರಣೆಗಳನ್ನ ಒಳಗೊಂಡ ಟೂಲ್‌ಕಿಟ್ ಪೂರೈಕೆಗೆ ಟೆಂಡರ್ ಕರೆಯಲಾಗಿತ್ತು. ಇಂಟಲೆಕ್ಟ್ ಸಿಸ್ಟಮ್ಸ್ ಸಂಸ್ಥೆ ಎಂಬ ಸಂಸ್ಥೆ ಟೆಂಡರ್ ಪಡೆದಿದೆ. ಮೊದಲ ಬಾರಿಗೆ ಟೆಂಡರ್‌ನಲ್ಲಿ ಭಾಗಿಯಾಗಿದ್ದ ಇಂಟಲೆಕ್ಟ್ ಸಿಸ್ಟಮ್ಸ್ ಕಂಪನಿಯನ್ನು ತಾಂತ್ರಿಕ ಅರ್ಹತೆ ಇಲ್ಲದ ಕಾರಣಕ್ಕಾಗಿ ಟೆಂಡರ್ ರಿಜೆಕ್ಟ್ ಮಾಡಲಾಗಿತ್ತು. ಬಳಿಕ ಇದೇ ಕಂಪನಿಗೆ ಟೆಂಡರ್ ನೀಡುವ ಸಲುವಾಗಿ ಇಡೀ ಟೆಂಡರ್ ಪ್ರಕ್ರಿಯೆಯನ್ನೇ ರದ್ದುಗೊಳಿಸಲಾಗಿದೆ. ಮರು ಟೆಂಡರ್‌ನಲ್ಲಿ ರಿಜೆಕ್ಟ್ ಆದ ಕಂಪನಿಗೆ ಬೋಗಸ್ ದಾಖಲೆ ಸೃಷ್ಟಿಸಿಕೊಟ್ಟು ಅದೇ ಕಂಪನಿಗೆ ಟೆಂಡರ್ ನೀಡಲಾಗಿದೆ. ಇದರಲ್ಲಿ ಸಚಿವ ಅಶ್ವಥ್ ನಾರಾಯಣ್, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಹಿರಿಯ ಅಧಿಕಾರಿಗಳು ನೇರ ಹಸ್ತಕ್ಷೇಪ ನಡೆಸಿದ್ದಾರೆ ಎಂದು ಆಪ್ ದೂರಿದೆ.
ಇದು ರಾಜ್ಯ ಬಿಜೆಪಿ ಸರ್ಕಾರದ ಮತ್ತೊಂದು 40% ಹಗರಣ. ಮೊದಲ ಬಾರಿಗೆ ಟೆಂಡರ್‌ನಲ್ಲಿ ಭಾಗಿಯಾಗಿದ್ದ ಕಂಪನಿ ಹಿಂದೆ 22 ಕೋಟಿ ಹಾಗೂ 11 ಕೋಟಿ ಮೊತ್ತದ ಸಾಮಾಗ್ರಿಗಳನ್ನು ಪೂರೈಸಿರುವುದಾಗಿ ನಕಲಿ ಬಿಲ್ ಸೃಷ್ಟಿಸಿತ್ತು. ಸ್ವತಃ GST ಸಂಸ್ಥೆಯೇ ಈ ಬಿಲ್‌ಗಳು ನಕಲಿ ಎಂದು ಹೇಳಿಕೆ ನೀಡಿದೆ ಎಂದು ಆಪ್ ಹೇಳಿದೆ.
ಆಪ್ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ ಹೇಳಿಕೆ ನೀಡಿದ್ದಾರೆ. 15 ದಿನದ ಹಿಂದೆ ನಾವು ಪ್ರೆಸ್‌ಮೀಟ್ ಮೂಲಕ ದಾಖಲೆ ಬಿಡುಗಡೆ ಮಾಡಿದ್ದೆವು. ಒಂದು ವಾರದ ನಂತರವೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಹೀಗಾಗಿ ನಾವು ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದೇವೆ. ಗಟ್ಟಿಯಾದ ದಾಖಲೆಗಳು ನಮ್ಮಲ್ಲಿವೆ. ಲೋಕಾಯುಕ್ತ ಮೇಲೆ ನಂಬಿಕೆ ಇಟ್ಟು ದೂರು ದಾಖಲಿಸಿದ್ದೇವೆ ಎಂದಿದ್ದಾರೆ.
ಆಪ್ ಪಕ್ಷದ ಮುಖಂಡರಲ್ಲಿ ಒಬ್ಬರಾದ ಭಾಸ್ಕರ್ ರಾವ್ ಹೇಳಿಕೆ ನೀಡಿ, ಈ ಕಂಪನಿ ಹಿಂದೆ ಕೂಡ ಹಗರಣ ನಡೆಸಿದೆ. ಇಂಟಲೆಕ್ಟ್ ಕಂಪನಿ ವಿರುದ್ಧ ಈ ಹಿಂದೆಯೂ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ಯಾವುದೇ ಉತ್ಪನ್ನ ಪೂರೈಸುವ ಅನುಭವ ಇಲ್ಲದಿದ್ದರೂ ಸುಳ್ಳು ದಾಖಲೆ ನೀಡಿದೆ. ಜಿಎಸ್ಟಿ ದಾಖಲೆಯಲ್ಲಿ ಅದು ಬಟಾಬಯಲಾಗಿದೆ. ನಾವು ಎಸಿಬಿಗೆ ಹೋಗುವುದಿಲ್ಲ, ಯಾಕೆಂದರೆ ನಮಗೆ ಎಸಿಬಿ ಮೇಲೆ ನಂಬಿಕೆ ಇಲ್ಲ ಎಂದು ಹೇಳಿದರು.
ಹಿಟ್ ಆಂಡ್ ರನ್ ಕೇಸು
ಆಪ್ ಮಾಡುತ್ತಿರುವ ಆರೋಪ ಹಿಟ್ ಆಂಡ್ ರನ್ ಕೇಸು. ಆಪಾದನೆ ಮಾಡುವುದರಲ್ಲಿ ಎಎಪಿ ಪಕ್ಷ ನಿಸ್ಸೀಮವಾಗಿದೆ ಎಂದು ಸಚಿವ ಅಶ್ವಥ್ ನಾರಾಯಣ್ ಪ್ರತ್ಯುತ್ತರ ನೀಡಿದ್ದಾರೆ. ಟೂಲ್‌ಕಿಟ್ ವಿಚಾರವಾಗಿ ಅಶ್ವಥ್ ನಾರಾಯಣ್ ವಿರುದ್ಧ ಎಎಪಿ ದೂರು ನೀಡಿದ ವಿಚಾರದಲ್ಲಿ ಹೇಳಿಕೆ ನೀಡಿದ ಅವರು, ಏನು ದೂರು ಕೊಟ್ಟಿದ್ದಾರೆ ಎಂಬುದನ್ನು ಸಮಗ್ರವಾಗಿ ತಿಳಿದು ನಂತರ ಮಾತಾಡುತ್ತೇನೆ ಎಂದರು.
ನಮಗೂ ರಾಜಕೀಯ ಮಾಡಲು ಬರುತ್ತದೆ. ಅವರ ಯೋಗ್ಯತೆ, ಅವರ ಪ್ರತಿಷ್ಠೆ, ಅವರ ದಾರಿಗಳ ಬಗ್ಗೆ ನಾನೂ ವಿವರಿಸಬಹುದು. ನನ್ನ ನಡವಳಿಕೆಯಲ್ಲಿ ಯಾವುದೇ ಮುಚ್ಚುಮರೆಯಿಲ್ಲ. ಈಗಾಗಲೇ ಅದರ ಬಗ್ಗೆ ನಾನು ಮಾತಾಡಿದ್ದೇನೆ. ಇವರಿಗೂ ಸರಿಯಾಗಿ ಉತ್ತರ ಕೊಡುವ ಕೆಲಸ ಮಾಡುತ್ತೇನೆ. ಎಎಪಿ ಪಕ್ಷವೇ ಹಿಟ್ ಅಂಡ್ ರನ್ ಕೇಸ್ ಪಾರ್ಟಿ. ಹಿಟ್ ಆಡ್ ರನ್ ಕೇಸ್‌ಗೆ ಹಿಟ್ ಆಗುವಂತೆ ಮಾಡುತ್ತೇನೆ. ನನ್ನ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡಿದ್ದೇವೆ. ಅವರು ಹೇಳುವಂತೆ ಅವ್ಯವಹಾರ ಮಾಡುವ ಸ್ಥಿತಿ ನಮಗೆ ಬಂದಿಲ್ಲ. ಆಪ್ ಪಕ್ಷದವರು ಢೋಂಗಿ ಮಾದರಿಗಳು, ನಾವು ನಿಜವಾದ ಮಾದರಿಗಳು ಎಂದು ಸಚಿವರು ಸ್ಪಷ್ಟನೆ ನೀಡಿದರು.
ಇದನ್ನೂ ಓದಿ: CET Result | ಜಿಲ್ಲಾವಾರು ಸಿಇಟಿ ಫಲಿತಾಂಶ, ಯಾವುದು ಫಸ್ಟ್, ಯಾವುದು ಲಾಸ್ಟ್?