ದಾವಣಗೆರೆ: ದೇಶವನ್ನು ತುಂಡರಿಸುವ ಘೋಷಣೆ ಹಾಗೂ ಕೃತ್ಯ ಎಸಗುವ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ ರೀತಿಯಲ್ಲೆ ಪ್ರೊ. ಬರಗೂರು ರಾಮಚಂದ್ರಪ್ಪ ಕೆಲಸ ಮಾಡಿದ್ದಾರೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಆರೋಪಿಸಿದ್ದಾರೆ.
ರಾಜ್ಯಾದ್ಯಂತ ಪಠ್ಯಪುಸ್ತಕ ವಿವಾದ ಮುಕ್ತಾಯ ಕಾಣುತ್ತಿರುವಂತೆಯೇ ಜವಾಹರಲಾಲ್ ನೆಹರೂ ವಿವಿಯ ರೊಮಿಲಾ ಥಾಪರ್ ಸೇರಿ ಅನೇಕರು ಬಹಿರಂಗ ಪತ್ರವೊಂದನ್ನು ಸೋಮವಾರ ಬರೆದಿದ್ದರು.ತಿರುಚಿದ ಇತಿಹಾಸ ಮಕ್ಕಳಿಗೆ ಕಲಿಸಿಕೊಡಬೇಡಿ. ಒಳ್ಳೆಯ ಶಿಕ್ಷಣಕ್ಕೆ ಉತ್ತಮ ಪಠ್ಯಪುಸ್ತಕವೇ ಅಡಿಪಾಯ. ಇತಿಹಾಸ ಪಠ್ಯದಲ್ಲಿ ಏನೆಲ್ಲಾ ಮಾಹಿತಿ ಇರಬೇಕು ಎಂಬುದನ್ನು ಖ್ಯಾತ ಇತಿಹಾಸಕಾರರು ತೀರ್ಮಾನಿಸಬೇಕು. ಇತಿಹಾಸದಲ್ಲಿ ಏನು ತೆಗೆದುಕೊಳ್ಳಬೇಕು ಎಂದು ರಾಜಕಾರಣಿಗಳು, ಅಧಿಕಾರಿಗಳು ನಿರ್ಧರಿಸಬಾರದು. ಸಾರ್ವಜನಿಕರ ಅಭಿಪ್ರಾಯ ಅಥವಾ ರಾಜಕಾರಣಿಗಳ ಪ್ರೊಪಗಂಡಾ ಮೇಲೆ ಪಠ್ಯ ರಚಿಸಲು ಸಾದ್ಯವಿಲ್ಲ ಎಂದಿದ್ದರು.
ಇದನ್ನೂ ಓದಿ | ಪಠ್ಯಪುಸ್ತಕ ನೆಪದಲ್ಲಿ ಅಶಾಂತಿ: ಸಿಎಂ ರಾಜೀನಾಮೆಗೆ ಡಿ. ಕೆ. ಶಿವಕುಮಾರ್ ಆಗ್ರಹ
ಆರ್ಯ ದ್ರಾವಿಡ ಸಿದ್ಧಾಂತದ ಕುರಿತು ಮಾತನಾಡಿದ್ದ ರೋಮಿಲಾ ಥಾಪರ್, ದ್ರಾವಿಡ ಇತಿಹಾಸ ಮಹತ್ವದ ಘಟ್ಟ. ಉತ್ತರ ಭಾರತಕ್ಕೆ ಆರ್ಯ ಸಮಾಜದ ರೀತಿಯಲ್ಲೆ ದಕ್ಷಿಣ ಭಾರತಕ್ಕೆ ದ್ರಾವಿಡ ಇತಿಹಾಸ ಅತ್ಯಂತ ಮಹತ್ವ. ಉತ್ತರ ಭಾರತದಲ್ಲಿ ಸುಲ್ತಾನಗಳು, ಮುಘಲರ ಇತಿಹಾಸವನ್ನು ತಿರಸ್ಕರಿಸಲು ಸಾಧ್ಯವಿಲ್ಲ. ವಿದ್ಯಾರ್ಥಿಗಳಿಗೆ ಪುರತಾನ ಕಾಲದ ಇತಿಹಾಸ ತಿಳಿಸಿಕೊಡುವುದು ಅತ್ಯಂತ ಮಹತ್ವ. ಇತಿಹಾಸ ಫಿಕ್ಷನ್ ಅಲ್ಲ. ಕೆಲ ದಾಖಲೆಗಳ ಮೇಲೆ ಇತಿಹಾಸ ಅವಲಂಬಿತವಾಗಿರುತ್ತದೆ ಎಂದಿದ್ದರು.
ಅದೇ ರೀತಿ ಪ್ರೊ. ಆದಿತ್ಯ ಮುಖರ್ಜಿಯೂ ಪತ್ರ ಬರೆದು, ಶಿಕ್ಷಣದಲ್ಲಿ ಅತ್ಯುನ್ನತ ಮೈಲಿಗಲ್ಲು ಸಾಧಿಸಿ, ಶ್ರೀಮಂತ ಸಾಂಸ್ಕೃತಿಕ ನೆಲೆ ಹೊಂದಿರುವ ರಾಜ್ಯದಲ್ಲಿ ಈ ಬೆಳವಣಿಗೆ ನಡೆಯುತ್ತಿರುವುದು ಆಶ್ಚರ್ಯ ಮೂಡಿಸಿದೆ. ಕರ್ನಾಟಕ ರಾಜ್ಯದಲ್ಲಿ ಸದ್ಯದ ಬೆಳವಣಿಗೆ ನೋಡಿದರೆ ಇತಿಹಾಸವನ್ನು ತಿರುಚುವ ಕೆಲಸ ಆಗಿದೆ. ಹೊಸ ವಿಚಾರವನ್ನು ತುರುಕುವ ಮೂಲಕ ದೇಶದ ಜಾತ್ಯತೀತ ಮನೋಭಾವಕ್ಕೆ ಧಕ್ಕೆ ತರುವ ಪ್ರಯತ್ನ ಮಾಡಲಾಗಿದೆ. ರಾಜ್ಯದ ಪಠ್ಯಪುಸ್ತಕ ಪರಿಷ್ಕರಣೆ ಮಾಡಿರುವ ಅಂಶಗಳನ್ನು ನೋಡಿ ನಮಗೆ ಗಾಬರಿ ಉಂಟಾಗಿದೆ ಎಂದಿದ್ದರು.
ಈ ಕುರಿತು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ದಾವಣಗೆರೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. “ಜೆಎನ್‌ಯುನವರು ಭಾರತ್ ತುಕಡಾ ಗ್ಯಾಂಗ್‌ನವರೇ ಬರಗೂರು ನೇತೃತ್ವದಲ್ಲಿ ಕೆಲಸ ಮಾಡಿದ್ದರು. ಭಾರತಕ್ಕೆ ಸಾವಿರಾರು ವರ್ಷದ ಇತಿಹಾಸವಿದೆ. ಅದನ್ನು ಮಕ್ಕಳಿಗೆ ಕಲಿಸಬೇಕು. ಬ್ರಿಟಿಷರು ಬರುವ ಮುನ್ನವೇ ಈ ದೇಶದಲ್ಲಿ ಜ್ಞಾನಕ್ಕೆ ಒತ್ತು ಕೊಟ್ಟಿದ್ದೆವು. ಇದೆಲ್ಲವನ್ನೂ ಮಕ್ಕಳಿಗೆ ಕಲಿಸಬೇಕು.
ಈ ಪತ್ರ ಬರೆದಿರುವವರಿಗೆ ಕನ್ನಡ ಬರಲ್ಲ. ಹಾಗಾದರೆ ಅವರೆಲ್ಲ ಹೇಗೆ ಇದಕ್ಕೆ ಪ್ರತಿಕ್ರಿಯೆ ನೀಡಿದರೂ? ಅವರೆಲ್ಲ ಹೀಗೆ ಪತ್ರ ಬರೆದಿದ್ದಾರೆ ಎಂದರೆ ಎಲ್ಲರೂ ತುಕಡೆ ತುಕಡೆ ಗ್ಯಾಂಗ್‌ನವರು ಎಂದರ್ಥ. ಇಲ್ಲದಿದ್ದರೆ ಅವರೇಕೆ ಪತ್ರ ಬರೆದಿದ್ದಾರೆ? ಇದರ ಹಿಂದೆ ಹಿಂದು ಸಮಾಜವನ್ನು ಒಡೆಯುವ ದೊಡ್ಡ ಗ್ಯಾಂಗ್ ಇದೆ. ಪಾಕಿಸ್ತಾನದ ಫ್ಲಾಗ್ ಹಾರಿಸುವ ಒಂದಷ್ಟು ಜನ ಇದರಲ್ಲೂ ಇದ್ದಾರೆ ಎಂದು ಇದರಿಂದ ಸಾಬೀತಾಗಿದೆ ಎಂದಿದ್ದಾರೆ.
ಇದನ್ನೂ ಓದಿ | ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಪತ್ರ ಬರೆದಿದ್ದ ಸಾಹಿತಿಗಳ ಪೂರ್ವಾಪರ ಜಾಲಾಡಲಿದೆ ಗುಪ್ತಚರ ಇಲಾಖೆ