ಬೆಂಗಳೂರು: ದಲಿತರ ಆಸ್ತಿ ಕಬಳಿಕೆ, ಹಲ್ಲೆ ಹಾಗೂ ಜಾತಿ ನಿಂದನೆ (Property grabbing, assault and casteist slurs) ಆರೋಪದ ಅಡಿಯಲ್ಲಿ ಸಚಿವ ಡಿ. ಸುಧಾಕರ್ (Minister D Sudhakar) ಮೇಲೆ ದಾಖಲಾಗಿರುವ ಎಫ್‌ಐಆರ್ (FIR registered) ಸುಳ್ಳು ಕೇಸ್. ಅವರು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದು ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (Deputy CM and KPCC president DK Shivakumar) ಷರಾ ಬರೆದಿದ್ದಾರೆ.
ಇಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಡಿಸಿಎಂ ಶಿವಕುಮಾರ್, ಸಚಿವ ಸುಧಾಕರ್ ವಿರುದ್ಧದ ಕೇಸ್ ವಿಚಾರವಾಗಿ ಬಿಜೆಪಿಯವರು ಏನು ಬೇಕಾದರೂ ಕುತಂತ್ರ ಮಾಡಲಿ. ಇದೊಂದು ಸಿವಿಲ್ ಡಿಸ್ಪ್ಯೂಟ್ ಆಗಿದೆ. ನಾನು ಪಕ್ಷದ ಅಧ್ಯಕ್ಷನಾಗಿ ವರದಿ ಪಡೆದಿದ್ದೇನೆ. ಅಧಿಕಾರಿಗಳ ಜತೆ ಚರ್ಚೆ ಮಾಡಿದ್ದೇನೆ. ಅವರು ಅನುಮತಿ ಪಡೆದು ಖಾಸಗಿ ಜಮೀನನ್ನು ಖರೀದಿಸಿದ್ದಾರೆ. ಇದೊಂದು ಸುಳ್ಳು ಕೇಸ್ ಎಂದು ಹೇಳಿದ್ದಾರೆ.
ಚುನಾವಣೆ ಸಮಯದಲ್ಲಿ ಯಾರೋ ಹೋಗಿ ಕಾಂಪೌಂಡ್ ಹಾಕಿದ್ದಾರೆ. ಯಾರೋ ಹೋಗಿ ಅವರು ಇಲ್ಲದಿದ್ದಾಗ ದೂರು ನೀಡಿದ್ದಾರೆ. ಪರಿಶಿಷ್ಟ ಜಾತಿಯವರು ಕೊಟ್ಟಾಗ ಪಿಸಿಆರ್ ಹಾಕಿದ್ದಾರೆ. ಇದೊಂದು ಸುಳ್ಳು ಕೇಸ್ ಆಗಿದೆ. ನಾವು ಸಿಡಿಆರ್ ತನಿಖೆ ಮಾಡಿದ್ದೇವೆ. ಯಾರಾದರೂ ತಪ್ಪು ಮಾಡಿದ್ದರೆ ಕಾನೂನಿಗಿಂತ ದೊಡ್ಡವರಿಲ್ಲ. ಸುಧಾಕರ್ ರಾಜೀನಾಮೆ ನೀಡುತ್ತಾರೆ ಎಂದು ಬಿಜೆಪಿಯವರು ಕನಸು ಕಾಣುವುದು ಬೇಡ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಈ ಪ್ರಕರಣವನ್ನು ನಾನು ಪರಿಶೀಲನೆ ಮಾಡಿದ್ದೇನೆ. ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ದಾಖಲೆಗಳನ್ನು ತರಿಸಿ ನೋಡಿದ್ದೇನೆ. ಧಮ್ಕಿಗೂ, ಪಿಸಿಆರ್ ಆ್ಯಕ್ಟ್‌ಗೂ ವ್ಯತ್ಯಾಸ ಇಲ್ಲವೇ? ಈ ಪ್ರಕರಣದ ಬಗ್ಗೆ ಮೊದಲು ಕೇಳಿದಾಗ ನನಗೂ ಗಾಬರಿ ಆಯಿತು. ಕೊನೆಗೆ ಪರಿಶೀಲನೆ ನಡೆಸಿದ ಮೇಲೆ ಇದೊಂದು ಸುಳ್ಳು ಕೇಸ್ ಎಂಬುದು ಗೊತ್ತಾಯಿತು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಬಲವಾಗಿ ಸಮರ್ಥನೆ ಮಾಡಿಕೊಂಡಿದ್ದಾರೆ.
ನಾನು ಯಾರ ವಿರುದ್ಧವೂ ಜಾತಿನಿಂದನೆ ಮಾಡಿಲ್ಲ: ಸಚಿವ ಡಿ. ಸುಧಾಕರ್
ನಾನು ಯಾರ ವಿರುದ್ಧವೂ ಜಾತಿನಿಂದನೆ ಮಾಡಿಲ್ಲ. ಹಲವು ವರ್ಷಗಳಿಂದ ನಮ್ಮ ಕಂಪನಿಗೆ ಸಂಬಂಧಪಟ್ಟ ಜಮೀನು ಇದೆ. ಅಲ್ಲಿಯ ಜನರ ಪರಿಚಯವೇ ಇಲ್ಲ. ನನ್ನ ವಿರುದ್ಧ ಪಿತೂರಿ ನಡೆಯುತ್ತಿದೆ. ಯಾರಿಂದ ಅಂತ ಗೊತ್ತಿಲ್ಲ. ಆದರೆ ಕಾನೂನು ಇದೆ, ಕ್ರಮ ಕೈಗೊಳ್ಳಲಿ. ಕಾನೂನು ಎಲ್ಲರಿಗೂ ಒಂದೇ. ಬೇಕಿದ್ದರೆ ಕೋರ್ಟ್‌ನಲ್ಲಿ ಪ್ರಶ್ನೆ ಮಾಡಲಿ. 2006ರಲ್ಲೂ ಹೀಗೆ ಮಾಡಿದ್ದರು. ಇವರಿಗೆ ಕೋರ್ಟ್ ಛೀಮಾರಿ ಹಾಕಿತ್ತು. ಒಂದೂವರೆ ಎಕರೆ ಜಮೀನು ನಮ್ಮ ಕಂಪನಿಗೆ ಸೇರಿದ್ದಾಗಿದೆ. ನಾನು ರಸ್ತೆ ಒತ್ತುವರಿ ಮಾಡಿದ್ದರೆ ಕೋರ್ಟ್‌ಗೆ ಹೋಗಲಿ. ನನ್ನ ತಪ್ಪು ಇದ್ದರೆ ಕ್ರಮ ಜರುಗಿಸಲಿ ಎಂದು ಸಚಿವ ಡಿ. ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ.
ಎರಡು ಎಫ್ಐಆರ್ ಬಗ್ಗೆ ನನಗೆ ಮಾಹಿತಿ ಇಲ್ಲ. ಜಾತಿ ನಿಂದನೆ ಪ್ರಕರಣದಲ್ಲಿ ಎಫ್ಐಆರ್ ಆಗಿದೆ. ನಾನು ಮುಖತಃ ಅವರನ್ನು ಭೇಟಿ ಮಾಡಿಲ್ಲ. ಇಬ್ಬರು ಮುಖಾಮುಖಿಯಾಗದೆ ಅದು ಹೇಗೆ ಜಾತಿ ನಿಂದನೆ ಆಗುತ್ತದೆ ಅನ್ನೋದು ಗೊತ್ತಿಲ್ಲ. ನಾನು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮತ್ತು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದೇನೆ. ಕೇಸ್ ಬಗ್ಗೆ ವಿವರಣೆ ನೀಡಿದ್ದೇನೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದೇನೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಜತೆ ನಾನು ಇದ್ದವನು. 2008ರಲ್ಲಿ ಇಂತಹ ಆರೋಪ ಬಂದಾಗ ಅವರು ನನ್ನ ಜತೆ ಇದ್ದರು. ಆ ಕೇಸ್ ಏನಾಯಿತು ಅನ್ನೋದು ಅವರಿಗೂ ಗೊತ್ತಿದೆ. ಈಗಲೂ ಬೊಮ್ಮಾಯಿ ಸಾಹೇಬರು ಕೇಸ್ ತಿಳಿದು ಮಾತನಾಡಲಿ. ನಾನು ತಪ್ಪು ಮಾಡಿಲ್ಲ. ರಾಜೀನಾಮೆ ಕೊಡುವ ಪ್ರಶ್ನೆ ಬರಲ್ಲ. ನಾನು ತಪ್ಪು ಮಾಡದಿರುವುದರಿಂದ ಹೆದರುವ ಅವಶ್ಯಕತೆ ನನಗೆ ಇಲ್ಲ. ಇದರ ಹಿಂದೆ ಕೆಲವರ ಕುಮ್ಮಕ್ಕು ಇದೆ ಎಂದು ಡಿ. ಸುಧಾಕರ್ ಹೇಳಿದ್ದಾರೆ.
ಇದನ್ನೂ ಓದಿ:Minister D Sudhakar : ಸಿಎಂ ದಲಿತ ಉದ್ಧಾರಕರಾ? ದಲಿತರಿಗೆ ಧಮ್ಕಿ ಹಾಕಿದ ಸುಧಾಕರ್‌ರನ್ನು ಬಂಧಿಸಿ: ಎಚ್‌ಡಿಕೆ
ಏನಿದು ಪ್ರಕರಣ?
ದಲಿತ ಸಮುದಾಯದ ಸುಬ್ಬಮ್ಮ ಎಂಬುವವರು ಯಲಹಂಕ ಠಾಣೆಯಲ್ಲಿ (Yelahanka Police Station) ನೀಡಿದ್ದ ದೂರಿನನ್ವಯ ಸಚಿವ ಡಿ. ಸುಧಾಕರ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸಚಿವರ ವಿರುದ್ಧ ದೌರ್ಜನ್ಯ, ವಂಚನೆ ಮತ್ತು ಹಲ್ಲೆ ಆರೋಪದಡಿ ಅಟ್ರಾಸಿಟಿ ಆ್ಯಕ್ಟ್ (Atrocity Act) ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಲಾಗಿದೆ. ಯಲಹಂಕ ಗ್ರಾಮದ ಸರ್ವೇ ನಂಬರ್ 108/1ರ ಜಮೀನನ್ನು ಮೋಸದಿಂದ ಕಬಳಿಕೆ ಮಾಡಿದ್ದಾರೆ. ಈ ಕೇಸ್ ಕೋರ್ಟ್‌ನಲ್ಲಿದೆ. ಹೀಗಿದ್ದಾಗಲೂ ಬಂದು ಗಲಾಟೆ ಮಾಡಿದ್ದಾರೆ ಎಂಬ ಆರೋಪ ಈಗ ಸಚಿವರ ಮುಂದಿದೆ. ಆದರೆ, ಇದನ್ನು ಸಚಿವ ಡಿ. ಸುಧಾಕರ್ ನಿರಾಕರಣೆ ಮಾಡಿದ್ದಾರೆ.