ಬೆಂಗಳೂರು: ರಾಜ್ಯ ವಿಧಾನ ಪರಿಷತ್‌ಗೆ (Legislative Council) ಸುಧಾಮ್ ದಾಸ್ (Sudham das), ಉಮಾಶ್ರೀ (Umashri), ಎಂ.ಆರ್. ಸೀತಾರಾಮ್ (MR Seetharam) ಅವರ ಹೆಸರನ್ನು ಫೈನಲ್ (MLC Nomination) ಮಾಡಿರುವ ಕಾಂಗ್ರೆಸ್ ನಾಯಕರ ನಡೆ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಕೆಲವೇ ದಿನಗಳ ಹಿಂದೆ ಸಚಿವರ ವಿರುದ್ಧ ಶಾಸಕರು ಸಿಟ್ಟಿಗೆದ್ದ ಬೆನ್ನಿಗೇ ಈ ಹೊಸ ಸಮಸ್ಯೆ ಸೃಷ್ಟಿಯಾಗಿದೆ. ಕಳೆದ ಬಾರಿ ಉಸ್ತುವಾರಿ ಸಚಿವರ ವಿರುದ್ಧ ಆಕ್ರೋಶವಿದ್ದರೆ ಈ ಬಾರಿ ಸ್ವತಃ ಸಿದ್ದರಾಮಯ್ಯ ಅವರೇ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಬಾರಿ ಕಾರ್ಯಕರ್ತರೂ ದೊಡ್ಡ ಸಂಖ್ಯೆಯಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿರುವುದು ಗಂಭೀರ ವಿಷಯವಾಗಿದೆ.
ಈ ನಾಮ ನಿರ್ದೇಶನ ವಿರುದ್ಧ ಸಿಟ್ಟಿಗೆದ್ದಿರುವ ನಿಷ್ಠಾವಂತ ಕಾರ್ಯರ್ಕತರು ಸೋಮವಾರ ಕೆಪಿಸಿಸಿಯ ಜಸ್ಮಾ ಭವನದಲ್ಲಿ ಕಾರ್ಯಕರ್ತರ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಜ್ಜಾಗಿದೆ. ಕಾಂಗ್ರೆಸ್‌ನ ಸಮಾನ ಮನಸ್ಕ ಕಾರ್ಯಕರ್ತರಿಂದ ಸಭೆ ನಡೆಯುತ್ತಿದ್ದು, ಕಾರ್ಯಕರ್ತರು ತಮ್ಮ ಶಕ್ತಿ ಪ್ರದರ್ಶನ ನಡೆಯಲಿದೆ.
ಮೇಲ್ಮನೆಗೆ ನಿಷ್ಠಾವಂತ ಕಾರ್ಯಕರ್ತರನ್ನು ನಾಮ ನಿರ್ದೇಶಣ ಮಾಡಬೇಕಾಗಿತ್ತು. ಆದರೆ, ಅದನ್ನು ಬಿಟ್ಟು ಈ ಹಿಂದೆ ಸಾಕಷ್ಟು ಅಧಿಕಾರ ಅನುಭವಿಸಿದವರಿಗೆ ಮತ್ತು ಇತ್ತೀಚೆಗಷ್ಟೇ ಪಕ್ಷಕ್ಕೆ ಸೇರಿದವರಿಗೆ ಅವಕಾಶ ನೀಡಿರುವುದು ಕಾರ್ಯಕರ್ತರನ್ನು ಕೆರಳಿಸಿದೆ. ಇಂದಿನ ಸಭೆಯಲ್ಲಿ ಕಾರ್ಯಕರ್ತರಿಗೇ ಅವಕಾಶ ಕೊಡಬೇಕು ಎಂಬ ಹಕ್ಕೊತ್ತಾಯ ಮಂಡಿಸಲು ತಿರ್ಮಾನ ಮಾಡಲಾಗಿದೆ.
ಪಕ್ಷಕ್ಕೆ ಹೊಸದಾಗಿ ಬಂದವರಿಗೆ ಅವಕಾಶ ನೀಡಬಾರದು, ನಿಷ್ಠಾವಂತ ಕಾರ್ಯಕರ್ತರಿಗೆ ಅಧಿಕಾರ ಸಿಗುವಂತಾಗಬೇಕು, ಕಾರ್ಯಕರ್ತರೇ ಪಕ್ಷದ ಆಸ್ತಿ ಎಂಬ ಘೋಷಣೆ ಜಾರಿಯಾಗಬೇಕು ಎಂದು ಪಕ್ಷದ ನಾಯಕರ ಮೇಲೆ ಒತ್ತಡ ಹೇರಲು ನಡೆಯುತ್ತಿರುವ ಸಭೆ ಇದಾಗಿದೆ.
ಕೆಪಿಸಿಸಿ ಕಚೇರಿಯಲ್ಲಿ ನಡೆಯುವ ಸಭೆಗೆ ಆಗಮಿಸುವಂತೆ ಎಲ್ಲಾ ಜಿಲ್ಲೆಯ ನಿಷ್ಠಾವಂತ ಕಾರ್ಯಕರ್ತರಿಗೆ ಆಹ್ವಾನ ನೀಡಲಾಗಿದೆ. ಮಾತ್ರವಲ್ಲ, ಸಭೆ ನಡೆಸುತ್ತಿರುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಆಯೋಜಕರು ಮಾಹಿತಿ ನೀಡಿದ್ದಾರೆ.
ಕಾರ್ಯಕರ್ತರ ಆಕ್ಷೇಪವೇನು?
- ಚುನಾವಣೆಗೂ ಮುನ್ನ ನಾಯಕರ ಬಾಯಿಯಲ್ಲಿ ಕಾರ್ಯಕರ್ತರ ಬಗ್ಗೆ ಜಪ ಮಾಡುತ್ತೀರಿ. ಆದರೆ, ಸರ್ಕಾರದ ಬಂದ ನಂತರ ಕಾರ್ಯಕರ್ತರನ್ನು ಪರಿಗಣಿಸುತ್ತಿಲ್ಲ.
- ಎಂಎಲ್ಸಿ ಸ್ಥಾನಕ್ಕೆ ಮೂರು ಜನರನ್ನು ನಾಮನಿರ್ದೇಶನ ಮಾಡಲಾಗಿದೆ. ಈ ವಿಚಾರದಲ್ಲಿ ಉದಯಪುರ ನಿರ್ಣಯಗಳನ್ನು ಗಾಳಿಗೆ ತೂರಲಾಗಿದೆ.
- ಪಕ್ಷಕ್ಕೆ ಸೇರಿ ಕನಿಷ್ಠ ಐದು ವರ್ಷಗಳ ಕಾಲ ಕೆಲಸ ಮಾಡಿರಬೇಕು. ಅಂತವರಿಗೆ ಮಾತ್ರ ಹುದ್ದೆಗಳನ್ನು ನೀಡಬೇಕು ಎಂಬ ನಿರ್ಣಯವಿದೆ. ಸುಧಾಮ್ ದಾಸ್ ಇತ್ತೀಚೆಗೆ ಪಕ್ಷ ಸೇರ್ಪಡೆ ಆಗಿದ್ದಾರೆ. ಅಂತವರ ಹೆಸರು ಶಿಫಾರಸು ಮಾಡುವುದು ಎಷ್ಟರ ಮಟ್ಟಿಗೆ ಸರಿ?
- ಎಂ.ಆರ್. ಸೀತಾರಾಮ್, ಉಮಾಶ್ರೀ ಹಿಂದೆ ಸಚಿವರು ಆಗಿದ್ದವರು. ಎಂ.ಆರ್. ಸೀತಾರಾಮ್ ಚುನಾವಣೆಗೆ ಸ್ಪರ್ಧೆ ಮಾಡಲು ಹಿಂದೆ ಸರಿದಿದ್ದರು. ಹೀಗೆ ಅಧಿಕಾರ ಅನುಭವಿಸಿದವರಿಗೆ ಮತ್ತೊಮ್ಮೆ ಅಧಿಕಾರ ಕೊಟ್ಟರೇ ಹೇಗೆ?
- ಈ ರೀತಿ ಮಾಡಿದರೆ ಕಾರ್ಯಕರ್ತರಿಗೆ ಮೋಸ ಮಾಡಿದಂತೆ. ಇದನ್ನು ಸರಿ ಮಾಡದ ಹೋದರೆ ಲೋಕಸಭೆಯಲ್ಲಿ ಪಕ್ಷ ಹಿನ್ನಡೆ ಆಗಲಿದೆ ಎನ್ನುವ ಸಂದೇಶ.
ಉಮಾಶ್ರೀ ಬೆನ್ನಿಗೆ ನಿಂತ ಸಿದ್ದರಾಮಯ್ಯ
ಸಿದ್ದರಾಮಯ್ಯ ಅವರು ವಿಧಾನ ಪರಿಷ್‌ಗೆ ಉಮಾಶ್ರೀ ಹೆಸರನ್ನು ಕೊನೆ ಘಳಿಗೆಯಲ್ಲಿ ಫೈನಲ್ ಮಾಡಿದ್ದರು. ಈ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಬಣಗಳ ನಡುವೆ ಫೈಟ್ ನಡೆದಿರುವ ಸೂಚನೆ ಇದೆ.
ಉತ್ತರ ಕರ್ನಾಟಕದಲ್ಲಿ ಪ್ರಭಾವಿ ನಾಯಕಿ ಆಗಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಡಿಸಿಎಂ ಡಿ.ಕೆ ಶಿವಕುಮಾರ್ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ಆದರೆ ಸಿಎಂ ಸಿದ್ದರಾಮಯ್ಯ ಬಣ್ಣದಲ್ಲಿ ಪ್ರಬಲ ಮಹಿಳಾ ನಾಯಕಿ ಕೊರತೆ ಇದೆ. ಉಮಾಶ್ರೀ ಅವರಿಗೆ ಜನಪ್ರಿಯತೆ ಇದ್ದರೂ ಅಧಿಕಾರವಿಲ್ಲ. ಹೀಗಾಗಿ ಪರಿಷತ್ ಗೆ ನಾಮನಿರ್ದೇಶನ ಮಾಡಿ ಅಧಿಕಾರ ನೀಡುವ ಲೆಕ್ಕಾಚಾರ ಸಿದ್ದರಾಮಯ್ಯ ಅವರದ್ದು ಎನ್ನಲಾಗಿದೆ.
ಆದರೆ, ಅವರು ನೀಡಿರುವ ಕಾರಣ ಮಾತ್ರ ಬೇರೆ ಇದೆ. ವಿಧಾನಪರಿಷತ್ ನಲ್ಲಿ ಕಾಂಗ್ರೆಸ್ ನಿಂದ ಮಹಿಳಾ ಪ್ರಾತಿನಿಧ್ಯವಿಲ್ಲ. ಮಹಿಳಾ ಪ್ರಾತಿನಿಧ್ಯ ಎಲ್ಲಾ ಎಂದಾದರೆ ವಿಪಕ್ಷಗಳ ಅದನ್ನ ಅಸ್ತ್ರ ಮಾಡಿಕೊಳ್ಳುತ್ತವೆ. ಹಾಗಾಗಿ ಮಹಿಳೆಯೊಬ್ಬರನ್ನು ಆಯ್ಕೆ ಮಾಡಬೇಕು ಎಂದು ಇಂಗಿತ ವ್ಯಕ್ತಪಡಿಸಿರುವ ಸಿಎಂ ಸಿದ್ದರಾಮಯ್ಯ, ಉಮಾಶ್ರೀ ಹೆಸರು ಹೇಳಿದ್ದಾರೆ.
ಇದನ್ನೂ ಓದಿ: Karnataka Politics : ಮೇಲ್ಮನೆ ನಾಮನಿರ್ದೇಶನ; ಉಮಾಶ್ರೀ, ಸೀತಾರಾಂ, ಸುಧಾಮ್ ದಾಸ್ ಹೆಸರು ಫೈನಲ್