ಮಂಡ್ಯ: ರೈತರ ಸಣ್ಣಪುಟ್ಟ ಅವಶ್ಯಕತೆಗಳನ್ನೂ ಡಬಲ್ ಇಂಜಿನ್ ಸರ್ಕಾರವು ಪೂರೈಸುತ್ತಿದ್ದು, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಕರ್ನಾಟಕದ ರೈತರಿಗೆ 12 ಸಾವಿರ ಕೋಟಿ ರೂ. ಲಭಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು. ಮಂಡ್ಯದ ಗೆಜ್ಜಲಗೆರೆಯಲ್ಲಿ ಆಯೋಜನೆ ಮಾಡಿದ್ದ, 12 ಸಾವಿರ ಕೋಟಿ ರೂ. ಮೊತ್ತದ 210 ಕಿಲೋಮೀಟರ್ ಉದ್ದದ ಎರಡು ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಹೆದ್ದಾರಿಯಿಂದಾಗಿ ರಾಮನಗರ ಹಾಗೂ ಮಂಡ್ಯದ ಅಭಿವೃದ್ಧಿಗೂ ಸಹಕಾರವಾಗುತ್ತದೆ. ಮಳೆಗಾಲದ ಸಂದರ್ಭದಲ್ಲಿ ಭೂ ಕುಸಿತ ಉಂಟಾಗಿ ಬೆಂಗಳೂರು ಮಂಗಳೂರು ರಸ್ತೆ ಬಂದ್ ಆಗುತ್ತದೆ. ಮೈಸೂರು ಹಾಗೂ ಕುಶಾಲನಗರ ಚತುಷ್ಪಥ ಕಾಮಗಾರಿಯು ಈ ಸಮಸ್ಯೆಯನ್ನು ದೂರ ಮಾಡುತ್ತದೆ.
2014ಕ್ಕೆ ಮುನ್ನ ಕಾಂಗ್ರೆಸ್ ನೇತೃತ್ವದ ಸರ್ಕಾರವಿತ್ತು. ಈ ಸರ್ಕಾರವು ಬಡವರನ್ನು, ಬಡ ಕುಟುಂಬವನ್ನು ನಾಶ ಮಾಡುವ ಯಾವ ಅವಕಾಶವನ್ನೂ ಬಿಡಲಿಲ್ಲ. ಬಡವರ ಸಾವಿರಾರು ಕೋಟಿ ರೂ. ಹಣವನ್ನು ಕಾಂಗ್ರೆಸ್ ಲೂಟಿ ಮಾಡಿತ್ತು. ಬಡವರ ದುಃಖಕ್ಕೂ ಕಾಂಗ್ರೆಸ್‌ಗೂ ಯಾವುದೇ ಸಂಬಂಧ ಇಲ್ಲ. 2014ರಲ್ಲಿ ನಮ್ಮ ಸರ್ಕಾರಕ್ಕೆ ಅವಕಾಶ ನೀಡಿದ್ದರಿಂದ ಬಡವರ ಕಷ್ಟವನ್ನು ಅರಿಯುವ ಸಂವೇದನಾಶೀಲ ಸರ್ಕಾರ ಇದು.
ಈ ಸರ್ಕಾರವು ಅತ್ಯಂತ ಪ್ರಾಮಾಣಿಕತೆಯಿಂದ ಬಡವರ ಸೇವೆ ಮಾಡುವ ಹಾಗೂ ಬಡವರ ಕಷ್ಟವನ್ನು ಕಡಿಮೆ ಮಾಡುವ ನಿರಂತರ ಪ್ರಯತ್ನ ಮಾಡುತ್ತಿದೆ. ಬಡವರ ಬಳಿ ಸದೃಢ ಮನೆಯಿರಬೇಕು, ಮನೆಯಲ್ಲಿ ನಲ್ಲಿಯ ಮೂಲಕ ನೀರು ಬರಬೇಕು, ಉಜ್ವಲ ಗ್ಯಾಸ್ ಸಂಪರ್ಕ, ಗ್ರಾಮದ ರಸ್ತೆ, ಆಸ್ಪತ್ರೆ ಇರಬೇಕು, ಚಿಕಿತ್ಸೆಯ ವೆಚ್ಚ ಕಡಿಮೆ ಇರಬೇಕು ಎನ್ನುವುದಕ್ಕೆ ಬಿಜೆಪಿ ಸರ್ಕಾರ ಆದ್ಯತೆ ನೀಡಿದೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಮೂಲಕ ಕರ್ನಾಟಕದ ರೈತರ ಖಾತೆಗಳಿಗೆ 12 ಸಾವಿರ ಕೋಟಿ ರೂ. ತಲುಪಿಸಲಾಗಿದೆ. ಇದರಲ್ಲಿ ಮಂಡ್ಯದ ಮೂರು ಮುಕ್ಕಾಲು ಲಕ್ಷ ರೈತರ ಖಾತೆಗಳಿಗೆ 600 ಕೋಟಿ ರೂ. ತಲುಪಿಸಲಾಗಿದೆ. ಕೇಂದ್ರ ಸರ್ಕಾರವು ಆರು ಸಾವಿರ ಕೋಟಿ ರೂ. ನೀಡಿದರೆ ಕರ್ನಾಟಕ ಸರ್ಕಾರ ನಾಲ್ಕು ಸಾವಿರ ರೂ. ಸೇರಿಸಿ ಹತ್ತು ಸಾವಿರ ರೂ. ನೀಡುತ್ತದೆ. ಇದಕ್ಕಾಗಿ ಕರ್ನಾಟಕ ಸರ್ಕಾರಕ್ಕೆ ಅಭಿನಂದನೆಗಳು. ಇದು ಡಬಲ್ ಇಂಜಿನ್ ಸರ್ಕಾರದ ಕಾರ್ಯವೈಖರಿ ಎಂದು ತಿಳಿಸಿದರು.