Site icon Vistara News

Modi in Karnataka: ಕರ್ನಾಟಕದಲ್ಲಿ 2 ಲಕ್ಷ ಕೋಟಿ ರೂ. ಮೊತ್ತದ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ: ನಿತಿನ್‌ ಗಡ್ಕರಿ

nitin gadkari in mandya

#image_title

ಮಂಡ್ಯ: ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ಕರ್ನಾಟಕದಲ್ಲಿ ಸುಮಾರು 2 ಲಕ್ಷ ಕೋಟಿ ರೂ. ಮೊತ್ತದ ಹೆದ್ದಾರಿ ಯೋಜನೆಗಳು ಚಾಲ್ತಿಯಲ್ಲಿವೆ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ. ಮಂಡ್ಯದ ಗೆಜ್ಜಲಗೆರೆಯಲ್ಲಿ ಆಯೋಜನೆ ಮಾಡಿದ್ದ, 12 ಸಾವಿರ ಕೋಟಿ ರೂ. ಮೊತ್ತದ 210 ಕಿಲೋಮೀಟ್‌ ಉದ್ದದ ಎರಡು ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಂದು ಕರ್ನಾಟಕಕ್ಕೆ ಮಹತ್ವಪೂರ್ವ ದಿನ. ಬೆಂಗಳೂರು ಐಟಿ ರಾಜಧಾನಿಯಾದರೆ ಮೈಸೂರು ಸಾಂಸ್ಕೃತಿಕ ಕೇಂದ್ರ. ಎರಡೂ ನಗರಗಳ ನಡುವಿನ ಈ ರಸ್ತೆಯು ಕರ್ನಾಟಕಕ್ಕೆ ಬಹುದೊಡ್ಡ ಕೊಡುಗೆ. ಪ್ರವಾಸಿಗರು ಹಳೆಯ ರಸ್ತೆಯಲ್ಲಿ ಸಾಗುವುದು ಕಷ್ಟವಾಗುತ್ತಿತ್ತು. ಈ ರಸ್ತೆಯಲ್ಲಿ ಒಂದು ಗಂಟೆಯಲ್ಲಿ ಅವರು ಸಾಗಲಿದ್ದಾರೆ.

ಬೆಂಗಳೂರಿನಲ್ಲಿ ರಿಂಗ್‌ ರೋಡ್‌ ಆಗುತ್ತಿದೆ, ಇದಕ್ಕೆ 17 ಸಾವಿರ ಕೋಟಿ ರೂ. ವೆಚ್ಚವಾಗುತ್ತಿದೆ. ಇದು ಪೂರ್ಣವಾದ ನಂತರ ಮೈಸೂರು ಮಾರ್ಗ ಮತ್ತಷ್ಟು ಸರಾಗವಾಗಲಿದೆ. ಈ ರಸ್ತೆಯ ಮಾರ್ಗದಲ್ಲಿ ಫಲವತ್ತಾದ ಭೂಮಿ ಇದ್ದದ್ದರಿಂದ, ಅದರ ಸ್ವಾಧೀನಕ್ಕೆ ಕರ್ನಾಟಕ ಸರ್ಕಾರ ಸಹಕಾರ ಬಹುಮುಖ್ಯವಾಯಿತು.

ರೈತರಿಗೆ ಅನ್ಯಾಯವಾಗಬಾರದು ಎಂಬ ಕಾರಣಕ್ಕೆ ಹೆಚ್ಚಿನ ಪರಿಹಾರ ನೀಡಲಾಗಿದೆ. ಈ ಹೈವೇ ಮಾಡುವಾಗ, ಹಳೆಯ ರಸ್ತೆಯ ಭಾಗಗಳನ್ನೂ ಸರಿಪಡಿಸಿದ್ದೇವೆ. ಈ ಹಿಂದೆ ಕೇವಲ 24 ಅಂಡರ್‌ಪಾಸ್‌ ಇತ್ತು, ಈಗ 89 ಅಂಡರ್‌ ಪಾಸ್‌ ಮಾಡಲಾಗಿದೆ. ಎಂಟು ಕಿಲೋಮೀಟರ್‌ ಮೇಲುರಸ್ತೆ ಮಾಡಲಾಗಿದೆ. ಇದರಿಂದ ವೆಚ್ಚ ಹೆಚ್ಚಾಗಿದೆ. ಆದರೆ ಇದರಿಂದ ಕರ್ನಾಟಕದ ಪ್ರವಾಸೋದ್ಯಮಕ್ಕೆ ಅನುಕೂಲ ಆಗುತ್ತದೆ. ಇದರಿಂದ ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತದೆ.

ಈ ಹೆದ್ದಾರಿಯು ಕೊಯಮತ್ತೂರಿನವರೆಗೆ ಸಾಗುತ್ತದೆ. 212 ಸುಲ್ತಾನ್‌ ಬತ್ತೇರಿಯನ್ನು ಸಂಪರ್ಕಿಸುತ್ತದೆ. ಈ ಯೋಜನೆಯಿಂದ ಕೆಆರ್‌ಎಸ್‌, ಶ್ರೀರಂಗಪಟ್ಟಣ, ಮೈಸೂರಿನಂತಹ ಪಾರಂಪರಿಕ ಸ್ಥಾನಗಳಿಗೆ ತೆರಳುವುದು ಸರಾಗವಾಗುತ್ತದೆ. ಈ ರಸ್ತೆಯ ಬದಿಯಲ್ಲಿ ಚನ್ನಪಟ್ಟಣ ಆಟಿಕೆಗಳು, ಜೇನು, ಗಂಧದ ಸೋಪು, ಸೇರಿ ಅನೇಕ ಸ್ಥಳೀಯ ಉತ್ಪನ್ನಗಳಿಗೆ ಅವಕಾಶ ನೀಡುತ್ತೇವೆ.

ಇದನ್ನೂ ಓದಿ: Modi in Karnataka: ದಶಪಥ ಹೆದ್ದಾರಿ ಮಾಡಿಸಿದ್ದು ಮೋದಿಯೇ; ಈ ಬಾರಿ ಮಂಡ್ಯದಲ್ಲಿ ಕೇಸರಿ ಧ್ವಜ ಹಾರಾಟ: ನಳಿನ್‌ ಕುಮಾರ್‌ ಕಟೀಲ್

ಬೆಂಗಳೂರಿನಿಂದ ಮಂಗಳೂರನ್ನು ಸಂಪರ್ಕಿಸುವ ಪರ್ಯಾಯ ಮಾರ್ಗವೂ ಆಗುತ್ತದೆ. ಮಂಗಳೂರಿಗೆ ತೆರಳುವ ಘಾಟ್‌ನಲ್ಲಿನ ಸಮಸ್ಯೆ ಕಾರಣಕ್ಕೆ ಅನೇಕ ಉದ್ಯಮಗಳು ಚೆನ್ನೈಗೆ ಹೋಗುತ್ತಿವೆ, ಆದ್ಧರಿಂದ ಈ ರಸ್ತೆಯೂ ಉಪಯೋಗವಾಗುತ್ತದೆ. ಕೊಡಗಿಗೆ ತೆರಳಲೂ ಇದು ಸಹಕಾರಿಯಾಗುತ್ತದೆ.

ಇದೇ ವರ್ಷ ಡಿಸೆಂಬರ್‌ನಲ್ಲಿ ಚೆನ್ನೈ-ಬೆಂಗಳೂರು ಹೆದ್ದಾರಿ ಪೂರ್ಣವಾಗಲಿದೆ. ಮುಂದಿನ ವರ್ಷ ಮಾರ್ಚ್‌ ವೇಳೆಗೆ ಬೆಂಗಳೂರಿನ ರಿಂಗ್‌ ರಸ್ತೆ ಪೂರ್ಣವಾಗುತ್ತದೆ. ಕರ್ನಾಟಕದಲ್ಲಿ ಹೆದ್ದಾರಿ ಇಲಾಖೆಯಿಂದ ಸುಮಾರು 2 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿಗಳು ನಡೆಯುತ್ತಿವೆ. ಮುಂದೆ ಇದು 3 ಲಕ್ಷ ಕೋಟಿ ರೂ. ಆಗುತ್ತದೆ.

Exit mobile version