ಬೆಂಗಳೂರು: ಲೋಕಸಭಾ ಚುನಾವಣೆ (Parliament Elections 2024) ಸನ್ನಿಹಿತವಾಗುತ್ತಿದ್ದಂತೆಯೇ ಮತ್ತೆ ಪ್ರಚೋದನಾತ್ಮಕ ಹೇಳಿಕೆಗಳನ್ನು (Provocative Statements) ನೀಡಲು ಆರಂಭಿಸಿರುವ ಕಾರವಾರ ಸಂಸದ ಅನಂತ್ ಕುಮಾರ್ ಹೆಗಡೆ (MP Anantkumar Hegade) ಅವರು ಸಿಎಂ ಸಿದ್ದರಾಮಯ್ಯ (CM Siddaramaiah) ಅವರನ್ನು ಏಕವಚನದಲ್ಲಿ ನಿಂದಿಸಿದ್ದಾರೆ. ಅವರ ಈ ನಡೆಯನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದ್ದು, ಇದು ಅವರ ಸಂಸ್ಕೃತಿಯನ್ನು ಸೂಚಿಸುತ್ತದೆ ಎಂದು ಹೇಳಿದೆ.
ಕುಮಟಾದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅನಂತಕುಮಾರ್ ಹೆಗಡೆ ಅವರು ಅಯೋಧ್ಯೆಯಲ್ಲಿನ ಬಾಬ್ರಿ ಮಸೀದಿಯಂತೆ ಭಟ್ಕಳದ ಚಿನ್ನದ ಪಳ್ಳಿಯೂ ನಾಶವಾಗಲಿದೆ ಎಂದು ಎಚ್ಚರಿಸಿದರು. ಇದನ್ನು ಬೇಕಾದರೆ ಬೆದರಿಕೆ ಅಂತ ಬೇಕಾದರೂ ತಿಳಿಯಿರಿ. ಇದು ಹಿಂದೂ ಸಮಾಜದ ತೀರ್ಮಾನವೇ ವಿನಃ ಅನಂತಕುಮಾರ್ ಹೆಗಡೆ ತೀರ್ಮಾನ ಅಲ್ಲ. ಸಿರಸಿಯ ಸಿಪಿ ಬಜಾರ್ನಲ್ಲಿಯೂ ಮಸೀದಿ ಇದೆ. ಅದು ಈ ಹಿಂದೆ ವಿಜಯ ವಿಠ್ಠಲ ದೇವಸ್ಥಾನ ಆಗಿತ್ತು. ಶ್ರೀರಂಗಪಟ್ಟಣದಲ್ಲಿರುವ ದೊಡ್ಡ ಮಸೀದಿ ಮಾರುತಿ ದೇವಸ್ಥಾನವಾಗಿತ್ತು. ಇವತ್ತೂ ಅಲ್ಲಿಗೆ ಹೋದರೆ ಮಾರುತಿ ದೇವಸ್ಥಾನ ಕಾಣುತ್ತದೆ ಎಂದು ಹೇಳಿದ್ದರು ಅನಂತ ಕುಮಾರ್.
ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ
ಈ ಕಾರ್ಯಕ್ರಮದಲ್ಲೇ ಸಿದ್ದರಾಮಯ್ಯ ವಿರುದ್ಧ ಅವರು ತೀವ್ರವಾಗಿ ವಾಗ್ದಾಳಿ ನಡೆಸಿದರು.
ಹಿಂದೂ ಸಮಾಜವನ್ನು ಶತಮಾನಗಳಿಂದಲೂ ಒಡೆಯುತ್ತಲೇ ಬರುತ್ತಿದ್ದಾರೆ ಎಂದು ಹೇಳಿದ ಅವರು, ಕಾಂಗ್ರೆಸ್ ನಮ್ಮ ವಿರೋಧಿ ಅಲ್ಲ. ಅದು ಹಿಂದೂ ವಿರೋಧಿ, ಸನಾತನ ಧರ್ಮ ವಿರೋಧಿ. ಕಾಂಗ್ರೆಸ್ ನಮ್ಮ ವಿರೋಧಿ ಅಲ್ಲ, ಸಿಎಂ ಸಿದ್ದರಾಮಯ್ಯ ನಮ್ಮ ವಿರೋಧಿ. ಅಲ್ಪಸಂಖ್ಯಾತರ ಮತಕ್ಕಾಗಿ ಹರಾಜಾಗಿ ಹೊದವರು ನಮ್ಮ ವಿರೋಧಿಗಳು ಎಂದರು.
ಸಿದ್ದರಾಮಯ್ಯ ಅವರು ಮೊದಲು ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ಲೋಕಾರ್ಪಣೆಯ ಆಹ್ವಾನ ಬಂದಿಲ್ಲ ಎಂದರು. ಆಹ್ವಾನ ಬಂದ ಮೇಲೆ ನಾನು ಹೋಗುವುದಿಲ್ಲ ಎಂದರು ಎಂದು ಹೇಳಿದ ಅನಂತಕುಮಾರ್ ಅವರು, ʻʻನೀನು ಬಾ ಅಥವಾ ಬಿಡು. ಆದರೆ ರಾಮ ಜನ್ಮಭೂಮಿಯಲ್ಲಿ ನಡೆಯೋದು ಏನೂ ನಿಲ್ಲೋದಿಲ್ಲ ಮಗನೇʼʼ ಎಂದು ಏಕವಚನದಲ್ಲಿ ನಿಂದಿಸಿದರು. ಹಿಂದೆ ಅಯೋಧ್ಯೆಗೆ ಹೋಗುವುದಿಲ್ಲ ಎಂದಿದ್ದ ಸಿದ್ದರಾಮಯ್ಯ ಅವರು ನಂತರ ಹೋಗುತ್ತೇನೆ ಎಂದು ಹೇಳಿದ್ದಾರೆ. ಇದು ಹಿಂದೂ ಸಮಾಜದ ತಾಕತ್ತು ಎಂದು ಹೆಗಡೆ ಹೇಳಿದರು.
ಸಂಸದರ ಭಾಷೆ ಅವರ ಸಂಸ್ಕೃತಿ ಹೇಳುತ್ತದೆ ಎಂದ ಸಿದ್ದರಾಮಯ್ಯ
ಕಾರವಾರದ ಸಂಸದ ಅನಂತಕುಮಾರ್ ಮಾತಿಗೆ ಶನಿವಾರ ಕೂಡಲ ಸಂಗಮದಲ್ಲಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ʻʻರಾಜಕೀಯ ಉದ್ದೇಶದಿಂದ ಕಾರವಾರ ಸಂಸದ ಅನಂತಕುಮಾರ ಹೆಗ್ಡೆಯವರು ರಾಜ್ಯದ ಮುಖ್ಯಮಂತ್ರಿಗಳಿಗೆ ಅಶ್ಲೀಲ ಪದಗಳನ್ನು ಬಳಸಿದ್ದರೆ, ಆ ಭಾಷೆ ಅವರ ಸಂಸ್ಕೃತಿಯನ್ನು ಬಿಂಬಿಸುತ್ತದೆʼʼ ಎಂದರು.
ʻʻಇಂತಹ ಹೇಳಿಕೆಗಳು ಅವರ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಕೇಂದ್ರದ ಮಂತ್ರಿಯಾಗಿದ್ದಾಗ, ಸಂವಿಧಾನವನ್ನೇ ಬದಲಾಯಿಸುತ್ತೇನೆ ಎಂದು ಹೇಳಿದ್ದ ಅನಂತ ಕುಮಾರ್ ಹೆಗ್ಡೆಯವರಿಂದ ಉತ್ತಮ ಸಂಸ್ಕೃತಿಯನ್ನು ಅಪೇಕ್ಷಿಸಲು ಸಾಧ್ಯವಿಲ್ಲ. ಅವರ ಭಾಷೆ ಸುಸಂಸ್ಕೃತವಾಗಿಲ್ಲ. ಈ ಭಾಷೆ ಅವರ ಘನತೆಗೆ ಕುಂದು ಬರುತ್ತದೆʼʼ ಎಂದರು ಸಿದ್ದರಾಮಯ್ಯ.
ಅನಂತ್ ಕುಮಾರ್ ವಿರುದ್ಧ ಕ್ರಮದ ಬಗ್ಗೆ ಪರಿಶೀಲನೆ ಎಂದ ಪರಮೇಶ್ವರ್
ʻʻಅನಂತಕುಮಾರ್ ಹೆಗಡೆಯವರು ಈ ರಾಜ್ಯದ ಸಂಸದರು. ಕೇಂದ್ರದಲ್ಲಿ ಸಚಿವರಾಗಿದ್ದಂತವರು. ಅವರು ಮಾತನಾಡಬೇಕಾದರೆ ಜವಾಬ್ದಾರಿಯಿಂದ ಮಾತನಾಡಬೇಕು. ಅದನ್ನು ನಾವೆಲ್ಲ ನಿರೀಕ್ಷೆ ಮಾಡುತ್ತೇವೆ. ಕಳೆದ ಮೂರು ವರ್ಷದಿಂದಲೂ ಅವರು ಏನು ಮಾತನಾಡಿರಲಿಲ್ಲ. ಸಾರ್ವಜನಿಕವಾಗಿ ಕಾಣಿಸ್ತಾನೂ ಇರಲಿಲ್ಲ. ಇದ್ದಕ್ಕಿದ್ದ ಹಾಗೆ ಚುನಾವಣೆ ಹತ್ತಿರ ಬರುತ್ತಿದ್ದ ಹಾಗೆ ಸಾರ್ವಜನಿಕವಾಗಿ ಅನೇಕ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಅದರ ಬಗ್ಗೆ ನಮ್ಮ ತಕರಾರಿಲ್ಲ. ಆದರೆ ಅವಹೇಳನಕಾರಿಯಾಗಿ ಮಾತನಾಡುವಂಥದ್ದು, ಬೇರೆಯವರ ಬಗ್ಗೆ ನಿಂದಿಸಿ ಮಾತನಾಡುವಂಥದ್ದು, ಅಸಂಬದ್ಧವಾಗಿ, ಪ್ರಚೋದನಕಾರಿಯಾಗಿ ಮಾತನಾಡುವಂತದ್ದು ಇದೆಲ್ಲವನ್ನು ನಾವು ಗಮನಿಸುತ್ತಿದ್ದೇವೆ. ಪೊಲೀಸ್ ಇಲಾಖೆಯಲ್ಲಿ ಇದನ್ನೆಲ್ಲ ಗಮನಿಸುತ್ತಾರೆ. ಕಾನೂನಿನ ಅಡಿಯಲ್ಲಿ ಯಾವ ರೀತಿ ನೋಡಬೇಕು ಎಂಬುದನ್ನು ನೋಡುತ್ತೇವೆʼʼ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ.
ʻʻನಾವೆಲ್ಲರೂ ಕೂಡ ಸಾರ್ವಜನಿಕ ಬದುಕಿನಲ್ಲಿ ಒಂದಲ್ಲ ಒಂದು ರೀತಿ ಜವಾಬ್ದಾರಿಯಿಂದ ಕೆಲಸ ಮಾಡುತ್ತಿರುವವರು.ನಾವು ಹೇಳಿಕೆಗಳನ್ನು ಜವಾಬ್ದಾರಿಯಿಂದ ಕೊಡಬೇಕು. ನಮಗೆ ನಮ್ಮದೇ ಆದ ಭಾವನೆಗಳಿರುತ್ತವೆ. ಸಂಸ್ಕೃತಿ ಇರುತ್ತದೆ. ಆ ರೀತಿ ಮಾತನಾಡಿದರೆ ಅವರ ಸಂಸ್ಕೃತಿ ಏನು ಅಂತ ತೋರಿಸುತ್ತದೆ ಎಂದು ಜನ ಹೇಳುತ್ತಾರೆ. ಅವರ ಹೇಳಿಕೆಯನ್ನ ಯಾರು ಒಪ್ಪುವುದಿಲ್ಲʼʼ ಎಂದು ಜಿ. ಪರಮೇಶ್ವರ್ ನುಡಿದರು.
ʻʻಸಮಾಜದಲ್ಲಿ ಶಾಂತಿ ಕಾಪಾಡಬೇಕಾದ ಜವಾಬ್ದಾರಿ ನಮ್ಮದು. ಆ ಶಾಂತಿಯನ್ನು ಕದಡುವಂಥ ಕೆಲಸ ಮಾಡುವುದು ಸರಿ ಕಾಣುತ್ತಾ..? ನೀವೇ ಯೋಚನೆ ಮಾಡಿ. ಅವರು ವೈಯಕ್ತಿಕವಾಗಿ ಏನಾದರೂ ಹೇಳಿಕೊಳ್ಳಲಿ. ಸಮಾಜದ ಶಾಂತಿಯನ್ನು ಕದಾಡುವ ಕೆಲಸ ಆಗಬಾರದುʼʼ ಎಂದು ಮಸೀದಿ ಒಡೆಯುವ ಹೇಳಿಕೆಗೆ ಜಿ. ಪರಮೇಶ್ವರ್ ಪ್ರತಿಕ್ರಿಯಿಸಿದರು.
ಅವರಿಗೆ ಶ್ರೀರಾಮನೇ ಒಳ್ಳೆಯ ಮನಸ್ಸು ಕೊಡಬೇಕು. ಆದರೆ, ಅವರ ಹೇಳಿಕೆಗಳಿಂದ ಏನಾದರೂ ಘಟನೆಗಳು ನಡೆದರೆ ಖಂಡಿತ ಅವರೇ ಜವಾಬ್ದಾರಿ ಆಗುತ್ತಾರೆ ಎಂದು ಎಚ್ಚರಿಕೆ ನೀಡಿದರು.