Site icon Vistara News

MP DK Suresh : ನಾನೇ ನಿಮ್ಮ ಮುಂದೆ ಬರ್ತೇನೆ, ಗುಂಡಿಟ್ಟು ಕೊಲ್ಲಿ; ಈಶ್ವರಪ್ಪಗೆ ಡಿಕೆಸು ಸವಾಲ್‌

MP DK Suresh KS Eshwarappa

ಬೆಂಗಳೂರು: ಈಶ್ವರಪ್ಪನವರೇ ನಾನೇ ನಿಮ್ಮ ಮುಂದೆ ಬರ್ತೇನೆ, ಗುಂಡಿಟ್ಟು ಕೊಲ್ಲಿ ಎಂದು ಸವಾಲು ಹಾಕಿದ್ದಾರೆ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್‌ (MP DK Suresh). ದೇಶ ವಿಭಜನೆ ಹೇಳಿಕೆ (Dividing the Nation) ನೀಡಿದವರನ್ನು ಗುಂಡಿಟ್ಟು ಕೊಲ್ಲಬೇಕು, ಅಂಥ ಕಾನೂನು ಬರಬೇಕು ಎಂಬ ಬಿಜೆಪಿ ನಾಯಕ ಕೆ.ಎಸ್‌. ಈಶ್ವರಪ್ಪ (KS Eshwarappa) ಅವರ ಹೇಳಿಕೆಗೆ ಡಿ.ಕೆ. ಸುರೇಶ್‌ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ʻʻಇತಿಹಾಸ ನಿಮಗೆಲ್ಲಾ ಗೊತ್ತಿದೆ. ಮಹಾತ್ಮ ಗಾಂಧಿಯವರನ್ನೇ ಕೊಂದ ಪಕ್ಷ ಅವರದು.. ನಾನೊಬ್ಬ ಸಣ್ಣ ವ್ಯಕ್ತಿ. ಕನ್ನಡಿಗರ ಪರವಾಗಿ ಮಾತನಾಡಿದ್ದಕ್ಕೆ‌ ಹೀಗೆ ಹೇಳಿರಬಹುದು. ಕನ್ನಡಿಗರ ಪರವಾಗಿ ಮಾತನಾಡಿದ್ದಕ್ಕೆ ಕೊಲ್ಲುವುದಾದರೆ ಸಾಯಲು ನಾನು ಸಿದ್ಧʼʼ ಎಂದು ಹೇಳಿದರು. ಪಕ್ಷದಲ್ಲಿ ಅವರನ್ನು ಮೂಲೆ ಗುಂಪು ಮಾಡಿದ್ದಾರೆ. ಅದಕ್ಕೆ ಈಗ ಗಮನ ಸೆಳೆಯಲು ಮಾತನಾಡುತ್ತಿದ್ದಾರೆ ಎಂದೂ ಹೇಳಿದರು.

ʻʻಕೆ.ಎಸ್‌.ಈಶ್ವರಪ್ಪ ಅವರು ಇಂಥ ಹೇಳಿಕೆಗಳ ಮೂಲಕ ಬಡವರ ಮಕ್ಕಳನ್ನು ಯಾಕೆ ರೊಚ್ಚಿಗೆಬ್ಬಿಸಬೇಕು, ಬಡವರ ಮಕ್ಕಳನ್ನು ಯಾಕೆ ಬಾವಿಗೆ ತಳ್ಳಬೇಕು? ನಾನೇ ಅವರಿಗೆ ಸಮಯ ಕೊಡುತ್ತೇನೆ. ಒಂದು ವಾರದಲ್ಲಿ ಯಾವಾಗ ಅಂತ ಹೇಳ್ತೀನಿ. ನಾನೇ ಅವರ ಮನೆಗೆ ಹೋಗ್ತೀನಿ ಅವರೇ ಗುಂಡು ಹೊಡೆಯಲಿʼʼ ಎಂದು ಸಂಸದ ಡಿ.ಕೆ ಸುರೇಶ್‌ ಹೇಳಿದರು.

ʻʻನಾನೇನು ಭಾರತರ ವಿರೋಧಿ ಅಲ್ಲ. ಭಾರತದ ಒಕ್ಕೂಟದ ವ್ಯವಸ್ಥೆಯಲ್ಲಿ ಇದ್ದೇನೆ. ನಾನು ಸಂವಿಧಾನದ ಆಶಯದಂತೆ ಕೆಲಸ ಮಾಡುತ್ತಿದ್ದೇನೆ. ನನ್ನನ್ನು ದೇಶದ್ರೋಹಿ ಎಂದು ಬಿಂಬಿಸಿ ಕೊಲ್ಲಬೇಕು ಎಂದು ಇಚ್ಛಾಶಕ್ತಿ ನಿಮಗಿದ್ದರೆ ನಿಮ್ಮ ಮುಂದೆ ಬಂದು ನಿಲ್ಲುತ್ತೇನೆ ಈಶ್ವರಪ್ಪನವರೇ, ನೀವು ರೆಡಿಯಾಗಿರಿʼʼ ಎಂದು ಡಿ.ಕೆ. ಸುರೇಶ್‌ ಕಟುವಾಗಿ ಹೇಳಿದರು.

ಇದನ್ನೂ ಓದಿ: KS Eshwarappa: ಡಿ.ಕೆ. ಸುರೇಶ್‌ಗೆ ಗುಂಡಿಕ್ಕಿ ಎಂದ ಈಶ್ವರಪ್ಪ ಮೇಲೆ ಲೀಗಲ್ ಆ್ಯಕ್ಷನ್: ಸಿಎಂ ಸಿದ್ದರಾಮಯ್ಯ

ಹಿಂದುಗಳ ಟ್ಯಾಕ್ಸ್‌ ಹಿಂದುಗಳಿಗೆ ಹೇಳಿಕೆಗೆ ಡಿ.ಕೆ. ಸುರೇಶ್‌ ಸ್ವಾಗತ

ʻʻಹಿಂದೂಗಳ ಟ್ಯಾಕ್ಸ್ ಹಿಂದೂಗಳಿಗೆ ಕೊಡಬೇಕುʼʼ ಎಂಬ ಬೆಳ್ತಂಗಡಿಯ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಅವರು, ʻʻಒಳ್ಳೆಯದು, ಒಬ್ಬೊಬ್ಬರಾಗಿ ಒಂದೊಂದಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇಲ್ಲಿವರೆಗೆ ಎಲ್ಲರೂ ಮೌನವಾಗಿದ್ದರು. ಇಂದು ಚರ್ಚೆ, ವ್ಯಾಖ್ಯಾನ ಬೇರೆ ಬೇರೆ ರೀತಿಯಲ್ಲಿ ನಡೆಯುತ್ತಿದೆ. ನಡೆಯಬೇಕುʼʼ ಎಂದರು.

ʻʻನಿರಂತರವಾಗಿ ಕರ್ನಾಟಕದ ಕನ್ನಡಿಗರಿಗೆ ಅನ್ಯಾಯ ಆಗ್ತಿದೆ. ನಮ್ಮ ತೆರಿಗೆ ಪಾಲು ಎಷ್ಟಿದೆ? ನಮಗೆ ಎಷ್ಟು ವಾಪಸ್‌ ಬರ್ತಿದೆ? ಬೇರೆ ರಾಜ್ಯಗಳಿಗೆ ಎಷ್ಟು ಹೋಗುತ್ತಿದೆ. ಯಾವೆಲ್ಲ ಯೋಜನೆ ಕರ್ನಾಟಕಕ್ಕೆ ಸಿಕ್ಕಿದೆ? ಯಾವ ವರ್ಷಗಳಿಂದ ಯೋಜನೆಗಳು ರಾಜ್ಯಕ್ಕೆ ಸಿಗ್ತಿವೆ ಎಂದು ಕೇಳುವುದರಲ್ಲಿ ತಪ್ಪೇನಿದೆʼ ಎಂದು ಕೇಳಿದರು ಡಿ.ಕೆ. ಸುರೇಶ್‌.

ನಮಗೆ ನಮ್ಮ ತೆರಿಗೆ ಹಣ ಬೇಡ ಎಂದು ಹೇಳಿ: ಆರ್‌. ಅಶೋಕ್‌ಗೆ ಸವಾಲು

ಡಿ.ಕೆ ಸುರೇಶ್ ರಕ್ಷಣೆ ಮಾಡುವ ಉದ್ದೇಶದಿಂದ ಕಾಂಗ್ರೆಸ್ ತೆರಿಗೆ ಹೋರಾಟಕ್ಕೆ ಮುಂದಾಗಿದೆ ಎಂಬ ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅಶೋಕ್‌ ಅವರು ನಮಗೆ ಕನ್ನಡಿಗರ ಆಸ್ತಿ ಬೇಡ, ಕನ್ನಡಿಗರ ತೆರಿಗೆ ಹಣ ಬೇಡ ಎಂದು ತೀರ್ಮಾನ ಮಾಡಲಿ. ನಮಗೆ ನಮ್ಮ‌ ಹಣ ವಾಪಸ್‌ ಕೊಡುವುದು ಬೇಡ, ಎಲ್ಲಾ ಉತ್ತರ ಪ್ರದೇಶಕ್ಕೆ ಕೊಡ್ಲಿ ಎಂದು ಹೇಳ್ತಾರಾ? ಉತ್ತರ ಪ್ರದೇಶವೇ ಉದ್ಧಾರ ಆಗ್ಲಿ, ಬಿಹಾರ ಉದ್ಧಾರ ಆಗ್ಲಿ ಎಂಬ ಸ್ಥಾನದಲ್ಲಿ ಇದಾರಾ? ಅದನ್ನಾದರೂ ನೇರವಾಗಿ ಹೇಳಲಿ ಎಂದು ಹೇಳಿದರು.

ಆರ್. ಅಶೋಕ್ ಅವರು ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದಾರೆ. ಆದರೂ ನಮ್ಮ ಹಣ ಬೇಡ, ನಮಗೆ 13 ಪೈಸೆ ಸಾಕು ಅಂದರೆ ಅದನ್ನಾದರೂ ಹೇಳಲಿ ಎಂದು ಸವಾಲು ಹಾಕಿದರು. ʻʻನಾವು ಉದ್ಯೋಗ ಕೊಡ್ತಿದ್ದೇವೆ, ಬದುಕು ಕೊಡ್ತಿದ್ದೇವೆ, ನೀರು ಕೊಡ್ತಿದ್ದೇವೆ. ತೆರಿಗೆಯಲ್ಲಿ ವಂಚನೆ ಎಷ್ಟು ದಿನ ಸಹಿಸಬೇಕು. ಈ ವಿಚಾರದಲ್ಲಿ ಬೇಕಾದರೆ ಆರ್.ಅಶೋಕ್ ಚರ್ಚೆಗೆ ಬರಲಿʼʼ ಎಂದು ನುಡಿದರು.

Exit mobile version