ದಾವಣಗೆರೆ: ʻಬಿ.ಎಸ್. ಯಡಿಯೂರಪ್ಪ (BS Yediyurappa) ಅವರ ಕಣ್ಣೀರಿನಿಂದಾಗಿ ಬಿಜೆಪಿ ರಾಜ್ಯದಲ್ಲಿ ಈ ರೀತಿಯಾಗಿ ಹಾಳಾಗಿದೆ. ಈಗಲೂ ಕಾಲ ಮಿಂಚಿಲ್ಲ. ಬಿವೈ ವಿಜಯೇಂದ್ರ (BY Vijayendra) ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ (BJP State President) ಮಾಡಿʼʼ ಎಂದು ಮಾಜಿ ಸಚಿವ, ಬಿಜೆಪಿ ನಾಯಕ ಎಂ.ಪಿ. ರೇಣುಕಾಚಾರ್ಯ (MP Renukacharya) ಹೊಸ ವರಸೆ ಎತ್ತಿದ್ದಾರೆ.
ಬಿಜೆಪಿಯಿಂದ ಒಂದು ಕಾಲು ಹೊರಗೆ ಇಟ್ಟಂತಿರುವ, ಅದೇ ಹೊತ್ತಿಗೆ ದಾವಣಗೆರೆಗೆ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದು ಹೇಳಿಕೊಳ್ಳುತ್ತಿರುವ ರೇಣುಕಾಚಾರ್ಯ ಅವರು, ಇದೀಗ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡಬೇಕು ಎಂಬ ಬೇಡಿಕೆಯನ್ನು ಮಂಡಿಸಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಅವರು, ʻಪ್ರತಿಪಕ್ಷದ ನಾಯಕರನ್ನು ಆಯ್ಕೆ ಮಾಡಿಲ್ಲ, ಬಿಜೆಪಿ ರಾಜ್ಯಾಧ್ಯಕ್ಷರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿಲ್ಲ. ಈಗಲಾದರೂ ಆತ್ಮಾವಲೋಕನ ಮಾಡಿಕೊಂಡು ಮುನ್ನಡೆದರೆ ಬಿಜೆಪಿಗೆ ಒಳಿತು. ಅದನ್ನು ಬಿಟ್ಟು ಮೋದಿಯವರ ಹೆಸರು ಹೇಳಿಕೊಂಡು ಹೋಗುತ್ತಿದ್ದಾರೆ. ಇಲ್ಲಿ ಅದನ್ನು ಮತಗಳಾಗಿ ಪರಿವರ್ತನೆ ಮಾಡೋದು ರಾಜ್ಯ ನಾಯಕರ ಕರ್ತವ್ಯವಲ್ಲವೇ? ಬಿಜೆಪಿ 10 ವರ್ಷ ಬರಬಾರದು ಎಂದು ನಮ್ಮ ನಾಯಕರೇ ಹೀಗೆ ಮಾಡಿರಬಹುದುʼʼ ಎಂದು ಗೇಲಿ ಮಾಡಿದರು.
ಅಪ್ಪನ ಮುಖ ನೋಡಿ ಅಲ್ಲ, ಅವರ ಶಕ್ತಿ ನೋಡಿ ಕೊಡಿ
ʻʻಬಿಜೆಪಿಗೆ ಸಮರ್ಥ ನಾಯಕರ ಅಡಳಿತ ಬೇಕಾಗಿದೆ. ಯಡಿಯೂರಪ್ಪ ನವರ ಕಣ್ಣೀರಿನಿಂದ ಬಿಜೆಪಿ ಹಾಳಾಗಿದೆ. ಯಡಿಯೂರಪ್ಪನವಂತೆ ಅವರ ಪುತ್ರ ಬಿ.ವೈ ವಿಜಯೇಂದ್ರ ರಾಜ್ಯಾಧ್ಯಕ್ಷ ಆಗಬೇಕು. ಅವರಿಗೆ ಯಡಿಯೂರಪ್ಪ ಪುತ್ರ ಎಂದು ಸ್ಥಾನಮಾನ ಕೊಡಬೇಡಿ. ಅವರ ಸಂಘಟನಾ ಶಕ್ತಿ ನೋಡಿ ಕೊಡಬೇಕು. ಯುವ ಮೋರ್ಚಾ ರಾಜ್ಯಾಧ್ಯಕ್ಷರಾಗಿ ಸಂಘಟನೆ ಮಾಡಿದ್ದಾರೆ. ಬಿಜೆಪಿ ಉಪಾಧ್ಯಕ್ಷರಾಗಿ ಸಂಘಟನೆ ಮಾಡಿದ್ದಾರೆ. ರಾಜ್ಯದ ಎಲ್ಲ ಕರೆ ಓಡಾಡಿ ಸಂಘಟನೆ ಮಾಡಿರೋದು ವಿಜಯೇಂದ್ರ. ಅದ್ದರಿಂದ ರಾಜ್ಯಾಧ್ಯಕ್ಷ ಸ್ಥಾನವನ್ನು ವಿಜಯೇಂದ್ರಗೆ ನೀಡಬೇಕುʼʼ ಎಂದು ಎಂದು ಎಂ.ಪಿ. ರೇಣುಕಾಚಾರ್ಯ ಒತ್ತಾಯ ಮಾಡಿದರು.
ಬಿಜೆಪಿ- ಜೆಡಿಎಸ್ ಮೈತ್ರಿಗೆ ಅಸಮಾಧಾನ
ಬಿಜೆಪಿ ಮತ್ತು ಜೆಡಿಎಸ್ ಮಾಡಿಕೊಂಡಿರುವ ಮೈತ್ರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ರೇಣುಕಾಚಾರ್ಯ ಅವರು, ʻʻಬಿಜೆಪಿ ಕಾರ್ಯಕರ್ತರಿಗೆ ಅಸ್ತಿತ್ವದ ಪ್ರಶ್ನೆಯಾಗುತ್ತದೆ. ಒಂದು ಪಕ್ಷದ ವಿರುದ್ಧ ನಾವು ಮೈತ್ರಿಯಾಗಬಾರದು. ರಾಜ್ಯದ ಅಭಿವೃದ್ಧಿಗೆ ಮೈತ್ರಿ ಮಾಡಿಕೊಂಡು ಒಂದಾಗಬೇಕು. ನೆಲ ಜಲದ ವಿಚಾರದ ಬಗ್ಗೆ ಮೈತ್ರಿಯಾಗಬೇಕು. ಅದನ್ನು ಬಿಟ್ಟು ಒಂದು ಸರ್ಕಾರ, ಪಕ್ಷವನ್ನು ಸೋಲಿಸಲು ಒಂದಾಗೋದು ಸರಿಯಲ್ಲʼʼ ಎಂದು ಹೇಳಿದರು.
ತಮಿಳುನಾಡಿಗೆ ನೀರು ಬಿಡಬಾರದಿತ್ತು ಎಂದು ರೇಣುಕಾ
ʻʻಕಾವೇರಿ ನೀರಿಗಾಗಿ ಹಲವು ಸಂಘಟನೆಗಳು ಬೆಂಬಲದೊಂದಿಗೆ ಕರ್ನಾಟಕ ಬಂದ್ ನಡೆಯುತ್ತಿದೆ. ತಮಿಳುನಾಡಿಗೆ ನೀರು ಬಿಡುವ ಅವಶ್ಯಕತೆ ಇರಲಿಲ್ಲ. ಯಾವುದೇ ಕಾರಣಕ್ಕೂ ನೀರನ್ನು ಬಿಡಬಾರದು ಎಂದು ಮನವಿ ಮಾಡುತ್ತೇನೆ. ಕೇಂದ್ರ ಇರಬಹುದು, ರಾಜ್ಯ ಇರಬಹುದು ಇಬ್ಬರಿಗೂ ಒತ್ತಾಯ ಮಾಡುತ್ತೇನೆ. ಪ್ರತಿ ವರ್ಷ ಇದೇ ರೀತಿ ಪ್ರತಿಭಟನೆ, ಬಂದ್ ಮಾಡಬೇಕಾಗುತ್ತದೆʼʼ ಎಂದು ಎಚ್ಚರಿಸಿದರು.
ʻʻರೈತರು ತೀವ್ರವಾದ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಸರ್ಕಾರ ಕೂಡಲೇ ಬರ ಪರಿಹಾರ ನೀಡಬೇಕು. ಹಾನಿಯಾದ ಬೆಳೆಗಳಿಗೆ ಸೂಕ್ತ ಪರಿಹಾರ ನೀಡಬೇಕು. ರೈತರ ಪರವಾಗಿ ಸರ್ಕಾರ ನಿಲ್ಲಬೇಕಿದೆʼʼ ಎಂದು ಸಲಹೆ ನೀಡಿದರು.
ನಾನು ಕಾಂಗ್ರೆಸ್ ವಕ್ತಾರ ಅಲ್ಲ!
ಕಾಂಗ್ರೆಸ್ ಬಗ್ಗೆ ರೇಣುಕಾಚಾರ್ಯ ಅವರು ಸಾಫ್ಟ್ ಕಾರ್ನರ್ ಹೊಂದಿದ್ದಾರೆ ಎಂಬ ಮಾತಿನ ಬಗ್ಗೆ ಕೇಳಿದಾಗ, ʻʻನಾನೇನು ಕಾಂಗ್ರೆಸ್ ವಕ್ತಾರ ಅಲ್ಲ. ಒಳ್ಳೇ ಕೆಲಸ ಮಾಡಿದಾಗ ಒಳ್ಳೆಯದಾಗಿ ಮಾತನಾಡಬೇಕಿದೆʼʼ ಎಂದರು.
ನಾನು ಲೋಕಾಸಭಾ ಚುನಾವಣೆ ಅಕಾಂಕ್ಷಿ
ದಾವಣಗೆರೆಗೆ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ತಾನು ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ ಅವರು, ʻʻನಾನು ಸಚಿವನಾಗಿದ್ದಾಗ ಇಡೀ ರಾಜ್ಯದ ಉದ್ದಗಲಕ್ಕೂ ಓಡಾಡಿದೆ. ಯುವಕರು ಆಹ್ವಾನ ನೀಡಿದ್ದಕ್ಕೆ ನಾನು ಜಿಲ್ಲಾಧ್ಯಂತ ಓಡಾಟ ಮಾಡುತ್ತೇನೆ. ಸನಾತನ ಹಿಂದೂ ಧರ್ಮದ ಅಚರಣೆಯಲ್ಲಿ ನಾನು ಭಾಗವಹಿಸುತ್ತೇನೆʼʼ ಎಂದರು.
ಕಾಂಗ್ರೆಸ್ ಅಧಿಕಾರದಲ್ಲಿ ಲಿಂಗಾಯತ ಅಧಿಕಾರಿಗಳನ್ನು ಮೂಲೆಗುಂಪು ಮಾಡುತ್ತಿದ್ದಾರೆ ಎಂಬ ಶಾಮನೂರು ಶಿವಶಂಕರಪ್ಪ ಹೇಳಿಕೆಯನ್ನು ಸಮರ್ಥಿಸಿಕೊಂಡರು ಎಂಪಿ ರೇಣುಕಾಚಾರ್ಯ. ಅವರು ಹಿರಿಯರು ಅವರು ಹೇಳಿದ್ದಾರೆ, ಅದು ಇದ್ದರೂ ಇರಬಹುದು. ಅದನ್ನು ಸರ್ಕಾರ ಸರಿಪಡಿಸಿಕೊಳ್ಳಬೇಕು ಎಂದ ರೇಣುಕಾಚಾರ್ಯ.