ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರ ಪ್ರಾಸಿಕ್ಯೂಶನ್ ಹೈಕೋರ್ಟ್ (Muda Scam) ಎತ್ತಿ ಹಿಡಿದಿದೆ. ಹೀಗೆ ತನಿಖೆಗೆ ಗ್ರೀನ್ ಸಿಗ್ನಲ್ ಕೊಟ್ಟಿರುವ ತೀರ್ಪಿನಲ್ಲಿ ಸಿದ್ದರಾಮಯ್ಯ ಅವರಿಗೆ ಹೈಕೋರ್ಟ್ ಕಪಾಳ ಮೋಕ್ಷ ಮಾಡಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು ಮತ್ತು ಕರ್ನಾಟಕ ವಿಧಾನ ಪರಿಷತ್ ಶಾಸಕರಾದ ಟಿ. ಎ. ಶರವಣ ಜೆಡಿಎಸ್ ಪಕ್ಷದ ವತಿಯಿಂದ ಫ್ರೀಡಂ ಪಾರ್ಕ್ ನಲ್ಲಿ ನಡೆದ ಪ್ರತಿಭಟನೆಯ ವೇಳೆ ತಿಳಿಸಿದರು.
ಮೂಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ತಮ್ಮ ಕುಟುಂಬಕ್ಕೆ ನೆರವಾಗುವ ರೀತಿಯಲ್ಲಿ ಮುಖ್ಯಂತ್ರಿಯಾಗಿ ಪ್ರಭಾವದ ದುರ್ಬಳಕೆ ಮಾಡಿದ್ದಾರೆ ಎಂದು ನ್ಯಾಯಾಲಯ ಸ್ಪಷ್ಟವಾಗಿ ತನ್ನ ಆದೇಶದಲ್ಲಿ ತಿಳಿಸಿದೆ. ಸಿದ್ದರಾಮಯ್ಯ ಪತ್ನಿ ಅವರ ಸೈಟು ಪರ ಪ್ರತಿಬಾರಿಯೂ ಮೂಡಾ ತೀರ್ಮಾನ ಕೈಗೊಳ್ಳುವಾಗ ಸಿದ್ದರಾಮಯ್ಯ ಪ್ರಭಾವಿ ಹುದ್ದೆಯಲ್ಲಿ ಇದ್ದರು. ಈ ಹುದ್ದೆಯ ಪ್ರಭಾವದಿಂದ ಎರಡು ಸೈಟುಗಳು ಪರಿಹಾರವಾಗಿ ಸಿಗುವ ಬದಲು 14ಸೈಟುಗಳು ಸಿಕ್ಕಿವೆ ಎಂದು ನ್ಯಾಯಾಲಯ ಹೇಳಿದೆ ಎಂದು ತಿಳಿಸಿದರು.
ಅಂದ್ರೆ ಹೈಕೋರ್ಟ್ ಸಿದ್ದರಾಮಯ್ಯ ಅವರಿಗೆ ಬಹುತೇಕ ಛೀಮಾರಿ ಹಾಕಿದೆ. ಈ ಪ್ರಕರಣಕ್ಕೂ ನನಗೂ ಸಂಬಂಧ ಇಲ್ಲ ಎಂದು ಸಿಎಂ ಹೇಳಿದರೂ , 62ಕೋಟಿ ರೂಪಾಯಿ ಪರಿಹಾರ ಕೇಳಿದ್ದೇಕೆ? ಎನ್ನುವುದು ನ್ಯಾಯಾಲಯ ಪ್ರಶ್ನೆ. ಹಾಗೆ ಇದು ನಮ್ಮೆಲ್ಲರ ಪ್ರಶ್ನೆ ಕೂಡ ಎಂದು ಈ ವೇಳೆ ತಿಳಿಸಿದರು.
ಹೀಗಾಗಿ ಸಿದ್ದರಾಮಯ್ಯ ರಾಜೀನಾಮೆ ಕೊಡದೆ ಬೇರೆ ದಾರಿ ಇಲ್ಲ. ತನಿಖೆಗೆ ಹಸಿರು ನಿಶಾನೆ ಕೊಡುವ ಭರಾಟೆ ಯಲ್ಲಿ ನ್ಯಾಯಾಲಯ ಈ ಮೂಡಾ ಪ್ರಕರಣದಲ್ಲಿ ಸಿಎಂ ಭಾಗಿ ಆಗಿರುವುದನ್ನು ಖಚಿತಪಡಿಸಿದ್ದು, ಅವರು ರಾಜೀನಾಮೆ ಕೊಡಲೇ ಬೇಕು. ಆರೋಪಕ್ಕೆ ಗುರಿಯಾದ ವ್ಯಕ್ತಿ ಪ್ರಭಾವಿ ಹುದ್ದೆಯಲ್ಲಿ ಇದ್ದರೆ ನಿಷ್ಪಕ್ಸಪಾತವಾದ ತನಿಖೆ ಆಗುವುದಿಲ್ಲ. ಆದ್ದರಿಂದ ನಿಷ್ಪಕ್ಷಾತದಿಂದ ತನಿಖೆ ಆಗಬೇಕಾದರೆ ಸಿಎಂ ರಾಜೀನಾಮೆ ನೀಡಲೇಬೇಕು.
ಇನ್ನೂ ಅತ್ಯಂತ ಮುಖ್ಯ ಅಂದ್ರೆ ರಾಜ್ಯದ ಪೊಲೀಸರು ಸಿಎಂ ಕೈ ಕೆಳಗೆ ಬರುವುದರಿಂದ ಪೊಲೀಸ್ ತನಿಖೆಯಿಂದ ನ್ಯಾಯ ಸಿಗುವುದು ಅನುಮಾನ. ಪಾರದರ್ಶಕ ತನಿಖೆ ಸಾಧ್ಯವಿಲ್ಲ. ಆದ್ದರಿಂದ ಈ ಬಗ್ಗೆ ಸಿಬಿಐ ತನಿಖೆ ನಡೆಯಬೇಕು ಎಂದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ