Site icon Vistara News

‌Lok Sabha Election 2024: ಮುದ್ದಹನುಮೇಗೌಡ ಘರ್ ವಾಪ್ಸಿ ಪಾಲಿಟಿಕ್ಸ್; ತುಮಕೂರು ಲೋಕಸಭಾ ಟಿಕೆಟ್‌ ಫಿಕ್ಸ್?

Muddahanumegowda

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಲೋಕಸಭಾ ಚುನಾವಣೆಗೆ (‌Lok Sabha Election 2024) ಭರ್ಜರಿ ಸಿದ್ಧತೆಯನ್ನು ನಡೆಸಲಾಗುತ್ತಿದೆ. ಒಂದು ಕಡೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಭಾರತ್‌ ಜೋಡೊ ನ್ಯಾಯ ಯಾತ್ರೆಯನ್ನು (Bharat Jodo Nyay Yatra) ಆರಂಭ ಮಾಡಿದ್ದಾರೆ. ಅಲ್ಲದೆ, ಕೈ ಹೈಕಮಾಂಡ್‌ (Congress High Command) ಈಗಾಗಲೇ ರಾಜ್ಯ ನಾಯಕರಿಗೆ 28 ಲೋಕಸಭಾ ಕ್ಷೇತ್ರಗಳಲ್ಲಿ ಕನಿಷ್ಠ 20 ಕ್ಷೇತ್ರಗಳನ್ನು ಗೆಲ್ಲುವ ಟಾಸ್ಕ್‌ ನೀಡಿದೆ. ಈ ಸಂಬಂಧ ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿ ಕೈ ಪಾಳೆಯ ಇದೆ. ಈ ಮಧ್ಯೆ ತುಮಕೂರು ಕ್ಷೇತ್ರ ತೀವ್ರ ಕುತೂಹಲವನ್ನು ಕೆರಳಿಸಿದ್ದು, ಮಾಜಿ ಸಂಸದ, ಹಿರಿಯ ರಾಜಕಾರಣಿ ಮುದ್ದಹನುಮೇಗೌಡರನ್ನು ಅಭ್ಯರ್ಥಿಯನ್ನಾಗಿ ಮಾಡಲು ಪ್ಲ್ಯಾನ್‌ ನಡೆದಿದೆ ಎನ್ನಲಾಗಿದೆ.

ಈಗ ಮುದ್ದಹನುಮೇಗೌಡ ಅವರ ಘರ್‌ ವಾಪ್ಸಿ ಪಾಲಿಟಿಕ್ಸ್ ಶುರುವಾಗಿದ್ದು, ಅವರನ್ನೇ ಲೋಕಸಭೆಗೆ ಅಭ್ಯರ್ಥಿಯನ್ನಾಗಿ ಮಾಡಲು ಕಾಂಗ್ರೆಸ್‌ ಉತ್ಸಾಹ ತೋರಿದೆ. ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಪ್ರಬಲ ಅಭ್ಯರ್ಥಿಯ ಹುಡುಕಾಟದಲ್ಲಿ ಕಾಂಗ್ರೆಸ್‌ ನಾಯಕರು ಇದ್ದರು. ನಿಖೇತ್ ರಾಜ್, ಮುರಳಿಧರ ಹಾಲಪ್ಪ, ತುಮಕೂರು ಗ್ರಾಮಾಂತರ ಮಾಜಿ ಶಾಸಕ ಗೌರಿಶಂಕರ, ಜಯಚಂದ್ರ ಪುತ್ರ ಸಂತೋಷ್ ಜಯಚಂದ್ರ ಅವರಿಂದ ಈಗಾಗಲೇ ಈ ಕ್ಷೇತ್ರಕ್ಕೆ ಟಿಕೆಟ್‌ ಲಾಬಿ ನಡೆದಿದೆ. ಆದರೆ, ಈ ನಾಲ್ವರೂ ಪ್ರಬಲ ಅಭ್ಯರ್ಥಿಗಳಲ್ಲ ಎಂಬುದು ತುಮಕೂರು ಜಿಲ್ಲೆಯ ನಾಯಕರ ಅಭಿಪ್ರಾಯವಾಗಿದೆ.

ಇದನ್ನೂ ಓದಿ: HD Kumaraswamy: ಮಾಸಾಶನಕ್ಕಾಗಿ 5 ಕಿ.ಮೀ. ದೂರ ತೆವಳಿದ ವೃದ್ಧೆ; ಕಾಂಗ್ರೆಸ್‌ ವಿರುದ್ಧ ಎಚ್‌ಡಿಕೆ ಕಿಡಿ

ಸ್ಪರ್ಧೆಗೆ ಸಚಿವರ ಹಿಂದೇಟು!

ಎಲ್ಲೆಲ್ಲಿ ಪ್ರಬಲ ಅಭ್ಯರ್ಥಿಗಳು ಇಲ್ಲವೋ ಅಂಥ ಕಡೆ ಸಚಿವರನ್ನೇ ಕಣಕ್ಕಿಳಿಸುವ ತೀರ್ಮಾನವನ್ನು ಕಾಂಗ್ರೆಸ್‌ ಹೈಕಮಾಂಡ್‌ ಮಾಡಿತ್ತು. ಈ ಹಿನ್ನೆಲೆಯಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅವರನ್ನು ಕಣಕ್ಕಿಳಿಯುವಂತೆ ಮೊದಲು ಸೂಚನೆ ನೀಡಿತ್ತು. ಆದರೆ, ಈ ಆಫರ್‌ ಅನ್ನು ನಯವಾಗಿ ತಿರಸ್ಕರಿಸಿದ್ದ ಪರಮೇಶ್ವರ್‌, ಇದು ಸಾಮಾನ್ಯ ಕ್ಷೇತ್ರವಾಗಿದ್ದು, ಇಲ್ಲಿ ನಾನು ನಿಂತರೆ ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ. ಹೀಗಾಗಿ ಸಹಜವಾಗಿ ಕೆ.ಎನ್.‌ ರಾಜಣ್ಣ ಅವರತ್ತ ಹೈಕಮಾಂಡ್‌ ದೃಷ್ಟಿ ನೆಟ್ಟಿದೆ. ಇದರಿಂದ ದಿಗಿಲುಗೊಂಡ ರಾಜಣ್ಣ ಅವರು ಸೂಕ್ತ ಅಭ್ಯರ್ಥಿಯನ್ನು ತಾವು ಹುಡುಕಿ ತರುವುದಾಗಿ ವಾಗ್ದಾನ ನೀಡಿದ್ದಾರೆ. ಈ ಕಾರಣಕ್ಕಾಗಿ ಮುದ್ದಹನುಮೇಗೌಡ ಅವರ ಘರ್ ವಾಪ್ಸಿಗೆ ಮುಂದಾಗಿದ್ದಾರೆ. ಇವರಿಗೆ ಗುಬ್ಬಿ ವಾಸು ಹಾಗೂ ಷಡಕ್ಷರಿ ಸಾಥ್ ನೀಡಿದ್ದಾರೆ.

ಮುದ್ದಹನುಮೇಗೌಡ – ಕಾಂಗ್ರೆಸ್‌ಗೆ ಅನಿವಾರ್ಯ

ಮುದ್ದಹನುಮೇಗೌಡ ಅವರಿಗೂ ಕಾಂಗ್ರೆಸ್‌ ಸೇರ್ಪಡೆ ಅನಿವಾರ್ಯವಾಗಿದೆ. ಕಳೆದ ಬಾರಿ ಅವರು ಸಂಸದರಾಗಿದ್ದಾಗಲೇ ಕಾಂಗ್ರೆಸ್‌ ಟಿಕೆಟ್‌ ನೀಡಿರಲಿಲ್ಲ. ಕಾರಣ, ಕಾಂಗ್ರೆಸ್‌ -ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನು ಕಣಕ್ಕಿಳಿಸಲಾಗಿತ್ತು. ಇದರಿಂದ ಆಕ್ರೋಶಗೊಂಡಿದ್ದ ಮುದ್ದಹನುಮೇಗೌಡ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದರು. ಆದರೆ, ಈ ಬಾರಿ ಅಲ್ಲಿಯೂ ಸಹ ಅವರಿಗೆ ಟಿಕೆಟ್‌ ಸಿಗುವ ಲಕ್ಷಣಗಳು ಕಾಣುತ್ತಿಲ್ಲ. ಮಾಜಿ ಸಚಿವ ಜೆ.ಸಿ. ಮಧುಸ್ವಾಮಿಗೆ ಟಿಕೆಟ್ ಕೊಡುವ ಬಗ್ಗೆ ಕಮಲ ಪಕ್ಷದ ಮಟ್ಟದಲ್ಲಿ ಚರ್ಚೆ ನಡೆದಿದೆ ಎನ್ನಲಾಗಿದೆ. ಹೀಗಾಗಿ ಕಾಂಗ್ರೆಸ್ ಸೇರ್ಪಡೆ ಆಗಿ ಟಿಕೆಟ್ ಪಡೆಯುವ ಲೆಕ್ಕಾಚಾರದಲ್ಲಿ ಮುದ್ದಹನುಮೇಗೌಡ ಇದ್ದಾರೆ. ಇತ್ತ ಕಾಂಗ್ರೆಸ್‌ಗೂ ಸಹ ಪ್ರಬಲ ಅಭ್ಯರ್ಥಿ ಬೇಕಾಗಿದ್ದರಿಂದ ಇವರು ಅನಿವಾರ್ಯವಾಗಿದ್ದಾರೆ ಎನ್ನಲಾಗಿದೆ.

ಒಂದು ಹಂತದ ಮಾತುಕತೆ ಪೂರ್ಣ

ಈ ಬೆಳವಣಿಗೆ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್‌ ನಾಯಕರ ಜತೆ ಮಾಜಿ ಸಂಸದ ಮುದ್ದಹನುಮೇಗೌಡ ಮಾತುಕತೆ ನಡೆಸಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಜತೆ ಮಾತುಕತೆಯನ್ನು ಮುಗಿಸಿದ್ದಾರೆ. ತುಮಕೂರು ಶಾಸಕರು ಮತ್ತು ಸಚಿವರಿಂದಲೇ ಮುದ್ದಹನುಮೇಗೌಡ ಕರೆ ತರುವ ಬಗ್ಗೆ ಆಸಕ್ತಿ ಇರುವುದರಿಂದ ಆಯ್ಕೆಯೂ ಇಲ್ಲಿ ಸುಲಭವಾಗಲಿದೆ ಎಂಬ ಲೆಕ್ಕಾಚಾರಗಳನ್ನು ಹಾಕಿಕೊಳ್ಳಲಾಗಿದೆ.

ಶಾಸಕ ಟಿ.ಬಿ. ಜಯಚಂದ್ರ ವಿರೋಧ

ಈ ಹಂತದಲ್ಲಿ ಶಿರಾ ಶಾಸಕ ಟಿ.ಬಿ. ಜಯಚಂದ್ರ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಪುತ್ರ ಸಂತೋಷ್‌ ಜಯಚಂದ್ರ ಪರ ಬ್ಯಾಟ್ ಬೀಸಿದ್ದಾರೆ. ಆದರೆ, ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಸಚಿವರಾದ ಡಾ. ಜಿ. ಪರಮೇಶ್ವರ್ ಹಾಗೂ ಕೆ.ಎನ್. ರಾಜಣ್ಣ‌ ಅವರು ತಮ್ಮ ವಾದವನ್ನು ಮುಂದಿಟ್ಟಿದ್ದಾರೆ. ಟಿ.ಬಿ. ಜಯಚಂದ್ರ ಅವರ ಕ್ಷೇತ್ರವು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ ಅವರು ತುಮಕೂರು ಲೋಕಸಭಾ ಕ್ಷೇತ್ರದ ಬಗ್ಗೆ ಮಾತನಾಡುವುದು ಬೇಡ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. ಈಗೇನಿದ್ದರೂ ಮುದ್ದಹನುಮೇಗೌಡರಿಗೆ ಟಿಕೆಟ್‌ ಕೊಡುವ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಇದಕ್ಕೆ ಒಪ್ಪುತ್ತಾರೆಯೇ ಎಂಬುದಷ್ಟೇ ಮುಂದಿನ ಕುತೂಹಲವಾಗಿದೆ.

ಇದನ್ನೂ ಓದಿ: ರಾಹುಲ್‌ ಗಾಂಧಿ ನೆಲ ಸ್ಪರ್ಶಿಸಿದಲ್ಲೆಲ್ಲ ಕಾಂಗ್ರೆಸ್‌ ಅವನತಿ; ನ್ಯಾಯವಲ್ಲ, ಡೋಂಗಿ ಯಾತ್ರೆ ಎಂದ ಅಶೋಕ್

ದೇಶದ ಕಾಂಗ್ರೆಸ್‌ ಸಂಸದರ ಪೈಕಿ ಟಿಕೆಟ್‌ ತಪ್ಪಿದ್ದ ಏಕೈಕ ಸಂಸದ

2019ರ ಲೋಕಸಭಾ ಚುನಾವಣೆ ವೇಳೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ರಾಜ್ಯದಲ್ಲಿ ಸಹ ಕೆಲವು ಹೊಂದಾಣಿಕೆಯನ್ನು ಮಾಡಿಕೊಳ್ಳಲಾಗಿತ್ತು. ವಿಧಾನಸಭಾ ಚುನಾವಣೆಯಲ್ಲಿ ಮೊಮ್ಮಗನಿಗೆ ಹಾಸನ ಲೋಕಸಭಾ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ದೇವೇಗೌಡ ಅವರು ತುಮಕೂರು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ಗೆಲುವಿಗೆ ಸುಲಭವಾಗುವ ನಿಟ್ಟಿನಲ್ಲಿ ಕಾಂಗ್ರೆಸ್‌ ತುಮಕೂರಿನಲ್ಲಿ ತನ್ನ ಅಭ್ಯರ್ಥಿಯನ್ನು ನಿಲ್ಲಿಸುವುದಿಲ್ಲ ಎಂಬ ತೀರ್ಮಾನವನ್ನು ಪ್ರಕಟಿಸಿತ್ತು. ಇದರಿಂದಾಗಿ 2014ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಭಾರಿ ಅಂತರದಿಂದ ಗೆಲುವು ದಾಖಲಿಸಿದ್ದ ಆಗಿನ ಹಾಲಿ ಸಂಸದ ಮುದ್ದಹನುಮೇಗೌಡ ಅವರು ಸ್ಪರ್ಧೆಯಿಂದ ವಂಚಿತರಾಗಬೇಕಾಯಿತು. ಈ ಮೂಲಕ ಇಡೀ ದೇಶದಲ್ಲಿ ಆಯ್ಕೆಯಾಗಿದ್ದ ಕಾಂಗ್ರೆಸ್‌ ಸಂಸದರ ಪೈಕಿ ಟಿಕೆಟ್‌ ತಪ್ಪಿದ ಏಕೈಕ ವ್ಯಕ್ತಿ ಎಂಬ ಅಪಖ್ಯಾತಿಗೂ ಮುದ್ದಹನುಮೇಗೌಡ ಗುರಿಯಾಗಬೇಕಾಯಿತು.

Exit mobile version