ಬೆಂಗಳೂರು: ಆರ್‌ಆರ್ ನಗರ ವಿಧಾನಸಭಾ ಕ್ಷೇತ್ರಕ್ಕೆ (RR Nagar Assembly Constituency) ಬಿಜೆಪಿ ಸರ್ಕಾರ ನೀಡಿದ್ದ ಅನುದಾನವನ್ನು ವಾಪಸ್ ತೆಗೆದುಕೊಂಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನೆ ಮಾಡಿ ಧರಣಿ ನಡೆಸಿರುವ ಶಾಸಕ ಮುನಿರತ್ನ (MLA Munirathna), ತಮ್ಮ ಕ್ಷೇತ್ರಕ್ಕೆ ಅನುದಾನ ನೀಡುವಂತೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಅರಮನೆ ಮೈದಾನದಲ್ಲಿ ಭೇಟಿ ಮಾಡಿ ಮನವಿ ಮಾಡಿದ್ದಾರೆ. ಇದಕ್ಕೂ ಮೊದಲು ಸ್ಥಳದಲ್ಲಿ ಹೈಡ್ರಾಮಾವೇ ನಡೆಯಿತು. ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡುವ ಸಂಬಂಧ ಅರಮನೆ ಮೈದಾನಕ್ಕೆ ಬಂದ ಶಾಸಕ ಮುನಿರತ್ನ ಅವರನ್ನು ಪೊಲೀಸರು ತಡೆದರು. ಇದರಿಂದ ಆಕ್ರೋಶಗೊಂಡ ಶಾಸಕರು, ಪೊಲೀಸರಿಗೆ ಅವಾಜ್ ಹಾಕಿದ್ದು, ತಾವು ಇಲ್ಲಿಗೆ ಬಂದಿದ್ದು ಪ್ರತಿಭಟನೆ ಮಾಡಲು ಅಲ್ಲ. ನಾನೊಬ್ಬ ಶಾಸಕನಾಗಿದ್ದು, ಡಿಸಿಎಂಗೆ ಮನವಿ ಮಾಡಲು ಬಂದಿದ್ದೇನೆ ಎಂದು ಗುಡುಗಿದ್ದಾರೆ. ಬಳಿಕ ಕಾರ್ಯಕ್ರಮ ಮುಗಿಯುವವರೆಗೂ ಡಿ.ಕೆ. ಶಿವಕುಮಾರ್‌ಗಾಗಿ (DCM DK Shivakumar) ಕಾದು ಮನವಿ ಸಲ್ಲಿಸಿದ್ದಾರೆ. ಈ ನಡುವೆ ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮ ಮುಗಿಸಿ ಡಿ.ಕೆ. ಶಿವಕುಮಾರ್ ವಾಪಸ್ ಬರುತ್ತಿದ್ದಂತೆ ಅವರನ್ನು ಭೇಟಿಯಾದ ಶಾಸಕ ಮುನಿರತ್ನ ಅವರು ಕಾಲಿಗೆ ಬೀಳಲು ಮುಂದಾದರು. ಆಗ ಅವರನ್ನು ಹಿಡಿದು ತಡೆದ ಡಿ.ಕೆ. ಶಿವಕುಮಾರ್ ಹೆಗಲ ಮೇಲೆ ಕೈಹಾಕಿ ಮಾತನಾಡಿಸಿದರು. ಬಳಿಕ ಶಾಸಕ ಮುನಿರತ್ನ ಅವರಿಂದ ಮನವಿ ಸ್ವೀಕರಿಸಿ, ಈ ಬಗ್ಗೆ ಗಮನ ಹರಿಸುತ್ತೇನೆ ಎಂದು ಹೇಳಿದರು. ತಾವು ಈಗ ಮೈಸೂರಿಗೆ ಹೊರಡುತ್ತಿದ್ದು, ಅಲ್ಲಿಂದ ಬಂದ ಬಳಿಕ ಚರ್ಚೆ ಮಾಡುತ್ತೇನೆ ಎಂದು ಹೇಳಿ, ನಿರ್ಗಮಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಮುನಿರತ್ನ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಕಾಲಿಗೆ ಬಿದ್ದು ಕೇಳಿದ್ದೇನೆ. ಕರೆದು ಮಾತನಾಡುತ್ತೇನೆ ಎಂದು ಹೇಳಿದ್ದಾರೆ ಸಮಸ್ಯೆ ಬಗೆಹರಿಯದಿದ್ದರೆ ಮುಂದೆ ಉಗ್ರ ಹೋರಾಟವನ್ನು ಮಾಡಲಾಗುವುದು. ಮುಂದಿನ ಹೋರಾಟವನ್ನು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು.
ಮುನಿರತ್ನರನ್ನು ತಡೆದಿದ್ದ ಪೊಲೀಸರಿಗೆ ಅವಾಜ್
ವಿಧಾನಸೌಧದ ಮುಂಭಾಗ ಪ್ರತಿಭಟನೆಯನ್ನು ಕೈಬಿಟ್ಟು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಅರಮನೆ ಮೈದಾನದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದ ವೇದಿಕೆಯತ್ತ ಧಾವಿಸಿದರು. ಈ ವೇಳೆ ಮುನಿರತ್ನ ಅವರು ಅರಮನೆ ಮೈದಾನಕ್ಕೆ ಆಗಮಿಸುತ್ತಿದ್ದಂತೆ ಅವರನ್ನು ಪೊಲೀಸರು ತಡೆದರು. ಆಗ ಸಿಟ್ಟಿಗೆದ್ದ ಮುನಿರತ್ನ ಅವರು, ನಾನು ಶಾಸಕನಿದ್ದೇನೆ. ಇಲ್ಲೇನು ಪ್ರತಿಭಟನೆ ಮಾಡಲು ಬಂದಿಲ್ಲ. ಕ್ಷೇತ್ರದ ವಿಚಾರದ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಲು ಬಂದಿದ್ದೇನೆ ಎಂದು ಹೇಳಿದ್ದಾರೆ. ಆಗ ಪೊಲೀಸರು ಅವರನ್ನು ಒಳಗೆ ಬಿಟ್ಟರು.
ಇದನ್ನೂ ಓದಿ: Karnataka Politics : ನಾವು ಯಾರಿಗೂ ತಾರತಮ್ಯ ಮಾಡಿಲ್ಲ; ಇದು ಝೀರೊ ಅನುದಾನದ ಸರ್ಕಾರವೆಂದ ಬೊಮ್ಮಾಯಿ
ಭಾಷಣದಲ್ಲಿ ಕುಟುಕಿದ್ದ ಡಿಕೆಶಿ
ಇದಕ್ಕೂ ಮೊದಲು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಡಿ.ಕೆ. ಶಿವಕುಮಾರ್, ಯಾರೋ ಡ್ರಾಮಾ ಮಾಡಲು ಬಂದಿದ್ದಾರೆ. ಡ್ರಾಮಾ ನೋಡೋಣ, ಅಶ್ವಥನಾರಾಯಣ್ ಅವರೇ ನಿಮ್ಮ ಸಮಸ್ಯೆ ಬಗೆಹರಿಸಿಕೊಳ್ಳಿ. ಕಾರ್ಯಕ್ರಮಕ್ಕೆ ತೊಂದರೆ ಆಗೋದು ಬೇಡ. ಡ್ರಾಮಾ ಆರ್ಟಿಸ್ಟ್ ಮತ್ತು ಅವರ ಸ್ಕ್ರಿಪ್ಟ್ ನೋಡೋಣ ಎಂದು ಮುನಿರತ್ನ ಅವರನ್ನು ಕುಟುಕಿದ್ದರು.