Site icon Vistara News

Muslim Appeasement?: ಸರ್ಕಾರದಲ್ಲಿ ಅಭಿವೃದ್ಧಿಗೆ ದುಡ್ಡಿಲ್ಲ, ಆದರೆ ಮುಸ್ಲಿಮರಿಗೆ ವಾಹನ ಖರೀದಿಗೆ 3 ಲಕ್ಷ ಸಬ್ಸಿಡಿ ಗ್ಯಾರಂಟಿ!

Siddaramaiah

ಬೆಂಗಳೂರು: 110 ದಿನಗಳ ಹಿಂದಷ್ಟೇ ಅಸ್ತಿತ್ವಕ್ಕೆ ಬಂದಿರುವ ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದ ಕಾಂಗ್ರೆಸ್‌ ಸರ್ಕಾರ ಆರಂಭಿಸಿರುವ ಹೊಸದೊಂದು ಯೋಜನೆಯ ಬಗ್ಗೆ ಅಪಸ್ವರ ಕೇಳಿಬಂದಿದೆ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಜಾರಿಯಿಂದಾಗಿ ಅಭಿವೃದ್ಧಿ ಕೆಲಸಗಳಿಗೆ ಹಣವಿಲ್ಲ ಎಂದು ಸರ್ಕಾರ ಬಹಿರಂಗವಾಗಿಯೇ ಹೇಳುತ್ತಿದೆ. ಇಷ್ಟೆಲ್ಲ ಸಂಕಷ್ಟಗಳಿದ್ದರೂ ಅಲ್ಪಸಂಖ್ಯಾತರ ತುಷ್ಟೀಕರಣದ (Muslim appeasement) ಕೆಲಸಗಳಿಗೆ ಮಾತ್ರ ಯಾವುದೇ ಅಡ್ಡಿಯಾಗಿಲ್ಲ ಎಂಬ ಆಪಾದನೆ ಕೇಳಿಬಂದಿದೆ.

ಇಷ್ಟೆಲ್ಲ ಆಪಾದನೆಗಳಿಗೆ ಕಾರಣವಾಗಿರುವುದು ರಾಜ್ಯ ಸರ್ಕಾರ ಮುಸ್ಲಿಮ್‌ ಸಮುದಾಯದ ವ್ಯಕ್ತಿಗಳು ವಾಹನ ಖರೀದಿ ಮಾಡಲು ಬರೋಬ್ಬರಿ 3 ಲಕ್ಷ ರೂ. ಸಬ್ಸಿಡಿ (Three lakhs rupees subsidy) ನೀಡುವುದಾಗಿ ಪ್ರಕಟಿಸಿರುವುದು.

ಮುಸ್ಲಿಂ ಸಮುದಾಯದ (Muslim Community) ಯಾವುದೇ ವ್ಯಕ್ತಿ ಆಟೋರಿಕ್ಷಾ, ಟ್ಯಾಕ್ಸಿ ಅಥವಾ ಗೂಡ್ಸ್‌ ವಾಹನವನ್ನು ಕೊಳ್ಳುವುದಿದ್ದಲ್ಲಿ ರಾಜ್ಯ ಸರ್ಕಾರ ಅವರಿಗೆ 3 ಲಕ್ಷ ರೂ. ಹಣವನ್ನು ಸಬ್ಸಿಡಿ ರೂಪದಲ್ಲಿ ನೀಡಲಿದೆ. ಮತ್ತು ಉಳಿದ ಮೊತ್ತಕ್ಕೆ ಬ್ಯಾಂಕ್‌ ಲೋನ್‌ ತೆಗೆಸಿಕೊಡುವಲ್ಲೂ ಸರ್ಕಾರವೇ ಸಹಕಾರ ನೀಡಲಿದೆ. ಇದು ಎಲ್ಲ ವಾಹನಕ್ಕೂ ಮೂರು ಲಕ್ಷ ರೂ. ಎಂದೇನೂ ಫಿಕ್ಸ್‌ ಆಗಿಲ್ಲ. ಮೂರು ಲಕ್ಷ ರೂ. ಅಥವಾ ಖರೀದಿಸುವ ವಾಹನದ ಮೌಲ್ಯದ ಶೇಕಡಾ ಐವತ್ತರಷ್ಟು, ಇದರಲ್ಲಿ ಯಾವುದು ಗರಿಷ್ಠವೋ ಅದನ್ನು ನೀಡಲಾಗುತ್ತದೆ ಎಂದು ಪ್ರಕಟಣೆಯೊಂದು ತಿಳಿಸಿದೆ.

ನಿಜವೆಂದರೆ ಇದೊಂದು ಬಜೆಟ್‌ನಲ್ಲೇ ಪ್ರಕಟಿಸಿರುವ ಘೋಷಣೆ. ಹೊಸದಾಗಿ ಪ್ರಕಟಿಸಿದ್ದೇನೂ ಅಲ್ಲ. ಈಗಲೇ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಿ ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ಮಂಡಳಿಯ ಪರವಾಗಿ ಸಂಘಟನೆಯೊಂದು ಮನವಿ ಮಾಡಿದ್ದನ್ನು ಆಧರಿಸಿ ಈ ಸುದ್ದಿ ಸದ್ದು ಮಾಡಿದೆ. ಸೆಪ್ಟೆಂಬರ್‌ 25ರೊಳಗೆ ಅರ್ಜಿ ಸಲ್ಲಿಸುವಂತೆ ಇದರಲ್ಲಿ ಸೂಚಿಸಲಾಗಿದೆ.

ಅರ್ಜಿ ಸಲ್ಲಿಸಲು ಕೆಲವು ಕಂಡಿಷನ್‌ಗಳಿವೆ.

ಹಾಗಂತ ಈ ಸೌಲಭ್ಯ ಎಲ್ಲ ಮುಸ್ಲಿಮರಿಗೆ ಸಿಗುವುದಿಲ್ಲ. ಕೆಲವೊಂದು ಷರತ್ತುಗಳ ಅನ್ವಯ ಈ ಸಾಲ, ಸಬ್ಸಿಡಿ ದೊರೆಯಲಿದೆ.

ಷರತ್ತುಗಳು ಹೀಗಿವೆ.

  1. ಅರ್ಜಿ ಹಾಕುವವರು ಧಾರ್ಮಿಕ ಅಲ್ಪಸಂಖ್ಯಾತರಾಗಿರಬೇಕು.
  2. ಕರ್ನಾಟಕ ರಾಜ್ಯದಲ್ಲೇ ವಾಸವಾಗಿರಬೇಕು.
  3. 18ರಿಂದ 55 ವರ್ಷದೊಳಗಿನವರಾಗಿರಬೇಕು.
  4. ಕುಟುಂಬದ ಆದಾಯ 4.5 ಲಕ್ಷ ರೂ. ಒಳಗಿರಬೇಕು.
  5. ಅರ್ಜಿ ಹಾಕುವವರು ಮಾನ್ಯತೆ ಪಡೆದ ಡ್ರೈವಿಂಗ್‌ ಲೈಸೆನ್ಸ್‌ ಹೊಂದಿರಬೇಕು.
  6. ಕುಟುಂಬದ ಯಾವ ಸದಸ್ಯರು ರಾಜ್ಯ ಇಲ್ಲವೇ ಕೇಂದ್ರ ಸರ್ಕಾರದ ಉದ್ಯೋಗದಲ್ಲಿ ಇರಬಾರದು.
  7. ಅರ್ಜಿದಾರರು ಅಥವಾ ಕುಟುಂಬದ ಯಾವುದೇ ಸದಸ್ಯರು ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ಮಂಡಳಿಯಿಂದ ಕಳೆದ ಐದು ವರ್ಷಗಳಲ್ಲಿ ಯಾವುದೇ ಸವಲತ್ತುಗಳನ್ನು ಪಡೆದುಕೊಂಡಿರಬಾರದು. ಅರಿವು ಯೋಜನೆಯನ್ನು ಹೊರತುಪಡಿಸಿ.
minority subsidy

ಚಾಲಕನನ್ನು ಮಾಲೀಕ ಮಾಡುವ ಸ್ಕೀಂ ಎಂದಿದ್ದ ಸಚಿವ ಜಮೀರ್‌ ಅಹ್ಮದ್‌

ಈ ಯೋಜನೆಯ ಬಗ್ಗೆ ಮಾತನಾಡಿರುವ ರಾಜ್ಯದ ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್‌ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರು, ʻʻಒಬ್ಬ ಚಾಲಕ ಚಾಲಕನಾಗಿಯೇ ಉಳಿಯಬಾರದು. ಅವರು ಒಂದು ವಾಹನದ ಮಾಲೀಕನೂ ಆಗಬೇಕು. ಈ ಕಾರಣಕ್ಕಾಗಿ ಈ ಯೋಜನೆ ಮಾಡಲಾಗಿದೆ. ಒಬ್ಬ ವ್ಯಕ್ತಿ ವಾಹನ ಖರೀದಿ ಮಾಡುವುದಿದ್ದಲ್ಲಿ ಸರ್ಕಾರ ಗರಿಷ್ಠ 3 ಲಕ್ಷ ರೂ. ಸಹಾಯ ಧನ ನೀಡುತ್ತದೆ. ಇದು ಆತನಿಗೆ ಮಾರ್ಜಿನ್‌ ಮನಿ ಕೊಡಲು ಸಹಾಯವಾಗುತ್ತದೆ. ಜತೆಗೆ ಸರ್ಕಾರವೇ ಬ್ಯಾಂಕ್‌ಗಳ ಮೂಲಕ ಸಾಲ ಕೊಡಿಸುತ್ತದೆʼʼ ಎಂದಿದ್ದಾರೆ. ಹಿಂದಿನ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಜಾರಿಯಲ್ಲಿದ್ದ ಈ ಯೋಜನೆಗೆ ಬಿಜೆಪಿ ಸರ್ಕಾರ ಅಡ್ಡಗಾಲು ಹಾಕಿತ್ತು ಎಂದಿದ್ದಾರೆ.

ಧಾರ್ಮಿಕ ಗುರಿ ಹೊಂದಿದ ಯೋಜನೆ ಎಂದ ಬಿಜೆಪಿ

ಸರ್ಕಾರದ ಯೋಜನೆಯ ಪ್ರಕಟಣೆ ಹೊರಬೀಳುತ್ತಿದ್ದಂತೆಯೇ ಹಲವು ಬಿಜೆಪಿ ನಾಯಕರು ಆಕ್ಷೇಪ ಎತ್ತಿದ್ದಾರೆ. ರಾಜ್ಯ ಸಭಾ ಸದಸ್ಯರಾದ ರಾಜೀವ್‌ ಚಂದ್ರಶೇಖರ್‌, ಸಂಸದ ತೇಜಸ್ವಿ ಸೂರ್ಯ, ಹಿರಿಯ ನಾಯಕ ಸಿ.ಟಿ. ರವಿ ಮೊದಲಾದವರು ಆಕ್ಷೇಪಿಸಿದ್ದಾರೆ. ಇದು ಧಾರ್ಮಿಕ ಗುರಿಯನ್ನು ಹೊಂದಿರುವ ಪ್ರಾಜೆಕ್ಟ್‌ ಎಂದು ಹೇಳಿದ್ದಾರೆ.

ಸಂಸದ ತೇಜಸ್ವಿ ಸೂರ್ಯ ತೀವ್ರ ಆಕ್ರೋಶ

ಕಾಂಗ್ರೆಸ್‌ ಸರ್ಕಾರ ತನ್ನ ಉಚಿತ ಯೋಜನೆಗಳಿಗೆ ಹಣ ಹೊಂದಿಸಲು ಹಲವು ಹೊರೆಗಳನ್ನು ಜನರ ಮೇಲೆ ಹೇರಿದೆ. ಗೈಡೆನ್ಸ್‌ ವ್ಯಾಲ್ಯೂವನ್ನು ಶೇಕಡಾ 30ರಷ್ಟು ಹೆಚ್ಚಿಸಿದೆ. ವಿದ್ಯುತ್‌ ಬಿಲ್‌ ಡಬಲ್‌ ಮಾಡಿದೆ. ಅಬಕಾರಿ ಸುಂಕ, ಹಾಲಿನ ದರ, ರಸ್ತೆ ತೆರಿಗೆ ಹೆಚ್ಚಿಸಿದೆ. ಸೆಸ್‌ಅನ್ನು 5% ಹೆಚ್ಚಿಸುವ ಪ್ಲಾನ್‌ ಹೊಂದಿದೆ. ಈಗ ಕರ್ನಾಟಕದ ಮಧ್ಯಮ ವರ್ಗದ ಜನತೆ ಕೇವಲ ಅಲ್ಪಸಂಖ್ಯಾತರನ್ನೇ ಟಾರ್ಗೆಟ್‌ ಮಾಡಿರುವ ಯೋಜನೆಯೊಂದಕ್ಕೆ ಹಣ ಕೊಡಬೇಕಾಗಿದೆ. ಮುಸ್ಲಿಮರಿಗೆ ವಾಹನ ಖರೀದಿ ಮಾಡಲು 3 ಲಕ್ಷ ಸಬ್ಸಿಡಿ ಕೊಡುವ ಸ್ಕೀಂ ಇದು. ಮಧ್ಯಮ ವರ್ಗದ ಜನರು ಇಷ್ಟೊಂದು ಕಷ್ಟಪಡುತ್ತಿದ್ದರೂ ಅವರ ಬೆವರ ಹಣದಿಂದ ಮುಸ್ಲಿಮರಿಗೆ ಹಣ ನೀಡುವ ಮೂಲಕ ದೊಡ್ಡ ಮಟ್ಟದ ತುಷ್ಟೀಕರಣಕ್ಕೆ ಮುಂದಾಗಿದೆ ಎಂದು ತೇಜಸ್ವಿಸೂರ್ಯ ಹೇಳಿದ್ದಾರೆ.

ನಾಚಿಕೆ, ಮಾನ ಮರ್ಯಾದೆ ಇಲ್ಲದೆ ಇರುವುದಕ್ಕೆ ಒಂದು ಹೆಸರು ಇಡಬಹುದು ಎಂದಿದ್ದರೆ ಅದು ಕಾಂಗ್ರೆಸ್‌. ಕರ್ನಾಟಕದ ಈ ಟಿಪ್ಪು ಸುಲ್ತಾನ್‌ ಸರ್ಕಾರ ತನ್ನ ಮುಸ್ಲಿಂ ತುಷ್ಟೀಕರಣವನ್ನು ಮುಂದುವರಿಸಿದೆ. ಇದು ಸುಳ್ಳು ಗ್ಯಾರಂಟಿಗಳ ಬಲೆಗೆ ಬಿದ್ದು ಕೋಮುವಾದಿ ಕಾಂಗ್ರೆಸ್‌ಗೆ ಮತ ಹಾಕಿದ ಬಹುಸಂಖ್ಯಾತ ಜನರಿಗೂ ದೊಡ್ಡ ಅಪಮಾನ ಎಂದು ಹೇಳಿದ್ದಾರೆ ಬಿಜೆಪಿಯ ಹಿರಿಯ ನಾಯಕ ಸಿ.ಟಿ. ರವಿ.

ಒಳ್ಳೆಯ ಲಾಭದ ಸ್ಕೀಂ ಎಂದ ರಾಜೀವ್‌ ಚಂದ್ರಶೇಖರ್‌

ಇದೇ ವೇಳೆ ಸಂಸದ ರಾಜೀವ್‌ ಚಂದ್ರಶೇಖರ್‌ ಅವರು ಕಾಂಗ್ರೆಸ್‌ ಸರ್ಕಾರದ ಮೇಲೆ ತೀವ್ರವಾಗಿ ಹರಿಹಾಯ್ದಿದ್ದಾರೆ. ಮಾನ ಮರ್ಯಾದೆ ಇಲ್ಲದೆ ತುಷ್ಟೀಕರಣ ಮಾಡುತ್ತಿರುವುದಕ್ಕೆ ಇದು ಸರಿಯಾದ ಉದಾಹರಣೆ. ರಾಹುಲ್‌ ಗಾಂಧಿಯ ಕರ್ನಾಟಕ ಕಾಂಗ್ರೆಸ್‌ ಕೆಲವೊಂದು ಸಮುದಾಯಗಳಿಗೆ ಲಂಚ ನೀಡುತ್ತಿದೆ ಎಂದಿದ್ದಾರೆ.

ನೀವು 50% ಸಬ್ಸಿಡಿ ಬಳಸಿಕೊಂಡು ಆರು ಲಕ್ಷ ರೂ.ಯ ಒಂದು ವಾಹನವನ್ನು ಖರೀದಿ ಮಾಡಿದರೆ ನಿಮಗೆ ಮೂರು ಲಕ್ಷಕ್ಕೆ ವಾಹನ ಸಿಕ್ಕಿದಂತಾಯಿತು. ಮರುದಿನ ಅದನ್ನು ಐದು ಲಕ್ಷಕ್ಕೆ ಮಾರಿದರೆ ಒಂದೇ ದಿನದಲ್ಲಿ ಎರಡು ಲಕ್ಷ ರೂ. ಲಾಭ ಆಯಿತು. ಆದರೆ, ಇದು ಕೇವಲ ಹಿಂದುಯೇತರರಿಗೆ ಸಿಗುವ ಸೌಲಭ್ಯ. ಬಡ ಹಿಂದುಗಳಿಗೂ ಸಿಗುವುದಿಲ್ಲ ಎಂದಿದ್ದಾರೆ ರಾಜೀವ್‌ ಚಂದ್ರಶೇಖರ್‌.

ನಿಮ್ಮ ಕಾಲದಲ್ಲೂ ಇದು ಇತ್ತು ಸ್ವಾಮಿ ಎಂದ ದಿನೇಶ್‌ ಗುಂಡೂರಾವ್‌

ರಾಜೀವ್‌ ಚಂದ್ರಶೇಖರ್‌ ಅವರ ಮಾತಿಗೆ ತೀವ್ರ ಪ್ರತಿಕ್ರಿಯೆ ನೀಡಿರುವ ಸಚಿವ ದಿನೇಶ್‌ ಗುಂಡೂರಾವ್‌ ಅವರು, ಈ ಯೋಜನೆ ಬಿಜೆಪಿ ಸರ್ಕಾರದ ಅವಧಿಯಲ್ಲೂ ಇತ್ತು. ಮುಸ್ಲಿಮರನ್ನು ದ್ವೇಷಿಸುವ ಭರದಲ್ಲಿ ಮೂರ್ಖರಂತೆ ವರ್ತಿಸಬೇಡಿ. ನಿಮ್ಮ ಮೂರ್ಖತನದ ಟ್ವೀಟ್‌ನ್ನು ಸರಿ ಮಾಡಿ ಎಂದು ಹೇಳಿದ್ದಾರೆ. ಆದರೆ, ಸಚಿವ ಜಮೀರ್‌ ಅಹ್ಮದ್‌ ಅವರು ಈ ಯೋಜನೆಯನ್ನು ಬಿಜೆಪಿ ಅವಧಿಯಲ್ಲಿ ನಿಲ್ಲಿಸಲಾಗಿತ್ತು ಎಂದಿದ್ದರು.

Exit mobile version