Site icon Vistara News

‌Zameer Ahmed : ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ; ಉಲ್ಟಾ ಹೊಡೆದ ಜಮೀರ್!

‌Zameer Ahmed Khan

ಬೆಂಗಳೂರು: ಮುಸ್ಲಿಂ ಸ್ಪೀಕರ್ (Muslim Speaker) ಎದುರು ಬಿಜೆಪಿ ಶಾಸಕರು ನಮಸ್ಕಾರ್ ಸಾಬ್ ಅಂತ ನಿಂತ್ಕೋಬೇಕು. ಒಳ್ಳೊಳ್ಳೆಯ ಬಿಜೆಪಿ ಶಾಸಕರೂ ಹೀಗೆ ನಿಲ್ಲುವಂತೆ ಮಾಡಿದ್ದು ನಮ್ಮ ಕಾಂಗ್ರೆಸ್ ಎಂದು ಸಚಿವ ಜಮೀರ್ ಅಹ್ಮದ್ ಖಾನ್ (‌Zameer Ahmed Khan) ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈಗ ಇದಕ್ಕೆ ಉಲ್ಟಾ ಹೊಡೆದಿದ್ದಾರೆ. ಮಾಧ್ಯಮ ಹೇಳಿಕೆ ಬಿಡುಗಡೆ ಮಾಡುವ ಮೂಲಕ ಯೂ ಟರ್ನ್ ತೆಗೆದುಕೊಂಡಿದ್ದಾರೆ. ಯಾವ ಪಕ್ಷದ ಶಾಸಕರ ಬಗ್ಗೆ ಅಗೌರವದಿಂದ ಮಾತನಾಡಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ಈ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಿರುವ ಸಚಿವ ಜಮೀರ್‌ ಅಹ್ಮದ್‌ ಖಾನ್‌, ತೆಲಂಗಾಣ ವಿಧಾನಸಭೆ ಚುನಾವಣೆ ಸ್ಟಾರ್ ಪ್ರಚಾರಕನಾದ ನಾನು ಹೈದರಾಬಾದ್‌ನಲ್ಲಿ ಯಾವುದೇ ವ್ಯಕ್ತಿ ಅಥವಾ ಪಕ್ಷದ ಶಾಸಕರ ಬಗ್ಗೆ ಅಗೌರವವಾಗಿ ಮಾತನಾಡಿಲ್ಲ. ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯಕ್ಕೆ ಕಾಂಗ್ರೆಸ್ ಅತ್ಯುನ್ನತ ಗೌರವ ನೀಡಿದೆ. ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಸ್ಪೀಕರ್ ಸ್ಥಾನ ನೀಡಿದೆ. ವಿಧಾನಸಭೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿ ನಾವೆಲ್ಲರೂ ಅವರನ್ನು ಸನ್ಮಾನ್ಯ ಸಭಾಧ್ಯಕ್ಷರೇ ಎಂದು ಕರೆಯುತ್ತೇವೆ. ಅಷ್ಟೊಂದು ಉನ್ನತ ಹುದ್ದೆ ಏರುವ ಅವಕಾಶ ನೀಡಲಾಗಿದೆ ಎಂದು ಹೇಳಿದ್ದೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿ ಹಲವರು ನನ್ನ ಮಾತು ತಪ್ಪಾಗಿ ಅರ್ಥೈಸಿಕೊಂಡು ವಿವಾದದ ಸ್ವರೂಪ ನೀಡುತ್ತಿದ್ದಾರೆ. ನಾನು ಕಾಂಗ್ರೆಸ್ ಪಕ್ಷ ಮುಸ್ಲಿಂ ಸಮುದಾಯಕ್ಕೆ ಎರಡು ಸಚಿವ ಸ್ಥಾನ, ಪರಿಷತ್‌ನಲ್ಲಿ ಮುಖ್ಯ ಸಚೇತಕ, ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ, ಎಲ್ಲದಕ್ಕಿಂತ ಹೆಚ್ಚಾಗಿ ಸ್ಪೀಕರ್ ಸ್ಥಾನ ನೀಡಿದೆ ಎಂದಷ್ಟೇ ಹೇಳಿದ್ದೇನೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ. ಕಾಂಗ್ರೆಸ್ ನಮ್ಮ ಸಮಾಜಕ್ಕೆ ನೀಡಿರುವ ಗೌರವ ಸ್ಮರಿಸುವುದು ತಪ್ಪೇ ಎಂದು ಪ್ರಶ್ನೆ ಮಾಡಿದ್ದಾರೆ.

ಜಮೀರ್‌ ನೀಡಿದ್ದ ಹೇಳಿಕೆ ಏನು?

ತೆಲಂಗಾಣದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ್ದ ಸಚಿವ ಜಮೀರ್‌ ಅಹ್ಮದ್‌ ಖಾನ್‌, ಕಾಂಗ್ರೆಸ್‌ನಲ್ಲಿ ನಾವು 9 ಜನ ಮುಸ್ಲಿಮರು ಗೆದ್ದಿದ್ದೇವೆ. 9 ಮಂದಿಯಲ್ಲಿ ಐದು ಮಂದಿಗೆ ಕಾಂಗ್ರೆಸ್ ಅಧಿಕಾರ ನೀಡಿದೆ. ನನ್ನನ್ನು ಸಚಿವನನ್ನಾಗಿ ಮಾಡಿದೆ. ಸಲೀಂ ಅಹಮದ್‌ಗೆ ಚೀಫ್ ವಿಪ್‌ ಜವಾಬ್ದಾರಿ ನೀಡಲಾಗಿದೆ. ನಜೀರ್ ಅಹಮದ್‌ಗೆ ಸಿಎಂ ಪೊಲಿಟಿಕಲ್ ಸೆಕ್ರೆಟರಿ ಮಾಡಲಾಗಿದೆ. ರಾಜ್ಯದ ಇತಿಹಾಸದಲ್ಲಿ ಎಂದೂ ಮುಸ್ಲಿಮರು ಸ್ಪೀಕರ್ ಆಗಿರಲಿಲ್ಲ. ಆದರೆ, ಯು.ಟಿ. ಖಾದರ್ ಅವರನ್ನು ಸ್ಪೀಕರ್ ಮಾಡಿದ್ದು ನಮ್ಮ ಕಾಂಗ್ರೆಸ್‌. ಈ ಮೂಲಕ ಒಳ್ಳೊಳ್ಳೆಯ ಬಿಜೆಪಿ ಶಾಸಕರು ಕೂಡ ನಮಸ್ಕಾರ ಸ್ಪೀಕರ್ ಸಾಬ್ ಅಂತ ಕೈ ಮುಗಿದು ನಿಂತ್ಕೋಬೇಕು. ಹಾಗೆ ನಮ್ಮ ಪಕ್ಷ ಮಾಡಿದೆ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಬಿಜೆಪಿ, ಜೆಡಿಎಸ್‌ ನಾಯಕರು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.

ಬಿ.ವೈ. ವಿಜಯೇಂದ್ರ‌ ಖಂಡನೆ

ಸಚಿವ ಜಮೀರ್ ಅಹಮದ್ ಖಾನ್‌ ಹೇಳಿಕೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ‌ (BY Vijayendra) ತೀವ್ರವಾಗಿ ಖಂಡಿಸಿದ್ದಾರೆ. ಜಮೀರ್ ಅಹಮದ್ ಅವರೇ… ನೀವು ಯಾವುದೋ ಒಂದು ಕೋಮಿನ ಜವಾಬ್ದಾರಿಯನ್ನು ತೆಗೆದುಕೊಂಡಿಲ್ಲ. ನೀವು ನಿಮ್ಮ ಅಂತರಾಳದ ಮಾತನ್ನು ಆಡಿದ್ದೀರಿ. ಈ ಹೇಳಿಕೆ ನಿಜಕ್ಕೂ ದುರದೃಷ್ಟಕರ. ಇನ್ನು ಮಂದೆ ಈ ರೀತಿ ಮಾತನಾಡದಂತೆ ಎಚ್ಚರಿಕೆ ವಹಿಸಿ ಎಂದು ತಾಕೀತು ಮಾಡಿದ್ದರು.

ಇದನ್ನೂ ಓದಿ: ‌BJP Karnataka : ಬಿಜೆಪಿ ಒಂದೇ ಕುಟುಂಬಕ್ಕೆ ಸೀಮಿತ ಆಗಬಾರದು; ಅಡ್ಜೆಸ್ಟ್‌ಮೆಂಟ್‌ ಬಗ್ಗೆ ವೀಕ್ಷಕರಿಗೆ ಹೇಳಿದ್ದೇನೆ ಎಂದ ಯತ್ನಾಳ್

ಬಿಜೆಪಿಯವರು ಗೌರವ ಕೊಡುವುದಿಲ್ಲವೆಂದರೆ ಏನಾಗಲಿದೆ? ಎಂದು ಪ್ರಶ್ನೆ ಮಾಡಿದ್ದ ಎಚ್‌ಡಿಕೆ

ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಸಭಾಧ್ಯಕ್ಷರ ಹುದ್ದೆ, ಗೌರವ ಉಳಿಯಬೇಕಾದರೆ ಆ ಸಚಿವರಿಗೆ ಕ್ಷಮೆ ಕೇಳುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಬೇಕು. ಬಿಜೆಪಿ ಶಾಸಕರು ನಮ್ಮ ಯು.ಟಿ. ಖಾದರ್ ಅವರಿಗೆ ಎದ್ದು ನಮಸ್ಕರಿಸಬೇಕೆಂದು ಹೇಳಿದ್ದಾರುವುದು ಸರಿಯಲ್ಲ. ಆ ಹುದ್ದೆಯನ್ನು ಧರ್ಮಕ್ಕೆ ಅಂಟಿಸಲು ಹೊರಟ್ಟಿದ್ದಾರಲ್ಲ? ಒಂದು ವೇಳೆ ಬಿಜೆಪಿಯ 66 ಶಾಸಕರು ಮುಂದಿನ ಅಧಿವೇಶನದಲ್ಲಿ ನಾವು ಎದ್ದು ನಿಂತು ನಮಸ್ಕರಿಸುವುದಿಲ್ಲ ಎಂದು ಹೇಳದರೆ ಏನಾಗುತ್ತದೆ? ಸಂವಿಧಾನದ ಆಶಯ ಏನಾಗುತ್ತದೆ? ಇದನ್ನು ಸರ್ಕಾರದವರು ಅರ್ಥ ಮಾಡಿಕೊಂಡು ಏನು ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ನೋಡೋಣ ಎಂಬುದಾಗಿ ಹೇಳಿದ್ದರು.

Exit mobile version