ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರ (Congress Government) ಮತ್ತೊಂದು ಎಡವಟ್ಟು ಮಾಡಿಕೊಂಡಿದೆ. ವಸತಿ ಶಾಲೆಗಳಲ್ಲಿ ಧಾರ್ಮಿಕ ಹಬ್ಬಗಳ (Religious Festivals) ಆಚರಣೆ ಮಾಡಬಾರದು ಎಂದು ಆದೇಶ ಹೊರಡಿಸಿ ಅದನ್ನು ಹಿಂದಕ್ಕೆ ಪಡೆದ ಸರ್ಕಾರ, ಬಳಿಕ ಶಾಲೆಗಳ ಪ್ರವೇಶ ದ್ವಾರದಲ್ಲಿ ಕುವೆಂಪು ಕವಿತೆಯ ಬರಹದ ಸಾಲುಗಳನ್ನೇ ಬದಲಿಸಿ ವಿವಾದವನ್ನು ಮೈಮೇಲೆ ಎಳೆದುಕೊಂಡಿತ್ತು. ಬಳಿಕ ಯೂಟರ್ನ್ ಹೊಡೆದಿತ್ತು. ಇದೀಗ ಖಾಸಗಿ ಶಾಲೆಗಳಲ್ಲಿ (Private Schools) ನಾಡಗೀತೆ ಹಾಡುವುದು ಕಡ್ಡಾಯವಲ್ಲ (Nadageethe row) ಎಂಬ ಸುತ್ತೋಲೆ ಹೊರಡಿಸಿ ವಿವಾದಕ್ಕೆ ಒಳಗಾಗಿದೆ. ಫೆಬ್ರವರಿ 16ರಂದು ಹೊರಡಿಸಿರುವ ಆದೇಶ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದ್ದಂತೆಯೇ ಅದು ಕಣ್ತಪ್ಪಿನ ಆದೇಶ ಎಂದು ತಿಪ್ಪೆ ಸಾರಿಸಿದೆ!
ಸುತ್ತೋಲೆಯಲ್ಲಿ ಏನು ಹೇಳಲಾಗಿದೆ?
ಕುವೆಂಪು ಅವರ ‘ಜಯ ಭಾರತ ಜನನಿಯ ತನುಜಾತೆ’ (Jaya Bharatha Jananiya Thanujathe) ಕವನವನ್ನು ‘ನಾಡಗೀತೆ’ಯಾಗಿ ಘೋಷಿಸಿ ಈ ಹಿಂದೆ ಸರಕಾರ ಹೊರಡಿಸಿದ್ದ ಆದೇಶದಲ್ಲಿ ಒಂದು ತಿದ್ದುಪಡಿಯನ್ನು ಪ್ರಕಟಿಸಿ ಫೆ. 16ರಂದು ಹೊಸ ಆದೇಶವನ್ನು ಹೊರಟಿಸಲಾಗಿದೆ. ‘ಎಲ್ಲಾ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಗೂ ಸರ್ಕಾರದ ಇಲಾಖೆಗಳು ಹಾಗೂ ನಿಗಮ, ಮಂಡಳಿ, ಪ್ರಾಧಿಕಾರ ಮುಂತಾದ ಅರೆ ಸರ್ಕಾರಿ ಸಂಸ್ಥೆಗಳ ಅಧಿಕೃತ ಕಾರ್ಯಕ್ರಮಗಳನ್ನು ಏರ್ಪಡಿಸುವ ಪ್ರಾರಂಭದಲ್ಲಿ ಹಾಡುವುದು’ ಎಂಬುದು ಮೂಲ ಆದೇಶ. ಅದನ್ನು ‘ಸರ್ಕಾರಿ ಶಾಲೆಗಳು, ಅನುದಾನಿತ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಗೂ ಸರ್ಕಾರದ ಇಲಾಖೆಗಳು ಹಾಗೂ ನಿಗಮ, ಮಂಡಳಿ, ಪ್ರಾಧಿಕಾರ ಮುಂತಾದ ಅರೆ ಸರ್ಕಾರಿ ಸಂಸ್ಥೆಗಳ ಅಧಿಕೃತ ಕಾರ್ಯಕ್ರಮಗಳನ್ನು ಏರ್ಪಡಿಸುವ ಪ್ರಾರಂಭದಲ್ಲಿ ಹಾಡುವುದು’ ಎಂದು ತಿದ್ದಿ ಓದಿಕೊಳ್ಳತಕ್ಕದ್ದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಅಂದರೆ ‘ಎಲ್ಲಾ ಶಾಲೆಗಳಲ್ಲಿ ಕಾರ್ಯಕ್ರಮದ ಆರಂಭದಲ್ಲಿ ನಾಡಗೀತೆಯನ್ನು ಹಾಡುವುದು’ ಎಂಬುದರ ಬದಲಾಗಿ, ‘ಸರ್ಕಾರಿ ಶಾಲೆಗಳು, ಅನುದಾನಿತ ಶಾಲೆಗಳಲ್ಲಿ’ ಎಂದು ಬದಲಾಯಿಸಲಾಗಿದೆ. ಇದರ ಅರ್ಥ ನಾಡಗೀತೆಯನ್ನು ಸರ್ಕಾರಿ ಶಾಲೆಗಳಲ್ಲಿ ಮಾತ್ರ ಹಾಡಿದರೆ ಸಾಕು, ಖಾಸಗಿ ಶಾಲೆಗಳಲ್ಲಿ ಹಾಡಬೇಕಾಗಿಲ್ಲ ಎಂದು ಸರ್ಕಾರ ಹೇಳಿರುವುದು ಸ್ಪಷ್ಟವಾಗಿ ಅರ್ಥವಾಗುತ್ತದೆ.
ಇದನ್ನೂ ಓದಿ :Naadageethe row: ನಾಡಗೀತೆಯ ಬೆನ್ನುಹತ್ತಿದ ಹೈಕೋರ್ಟ್; ಕಟಕಟೆಗೆ ಬರ್ತಾರಾ ಗಾಯಕಿ ಬಿ.ಕೆ ಸುಮಿತ್ರಾ?
ಇದು ಪ್ರಿಂಟ್ ಮಿಸ್ಟೇಕ್ ಎಂದ ಸಚಿವ ಶಿವರಾಜ್ ತಂಗಡಗಿ
ಈ ಹೊಸ ಸುತ್ತೋಲೆ ವಿಚಾರ ಫೆ. 21ರಂದು ಬಹಿರಂಗಗೊಳ್ಳುತ್ತಿದ್ದಂತೆಯೇ ಓಡೋಡಿ ಬಂದು ಸ್ಪಷ್ಟೀಕರಣ ನೀಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ಸಚಿವ ಸಚಿವ ಶಿವರಾಜ್ ತಂಗಡಗಿ ಅವರು, ಇದು ಪ್ರಿಂಟ್ ಮಿಸ್ಟೇಕ್‌ನಿಂದ ತಪ್ಪು ಆಗಿದೆ. ಇಂದೇ ಶೀಘ್ರವೇ ಪ್ರಿಂಟ್ ಮಿಸ್ಟೆಕ್ ಸರಿ ಮಾಡಲಾಗುವುದು ಎಂದರು. ಜತೆಗೆ ರಾಜ್ಯದ ಎಲ್ಲಾ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯ ಎಂದರು.
ʻʻನಮಗೆ ಎಲ್ಲಾ ಶಾಲೆಗಳು ಒಂದೇ. ಆದೇಶ ಮಾಡಬೇಕಾದ್ರೆ ಸರ್ಕಾರಿ ಶಾಲೆ ಅನುದಾನಿತ ಶಾಲೆ ಅಂತಾ ಹಾಕಿದ್ದಾರೆ. ಅದು ಎಲ್ಲಾ ಶಾಲೆಗಳು ಅಂತಾ ಹಾಕಿಸುತ್ತೇವೆ. ನಮ್ಮ ಸರ್ಕಾರ ಕನ್ನಡ ಬಗ್ಗೆ ಕಾಳಜಿ ಇಟ್ಟಿದೆ. ನಾವು ಬಹಳ ಸ್ಪಷ್ಟವಾಗಿ ಇದ್ದೇವೆ. ಆದೇಶ ಪ್ರತಿಯ ಸಾಧಕ ಭಾದಕ ಹೇಳಬೇಕು.ಮಾಧ್ಯಮ ಮಿತ್ರರಿಗೆ ಇದರ ಬಗ್ಗೆ ತಿಳಿಸಬೇಕು ಅಂತಾನೇ ಬಂದೆ. ಸಹಜವಾಗಿ ನೋಟ್ ಶೀಟ್ ಒಳಗಡೆ ಸಣ್ಣಪುಟ್ಟ ಸಮಸ್ಯೆ ಆಗಿದೆʼʼ ಎಂದು ತಿಪ್ಪೆ ಸಾರಿಸಿದರು.