Site icon Vistara News

Nalin Kumar Kateel : ಗುಡಿಸು ಎಂದರೆ ಗುಡಿಸುವೆ, ಒರೆಸು ಎಂದರೆ ಒರೆಸುವೆ.. : ಕಟೀಲ್‌ ವೈರಾಗ್ಯದ ಮಾತು

Nalin kumar Kateel election Ticket

ಮಂಗಳೂರು: ನಮ್ಮ ಬಳಿ ಗುಡಿಸು ಎಂದರೆ ಗುಡಿಸುತ್ತೇವೆ. ಒರೆಸು ಎಂದು ಹೇಳಿದರೆ ಒರೆಸುತ್ತೇವೆ. ನಮಗೆ ಅಧಿಕಾರವೇ ಪ್ರಾಮುಖ್ಯ ಅಲ್ಲ. ಏನು ಬದಲಾವಣೆ ಮಾಡಬೇಕೋ ಅದನ್ನು ರಾಷ್ಟ್ರೀಯ ನಾಯಕರು ಮಾಡುತ್ತಾರೆ: ಹೀಗೆಂದು ನೋವಿನಿಂದ ಹೇಳಿದ್ದಾರೆ ದಕ್ಷಿಣ ಕನ್ನಡ ಸಂಸದ (Dakshina Kannada MP) ಮತ್ತು ಬಿಜೆಪಿಯ ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ (Nalin Kumar kateel).

ಮೂರು ಬಾರಿ ಸಂಸದರಾಗಿ ಸೋಲೇ ಇಲ್ಲದೆ ಮೆರೆದಾಡಿದ ನಳಿನ್‌ ಕುಮಾರ್‌ ಕಟೀಲ್‌ ಅವರಿಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ (Parliamet Elections) ಬಿಜೆಪಿ ಟಿಕೆಟ್‌ ಇಲ್ಲ ಎಂಬ ಸುದ್ದಿ ಹರಡುತ್ತಿದೆ. ಮಂಗಳವಾರ ಮಂಗಳೂರಿನಲ್ಲಿ ಮಾತನಾಡಿದ ಅವರು ಈ ಸುದ್ದಿಗಳ್ಯಾವುದನ್ನೂ ಅಲ್ಲಗಳೆಯಲಿಲ್ಲ. ಬದಲಾಗಿ ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ ಎಂದು ಹೇಳಿದರು.

ಬೇರೆಯವರಿಗೆ ಟಿಕೆಟ್‌ ನೀಡುವ ಸುದ್ದಿಗಳ ಬಗ್ಗೆ ಕೇಳಿದಾಗ ಪ್ರತಿಕ್ರಿಯಿಸಿದ ಅವರು, ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸುವುದು ನಮ್ಮ ಪಕ್ಷದ ವಿಶೇಷತೆ. ಪಕ್ಷದ ರಾಷ್ಟ್ರೀಯ ನಾಯಕರು ಎಲ್ಲಾ ಯೋಚನೆ ಮಾಡಿ ಆಯ್ಕೆ ಮಾಡುತ್ತಾರೆ. ಅವರ ಆಯ್ಕೆಯನ್ನು ಸ್ವಾಗತಿಸುತ್ತೇನೆ ಎಂದರು.

ಬದಲಾವಣೆ ಜಗದ ನಿಯಮ. ಪಕ್ಷ ನಿಂತ ನೀರಾಗಬಾರದು. ಹೊಸಬರು ಬರುತ್ತಾ ಇರಬೇಕು. ಚಲಾವಣೆ ಆಗುತ್ತಾ ಇರಬೇಕು. ರಾಷ್ಟ್ರೀಯ ನಾಯಕರ ತೀರ್ಮಾನಕ್ಕೆ ನಾವೆಲ್ಲಾ ಬದ್ಧರಾಗಿರುತ್ತೇವೆ. ಯಾರೇ ಅಭ್ಯರ್ಥಿ ಆದರೂ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕು ಎನ್ನುವುದಷ್ಟೇ ನಮ್ಮ ಕಾಳಜಿ ಎಂದು ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

ನನಗೆ ಪಕ್ಷ ಎಲ್ಲವನ್ನೂ ಕೊಟ್ಟಿದೆ, ನನಗೆ ಅನ್ಯಾಯ ಆಗಿಲ್ಲ ಎಂದ ಕಟೀಲ್‌

ನಾನು ತಳ ಮಟ್ಟದ ಕಾರ್ಯಕರ್ತನಾಗಿ ಬೆಳೆದು ಬಂದವನು. ಹಿಂದುತ್ವದ ಸಿದ್ಧಾಂತವನ್ನು ಪ್ರತಿಪಾದಿಸಿಕೊಂಡು ಬಂದವನು. ನನಗೂ ಮೂರು ಬಾರಿ‌ ಅವಕಾಶ ನೀಡಿದ್ದಾರೆ. ಹದಿನೈದು ವರ್ಷ ಸಂಸದನಾಗಿ ಕೆಲಸ ಮಾಡಿದ್ದೇನೆ ಎಂದು ತಮ್ಮ ಸಂಸತ್‌ ಹಾದಿಯನ್ನು ನೆನಪಿಸಿಕೊಂಡರು.

ʻʻನಾನು ಸಂಘದ ಕೆಲಸಕ್ಕಾಗಿ ಬಂದಿದ್ದೆ. ಬಿಜೆಪಿ ಕೆಲಸ ಮಾಡು ಎಂದಾಗ ಮಾಡಿದೆ. ಲೋಕಸಭೆ ಚುನಾವಣೆಗೆ ನಿಲ್ಲು ಎಂದರು, ಸ್ಪರ್ಧಿಸಿದೆ. ಆ ಬಳಿಕ ರಾಜ್ಯಾಧ್ಯಕ್ಷನೂ ಆದೆ. ಪಕ್ಷ ನನಗೆ ಎಲ್ಲವನ್ನು ಕೊಟ್ಟಿದೆ, ಅವಕಾಶ ಸಿಕ್ಕಿಲ್ಲ ಅಂದಾಗ ಅನ್ಯಾಯ ಆಗಿದೆ ಎಂದು ಹೇಳುವ ಹಕ್ಕು ನಮಗಿಲ್ಲ. ನಮ್ಮ ಪಾರ್ಟಿಯಲ್ಲಿ ತುಳಿಯುವ ಕೆಲಸ ಆಗಲ್ಲʼʼ ಎಂದು ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

ಇದನ್ನೂ ಓದಿ : MP Pratapsimha : ಯದುವೀರ್‌ಗೇ ಟಿಕೆಟ್‌ ಪಕ್ಕಾ; ಉಗ್ರಪ್ರತಾಪಿಯಂತೆ ಸಿಡಿದೆದ್ದ ಪ್ರತಾಪ್‌ಸಿಂಹ

ಪಕ್ಷ ನಮ್ಮನ್ನು ಬೆಳೆಸಿದೆ. ಟಿಕೆಟ್ ಸಿಕ್ಕಿಲ್ಲ ಎಂದ ಕೂಡಲೇ ನಮನ್ನು ಕೈಬಿಟ್ಟಿದೆ ಎಂದು ಅರ್ಥ ಅಲ್ಲ. ಮುಂದಕ್ಕೆ ಬಹಳಷ್ಟು ಅವಕಾಶ ಸಿಗಬಹುದು. ಪಕ್ಷದ ಕೆಲಸ ಮಾಡುವುದಕ್ಕೂ ಜನ ಬೇಕಲ್ಲವೇ? ಈ ಬಗ್ಗೆ ಯೋಚನೆ ಮಾಡಿಕೊಂಡೇ ರಾಷ್ಟ್ರೀಯ ನಾಯಕರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡುತ್ತಾರೆ. ನನಗೆ ಯಾವುದೇ ಅಸಮಾಧಾನ ಇಲ್ಲ ಎಂದು ಹೇಳಿದರು ನಳಿನ್‌ ಕುಮಾರ್‌ ಕಟೀಲ್‌.

Exit mobile version