Site icon Vistara News

Namma Metro : ನಾಳೆಯಿಂದಲೇ ಸಂಪೂರ್ಣ ನೇರಳೆ ಮಾರ್ಗಕ್ಕೆ ಚಾಲನೆ; ಖಡಕ್‌ ವಾರ್ನಿಂಗ್‌ ಕೊಟ್ಟರು ಮೋದಿ!

Metro Purpel line and PM Narendra Modi

ಬೆಂಗಳೂರು: ರಾಜಧಾನಿಯ ಐಟಿ ಉದ್ಯೋಗಿಗಳಿಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ನಮ್ಮ ಮೆಟ್ರೋ ನೇರಳೆ ಮಾರ್ಗದ (Metro Purple Line) ಚಲ್ಲಘಟ್ಟ- ವೈಟ್‌ಫೀಲ್ಡ್‌ (Challaghatta-Whitefield Metro Line) ನಡುವೆ ಪೂರ್ಣ ಪ್ರಮಾಣದಲ್ಲಿ ಮೆಟ್ರೋ ರೈಲು (Namma Metro) ವಾಣಿಜ್ಯ ಸೇವೆ ಅಕ್ಟೋಬರ್ 9ರಂದು ಚಾಲನೆಗೊಳ್ಳಲಿದೆ. ಇದರಿಂದ ಹೆಚ್ಚು ಐಟಿ ಕಂಪನಿಗಳು ಇರುವ ಐಟಿಪಿಬಿ, ವೈಟ್‌ಫೀಲ್ಡ್‌ ಭಾಗಕ್ಕೆ ತೆರಳಲು ಲಕ್ಷಾಂತರ ಮಂದಿಗೆ ಅನುಕೂಲವಾಗಲಿದೆ. ಸಂಪೂರ್ಣ ಮಾರ್ಗ ಉದ್ಘಾಟನೆಗೆ ವಿಳಂಬ ಆಗುತ್ತಿರುವ ಬಗ್ಗೆ ಜನಾಕ್ರೋಶ ವ್ಯಕ್ತವಾದ ಬೆನ್ನಲ್ಲೇ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಿದ್ದು, ಯಾವುದೇ ವಿಐಪಿ ವ್ಯಕ್ತಿಗಳಿಗೆ ಕಾಯದೇ ಸೋಮವಾರದಿಂದಲೇ ಪ್ರಯಾಣ ಶುರು ಮಾಡುವಂತೆ ಸೂಚಿಸಿದೆ. ಈ ಬಗ್ಗೆ ಬೆಂಗಳೂರಿನ ಎಲ್ಲ ಸಂಸದರು ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

ಈ ಸಂಬಂಧ ಕರ್ನಾಟಕ ಸರ್ಕಾರದ ಕಾರ್ಯದರ್ಶಿಗೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಪತ್ರ ಬರೆದಿದ್ದು, ಅಕ್ಟೋಬರ್ 9ರಿಂದ ಮೆಟ್ರೋ ರೈಲು ಸಂಚಾರ ಆರಂಭಿಸುವಂತೆ ಸೂಚನೆ ನೀಡಿದೆ. ಇದಕ್ಕೆ ಯಾವುದೇ ಅಧಿಕೃತ ಉದ್ಘಾಟನಾ ಸಮಾರಂಭದ ಅಗತ್ಯವಿಲ್ಲ. ಪ್ರಯಾಣಿಕರ ಅನುಕೂಲದ ದೃಷ್ಟಿಯಿಂದ ಸಂಚಾರವನ್ನು ಕೂಡಲೇ ಆರಂಭಿಸಿ ಎಂದು ತಿಳಿಸಿದೆ. ಹೀಗಾಗಿ, ಚಲ್ಲಘಟ್ಟ – ಕೆಂಗೇರಿ, ಬೈಯಪ್ಪನಹಳ್ಳಿ – ಕೆಆರ್ ಪುರದ ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾಗುತ್ತಿದೆ.

ಸೆಪ್ಟೆಂಬರ್ 21ರಂದು ನೇರಳೆ ಮಾರ್ಗದಲ್ಲಿ ಆರ್ ಪುರ – ಬೈಯಪ್ಪನಹಳ್ಳಿ ನಡುವಿನ 2-ಕಿಮೀ ಮಾರ್ಗದ ಸುರಕ್ಷತಾ ಪರಿಶೀಲನೆ ಮಾಡಿದ್ದ ಸಿಎಂಆರ್‌ಎಸ್ ಮೆಟ್ರೋ ಸಂಚಾರಕ್ಕೆ ಅನುಮತಿ ನೀಡಿತ್ತು. ನಂತರ ಸೆಪ್ಟೆಂಬರ್ 29ರಂದು ಕೆಂಗೇರಿ – ಚಲ್ಲಘಟ್ಟ ಮಾರ್ಗದಲ್ಲಿ ಸುರಕ್ಷತಾ ತಪಾಸಣೆ ಮಾಡಿ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿತ್ತು.

ಮಾರ್ಚ್ 25ರಂದು ಕೆ.ಆರ್.ಪುರ- ವೈಟ್ ಫೀಲ್ಡ್ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಚಾಲನೆ ನೀಡಿದ್ದರು. ಆದರೆ, ವೈಟ್‌ಫೀಲ್ಡ್ – ಬೈಯಪ್ಪನಹಳ್ಳಿ‌ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ಕೆ.ಆರ್. ಪುರದಲ್ಲಿ ಇಳಿದು ಇತರೆ ಸಾರಿಗೆಯನ್ನು ಅವಲಂಬಿಸಬೇಕಿತ್ತು. ಈಗ ನೇರಳೆ ಮಾರ್ಗದಲ್ಲಿ ಪೂರ್ಣ ಪ್ರಮಾಣದಲ್ಲಿ ರೈಲು ಕಾರ್ಯಾಚರಣೆ ನಡೆಯಲಿದ್ದು, ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಹೀಗಾಗಿ ಇನ್ನು ಈ ಮಾರ್ಗದಲ್ಲಿ ಪ್ರತಿನಿತ್ಯ 1 ಲಕ್ಷವರೆಗೆ ಪ್ರಯಾಣಿಕರು ಸಂಚರಿಸಬಹುದು ಎಂದು ನಿರೀಕ್ಷೆ ಮಾಡಲಾಗಿದೆ.

ಸಂಸದ ತೇಜಸ್ವಿ ಸೂರ್ಯ ಟ್ವೀಟ್‌

“ಯಾವುದೇ ವಿಳಂಬವಿಲ್ಲದೆ ಮತ್ತು ಅಧಿಕೃತ ಸಮಾರಂಭಕ್ಕಾಗಿ ಯಾವುದೇ ವಿಐಪಿಗಾಗಿ ಕಾಯದೆ ನೇರಳೆ ಮಾರ್ಗದಲ್ಲಿ (#PurpleLine) ಸೇವೆ ಪ್ರಾರಂಭಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಔಪಚಾರಿಕ ಉದ್ಘಾಟನೆಯ ದಿನಾಂಕವನ್ನು ಕೋರಿ ಕರ್ನಾಟಕ ಸರ್ಕಾರ ಮತ್ತು ಬಿಎಂಆರ್‌ಸಿಎಲ್‌ ವತಿಯಿಂದ ಅಕ್ಟೋಬರ್ 5 ರಂದು ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಬರೆಯಲಾಗಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕೃತ ಉದ್ಘಾಟನೆಯನ್ನು ರದ್ದುಗೊಳಿಸಿದ್ದಲ್ಲದೆ, ನಾಳೆಯಿಂದಲೇ ಸೇವೆಗಳನ್ನು ಪ್ರಾರಂಭಿಸುವಂತೆ ಭಾನುವಾರ (ಅಕ್ಟೋಬರ್‌ 8) ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ” ಎಂದು ಸಂಸದ ತೇಜಸ್ವಿ ಸೂರ್ಯ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: Attibele Fire Accident : ಪಟಾಕಿ ದುರಂತ ನಡೆಯದಂತೆ ಸರ್ಕಾರದಿಂದ ನೀತಿ: ಡಿ.ಕೆ. ಶಿವಕುಮಾರ್

ಮೊದಲು ಸಂಚಾರ ಪ್ರಾರಂಭಿಸಿ

ನಾಗರಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸುತ್ತೇವೆ ಎಂದು ಬೆಂಗಳೂರಿನ ಎಲ್ಲ ಸಂಸದರು ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಅಲ್ಲದೆ, “ನೀವು ಮೊದಲು ಸಂಚಾರವನ್ನು ಆರಂಭಿಸಿ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಇನ್ನು ಎರಡು ವಾರಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾಂಕೇತಿಕವಾಗಿ ಚಾಲನೆ ನೀಡಲಿದ್ದಾರೆ” ಎಂದು ಕೇಂದ್ರದಿಂದ ಬಂದ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.

Exit mobile version