ಬೆಂಗಳೂರು: ಬರೋಬ್ಬರಿ 31 ವರ್ಷಗಳ ಹಿಂದೆ ಅಯೋಧ್ಯೆಯ ರಾಮ ಜನ್ಮಭೂಮಿ (Ayodhya Rama Janmabhumi)- ಬಾಬರಿ ಮಸೀದಿ ಕಟ್ಟಡದ ಧ್ವಂಸದ ಮರುದಿನ ಅಂದರೆ 1992ರ ಡಿಸೆಂಬರ್ 7ರಂದು ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಈಗ ಶ್ರೀಕಾಂತ್ ಪೂಜಾರಿ (Shrikant Poojari) ಎಂಬವರನ್ನು ಬಂಧಿಸಿದ ಘಟನೆ ವಿರುದ್ಧ ಬಿಜೆಪಿಯು ಕಾಂಗ್ರೆಸ್ ಸರ್ಕಾರದ (Congress Government) ವಿರುದ್ಧ ದೊಡ್ಡ ಹೋರಾಟಕ್ಕೆ ಮುಂದಾಗಿದೆ. ಜನವರಿ ಮೂರರಂದು ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ರಾಜ್ಯಾದ್ಯಂತ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರು ಇದೀಗ ಗುರುವಾರ ʻನಾನೂ ಕರಸೇವಕ ನನ್ನನ್ನೂ ಬಂಧಿಸಿʼ ಎಂಬ ಹೋರಾಟ ಶುರು ಮಾಡಿದ್ದಾರೆ.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ (BJP State General Secretary), ಕಾರ್ಕಳ ಕ್ಷೇತ್ರದ ಬಿಜೆಪಿ ಶಾಸಕ ಸುನಿಲ್ ಕುಮಾರ್ (MLA Sunil Kumar) ಮತ್ತು ಇತರ ನಾಯಕರು ನಾನೂ ಕರಸೇವಕ ನನ್ನನ್ನೂ ಬಂಧಿಸಿ ಎಂಬ ಬೋರ್ಡ್ ಹಿಡಿದು ರಾಜ್ಯದ ನಾನಾ ಭಾಗಗಳಲ್ಲಿ ಮೌನ ಪ್ರತಿಭಟನೆ ನಡೆಸುತ್ತಿದ್ದಾರೆ. ಸುನಿಲ್ ಕುಮಾರ್ ಅವರು ಸದಾಶಿವನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ಮಾಡುತ್ತಿದ್ದಾರೆ.
ನನ್ನನ್ನು ಬಂಧಿಸಿ ಎಂಬ ಆಗ್ರಹ ಮತ್ತು ಸವಾಲಿನೊಂದಿಗೆ ಸುನಿಲ್ ಕುಮಾರ್ ಸದಾಶಿವ ನಗರ ಠಾಣೆಯ ಮುಂದೆ ಕುಳಿತಿದ್ದರೆ, ಮತ್ತೊಂದು ಕಡೆ ಚಿಕ್ಕಮಗಳೂರಿನಲ್ಲಿ ಸಿ.ಟಿ ರವಿ ಪ್ರತಿಭಟನೆ ನಡೆಸಿದ್ದಾರೆ. ಕುಡಚಿಯ ಮಾಜಿ ಶಾಸಕ ಪಿ. ರಾಜೀವ್ ಕೂಡಾ ಧರಣಿ ಕುಳಿತಿದ್ದಾರೆ.
ಚಿಕ್ಕಮಗಳೂರು ನಗರ ಠಾಣೆಯ ಮುಂದೆ ಸಿಟಿ ರವಿ ಏಕಾಂಗಿ ಪ್ರತಿಭಟನೆ
ಚಿಕ್ಕಮಗಳೂರು ನಗರ ಠಾಣೆ ಮುಂದೆ ʻʻನಾನು ಕರಸೇವಕ ನನ್ನನ್ನೂ ಬಂಧಿಸಿʼ ಎಂಬ ಘೋಷ ವಾಕ್ಯ ಇರುವ ಬೋರ್ಡ್ ಹಿಡಿದುಕೊಂಡು ಮಾಜಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪ್ರತಿಭಟನೆ ನಡೆಸಿದರು.
ರಾಮ ಪಠಣ ಮಾಡುತ್ತಾ ಏಕಾಂಗಿಯಾಗಿ ಕುಳಿತಿರುವ ಸಿ.ಟಿ ರವಿ ಅವರು, ಕರಸೇವಕ ಶ್ರೀಕಾಂತ್ ಪೂಜಾರಿ ಅವರನ್ನು ಬಿಡುಗಡೆ ಮಾಡುವವರೆಗೂ ಹೋರಾಟ ನಿಲ್ಲಲ್ಲ ಎಂದು ಹೇಳಿದರು.
ʻʻರಾಜ್ಯದ ಕಾಂಗ್ರೆಸ್ ಸರ್ಕಾರ ದುರುದ್ದೇಶದಿಂದ ಬಂಧಿಸಿದೆ. ಕರ ಸೇವಕನನ್ನು ಬಂಧಿಸಿರುವುದು ರಾಜಕೀಯ ದುರುದ್ದೇಶದಿಂದʼʼ ಎಂದು ಚಿಕ್ಕಮಗಳೂರಿನಲ್ಲಿ ಸಿಟಿ ರವಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯಿಂದ ಡಿಪಿ ಬಿಡುಗಡೆ
ಈ ನಡುವೆ ಭಾರತೀಯ ಜನತಾ ಪಕ್ಷ ನಾನೂ ರಾಮ ಭಕ್ತ ನನ್ನನ್ನೂ ಬಂಧಿಸಿ ಸಿದ್ದರಾಮಯ್ಯನವರೇ ಎಂಬ ಪೋಸ್ಟರನ್ನು ಬಿಡುಗಡೆ ಮಾಡಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ʻಡಿಪಿʼಯಾಗಿ ಬಳಸುವಂತೆ ವಿನಂತಿಸಲಾಗಿದೆ.
ಸಿದ್ದರಾಮಯ್ಯರ ಸರಕಾರ ಹಿಂದೂ ವಿರೋಧಿ ಎಂದ ಸುನೀಲ್‍ಕುಮಾರ್
ಬುಧವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ್ದ ಶಾಸಕ ಸುನಿಲ್ ಕುಮಾರ್ ಅವರು, ರಾಜ್ಯದ ಕಾಂಗ್ರೆಸ್ ಸರಕಾರವು ಕರಸೇವಕರನ್ನು ಬಂಧಿಸುತ್ತಿರುವುದು ಖಂಡನೀಯ ಎಂದು ಹೇಳಿದ್ದರು.
ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರ ಉಪಸ್ಥಿತಿಯಲ್ಲಿ ಮಾತನಾಡಿದ ಅವರು, 1992ರಲ್ಲಿ ಕರಸೇವಕರನ್ನು ಹತ್ಯೆ ಮಾಡಲು ಮುಂದಾಗಿತ್ತು. ಈಗ ಜವಾಬ್ದಾರಿಯುತ ಮುಖ್ಯಮಂತ್ರಿ ಸ್ಥಾನದಲ್ಲಿರುವ ಸಿದ್ದರಾಮಯ್ಯನವರ ಹಿಂದೂ ವಿರೋಧಿ ನೀತಿ ಸ್ಪಷ್ಟವಾಗುತ್ತದೆ ಎಂದು ಟೀಕಿಸಿದರು.
ಅಲ್ಪಸಂಖ್ಯಾತರ ಬಗ್ಗೆ ಅತಿಯಾದ ಒಲವು ನಿಮ್ಮದು. ಹಿಂದೆ ಟಿಪ್ಪು ಜಯಂತಿ ಮಾಡಿದ್ದೀರಿ. ಕನ್ನಡ ಭಾಷಾ ಹೋರಾಟಗಾರರನ್ನು ಬಂಧಿಸುತ್ತೀರಿ. ರೈತ ವಿರೋಧಿ ನಿಲುವು ನಿಮ್ಮದು ಎಂದು ಸಿದ್ದರಾಮಯ್ಯರ ಸರಕಾರದ ವಿರುದ್ಧ ಆಕ್ಷೇಪ ಸೂಚಿಸಿದರು. ಈ ಸರಕಾರ ಹಿಂದೂ ವಿರೋಧಿ, ರೈತ ವಿರೋಧಿ, ಕನ್ನಡ ವಿರೋಧಿ ಎಂದು ಟೀಕಿಸಿದರು. ಈ ಹೋರಾಟ ಶ್ರೀಕಾಂತ್ ಪೂಜಾರಿಯವರ ಬಿಡುಗಡೆ ಆಗುವವರೆಗೆ ಮುಂದುವರೆಯಲಿದೆ ಎಂದು ಎಚ್ಚರಿಸಿದರು.
ಮಾಜಿ ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಅವರು ಮಾತನಾಡಿ, ರಾಮಮಂದಿರ ನಮ್ಮ ಸ್ವಾಭಿಮಾನದ ಸಂಕೇತ ಎಂದು ನುಡಿದರು. ಹಲವಾರು ಸವಾಲುಗಳ ಬಳಿಕ ಇದರ ಪುನರ್ ನಿರ್ಮಾಣವಾಗಿದೆ. ಕರ್ನಾಟಕ ಮಾತ್ರವಲ್ಲದೆ ಇಡೀ ದೇಶ ಸಂಭ್ರಮ ಪಡುವ ಈ ಸುಸಂದರ್ಭದಲ್ಲಿ ಕಾಂಗ್ರೆಸ್ ಸರಕಾರದ ಕ್ರಮ ಅತ್ಯಂತ ಆಕ್ಷೇಪಾರ್ಹ ಮತ್ತು ಖಂಡನೀಯ ಎಂದು ತಿಳಿಸಿದರು. ಕರಸೇವಕರು ನೈಜ ರಾಷ್ಟ್ರ ಭಕ್ತರು. ಅವರನ್ನು ಗೌರವಿಸುವ ಬದಲಾಗಿ ಬಂಧಿಸುವ ಕಾರ್ಯ ನಡೆದಿದೆ ಎಂದು ಟೀಕಿಸಿದರು. ಸರಕಾರ ತನ್ನ ಭಂಡತನ ಕೈಬಿಡಬೇಕು. ಬಂಧಿತರನ್ನು ಬಿಡುಗಡೆ ಮಾಡದಿದ್ದರೆ ಹೋರಾಟ ತೀವ್ರವಾಗಲಿದೆ ಎಂದು ಎಚ್ಚರಿಕೆ ನೀಡಿದರು.