ಬೆಂಗಳೂರು: ತಮ್ಮನ್ನು ಪಕ್ಷ ಕಡೆಗಣಿಸಿಲ್ಲ, ಬೇಕಾದಷ್ಟು ನೀಡಿದೆ ಎಂದು ವಿಧಾನಸಭೆಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಆಡಿದ ಮಾತಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಹರ್ಷ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ, ಈ ಮಾತುಗಳು ಎಲ್ಲರಿಗೂ ಸ್ಪೂರ್ತಿ ಎಂದಿದ್ದಾರೆ.
ರಾಜ್ಯ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ್ದ ಬಿ.ಎಸ್. ಯಡಿಯೂರಪ್ಪ, ಪಕ್ಷ ತಮ್ಮನ್ನು ಕಡೆಗಣಿಸುತ್ತಿದೆ ಎಂದು ಪ್ರತಿಪಕ್ಷದವರು ಮಾತನಾಡುತ್ತಿರುವುದಕ್ಕೆ ಉತ್ತರಿಸಿದ್ದರು. ಹೀಗೆ ಹೇಳುವ ಮೂಲಕ ಯಡಿಯೂರಪ್ಪನನ್ನು ಮನೆಯಲ್ಲಿ ಕೂರಿಸಬೇಕು ಎಂದು ಕೆಲವರು ಅಂದುಕೊಂಡಿದ್ದರೆ ಸುಳ್ಳು. ಬಿಜೆಪಿ ಪಕ್ಷ ಹಾಗೂ ಪ್ರಧಾನಿ ನರೇಂದ್ರ ಮೋದಿಯವರು ನನಗೆ ಸಾಕಷ್ಟು ಸ್ಥಾನಮಾನ ನೀಡಿದ್ದಾರೆ.
ನಾನು ಮತ್ತೆ ಚುನಾವಣೆಗೆ ನಿಲ್ಲುವುದಿಲ್ಲ ಎಂದಿದ್ದೇನೆ. ಮೋದಿಯವರು ನನಗೆ ನೀಡಿರುವ ಅವಕಾಶಕ್ಕೆ ಧನ್ಯವಾದ. ಆದರೆ ಪಕ್ಷವನ್ನು ಅಧಿಕಾರಕ್ಕೆ ತರಲು ಕೊನೆಯ ಉಸಿರಿರುವವರೆಗೂ ಹೋರಾಟ ಮಾಡುತ್ತೇನೆ. ಒಂದು ರೀತಿ ವಿದಾಯ ಇದು. ಮತ್ತೆ ಈ ಸದನಕ್ಕೆ ಬರುವ ಪ್ರಶ್ನೆಯೇ ಇಲ್ಲ ಎಂದು ಗದ್ಗದಿತರಾದರು.
B.S. Yediyurappa: ಇದು ನನ್ನ ಕೊನೆಯ ಅಧಿವೇಶನ ಎಂದು ಗದ್ಗದಿತರಾದ ಬಿ.ಎಸ್. ಯಡಿಯೂರಪ್ಪ: ಶುಕ್ರವಾರ ವಿದಾಯ ಭಾಷಣ
ಈ ವಿಡಿಯೊವನ್ನು ರಾಜ್ಯ ಬಿಜೆಪಿ ಟ್ವೀಟ್ ಮಾಡಿತ್ತು. ಅದಕ್ಕೆ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ. “ಬಿಜೆಪಿಯ ಒಬ್ಬ ಕಾರ್ಯಕರ್ತನಾದ ನನಗೆ ಈ ಭಾಷಣ ಅತ್ಯಂತ ಸ್ಫೂರ್ತಿದಾಯಕ ಎಂದೆನಿಸಿದೆ. ಇದರಲ್ಲಿ ನಮ್ಮ ಪಕ್ಷದ ನೈತಿಕತೆಯೂ ಅಡಕವಾಗಿದೆ. ಇದು ಖಂಡಿತವಾಗಿಯೂ ಇತರ ಕಾರ್ಯಕರ್ತರಿಗೂ ಸ್ಫೂರ್ತಿ ನೀಡುತ್ತದೆ” ಎಂದಿದ್ದಾರೆ.