Site icon Vistara News

Narendra Modi: ಇಂದು ಮೋದಿ ನೇತೃತ್ವದಲ್ಲಿ ಬಿಜೆಪಿ ಸಭೆ: ಮಹತ್ವದ ತೀರ್ಮಾನ ಸಾಧ್ಯತೆ; ಏನೆಲ್ಲ ಚರ್ಚೆಯಾಗಲಿದೆ?

Narendra Modi

Narendra Modi

ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆ (Lok Sabha Election)ಯ ಫಲಿತಾಂಶದ ಆಘಾತದಿಂದ ಬಿಜೆಪಿ (BJP) ಇನ್ನೂ ಹೊರ ಬಂದಿಲ್ಲ. ಕೇಂದ್ರದಲ್ಲಿ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದರೂ ಬಿಜೆಪಿಗೆ ಬಹುಮತ ಲಭಿಸದೇ ಇರುವುದು ಪಕ್ಷದ ಒಳಗೆ ತಳಮಳ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ತಳಮಟ್ಟದಲ್ಲಿ ಪಕ್ಷ ಸಂಘಟನೆಗೆ ಮತ್ತೆ ಮುಂದಾಗಿದೆ. ಅದರ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು (ಜುಲೈ 18) ಬಿಜೆಪಿ ಪ್ರಧಾನ ಕಚೇರಿಗೆ ಭೇಟಿ ನೀಡಿ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ ಮೋದಿ ಸಂಜೆ 6 ಗಂಟೆಗೆ ಪಕ್ಷದ ಪ್ರಧಾನ ಕಚೇರಿಗೆ ತಲುಪಲಿದ್ದು, ಅಲ್ಲಿ ಅವರು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ವೇಳೆ ಹಲವು ಮಹತ್ವದ ವಿಚಾರಗಳ ಕುರಿತು ಅವರು ಚರ್ಚೆ ನಡೆಸಲಿದ್ದಾರೆ. 

ಉತ್ತರ ಪ್ರದೇಶದಲ್ಲಿ ರಾಜಕೀಯ ಬಿಕ್ಕಟ್ಟು?

2027ರಲ್ಲಿ ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈಗಲೇ ಪಕ್ಷ ಸಂಘಟನೆಗೆ ಬಿಜೆಪಿ ಮುಂದಾಗಿದೆ. ಅದರ ಜತೆಗೆ ಪಕ್ಷಕ್ಕೆ ತಕ್ಷಣದ ಸವಾಲು ಎಂಬಂತೆ ರಾಜ್ಯದ 10 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಎದುರಾಗಿದೆ. ಲೋಕಸಭಾ ಚುನಾವಣೆ ವೇಳೆ ರಾಜ್ಯದಲ್ಲಿ ಬಿಜೆಪಿ ಕಳಪೆ ಪ್ರದರ್ಶನ ತೋರಿದ ಹಿನ್ನೆಲೆಯಲ್ಲಿ ಈ ಉಪಚುನಾವಣೆಯಲ್ಲಿ ಪಕ್ಷ ತನ್ನ ಸಾಮರ್ಥ್ಯ ತೋರಿಸಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಚುನಾವಣಾ ಆಯೋಗ ಇನ್ನೂ ದಿನಾಂಕ ಘೋಷಿಸಿಲ್ಲ. ಅದಾಗ್ಯೂ ಬಿಜೆಪಿ ತಲೆಕೆಡಿಸಿಕೊಂಡಿದೆ. ಈ ಮಧ್ಯೆ ಈ ಉಪಚುನಾವಣೆಯಲ್ಲೂ ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳಲಿದೆ ಎಂಬ ಊಹಾಪೋಹಗಳೂ ಹರಡಿದೆ.

ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಎಸ್‌ಪಿ 37 ಸ್ಥಾನಗಳನ್ನು ಗೆದ್ದರೆ, ಬಿಜೆಪಿ ಕೇವಲ 33 ಕ್ಷೇತ್ರಗಳಿಗೆ ತೃಪ್ತಿಪಟ್ಟುಕೊಂಡಿದೆ. ಎಸ್‌ಪಿಯೊಂದಿಗೆ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ರಾಜ್ಯದಲ್ಲಿ ಆರು ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ.

ಯೋಗಿ ಆದಿತ್ಯನಾಥ್‌ ತಲೆದಂಡ?

ಇದರ ಜತೆಗೆ ಉತ್ತರಪ್ರದೇಶ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಸಿಎಂ ಯೋಗಿ ಆದಿತ್ಯಾನಾಥ್‌ ಮತ್ತು ಡಿಸಿಎಂ ಕೇಶವ್‌ ಪ್ರಸಾದ್‌ ಮೌರ್ಯ ನಡುವಿನ ಮುಸುಕಿನ ಗುದ್ದಾಟ ಬಹಿರಂಗವಾಗಿದೆ. ಇಬ್ಬರ ನಡುವಿನ ಭಾರಿ ಭಿನ್ನಮತದ ಬೆನ್ನಲ್ಲೇ ಕೇಶವ್ ಪ್ರಸಾದ್ ಮೌರ್ಯ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ. ಅದೂ ಅಲ್ಲದೇ ಚುನಾವಣೆಯಲ್ಲಿನ ಹಿನ್ನಡೆ ಬಳಿಕ ಸಿಎಂ ಯೋಗಿ ಆದಿತ್ಯನಾಥ್ ತಲೆದಂಡವಾಗಲಿದೆ ಎಂಬ ವದಂತಿಗೆ ಮತ್ತಷ್ಟು ಪುಷ್ಠಿ ಸಿಕ್ಕಂತಾಗಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಇಂದಿನ ಸಭೆ ಕುತೂಹಲ ಮೂಡಿಸಿದೆ.

ಜುಲೈ 14ರಂದು, ಉತ್ತರ ಪ್ರದೇಶ ಬಿಜೆಪಿ ಘಟಕವು ತನ್ನ ರಾಜ್ಯ ಕಾರ್ಯಕಾರಿ ಸಮಿತಿಯ ಸಭೆಯನ್ನು ಲಖನೌ ಡಾ.ರಾಮ್ ಮನೋಹರ್ ಲೋಹಿಯಾ ಕಾನೂನು ವಿಶ್ವವಿದ್ಯಾಲಯದ ಅಂಬೇಡ್ಕರ್ ಸಭಾಂಗಣದಲ್ಲಿ ನಡೆಸಿತ್ತು. ಈ ಸಭೆಯಲ್ಲಿ 2024ರ ಲೋಕಸಭೆಯಲ್ಲಿ ಪಕ್ಷದ ಕಳಪೆ ಪ್ರದರ್ಶನದ ಬಗ್ಗೆ ಚರ್ಚಿಸಲಾಗಿತ್ತು. ಆ ಸಭೆಯಲ್ಲಿ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉಪ ಮುಖ್ಯಮಂತ್ರಿಗಳಾದ ಬ್ರಜೇಶ್ ಪಾಠಕ್ ಮತ್ತು ಕೆಪಿ ಮೌರ್ಯ ಮತ್ತು ಇತರ ಸಚಿವರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಇದನ್ನೂ ಓದಿ: UP CM v/s DCM: ಉತ್ತರಪ್ರದೇಶ ಬಿಜೆಪಿಯಲ್ಲಿ ಭಿನ್ನಮತ; ಯೋಗಿ ತಲೆದಂಡ ಪಕ್ಕಾನಾ?

ವಿಶೇಷವೆಂದರೆ ಜುಲೈ ಅಂತ್ಯದಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಯುವ ಸಾಧ್ಯತೆ ಇದೆ. ಸಭೆಯಲ್ಲಿ ಪ್ರಧಾನಿ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಗೃಹ ಸಚಿವ ಅಮಿತ್ ಶಾ ಉಪಸ್ಥಿತರಿರಲಿದ್ದಾರೆ. ಮೂಲಗಳ ಪ್ರಕಾರ ಲೋಕಸಭೆ ಚುನಾವಣೆ ಫಲಿತಾಂಶ ಹಾಗೂ ಸರ್ಕಾರ ಮತ್ತು ಸಂಘಟನೆಯ ನಡುವಿನ ಸಮನ್ವಯತೆ ಕುರಿತು ಚರ್ಚೆ ನಡೆಯಲಿದೆ.

Exit mobile version