ನವದೆಹಲಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ (Rahul Gandhi) ಅವರ ಹೇಳಿಕೆಗಳನ್ನು ವಾಸ್ತವಾಂಶಗಳೊಂದಿಗೆ ಎದುರಿಸಬೇಕು ಮತ್ತು ಸಂಸದರು ಅವರಂತೆ ವರ್ತಿಸಬಾರದು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಂಗಳವಾರ ನಡೆದ ಸಂಸದೀಯ ಪಕ್ಷದ ಸಭೆ (Parliamentary party meeting)ಯಲ್ಲಿ ಎನ್‌ಡಿಎ (NDA) ಸಂಸದರಿಗೆ ಸಲಹೆ ನೀಡಿದರು. ಸಂಸದೀಯ ನಿಯಮಗಳು ಮತ್ತು ನಡವಳಿಕೆಯನ್ನು ಅನುಸರಿಸುವಂತೆ ಮತ್ತು ಉತ್ತಮ ಅಭ್ಯಾಸಗಳನ್ನು ಹಿರಿಯ ಸದಸ್ಯರಿಂದ ಕಲಿಯುವಂತೆ ಸೂಚಿಸಿದರು. ಸತತ ಮೂರನೇ ಬಾರಿ ಎನ್‌ಡಿಎ ಅಧಿಕಾರಕ್ಕೆ ಬಂದ ಬಳಿಕ ಮೊದಲ ಬಾರಿಗೆ ಎನ್‌ಡಿಎ ಸಂಸದರನ್ನುದ್ದೇಶಿಸಿ ಮೋದಿ ಮಾತನಾಡಿದರು.
ಪ್ರತಿಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿ ಅವರು ಲೋಕಸಭೆಯಲ್ಲಿ ಸೋಮವಾರ ಬೇಜವಾಬ್ದಾರಿಯುತವಾಗಿ ಭಾಷಣ ಮಾಡಿದ್ದಾರೆ ಎಂದು ಆಡಳಿತರೂಢ ಎನ್‌ಡಿಎ ಆರೋಪಿಸಿದ ಒಂದು ದಿನದ ಬಳಿಕ ಪ್ರಧಾನಿ ಈ ರೀತಿಯ ಹೇಳಿಕೆ ನೀಡಿದರು. ಮೊದಲ ಬಾರಿಗೆ ಕಾಂಗ್ರೆಸೇತರ ನಾಯಕ ಸತತ ಮೂರನೇ ಬಾರಿಗೆ ಪ್ರಧಾನಿಯಾಗಿರುವುದರಿಂದ ಪ್ರತಿಪಕ್ಷಗಳು ಅಸಮಾಧಾನಗೊಂಡಿವೆ ಎಂದು ಅವರು ಸಂಸದರಿಗೆ ತಿಳಿಸಿದರು ಎಂದು ಮೂಲಗಳಿ ವರದಿ ಮಾಡಿವೆ.
#WATCH | PM Modi welcomed by NDA leaders at the NDA Parliamentary Party meeting in Delhi pic.twitter.com/dRZnJ7yHzv
— ANI (@ANI) July 2, 2024
ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿ
ಪ್ರಧಾನ ಮಂತ್ರಿಗಳ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡುವಂತೆ ಮೋದಿ ಹೊಸ ಸಂಸದರಿಗೆ ಸಲಹೆ ನೀಡಿದರು. ಸಂಸತ್ತಿಗಿಂತ ಕಲಿಯಲು ಉತ್ತಮ ಸ್ಥಳವಿಲ್ಲ ಮತ್ತು ಮಹಾನ್ ನಾಯಕರ ಬಗ್ಗೆ ತಿಳಿದುಕೊಳ್ಳಲು ಮತ್ತು ಅವರ ಅನುಭವವನ್ನು ಅರಿತುಕೊಳ್ಳಲು ಪ್ರಧಾನ ಮಂತ್ರಿಗಳ ವಸ್ತು ಸಂಗ್ರಹಾಲಯ ನೆರವಾಗುತ್ತದೆ ಎಂದು ತಿಳಿಸಿದರು.
ಯಾವುದೇ ವಿಷಯದ ಬಗ್ಗೆ ಮಾಧ್ಯಮಗಳ ಮುಂದೆ ಪ್ರತಿಕ್ರಿಯಿಸುವ ಮೊದಲು ಅದನ್ನು ಕೂಲಂಕುಷವಾಗಿ ಅಧ್ಯಯನ ಮಾಡಬೇಕು. ಸಾರ್ವಜನಿಕವಾಗಿ ಮಾತನಾಡುವುದರಲ್ಲಿ ಏಕರೂಪತೆ ಇರಬೇಕು, ಸಂಸದರು ಕ್ಷೇತ್ರಗಳೊಂದಿಗೆ ಸಂಪರ್ಕದಲ್ಲಿರಬೇಕು ಮತ್ತು ಬೆಂಬಲ ನೀಡಿದ ಮತದಾರರಿಗೆ ಕೃತಜ್ಞತೆ ಸಲ್ಲಿಸಬೇಕು ಎಂದು ಮೋದಿ ಕಿವಿ ಮಾತು ಹೇಳಿದರು.
ಪ್ರಧಾನಿಯೊಂದಿಗೆ ಆಗಮಿಸಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಬಳಿಕ ಮಾತನಾಡಿ, ʼʼಮೋದಿ ಸಂಸದರಿಗೆ ರಾಷ್ಟ್ರದ ಸೇವೆಯನ್ನು ಬೋಧಿಸಿದರು. ಯಾವುದೇ ಪಕ್ಷವಾಗಿದ್ದರೂ ದೇಶಸೇವೆ ಮೊದಲ ಜವಾಬ್ದಾರಿಯಾಗಿರಬೇಕು ಎಂದು ಕರೆ ನೀಡಿದರು. ಪ್ರತಿಯೊಬ್ಬ ಎನ್‌ಡಿಎ ಸಂಸದ ದೇಶಕ್ಕಾಗಿ ಕೆಲಸ ಮಾಡಬೇಕು ಎಂದರುʼʼ ಎಂದು ವಿವರಿಸಿದರು.
ನೀರು, ಪರಿಸರ ಮತ್ತು ಸಾಮಾಜಿಕ ವ್ಯವಹಾರಗಳಂತಹ ಪ್ರಮುಖ ವಿಷಯಗಳಲ್ಲಿ ಪರಿಣತಿಯನ್ನು ಬೆಳೆಸಿಕೊಳ್ಳಲು ಮತ್ತು ನಡವಳಿಕೆಗೆ ಸಂಬಂಧಿಸಿದ ಎಲ್ಲ ಸದನದ ನಿಯಮಗಳ ಬಗ್ಗೆ ಅರಿವು ಹೊಂದಲು ಮೋದಿ ಸಂಸದರಿಗೆ ಕರೆ ನೀಡಿದರುʼ ಎಂದು ಕಿರಣ್ ರಿಜಿಜು ತಿಳಿಸಿದರು.
ಇದನ್ನೂ ಓದಿ: Parliament Sessions : ರಾಹುಲ್ ಗಾಂಧಿಯಿಂದ ಹಿಂದೂಗಳಿಗೆ ಅವಮಾನ: ಬಿಜೆಪಿ ಆರೋಪ
ʼʼಉತ್ತಮ ಸಂಸದರಾಗಲು ಅಗತ್ಯವಾದ ಸಂಸತ್ತಿನ ನಿಯಮಗಳು, ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ನಡವಳಿಕೆಯನ್ನು ಅನುಸರಿಸುವಂತೆ ಪ್ರಧಾನಿ ಸಂಸದರಿಗೆ ಸೂಚಿಸಿದರು. ಪ್ರಧಾನಿ ಅವರ ಈ ಮಾರ್ಗದರ್ಶನವು ಎಲ್ಲ ಸಂಸದರಿಗೆ, ವಿಶೇಷವಾಗಿ ಮೊದಲ ಬಾರಿಗೆ ಆಯ್ಕೆಯಾದವರಿಗೆ ದಾರಿದೀಪವಾಗಲಿದೆ. ನಾವು ಈ ಸಲಹೆಗಳನ್ನು ಪಾಲಿಸಲು ನಿರ್ಧರಿಸಿದ್ದೇವೆʼʼ ರಿಜಿಜು ಹೇಳಿದರು.